logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪಿಜ್ಜಾ-ಬರ್ಗರ್‌ ಅಲ್ಲ, ಖಡಕ್‌ ರೊಟ್ಟಿ-ಶೇಂಗಾ ಚಟ್ನಿಯೇ ನನಗಿಷ್ಟ; ಕನ್ನಡತಿ ಶ್ರೇಯಾಂಕಾ ಪಾಟೀಲ್‌ ವಿಡಿಯೋ ವೈರಲ್

ಪಿಜ್ಜಾ-ಬರ್ಗರ್‌ ಅಲ್ಲ, ಖಡಕ್‌ ರೊಟ್ಟಿ-ಶೇಂಗಾ ಚಟ್ನಿಯೇ ನನಗಿಷ್ಟ; ಕನ್ನಡತಿ ಶ್ರೇಯಾಂಕಾ ಪಾಟೀಲ್‌ ವಿಡಿಯೋ ವೈರಲ್

Jayaraj HT Kannada

Mar 18, 2024 12:37 PM IST

google News

ಕನ್ನಡತಿ ಶ್ರೇಯಾಂಕಾ ಪಾಟೀಲ್‌ ವಿಡಿಯೋ ವೈರಲ್

    • Shreyanka Patil: ಆರ್‌ಸಿಬಿ ತಂಡದಲ್ಲಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಡಬ್ಲ್ಯುಪಿಎಲ್‌ ಎರಡನೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ ಕಬಳಿಸಿದ್ದಾರೆ. ಈ ನಡುವೆ ಶ್ರೇಯಾಂಕಾ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ಕನ್ನಡತಿ ಶ್ರೇಯಾಂಕಾ ಪಾಟೀಲ್‌ ವಿಡಿಯೋ ವೈರಲ್
ಕನ್ನಡತಿ ಶ್ರೇಯಾಂಕಾ ಪಾಟೀಲ್‌ ವಿಡಿಯೋ ವೈರಲ್ (PTI)

ಡಬ್ಲ್ಯುಪಿಎಲ್‌ ಎರಡನೇ ಆವೃತ್ತಿಯಲ್ಲ ಆರ್‌ಸಿಬಿ ವನಿತೆಯರ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಆ ಮೂಲಕ ಈ ಸಲ ಕಪ್‌ ನಮ್ಮದೇ ಆಗಿದೆ. ಈ ನಡುವೆ ಬೆಂಗಳೂರು ತಂಡದಲ್ಲಿರುವ ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ್‌, ಕನ್ನಡಿಗರ ಮನಗೆದ್ದಿದ್ದಾರೆ. ಟೂರ್ನಿಯಲ್ಲಿ ಬರೋಬ್ಬರಿ 13 ವಿಕೆಟ್‌ ಕಬಳಿಸುವ ಮೂಲಕ, ಬೆಂಗಳೂರಿನ ಹುಡುಗಿ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯ ಎರಡನೇ ಹಂತದಲ್ಲಿ ಬೌಲಿಂಗ್‌ನಲ್ಲಿ ಮ್ಯಾಜಿಕ್‌ ಮಾಡಿದ ಶ್ರೇಯಾಂಕಾ, ಮುಂಬೈ ಹಾಗೂ ಡೆಲ್ಲಿ ತಂಡದ ವಿರುದ್ಧ ಮಾರಕ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ.

ಒಂದೆಡೆ ಆರ್‌ಸಿಬಿ ಕಪ್‌ ಗೆಲುವಿನ ಖುಷಿಯಾದರೆ, ಮತ್ತೊಂದೆಡೆ ಶ್ರೇಯಾಂಕಾ ಪಾಟೀಲ್‌ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದು ಅಭಿಮಾನಿಗಳ ದುಪ್ಪಟ್ಟು ಖುಷಿಗೆ ಕಾರಣವಾಗಿದೆ. ಈ ನಡುವೆ ಶ್ರೇಯಾಂಕಾ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನನಗೆ ಪಿಜ್ಜಾ ಬರ್ಗರ್‌ ತಿನ್ನುವಾಗ ಅಷ್ಟೊಂದು ಖುಷಿಯಾಗಲ್ಲ. ಅದು ನಾಲಗೆ ರುಚಿ ಕೊಡಲ್ಲ. ನನಗೆ ಖಡಕ್‌ ರೊಟ್ಟಿ ಜೊತೆ ಎಣ್ಣೆಗಾಯಿ, ಶೇಂಗಾ ಚಟ್ನಿ ಕೊಟ್ರೆ ಈಗಲೇ ಇಲ್ಲೇ ಕೂತು ತಿನ್ನುತ್ತೇನೆ. ನನಗೆ ಅಷ್ಟು ಇಷ್ಟ ಅದು. ಅದರಲ್ಲೂ ನಮ್ಮ ಅಮ್ಮ ಮತ್ತೆ ಅಜ್ಜಿ ಮಾಡೋ ರೊಟ್ಟಿ ತುಂಬಾ ಇಷ್ಟ. ಅವರು ತುಂಬಾ ಚೆನ್ನಾಗಿ ಮಾಡ್ತಾರೆ. ಅದನ್ನು ತಿಂದರೇನೇ ಸಂತೃಪ್ತಿ ಸಿಗೋದು. ಅದು ನಮ್ಮೂರಿನ ಊಟ ಅನ್ನೋ ಭಾವನೆ. ಅದು ತಿನ್ನುವಷ್ಟು ಖುಷಿ ಬೇರೆಲ್ಲೂ ಸಿಗಲ್ಲ ಎಂದು ಶ್ರೇಯಾಂಕಾ ಹೇಳಿದ್ದಾರೆ. ಕನ್ನಡತಿ ಮಾತನಾಡಿರುವ ಹಳೆಯ ವಿಡಿಯೋ ಈಗ ವೈರಲ್‌ ಆಗಿದೆ.

ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿದೆ. ಭರ್ಜರಿ 8 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿರುವ ಚೊಚ್ಚಲ ಟ್ರೋಫಿ ಗೆದ್ದಿತು. ಇದೇ ಮೊದಲ ಬಾರಿಗೆ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಫೈನಲ್‌ ಪ್ರವೇಶಿಸಿದ ತಂಡವು, ಟ್ರೋಫಿ ಎತ್ತಿ ಹಿಡೊದು ಮಿಂಚಿತು.

ಇದನ್ನೂ ಓದಿ | ಆರ್​​ಸಿಬಿ ಟ್ರೋಫಿ ಬರ ನೀಗಿಸಲು ನೆರವಾದ ಕನ್ನಡತಿ; ಅತ್ಯಧಿಕ ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೆದ್ದ ಶ್ರೇಯಾಂಕಾ ಪಾಟೀಲ್

ಆರ್‌ಸಿಬಿಯ ಕಪ್‌ ಗೆಲುವಿನಲ್ಲಿ ಕನ್ನಡದ ಕಂದ ಶ್ರೇಯಾಂಕಾ ಕೊಡುಗೆ ಅಪಾರ. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದ ಅವರು, ಫೈನಲ್‌ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಪಡೆದು ಮಿಂಚಿದರು. ಎದುರಾಳಿ ತಂಡದ ನಾಯಕಿ ಮೆಗ್​ ಲ್ಯಾನಿಂಗ್, ಮಿನ್ನು ಮಣಿ, ಅರುಂಧತಿ ರೆಡ್ಡಿ ಮತ್ತು ತಾನಿಯಾ ಭಾಟಿಯಾ ವಿಕೆಟ್‌ ಪಡೆದು ಮಿಂಚಿದರು. ಒಟ್ಟು ನಾಲ್ಕು ವಿಕೆಟ್‌ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ | WPL: ಮೊದಲ ಕಪ್‌ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಬೆಂಗಳೂರು; ಟ್ರೋಫಿ ಗೆಲ್ಲುತ್ತಿದ್ದಂತೆ ಮೊಳಗಿದ ಆರ್‌ಸಿಬಿ ಘೋಷಣೆ

ಎರಡನೇ ಆವೃತ್ತಿಯಲ್ಲಿ ಒಟ್ಟು 8 ಪಂದ್ಯಗಳಲ್ಲಿ ಆಡಿದ ಕನ್ನಡತಿ, ಬರೋಬ್ಬರಿ 13 ವಿಕೆಟ್‌ ಪಡೆದಿದ್ದಾರೆ. 7.30ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ, ಎರಡು ಬಾರಿ ಮೂರು ವಿಕೆಟ್‌ ಸಾಧನೆ ಮಾಡಿದ್ದಾರೆ. ಪರ್ಪಲ್‌ ಕ್ಯಾಪ್‌ ಜೊತೆಗೆ ಟೂರ್ನಿಯ ಎಮರ್ಜಿಂಗ್‌ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ | ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more, please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ