ಕೆಎಲ್ ರಾಹುಲ್ vs ರಿಷಭ್ ಪಂತ್, ಮೊದಲ ಏಕದಿನಕ್ಕೆ ಯಾರು ವಿಕೆಟ್ ಕೀಪರ್; ರೋಹಿತ್ ಶರ್ಮಾ ಸ್ಪಷ್ಟನೆ
Aug 02, 2024 06:45 AM IST
ಕೆಎಲ್ ರಾಹುಲ್ vs ರಿಷಭ್ ಪಂತ್, ಮೊದಲ ಏಕದಿನಕ್ಕೆ ಯಾರು ವಿಕೆಟ್ ಕೀಪರ್; ರೋಹಿತ್ ಶರ್ಮಾ ಸ್ಪಷ್ಟನೆ
- Rishabh Pant vs KL Rahul: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ನಡುವೆ ವಿಕೆಟ್ ಕೀಪರ್ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂದು ನಾಯಕ ರೋಹಿತ್ ಶರ್ಮಾ ಉತ್ತರಿಸಿದ್ದಾರೆ.
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಡುವೆ ಒಬ್ಬರನ್ನು ಪ್ಲೇಯಿಂಗ್ ಇಲೆವೆನ್ಗೆ ಆಯ್ಕೆ ಮಾಡುವ ಕುರಿತು ಯಾವುದೇ ಗೊಂದಲ ಇಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಯಾರಿಗೆ ಅವಕಾಶ ಸಿಗಬಹುದು ಎಂಬ ಗೊಂದಲ ಸೃಷ್ಟಿಯಾಗಿದ್ದ ಕಾರಣ ಹಿಟ್ಮ್ಯಾನ್ ಉತ್ತರ ಕೊಟ್ಟಿದ್ದಾರೆ.
ಕೆಎಲ್ ರಾಹುಲ್, ಕಳೆದ ಕೆಲವು ವರ್ಷಗಳಿಂದ ಏಕದಿನ ಕ್ರಿಕೆಟ್ನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮಧ್ಯಮ ಕ್ರಮಾಂಕದ ಆಧಾರ ಸ್ಥಂಭವಾಗಿದ್ದಾರೆ. ಕಳೆದ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ನಲ್ಲೂ ಸಾಮರ್ಥ್ಯ ನಿರೂಪಿಸಿದ್ದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 452 ರನ್ ಬಾರಿಸಿದ್ದರು. ಆ ಮೂಲಕ ದಾಖಲೆಯನ್ನೂ ನಿರ್ಮಿಸಿದ್ದರು. ಆದರೆ ವಿಶ್ವಕಪ್ ನಂತರ ರಾಹುಲ್ ಏಕದಿನ ಫಾರ್ಮೆಟ್ ಆಡಿಯೇ ಇಲ್ಲ.
ಆದರೆ ಪಂತ್ 2022ರ ನವೆಂಬರ್ನಿಂದ ಒಂದೂ ಏಕದಿನ ಪಂದ್ಯವನ್ನಾಡಿಲ್ಲ. ಭೀಕರ ಅಪಘಾತದ ನಂತರ ಟಿ20ಐನಲ್ಲಿ ಮಿಂಚಿರುವ ಏಕದಿನಕ್ಕೂ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. 14 ತಿಂಗಳಿಗೂ ಹೆಚ್ಚು ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿದಿದ್ದ ಪಂತ್, 2024ರ ಟಿ20 ವಿಶ್ವಕಪ್ನಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ್ದರು. ಈ ಮೆಗಾ ಟೂರ್ನಿಗೂ ಮುನ್ನ 2024ರ ಐಪಿಎಲ್ನಲ್ಲೂ ಮಿಂಚಿದ್ದರು.
ಕೋಚ್ ಜೊತೆ ಚರ್ಚಿಸಿ ನಿರ್ಧಾರ ಎಂದ ರೋಹಿತ್
ಇಬ್ಬರು ಸಹ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗುವುದು ಕಷ್ಟ. ಮೊದಲ ಆಯ್ಕೆಯ ವಿಕೆಟ್ ಕೀಪರ್ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಮುಖ್ಯಕೋಚ್ ಗಂಭೀರ್ ಅವರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ನಾಯಕ ರೋಹಿತ್ ಪ್ರತಿಪಾದಿಸಿದ್ದಾರೆ.
‘ವಿಕೆಟ್ ಕೀಪರ್ ಆಯ್ಕೆಯ ಕುರಿತು ನಾನು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಜೊತೆ ಚರ್ಚಿಸಬೇಕಿದೆ. ಪಂದ್ಯದ ವೇಳೆ ಯಾರು ಕಣಕ್ಕಿಳಿಯುತ್ತಾರೆ ಎಂಬುದನ್ನು ನೀವೇ ನೋಡಲಿದ್ದೀರಿ ಎಂದು ರೋಹಿತ್ ಶರ್ಮಾ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ, ಇಬ್ಬರು ಗುಣಮಟ್ಟದ ಆಟಗಾರರ ನಡುವೆ ಆಯ್ಕೆ ಮಾಡುವಲ್ಲಿ ಯಾವುದೇ ಸಮಸ್ಯೆ ಮತ್ತು ಗೊಂದಲ ಇಲ್ಲ’ ಎಂದು ಹೇಳಿದ್ದಾರೆ.
‘ನಾನು ನಾಯಕನಾಗಿ ಇರುವವರೆಗೂ…’
‘ರಾಹುಲ್ ಮತ್ತು ಪಂತ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಠಿಣ ನಿರ್ಧಾರ. ಏಕೆಂದರೆ ಇಬ್ಬರೂ ಗುಣಮಟ್ಟದ ಆಟಗಾರರು. ತಮ್ಮದೇ ಆದ ರೀತಿಯಲ್ಲಿ ಮ್ಯಾಚ್ ವಿನ್ನಿಂಗ್ ಶೈಲಿಯನ್ನು ಹೊಂದಿದ್ದಾರೆ. ತಂಡವನ್ನು ಆಯ್ಕೆ ಮಾಡಲು ಸಮಸ್ಯೆಗಳನ್ನು ಎದುರಿಸುವುದು ಯಾವಾಗಲೂ ಖುಷಿ ಕೊಡುತ್ತದೆ. ಇದು ತಂಡದ ಗುಣಮಟ್ಟ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ತಿಳಿಸಿದ್ದಾರೆ.
‘ಯಾರನ್ನು ಆಯ್ಕೆ ಮಾಡಬೇಕು ಅಥವಾ ಬಿಡಬೇಕು ಎಂಬುದರ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ ಎಂದಾದರೆ ತಂಡದಲ್ಲಿ ಗುಣಮಟ್ಟ ಇದೆ ಎಂದರ್ಥ. ಅದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ನಾನು ನಾಯಕನಾಗಿ ಇರುವವರೆಗೂ ಈ ಸಮಸ್ಯೆಗಳನ್ನು ಎದುರು ನೋಡುತ್ತಿರುತ್ತೇನೆ’ ಎಂದು ಅವರು ಹೇಳಿದ್ದಾರೆ.
ಈ ಪಂದ್ಯ ನಮಗೆ ದೊಡ್ಡ ಟೂರ್ನಿಗೆ ತಯಾರಿ ನಡೆಸುವ ಭಾಗವಲ್ಲ. ಆದರೆ, ಇಲ್ಲಿ ಏನನ್ನಾದರೂ ಕಲಿಯಲು ಬಯಸುತ್ತೇವೆ. ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.