ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್; ಸಂಕಷ್ಟದಲ್ಲಿ ಆರ್ಸಿಬಿ, 3ನೇ ಸ್ಥಾನಕ್ಕಾಗಿ 3 ತಂಡಗಳ ಮಧ್ಯೆ ಪೈಪೋಟಿ
Mar 11, 2024 06:00 AM IST
ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್
- wpl points table 2024 : ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸಿವೆ. ಆದರೆ ಆರ್ಸಿಬಿ, ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ ತಂಡಗಳು 3ನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ.
ವುಮೆನ್ಸ್ ಪ್ರೀಮಿಯರ್ ಲೀಗ್-2024 ಕೊನೆಯ ಹಂತಕ್ಕೆ ಬಂದು ನಿಂತಿದೆ. ಲೀಗ್ ದಿನೇ ದಿನೇ ರೋಚಕತೆಯಿಂದ ಸಾಗುತ್ತಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ನಾಕೌಟ್ಗೇರುವಲ್ಲಿ ಯಶಸ್ವಿಯಾಗಿವೆ. ಆದರೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಹಾಗಾದರೆ ಯಾವ ತಂಡಗಳಿಗೆ ಏನೆಲ್ಲಾ ಅವಕಾಶ ಇದೆ ಎಂಬುದನ್ನು ಈ ಮುಂದೆ ನೋಡೋಣ.
ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್
ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 1 ರನ್ನಿಂದ ರೋಚಕ ಗೆಲುವು ಸಾಧಿಸಿ ಡಬ್ಲ್ಯುಪಿಎಲ್ನಲ್ಲಿ ಎರಡನೇ ತಂಡವಾಗಿ ಪ್ಲೇಆಫ್ಗೆ ಪ್ರವೇಶಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ 7 ಪಂದ್ಯಗಳಲ್ಲಿ 5 ಗೆಲುವು, 2 ಸೋಲು ಕಂಡಿದೆ. 10 ಅಂಕ ಪಡೆದಿದ್ದು, +0.918 ನೆಟ್ ರನ್ ರೇಟ್ ಹೊಂದಿದೆ.
ಪ್ಲೇಆಫ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ ಕೂಡ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 2 ಸೋಲಿನೊಂದಿಗೆ 10 ಅಂಕ ಪಡೆದಿದೆ. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ಡೆಲ್ಲಿಗಿಂತ ಕೊಂಚ ಹಿಂದಿದೆ. ಹಾಗಾಗಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಪ್ಲೇಆಫ್ಗೆ ಮೊದಲ ತಂಡವಾಗಿ ಪ್ರವೇಶಿಸಿತ್ತು.
ಆದರೆ ಈ ಉಭಯ ತಂಡಗಳ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಮುಂಬೈ ಮತ್ತು ಡೆಲ್ಲಿ ತಂಡಗಳಿಗೆ ತಲಾ 1 ಪಂದ್ಯ ಬಾಕಿ ಉಳಿದಿವೆ. ಮುಂಬೈ ಆರ್ಸಿಬಿ ವಿರುದ್ಧ ಗೆದ್ದು ರನ್ ರೇಟ್ ಹೆಚ್ಚಿಸಿಕೊಂಡು ಅಗ್ರಸ್ಥಾನಕ್ಕೇರಲು ಚಿಂತನೆ ನಡೆಸಿದೆ. ಮತ್ತೊಂದೆಡೆ ಡೆಲ್ಲಿ, ಗುಜರಾತ್ ಅನ್ನು ಸೋಲಿಸಿ ಅಗ್ರಸ್ಥಾನ ಉಳಿಸಿಕೊಳ್ಳಲು ಸಜ್ಜಾಗುತ್ತಿದೆ. ಏಕೆಂದರೆ ಅಗ್ರಸ್ಥಾನ ಪ್ರವೇಶಿಸಿದ ತಂಡವು ನೇರವಾಗಿ ಫೈನಲ್ಗೆ ಲಗ್ಗೆ ಇಡಲಿವೆ.
ಮೂರನೇ ಸ್ಥಾನಕ್ಕೇರಲು 3 ತಂಡಗಳ ಮಧ್ಯೆ ಪೈಪೋಟಿ
ಡೆಲ್ಲಿ ರೋಚಕವಾಗಿ ಡೆಲ್ಲಿ ವಿರುದ್ಧ ಸೋತರೂ ಆರ್ಸಿಬಿ ಮೂರನೇ ಸ್ಥಾನದಲ್ಲೇ ಇದೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಾದಿ ದುರ್ಗಮವಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡಿದೆ. 6 ಅಂಕ ಪಡೆದಿದೆ. ಉಳಿದಿರುವ ಒಂದು ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ನಿರ್ಧರಿಸಿದೆ.
ಆರ್ಸಿಬಿಗೆ ಪೈಪೋಟಿಯಾಗಿ ಯುಪಿ ವಾರಿಯರ್ಸ್ ಕೂಡ ಇದೆ. ಅಷ್ಟೇ ಸೋಲು, ಗೆಲುವು, ಅಂಕ ಪಡೆದಿರುವ ಯುಪಿ, ತನ್ನ ಕೊನೆಯ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಪ್ರವೇಶಿಸಲು ಸಜ್ಜಾಗಿದೆ. ಪ್ರಸ್ತುತ ನೆಟ್ ರನ್ ರೇಟ್ ವಿಚಾರದಲ್ಲಿ ಆರ್ಸಿಬಿಗಿಂತ (+0.027) ಯುಪಿ (-0.365) ಹಿಂದಿದೆ.
ಒಂದು ವೇಳೆ ಯುಪಿ ತನ್ನ ಮುಂದಿನ ಪಂದ್ಯದಲ್ಲಿ ಗೆದ್ದರೆ, ಆರ್ಸಿಬಿ ಕೊನೆಯ ಪಂದ್ಯದಲ್ಲಿ ಸೋತರೆ ಯುಪಿ ಪ್ಲೇಆಫ್ಗೆ ಲಗ್ಗೆ ಇಡಲಿದೆ. ಈ ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಜಯಸಿದರೆ, ತಲಾ 8 ಅಂಕ ಪಡೆಯಲಿವೆ. ಆಗ ನೆಟ್ ರನ್ ರೇಟ್ ಯಾರದ್ದು ಉತ್ತಮವಾಗಿರುತ್ತದೋ ಅವರು ಪ್ಲೇ ಆಫ್ಗೆ ಎಂಟ್ರಿಕೊಡಲಿದ್ದಾರೆ.
ಇನ್ನು ಕೊನೆಯ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ತಂಡಕ್ಕೆ ಇನ್ನೂ ಒಂದು ಅವಕಾಶ ಇದೆ. ಗುಜರಾತ್ ಉಳಿದ ಎರಡಲ್ಲಿ ಗೆಲ್ಲುವುದರ ಜೊತೆಗೆ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು. ಮತ್ತೊಂದೆಡೆ ಆರ್ಸಿಬಿ ಮತ್ತು ಯುಪಿ ತಮ್ಮ ಕೊನೆಯ ಪಂದ್ಯದಲ್ಲಿ ಸೋತರೆ, 6 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಒಂದು ವೇಳೆ ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರಬೀಳಲಿದೆ.