logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​​ಸಿಬಿ ತಂಡದ ಮಾಲೀಕರು ಯಾರು; 2023ರಲ್ಲಿ ಬಂದ ಆದಾಯವೆಷ್ಟು? ನಿವ್ವಳ ಮೌಲ್ಯ, ಹಿನ್ನೆಲೆಯ ವಿವರ ಇಲ್ಲಿದೆ

ಆರ್​​ಸಿಬಿ ತಂಡದ ಮಾಲೀಕರು ಯಾರು; 2023ರಲ್ಲಿ ಬಂದ ಆದಾಯವೆಷ್ಟು? ನಿವ್ವಳ ಮೌಲ್ಯ, ಹಿನ್ನೆಲೆಯ ವಿವರ ಇಲ್ಲಿದೆ

Prasanna Kumar P N HT Kannada

Apr 16, 2024 04:42 PM IST

google News

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕರು ಯಾರು

    • Who is the owner of RCB: ಐಪಿಎಲ್​ನ 3ನೇ ಶ್ರೀಮಂತ ಫ್ರಾಂಚೈಸಿ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಓನರ್ಸ್ ಯಾರು? ಅವರ ಆದಾಯ, ನಿವ್ವಳ ಮೌಲ್ಯ ಎಷ್ಟಿದೆ ಎಂಬುದನ್ನು ಈ ಮುಂದೆ ನೋಡೋಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕರು ಯಾರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕರು ಯಾರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (Royal Challengers Bengaluru) 2024ರ ಐಪಿಎಲ್​ನಲ್ಲಿ ಗೆಲುವಿಗಾಗಿ ಪರದಾಟ ನಡೆಸುತ್ತಿದೆ. ಕಳಪೆ ಬೌಲಿಂಗ್ ನಿರ್ವಹಣೆಯಿಂದ ಸತತ ಸೋಲುಗಳಿಗೆ ಶರಣಾಗುತ್ತಿದೆ. ಈಗಾಗಲೇ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಸೋತಿರುವ ಆರ್​ಸಿಬಿ ತಂಡದ ಪ್ಲೇಆಫ್​ ಕನಸು ಬಹುತೇಕ ಕಮರಿದೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಬೌಲರ್​ಗಳು 287 ರನ್ ಚಚ್ಚಿಸಿಕೊಂಡ ಬೆನ್ನಲ್ಲೇ ಮತ್ತಷ್ಟು ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಆರ್​ಸಿಬಿ ಮಾಲೀಕತ್ವ ಬೇರೆಯವರಿಗೆ ನೀಡಿ ಎಂಬ ಕೂಗು ಎದ್ದಿದೆ. ಹಾಗಾದರೆ ಆರ್​ಸಿಬಿ ಓನರ್​ ಯಾರು? 2023ರಲ್ಲಿ ತಂಡಕ್ಕೆ ಬಂದ ಆದಾಯವೆಷ್ಟು? ಇಲ್ಲಿದೆ ಮಾಹಿತಿ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿಶ್ವದ ಅತಿದೊಡ್ಡ ಟಿ20 ಲೀಗ್ ಎಂಬ ಖ್ಯಾತಿಗೆ ಒಳಗಾಗಿದೆ. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸೆಳೆದಿರುವ ಐಪಿಎಲ್​ನಲ್ಲಿ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ತಂಡ ಅಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ. ಆದರೆ 16 ವರ್ಷಗಳಿಂದಲೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ ಎಂಬುದು ಬೇಸರದ ಸಂಗತಿ. ಇಷ್ಟಾದರೂ ಅಭಿಮಾನಿಗಳು ತಂಡವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಅಚ್ಚರಿ ಏನೆಂದರೆ ಇದೇ ಫ್ಯಾನ್ಸ್ ನಿಷ್ಠೆಯನ್ನೇ ಫ್ರಾಂಚೈಸಿ ಬಂಡವಾಳ ಮಾಡಿಕೊಳ್ಳುತ್ತಿದೆ.

ಆರ್​​ಸಿಬಿ ಕುರಿತ ವಿವರ

ಆರ್​ಸಿಬಿ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. 2008ರಲ್ಲಿ ಸ್ಥಾಪನೆಯಾದ ಈ ಫ್ರಾಂಚೈಸಿ, ಉದ್ಘಾಟನಾ ಐಪಿಎಲ್​ನಲ್ಲಿ ತನ್ನ ಚೊಚ್ಚಲ ಪ್ರವೇಶ ಮಾಡಿತು. ಐಪಿಎಲ್‌ನ ಎಲ್ಲಾ ಆವೃತ್ತಿಗಳಲ್ಲಿ ಯಾವುದೇ ಗೆಲುವು ಸಾಧಿಸದೆ ಆಡುತ್ತಿರುವ ತಂಡಗಳಲ್ಲಿ ಇದು ಕೂಡ ಒಂದಾಗಿದೆ. ಆರ್‌ಸಿಬಿ 2009, 2011, 2016ರ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತು. 2020, 2021 ಮತ್ತು 2020ರ ಐಪಿಎಲ್ ಸೀಸನ್‌ಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಗಳಿಸಿತ್ತು.

ಆರ್​ಸಿಬಿ ತಂಡವನ್ನು ಕಿಂಗ್‌ಫಿಶರ್ ಏರ್‌ಲೈನ್ಸ್ ಆಗಿನ ಅಧ್ಯಕ್ಷರಾಗಿದ್ದ ವಿಜಯ್ ಮಲ್ಯ 111.6 ಮಿಲಿಯನ್‌ ಡಾಲರ್​ಗೆ ಖರೀದಿಸಿದ್ದರು. ಇದು ಐಪಿಎಲ್​ನ ಎರಡನೇ ಅತಿ ಹೆಚ್ಚು ಬಿಡ್ ಆಗಿದೆ. ಆದಾಗ್ಯೂ, ಮಲ್ಯ 2016ರಲ್ಲಿ ಸಾಲಗಳನ್ನು ಮರುಪಾವತಿಸಲಿಲ್ಲ. ಹಾಗಾಗಿ ಮತ್ತೊಬ್ಬರು ತಂಡವನ್ನು ಖರೀದಿಸಿದರು. ಪ್ರಸ್ತುತ ಈ ತಂಡ ಡಿಯಾಜಿಯೊದ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. 2022ರ ಹೊತ್ತಿಗೆ ರಾಯಲ್ ಚಾಲೆಂಜರ್ಸ್ 3ನೇ ಶ್ರೀಮಂತ ಫ್ರಾಂಚೈಸ್ ಆಗಿದೆ. ಆರ್​ಸಿಬಿ ನಿವ್ವಳ ಮೌಲ್ಯ 697 ಕೋಟಿ. ಆರ್​ಸಿಬಿ ತಂಡದ ಅಧ್ಯಕ್ಷ ಪ್ರಥಮೇಶ್ ಮಿಶ್ರಾ.

ಆರ್​ಸಿಬಿ ಮಾಲೀಕ ಯಾರು?

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL), ಹಿಂದೆ ಯುನೈಟೆಡ್ ಬ್ರೂವರೀಸ್, ಭಾರತೀಯ ಆಲ್ಕೊಹಾಲ್‌ಯುಕ್ತ ಪಾನೀಯ (ಮದ್ಯಸಾರಯುಕ್ತ ಪಾನೀಯ) ಕಂಪನಿಯಾಗಿದೆ. ಇದು ವಿಶ್ವದ ಎರಡನೇ ಅತಿ ಹೆಚ್ಚು ಪ್ರಮಾಣದ ಸ್ಪಿರಿಟ್‌ ಉತ್ಪಾದಿಸುತ್ತದೆ. ಅಲ್ಲದೆ, ಇಂಗ್ಲಿಷ್ ಬಹುರಾಷ್ಟ್ರೀಯ ಆಲ್ಕೊಹಾಲ್‌ಯುಕ್ತ ಪಾನೀಯ ದೈತ್ಯ ಮತ್ತು ವಿಶ್ವದ ಪ್ರಮುಖ ಮದ್ಯದ ಕಂಪನಿಗಳಲ್ಲಿ ಒಂದಾಗಿದೆ. ಯುನೈಟೆಡ್ ಸ್ಪಿರಿಟ್ಸ್‌ನ ಪ್ರಸ್ತುತ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಹಿನಾ ನಾಗರಾಜನ್. ಮಹಿಳಾ ಪ್ರೀಮಿಯರ್​ ಲೀಗ್​​ನಲ್ಲೂ ತಂಡವನ್ನು ಹೊಂದಿರುವ ಆರ್​ಸಿಬಿ, ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದೆ.

2023ರಲ್ಲಿ 1.4 ಶತಕೋಟಿ ಆದಾಯ

ಆರ್​ಸಿಬಿ ಫ್ರಾಂಚೈಸಿ ಮಾಲೀಕರ ಒಟ್ಟಾರೆ​ ಆದಾಯ 2.4 ಶತಕೋಟಿ ರೂಪಾಯಿಗೂ ಹೆಚ್ಚು ಎಂದು Statista ವರದಿ ಮಾಡಿದೆ. ಈ ಪೈಕಿ 2023ರಲ್ಲೇ 1.4 ಶತಕೋಟಿ ಹರಿದು ಬಂದಿದೆ ಎಂದು ಹೇಳಲಾಗಿದೆ. ಜಾಹೀರಾತು, ಮಾಧ್ಯಮ ಹಕ್ಕು ಸೇರಿದಂತೆ ಹಲವು ಮೂಲಗಳಿಂದ ಆದಾಯ ಹರಿದು ಬಂದಿದೆ. ಪ್ರತಿ ವರ್ಷವೂ ಕೋಟಿಗಟ್ಟಲೇ ದುಡಿಯುವ ಫ್ರಾಂಚೈಸಿ ಒಂದು ಟ್ರೋಫಿ ಗೆಲ್ಲದಿದ್ದರೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದೆ. ನಿಷ್ಠಾವಂತ ಅಭಿಮಾನಿಗಳ ಅಭಿಮಾನವೇ ಆರ್​ಸಿಬಿಗೆ ಬಂಡವಾಳವಾಗಿ ಮಾರ್ಪಟ್ಟಿದೆ ಎಂದರೂ ತಪ್ಪಾಗಲ್ಲ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ