ಭಾರತ ‘ಬಿ’ ಟೀಮ್ ವಿರುದ್ಧ ಸೋತಿದ್ದು ತುಂಬಾ ಖುಷಿ; ವ್ಯಂಗ್ಯದ ಮೂಲಕ ಇಂಗ್ಲೆಂಡ್ಗೆ ಮತ್ತಷ್ಟು ಪೇನ್ ಕೊಟ್ಟ ಟಿಮ್ ಪೈನ್
Tim Paine: ಭಾರತ ಬಿ ತಂಡದಿಂದ ಸೋಲುವ ನೋವು ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ದುರದೃಷ್ಟವಶಾತ್, ಇದು ನಮ್ಮ ತವರು ನೆಲದಲ್ಲಿ ನಮಗೆ ಸಂಭವಿಸಿತ್ತು. ಈಗ ಇಂಗ್ಲೆಂಡ್ ಸೋತಿದ್ದನ್ನು ಖುಷಿಪಡುತ್ತೇನೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟಿಮ್ ಪೈನ್ ಹೇಳಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ 4-1ರಲ್ಲಿ ಸರಣಿ ಸೋತಿರುವ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಬ್ರಾಡ್ ಹ್ಯಾಡಿನ್ ಮತ್ತು ಟಿಮ್ ಪೈನ್ ವ್ಯಂಗ್ಯವಾಡಿದ್ದಾರೆ. ಭಾರತದ ಬಿ ಟೀಮ್ ವಿರುದ್ಧ ಸೋತರೆ ಅದರ ನೋವು ಹೇಗಿರುತ್ತದೆ ಎಂಬುದು ನಮಗೆ ಗೊತ್ತಿದೆ. ಭಾರತದ ಎದುರು ಇಂಗ್ಲೆಂಡ್ ಸೋಲು ಕಂಡಿದ್ದು ತುಂಬಾ ಖುಷಿ ನೀಡಿದೆ ಎಂದು ಹೇಳಿದ್ದಾರೆ.
ಜನವರಿ 25ರಿಂದ ಆರಂಭಗೊಂಡ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು, ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿತು. ಅಲ್ಲದೆ, ಬಜ್ಬಾಲ್ ವರ್ಕೌಟ್ ಆಗುತ್ತಿದೆ ಎಂಬ ಭ್ರಮೆಯಲ್ಲಿತ್ತು. ಆದರೆ ಅದೇ ಆತ್ಮವಿಶ್ವಾಸ ಮುಂದುವರೆಯಲು ಸಾಧ್ಯವಾಗಿಲ್ಲ. ಉಳಿದ 4 ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿತು. ಹಾಗಾಗಿ ವಿಶ್ವಮಟ್ಟದಲ್ಲಿ ಭಾರಿ ಮುಖಭಂಗಕ್ಕೆ ಒಳಗಾಯಿತು. ಸರಣಿ ಸೋತ ಬಳಿಕ ಬೆನ್ ಸ್ಟೋಕ್ಸ್ ನಾಯಕತ್ವವನ್ನು ಹ್ಯಾಡಿನ್ ಹೊಗಳಿಸಿದರೆ, ಇಂಗ್ಲೆಂಡ್ ಸೋತಿದ್ದು ಖುಷಿಯಾಯಿತು ಎಂದು ಪೈನ್ ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ನಾಯಕತ್ವವನ್ನು ಹೊಗಳಿದ ಬ್ರಾಡ್ ಹ್ಯಾಡಿನ್, ಮಾಸ್ಟರ್ ಸ್ಟ್ರೋಕ್ ಎಂದು ಕರೆದಿದ್ದಾರೆ. ತಂಡದ ಯುವ ಆಟಗಾರರನ್ನು ನಿಭಾಯಿಸಿದನ್ನು ತುಂಬಾ ಆನಂದಿಸಿದೆ. ಅವರ ನಾಯಕತ್ವ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ. ಆದರೆ ಅವರು ಆಡಿದ್ದು ಭಾರತದ ಬಿ ಟೀಮ್ ವಿರುದ್ಧ ಎಂಬುದನ್ನು ಮರೆಯಬಾರದು. ಭಾರತ ತಂಡದಲ್ಲಿ ಹಲವು ಸೂಪರ್ಸ್ಟಾರ್ಗಳು ಮಿಸ್ ಆಗಿದ್ದರು. ಹಾಗಾಗಿ ಬೆನ್ಸ್ಟೋಕ್ಸ್ ಅವರು ಎದುರಿಸಬೇಕಾದ ಭಾರತ ತಂಡ ಇದಲ್ಲ ಎಂದು ಹ್ಯಾಡಿನ್ ಹೇಳಿದ್ದಾರೆ.
ಸರಣಿ ಸೋಲಿಗೆ ಬೆನ್ ಸ್ಟೋಕ್ಸ್ ಅವರನ್ನು ದೂಷಿಸಲು ಸಾಧ್ಯವಿಲ್ಲ. ಏಕೆಂದರೆ ಈ ಸರಣಿಯಲ್ಲಿ ಅದ್ಭುತ ತಂತ್ರಗಾರಿಕೆಯಿಂದ ಆಡಿದ್ದಾರೆ. ಉಪಖಂಡದಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಇಂಗ್ಲೆಂಡ್ ಅತ್ಯಂತ ಯುವ ಸ್ಪಿನ್ ದಾಳಿಯನ್ನು ಹೊಂದಿದೆ. ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲೆ, ಶೋಯೆಬ್ ಬಶೀರ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಬೆನ್ ಸ್ಟೋಕ್ಸ್ ಅದಕ್ಕಾಗಿ ಸಾಕಷ್ಟು ಮನ್ನಣೆಗೆ ಅರ್ಹರು ಎಂದು ಹ್ಯಾಡಿನ್ ಹೇಳಿದ್ದಾರೆ.
ಆದರೆ ಅವರು (ಇಂಗ್ಲೆಂಡ್) ಭಾರತೀಯ ಬಿ ತಂಡದ ವಿರುದ್ಧ ಆಡಿದ್ದಾರೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರಿಷಭ್ ಪಂತ್ ಇರಲಿಲ್ಲ. ಮೊದಲ ಟೆಸ್ಟ್ ಬಳಿಕ ಕೆಎಲ್ ರಾಹುಲ್ ಹೊರಬಿದ್ದರು. ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಇದರ ನಡುವೆಯೂ ಭಾರತದ ಯುವ ಆಟಗಾರರು ಅಬ್ಬರಿಸಿದರು. ಯಶಸ್ವಿ ಜೈಸ್ವಾಲ್, ಸರ್ಫರಾಜ್, ಧ್ರುವ್ ಜುರೆಲ್ ಯಶಸ್ಸು ಕಂಡರು. ಭಾರತೀಯ ಕ್ರಿಕೆಟ್ನ ಮುಂದಿನ ಯುಗಕ್ಕೆ ದೊಡ್ಡ ಹೆಸರುಗಳು ಕೇಳಿ ಬರುತ್ತಿದ್ದು, ಮತ್ತಷ್ಟು ಬಲಿಷ್ಠವಾಗುತ್ತಿದೆ ಎಂದು ಹೇಳಿದ್ದಾರೆ.
‘ಭಾರತ ಬಿ ತಂಡ’ ಎಂಬ ಹೇಳಿಕೆ ಒಪ್ಪಿದ ಟಿಮ್ ಪೈನ್
ಭಾರತ ಬಿ ತಂಡ ಎಂಬುದನ್ನು ಒಪ್ಪಿರುವ ಟಿಮ್ ಪೈನ್, ಭಾರತದ ಎರಡನೇ ಸ್ಟ್ರಿಂಗ್ ತಂಡದ ವಿರುದ್ಧ ಸೋತರೆ ಅದರ ನೋವು ಹೇಗಿರುತ್ತದೆ ಎಂಬುದನ್ನೂ ತಿಳಿಸಿದ್ದಾರೆ. ಏಕೆಂದರೆ ಅವರ ನೋವು ಟಿಮ್ ಪೈನ್ಗಿಂತ ಹೆಚ್ಚು ಯಾರಿಗೂ ತಿಳಿದಿಲ್ಲ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ನಡೆದ 2020/21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಆಸೀಸ್ ಸೋತಿತ್ತು. ಆ ಸರಣಿಯಲ್ಲೂ ಭಾರತದ ಸೂಪರ್ಸ್ಟಾರ್ಗಳಿರಲಿಲ್ಲ.
ಮೊದಲ ಟೆಸ್ಟ್ ನಂತರ ಕೊಹ್ಲಿ ಮನೆಗೆ ಮರಳಿದರೆ, ಶಮಿ ಮತ್ತು ಉಮೇಶ್ ಯಾದವ್ ಗಾಯಗೊಂಡು ಹೊರಗುಳಿದರು. ಗಬ್ಬಾದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಲಭ್ಯವಿಲ್ಲದ ಕಾರಣ, ಅಜಿಂಕ್ಯ ರಹಾನೆ ಉತ್ಸಾಹಭರಿತ ಯುವ ಆಟಗಾರರಾದ ಶುಭ್ಮನ್ ಗಿಲ್, ರಿಷಭ್ ಪಂತ್ ಮತ್ತು ಮೊಹಮ್ಮದ್ ಸಿರಾಜ್ರೊಂದಿಗೆ ಮುನ್ನಡೆಸಿದರು. ಆದರೂ ಆಸೀಸ್ ಭಾರತದ ಮುಂದೆ ಶರಣಾಯಿತು. ಅಂದು ಕಾಂಗರೂ ಪಡೆಯ ನಾಯಕರಾಗಿದ್ದು ಟಿಮ್ ಪೈನ್. ಇದೀಗ ಸೋಲಿನ ಕುರಿತು ಮಾತನಾಡಿದ ಪೈನ್ ಇಂಗ್ಲೆಂಡ್ ಸೋತಿದ್ದನ್ನು ನಾನು ಸಂಪೂರ್ಣ ಆನಂದಿಸುತ್ತೇನೆ ಎಂದಿದ್ದಾರೆ.‘
ಭಾರತೀಯ ಬಿ ತಂಡದಿಂದ ಸೋಲುವ ನೋವು ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ದುರದೃಷ್ಟವಶಾತ್, ಇದು ನಮ್ಮ ತವರು ನೆಲದಲ್ಲಿ ನಮಗೆ ಸಂಭವಿಸಿತ್ತು. ಆದರೆ ಇಂಗ್ಲೆಂಡ್ ಇದರ ಲಾಭ ಪಡೆಯುತ್ತದೆ ಎಂದು ಭಾವಿಸಿದ್ದೆ. ಯುವ ಆಟಗಾರರನ್ನು ಹಿಮ್ಮೆಟ್ಟುತ್ತಾರೆ ಎಂದುಕೊಂಡಿದ್ದೆ. ಇಂಗ್ಲೆಂಡ್ ಆಟವನ್ನು ನಾನು ಸಂಪೂರ್ಣವಾಗಿ ಆನಂದಿಸುತ್ತೇನೆ, ಪ್ರೀತಿಸುತ್ತೇನೆ. ಆದರೆ ಭಾರತ ಎದುರು ಸೋತಿದ್ದನ್ನು ನಾನು ಇಷ್ಟಪಡುತ್ತೇನೆ. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.