WTC Points Table: ಮೊದಲ ಟೆಸ್ಟ್ ಗೆದ್ದು 2 ಸ್ಥಾನ ಜಿಗಿದ ನ್ಯೂಜಿಲೆಂಡ್; ಅಗ್ರಸ್ಥಾನದಲ್ಲೇ ಇದ್ದರೂ ಭಾರತ ಗೆಲುವಿನ ಶೇಕಡ ಕುಸಿತ
Oct 20, 2024 07:01 PM IST
ಮೊದಲ ಟೆಸ್ಟ್ ಗೆದ್ದು 2 ಸ್ಥಾನ ಜಿಗಿದ ನ್ಯೂಜಿಲೆಂಡ್; ಅಗ್ರಸ್ಥಾನದಲ್ಲೇ ಇದ್ದರೂ ಭಾರತ ಗೆಲುವಿನ ಶೇಕಡ ಕುಸಿತ
- Latest WTC Points Table: ಭಾರತ ಮತ್ತು ನ್ಯೂಜಿಲೆಂಡ್ ಮೊದಲ ಟೆಸ್ಟ್ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ ಯಾವ ತಂಡಗಳು, ಯಾವ ಸ್ಥಾನ ಪಡೆದಿವೆ ಎಂಬುದು ಇಲ್ಲಿದೆ.
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ ಐತಿಹಾಸಿಕ ವಿಜಯವನ್ನು ದಾಖಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ ಕಿವೀಸ್, ಎರಡು ಸ್ಥಾನ ಮೇಲೇರಿದೆ. ಮತ್ತೊಂದೆಡೆ ಸೋತರೂ ಭಾರತ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆದರೆ ಗೆಲುವಿನ ಶೇಕಡವಾರಿನಲ್ಲಿ 6 ಅಂಕ ನಷ್ಟ ಕಂಡಿದೆ. ಹಾಗಿದ್ದರೆ, ಇಂಡೋ-ಕಿವೀಸ್ ನಂತರ ಡಬ್ಲ್ಯುಟಿಸಿ ಟೇಬಲ್ನಲ್ಲಿ ಏನೆಲ್ಲಾ ಬದಲಾವಣೆಗಳು ಕಂಡಿವೆ? ವಿವರ.
ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಈ ಪಂದ್ಯವು ಆರಂಭಿಕ ದಿನ ಮಳೆ ಕಾರಣ ರದ್ದಾಯಿತು. ಆದರೆ, 2ನೇ ದಿನ ಪಂದ್ಯ ಆರಂಭವಾದರೂ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಕಿವೀಸ್ ಅತ್ಯುತ್ತಮ ಪ್ರದರ್ಶನ ನೀಡಿತು. ರಚಿನ್ ರವೀಂದ್ರ ಶತಕದ (134) ನೆರವಿನಿಂದ ಪ್ರವಾಸಿಗರು 402 ರನ್ ಗಳಿಸಿ ಆಲೌಟ್ ಆದರು. 356 ರನ್ಗಳ ಹಿನ್ನಡೆ ಭಾರತ, ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಕಂಬ್ಯಾಕ್ ಮಾಡಿತು. ಸರ್ಫರಾಜ್ (150) ಶತಕದ ಸಹಾಯದಿಂದ 462 ರನ್ ಬಾರಿಸಿತು. ಇದರೊಂದಿಗೆ 107 ರನ್ಗಳ ಗುರಿ ನೀಡಿತು. ಆದರೆ ಕಿವೀಸ್ ಅಂತಿಮ ದಿನದಂದು ಸುಲಭ ಗೆಲುವು ದಾಖಲಿಸಿತು.
ಡಬ್ಲ್ಯುಟಿಸಿ 2025: 4ನೇ ಸ್ಥಾನಕ್ಕೇರಿದ ನ್ಯೂಜಿಲೆಂಡ್
ಗೆಲುವು ಸಾಧಿಸಿದ ನಂತರ ನ್ಯೂಜಿಲೆಂಡ್ 1988ರ ನಂತರ ಭಾರತದ ನೆಲದಲ್ಲಿ ತಮ್ಮ ಮೊದಲ ಟೆಸ್ಟ್ ಗೆಲುವು ಸಾಧಿಸಿದೆ. ಶ್ರೀಲಂಕಾ ವಿರುದ್ಧ ಸರಣಿ ಸೋತಿದ್ದ ಕಿವೀಸ್, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ರೋಹಿತ್ ಪಡೆ ಎದುರು ಜಯದ ನಗೆ ಬೀರಿದ ಬೆನ್ನಲ್ಲೇ ಎರಡು ಸ್ಥಾನ ಮೇಲೇರಿ 4ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲಿನೊಂದಿಗೆ 48 ಅಂಕ ಪಡೆದಿದೆ. ಗೆಲುವಿನ ಶೇಕಡಾ 44.44 ಇದೆ. ಆದರೆ ಈ ಪಂದ್ಯಕ್ಕೂ ಮುನ್ನ ಗೆಲುವಿನ ಶೇಕಡಾ 37.50 ಇತ್ತು. ಇದರೊಂದಿಗೆ ಮತ್ತೊಂದು ಫೈನಲ್ಗೇರಲು ಸಜ್ಜಾಗಿದೆ.
ಭಾರತ ಗೆಲುವಿನ ಶೇಕಡ ಕುಸಿತ
ಮತ್ತೊಂದೆಡೆ ಸೋತರೂ ಅಗ್ರಸ್ಥಾನದಲ್ಲೇ ಇರುವ ಭಾರತ ಗೆಲುವಿನ ಶೇಕಡದಲ್ಲಿ ಇಳಿಕೆ ಕಂಡಿದೆ. ಟೀಮ್ ಇಂಡಿಯಾ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು ಕಂಡಿದೆ. 1 ಡ್ರಾದೊಂದಿಗೆ 98 ಅಂಕ ಪಡೆದಿದೆ. ಪ್ರಸ್ತುತ ಗೆಲುವಿನ ಪ್ರಮಾಣ ಶೇ 68.06 ಇದೆ. ಆದರೆ ಈ ಸರಣಿಗೂ ಮುನ್ನ ಗೆಲುವಿನ ಪ್ರಮಾಣ ಶೇ 74.24 ಇತ್ತು. ಉಳಿದ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಫೈನಲ್ ಹಾದಿಯನ್ನು ಮತ್ತಷ್ಟು ಸುಗಮ ಮಾಡಿಕೊಳ್ಳಲು ಗೆಲುವು ಅಗತ್ಯವಾಗಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು, 1 ಡ್ರಾ ಸಾಧಿಸಿದೆ. 90 ಅಂಕ ಪಡೆದಿರುವ ಆಸೀಸ್, ಗೆಲುವಿನ ಪ್ರಮಾಣ ಶೇ 62.5ರಷ್ಟಿದೆ.
ಶ್ರೀಲಂಕಾ ಮೂರನೇ ಸ್ಥಾನದಲ್ಲಿದ್ದು, ಆಡಿರುವ 9ರಲ್ಲಿ 5 ಗೆಲುವು, 4 ಸೋಲು ಕಂಡಿದೆ. 60 ಅಂಕಗಳೊಂದಿಗೆ ಗೆಲುವಿನ ಪ್ರಮಾಣ ಶೇ 55.56 ಹೊಂದಿದೆ. ಇಂಗ್ಲೆಂಡ್ ಐದನೇ ಸ್ಥಾನದಲ್ಲಿದ್ದು, ಬರೋಬ್ಬರಿ 18 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಆದರೆ, 9 ಗೆಲುವು, 8 ಸೋಲು, 1 ಡ್ರಾನೊಂದಿಗೆ 93 ಅಂಕ ಪಡೆದಿದ್ದು, ಶೇ 43.06 ರಷ್ಟು ಗೆಲುವಿನ ಪ್ರಮಾಣ ಇದೆ. 6ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾ, 6 ಪಂದ್ಯ ಆಡಿದ್ದು 2 ಗೆಲುವು, 3 ಸೋಲು, 1 ಡ್ರಾ ಸಾಧಿಸಿದೆ. 28 ಅಂಕ ಪಡೆದ ಆಫ್ರಿಕಾ, ಗೆಲುವಿನ ಪ್ರಮಾಣ 38.89 ರಷ್ಟಿದೆ. ಬಾಂಗ್ಲಾದೇಶ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಕ್ರಮವಾಗಿ 7, 8, 9ನೇ ಸ್ಥಾನದಲ್ಲಿದ್ದು, ಗೆಲುವಿನ ಶೇಕಡವಾರು ಕ್ರಮವಾಗಿ ಶೇ 34.38, ಶೇ 25.93, ಶೇ 18.52 ರಷ್ಟಿದೆ.