ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಿಂದ ಭಾರತ ಹೊರಗುಳಿಯಲಿದೆಯೇ; ರಾಜೀವ್ ಶುಕ್ಲಾ ಕೊಟ್ರು ಸ್ಪಷ್ಟನೆ
Jul 14, 2024 07:00 AM IST
ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಿಂದ ಭಾರತ ಹೊರಗುಳಿಯಲಿದೆಯೇ; ವದಂತಿಗಳನ್ನು ತಳ್ಳಿಹಾಕಿದ ರಾಜೀವ್ ಶುಕ್ಲಾ
- ICC Champions Trophy 2025: ಭಾರತ vs ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯಿಂದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪ್ರಯಾಣಿಸುತ್ತಾ ಎಂಬುದರ ಕುರಿತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: 2025ರಲ್ಲಿ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಭಾಗವಹಿಸುತ್ತಾ ಇಲ್ಲವೇ ಎಂಬುದರ ಚರ್ಚೆಗಳು ಜೋರಾಗಿವೆ. ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿದ್ದು, ಕೇಂದ್ರ ಸರ್ಕಾರ ನೀಡಿದ ಮಾರ್ಗದರ್ಶನದಂತೆ ನಾವು ನಡೆಕೊಳ್ಳುತ್ತೇವೆ ಎಂದಿದೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಮಾತ್ರ ಪಾಕ್ಗೆ ಪ್ರಯಾಣ ಬೆಳೆಸುತ್ತೇವೆ ಎಂದಿದೆ.
ಆದಾಗ್ಯೂ, ಇತ್ತೀಚೆಗೆ ಐಸಿಸಿ ಟೂರ್ನಿಗೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ವದಂತಿಗಳು ಹರಡಿದ್ದವು. ಇದೀಗ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದು, ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಿಗದಿಪಡಿಸುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ ಎಂದು ವರದಿಯಾಗಿದೆ.
ಹೀಗಾಗಿ ಬಿಸಿಸಿಐ ಮನವಿಗೆ ಐಸಿಸಿಗೆ ಕಿವಿಗೊಡದೇ ಪಾಕ್ನಲ್ಲೇ ಭಾರತದ ಪಂದ್ಯಗಳನ್ನು ಆಯೋಜಿಸಿದರೆ ಟೂರ್ನಿಯನ್ನು ಬಹಿಷ್ಕರಿಸುತ್ತದೆ ಎಂಬ ವದಂತಿಗಳಿವೆ. ಇದು ಸಾಕಷ್ಟು ಊಹಾಪೋಹಗಳನ್ನೂ ಹುಟ್ಟು ಹಾಕಿದೆ. ಆದರೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಯಾವ ಮೂಲಗಳು ಅಂತಹ ಮಾಹಿತಿ ನೀಡಿದೆ ಎಂಬುದು ನಮಗೆ ತಿಳಿದಿಲ್ಲ. ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎಂದು ಶುಕ್ಲಾ ದಿ ಪ್ರಿಂಟ್ಗೆ ತಿಳಿಸಿದ್ದಾರೆ.
ಐಸಿಸಿ, ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ
ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯಿಂದ 2008ರ ಏಷ್ಯಾ ಕಪ್ ನಂತರ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿಲ್ಲ. ಆದರೆ ಉಭಯ ದೇಶಗಳು ಕೊನೆಯ ಬಾರಿಗೆ 2013ರ ಆರಂಭದಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿದ್ದವು. ಅಂದಿನಿಂದ, ಭಾರತ ಮತ್ತು ಪಾಕಿಸ್ತಾನವು ಐಸಿಸಿ ಮತ್ತು ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
2024ರ ಟಿ20 ವಿಶ್ವಕಪ್ನಲ್ಲಿ ಮುಖಾಮುಖಿಯಾಗಿದ್ದ ಇಂಡೋ-ಪಾಕ್, ಇದಕ್ಕೂ ಮೊದಲು 2023ರಲ್ಲಿ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್ ಟೂರ್ನಿಯಲ್ಲಿ ಸೆಣಸಾಟ ನಡೆಸಿದ್ದವು. ಅಂದು ಏಷ್ಯಾಕಪ್ ಕೂಡ ಪಾಕಿಸ್ತಾನವೇ ಆತಿಥ್ಯ ವಹಿಸಿತ್ತು. ಆದರೆ, ಪಾಕ್ಗೆ ಪ್ರಯಾಣಿಸಲು ಬಿಸಿಸಿಐ ಒಪ್ಪದ ಕಾರಣ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಗೂ ಇದೇ ಮಾದರಿ ಅನುಸರಿಸಲು ಬಿಸಿಸಿಐ ನಿರ್ಧರಿಸಿದೆ.
ಮೇ ತಿಂಗಳಲ್ಲೇ ಸ್ಪಷ್ಟಪಡಿಸಿದ್ದ ರಾಜೀವ್ ಶುಕ್ಲಾ
ಮೇ 2024ರಲ್ಲಿ ಶುಕ್ಲಾ ಅವರು ಭಾರತೀಯ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದರು. ಇದು ಕೇಂದ್ರ ಸರ್ಕಾರ ನೀಡುವ ಅನುಮತಿಯ ಮೇರೆ ನಿರ್ಧಾರವಾಗುತ್ತದೆ. ಚಾಂಪಿಯನ್ಸ್ ಟ್ರೋಫಿಯ ವಿಷಯದಲ್ಲಿ, ಭಾರತ ಸರ್ಕಾರವು ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ಭಾರತ ಸರ್ಕಾರವು ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಆದ್ದರಿಂದ ನಾವು ಭಾರತ ಸರ್ಕಾರದ ನಿರ್ಧಾರದ ಪ್ರಕಾರ ಹೋಗುತ್ತೇವೆ ಎಂದು ಹೇಳಿದ್ದರು.
ಒಂದು ವೇಳೆ ಭಾರತ ತಂಡದಿಂದ ಹಿಂದೆ ಸರಿದರೆ, ಶ್ರೀಲಂಕಾವನ್ನು ಬದಲಿ ತಂಡವಾಗಿ ಹೆಸರಿಸಲಾಗುವುದು. 2023ರ ಏಕದಿನ ವಿಶ್ವಕಪ್ ಪಾಯಿಂಟ್ಸ್ ಟೇಬಲ್ ಗ್ರೂಪ್ ಹಂತದಲ್ಲಿ 9ನೇ ಸ್ಥಾನ ಪಡೆದ ಕಾರಣ ಶ್ರೀಲಂಕಾ ಈ 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ವಿಫಲರಾಗಿದೆ. ಇದೇ ಮೊದಲ ಬಾರಿಗೆ ಶ್ರೀಲಂಕಾ ಟೂರ್ನಿಗೆ ಅರ್ಹತೆ ಪಡೆದಿಲ್ಲ.
ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಹೊಸದಾಗಿ ನೇಮಕಗೊಂಡ ಗೌತಮ್ ಗಂಭೀರ್ ಅವರಿಗೆ 2025ರ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ಪ್ರಾರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಮೊದಲ ಐಸಿಸಿ ಟೂರ್ನಿಯಾಗಿದೆ. ಬಾರ್ಬಡೋಸ್ನಲ್ಲಿ ನಡೆದ ವಿಶ್ವಕಪ್ ಗೆಲುವಿನ ನಂತರ ಕಳೆದ ತಿಂಗಳು ಟಿ20ಐ ಕ್ರಿಕೆಟ್ನಿಂದ ನಿವೃತ್ತರಾದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ವೈಟ್-ಬಾಲ್ ವೃತ್ತಿಜೀವನದ ಅಂತ್ಯವನ್ನು ಈ ಟೂರ್ನಿ ಸೂಚಿಸುತ್ತದೆ.