ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೋಲಿಗೆ ಕೆಎಲ್ ರಾಹುಲ್ ಮಾತ್ರವಲ್ಲ, ಈ 5 ಆಟಗಾರರೂ ಕಾರಣ!
ಕನ್ನಡ ಸುದ್ದಿ  /  ಕ್ರಿಕೆಟ್  /  ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೋಲಿಗೆ ಕೆಎಲ್ ರಾಹುಲ್ ಮಾತ್ರವಲ್ಲ, ಈ 5 ಆಟಗಾರರೂ ಕಾರಣ!

ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೋಲಿಗೆ ಕೆಎಲ್ ರಾಹುಲ್ ಮಾತ್ರವಲ್ಲ, ಈ 5 ಆಟಗಾರರೂ ಕಾರಣ!

ಟೀಮ್ ಇಂಡಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ದಾಖಲೆಯ ಗೆಲುವು ಸಾಧಿಸಿದೆ. 8 ವಿಕೆಟ್​​ಗಳಿಂದ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಈ ಪಂದ್ಯ ರೋಹಿತ್​ ಪಡೆ ಕಳೆದುಕೊಳ್ಳಲು ಕಾರಣವೇನು? ಯಾರೆಲ್ಲಾ ವೈಫಲ್ಯ ಅನುಭವಿಸಿದರು ಎಂಬುದರ ವಿವರ ಇಲ್ಲಿದೆ.

ಕೆಎಲ್ ರಾಹುಲ್ ಔಟಾದ ಡಗೌಟ್ ಕಡೆಗೆ ಹೆಜ್ಜೆ ಹಾಕುತ್ತಿರುವ ಸಂದರ್ಭ.
ಕೆಎಲ್ ರಾಹುಲ್ ಔಟಾದ ಡಗೌಟ್ ಕಡೆಗೆ ಹೆಜ್ಜೆ ಹಾಕುತ್ತಿರುವ ಸಂದರ್ಭ. (PTI)

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ 8 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿತು. 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದ ಕಿವೀಸ್, 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಆದರೆ, ಭಾರತ ಹೀನಾಯ ಸೋಲನುಭವಿಸಿ ಮುಖಭಂಗಕ್ಕೆ ಗುರಿಯಾಯಿತು. ಬೆಂಗಳೂರು ಟೆಸ್ಟ್​​ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ ಗಳಿಸಿದ್ದು ಕೇವಲ 46 ರನ್.

ಇದಕ್ಕುತ್ತರವಾಗಿ ನ್ಯೂಜಿಲೆಂಡ್ 402 ರನ್ ಗಳಿಸಿತು. ಹೀಗಾಗಿ ನ್ಯೂಜಿಲೆಂಡ್ 356 ರನ್​ಗಳ ದೊಡ್ಡ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್​​ನಲ್ಲಿ ಐತಿಹಾಸಿಕ ಕಂಬ್ಯಾಕ್ ಮಾಡಿದರೂ 107 ರನ್​ ಗುರಿ ನೀಡಲಷ್ಟೆ ಸಾಧ್ಯವಾಯಿತು. 462 ರನ್ ಸಿಡಿಸಿದ ಭಾರತ ಕೊನೆಯ ದಿನದಾಟದಲ್ಲಿ ಪಂದ್ಯವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಪ್ರವಾಸಿ ತಂಡವು 8 ವಿಕೆಟ್​ಗಳಿಂದ ಗೆದ್ದು ಬೀಗಿತು. ಆದರೆ ಭಾರತದ ಸೋಲಿಗೆ ಕಾರಣರಾದ ಐವರು ಆಟಗಾರರು ಯಾರು? ಇಲ್ಲಿದೆ ವಿವರ.

1. ಮೊಹಮ್ಮದ್ ಸಿರಾಜ್: ವೇಗಿ ಸಿರಾಜ್ ಪ್ರದರ್ಶನ ಸಾಮಾನ್ಯವಾಗಿತ್ತು. ಕಿವೀಸ್ ಬ್ಯಾಟರ್​​ಗಳನ್ನು ಬೆದರಿಸುವಲ್ಲಿ ಅವರು ವಿಫಲರಾದರು. ವಿಕೆಟ್ ಕಿತ್ತಲು ಪರದಾಟ ನಡೆಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ 18 ಓವರ್​​ಗಳಲ್ಲಿ 84 ರನ್ ನೀಡಿ 2 ವಿಕೆಟ್ ಪಡೆದರೆ, 2ನೇ ಇನ್ನಿಂಗ್ಸ್​​ನಲ್ಲಿ 7 ಓವರ್​​ಗಳಲ್ಲಿ 16 ರನ್ ನೀಡಿ ಒಂದೂ ವಿಕೆಟ್ ಪಡೆಯಲಿಲ್ಲ. ಕಿವೀಸ್ ವೇಗಿಗಳು ಮಿಂಚಿದರೆ, ಸಿರಾಜ್ ಮಾತ್ರ ಆಕ್ರಮಣಕಾರಿ ದಾಳಿ ನಡೆಸುವಲ್ಲಿ ವೈಫಲ್ಯ ಅನುಭವಿಸಿದರು.

2. ಕೆಎಲ್ ರಾಹುಲ್: ಅನುಭವಿ ಬ್ಯಾಟರ್​ ಕೆಎಲ್ ರಾಹುಲ್ ಅವರ ಬ್ಯಾಟ್ ಈ ಪಂದ್ಯದಲ್ಲಿ ಸದ್ದು ಮಾಡಲೇ ಇಲ್ಲ. ಅದು ಕೂಡ ತಾನು ಹುಟ್ಟಿ ಬೆಳೆದು ತವರಿನ ಮೈದಾನದಲ್ಲೇ ವೈಫಲ್ಯ ಅನುಭವಿಸಿದ್ದು ನಿರಾಸೆ ಮೂಡಿಸಿತು. ಕಳಪೆ ಪ್ರದರ್ಶನ ನೀಡಿದ ರಾಹುಲ್ ಮೊದಲ ಇನ್ನಿಂಗ್ಸ್​​ನಲ್ಲಿ ಶೂನ್ಯಕ್ಕೆ ಔಟಾದರೆ, ಎರಡನೇ ಇನ್ನಿಂಗ್ಸ್​​ನಲ್ಲಿ ಕೇವಲ 12 ರನ್ ಗಳಿಸಿದರು. ತಂಡವು ರನ್ ಗಳಿಸುವ ಅಗತ್ಯವಿದ್ದಾಗಲೇ ಕೈ ಕೊಟ್ಟರು. ಇದು ಅಭಿಮಾನಿಗಳಿಗೆ ಭಾರಿ ಬೇಸರ ತರಿಸಿತು.

3. ರವೀಂದ್ರ ಜಡೇಜಾ: ಸ್ಟಾರ್ ಆಲ್​ರೌಂಡರ್ ಜಡೇಜಾ ಅವರು ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಅಬ್ಬರದ ಪ್ರದರ್ಶನ ನೀಡಿದ್ದರು. ಆದರೆ, ಕಿವೀಸ್​ ಎದುರು ಬ್ಯಾಟ್​ನಿಂದ ಕೊಡುಗೆ ನೀಡಲು ವಿಫಲ ಆದರು. ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾದ ಜಡ್ಡು, 2ನೇ ಇನ್ನಿಂಗ್ಸ್​​ನಲ್ಲಿ ಗಳಿಸಿದ್ದು 5 ರನ್ ಮಾತ್ರ. ಬ್ಯಾಟಿಂಗ್ ಜತೆಗೆ ಬೌಲಿಂಗ್​​​ನಲ್ಲೂ ಸದ್ದು ಮಾಡಲಿಲ್ಲ. ಜಡೇಜಾ ಎರಡೂ ಇನ್ನಿಂಗ್ಸ್​​ಗಳಲ್ಲಿ ಕಿತ್ತಿದ್ದು ಮೂರು ವಿಕೆಟ್ ಮಾತ್ರ.

4. ಯಶಸ್ವಿ ಜೈಸ್ವಾಲ್: ಡಬ್ಲ್ಯುಟಿಸಿ 3ನೇ ಆವೃತ್ತಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿರುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಪಂದ್ಯದ ಎರಡೂ ಇನ್ನಿಂಗ್ಸ್​​ಗಳಲ್ಲಿ ವಿಫಲರಾದರು. ಮೊದಲ ಇನ್ನಿಂಗ್ಸ್​​​ನಲ್ಲಿ 13 ರನ್ ಗಳಿಸಿದರೆ, 2ನೇ ಇನ್ನಿಂಗ್ಸ್​​ನಲ್ಲಿ 35 ರನ್​ಗಳಿಗೆ ಔಟಾದರು. ಬಿರುಸಿನ ಆಟಕ್ಕೆ ಕೈ ಹಾಕಿ ಕೈಸುಟ್ಟುಕೊಂಡರು. 2ನೇ ಇನ್ನಿಂಗ್ಸ್​​ನಲ್ಲಿ ಭಾರತಕ್ಕೆ ಅವರಿಂದ ದೊಡ್ಡ ಇನ್ನಿಂಗ್ಸ್ ಅಗತ್ಯವಿತ್ತು. ಆದರೆ ಅದು ಸಾಧ್ಯವಾಗಿಲ್ಲ.

5. ಆರ್ ಅಶ್ವಿನ್: ಬೆಂಗಳೂರು ಟೆಸ್ಟ್​​ನಲ್ಲಿ ಬ್ಯಾಟ್​-ಬಾಲ್​ ಎರಡರಲ್ಲೂ ನಿರಾಸೆ ಮೂಡಿಸಿದ ಆಟಗಾರ ರವಿಚಂದ್ರನ್ ಅಶ್ವಿನ್. ಮೊದಲ ಇನ್ನಿಂಗ್ಸ್​​​ನಲ್ಲಿ ಶೂನ್ಯಕ್ಕೆ ಔಟಾದರೆ, 2ನೇ ಇನ್ನಿಂಗ್ಸ್​ನಲ್ಲಿ 15 ರನ್​ ಗಳಿಸಿದರು. ಇಡೀ ಟೆಸ್ಟ್​ನಲ್ಲಿ 1 ವಿಕೆಟ್ ಪಡೆಯಲಷ್ಟೆ ಶಕ್ತರಾದ ಅಶ್ವಿನ್, ಮೊದಲ ಇನ್ನಿಂಗ್ಸ್​​ನಲ್ಲಿ 16 ಓವರ್​​ಗಳಲ್ಲಿ 94 ರನ್ ಬಿಟ್ಟು ಕೊಟ್ಟು 1 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡಲು ಹೆಚ್ಚು ಅವಕಾಶ ಸಿಗಲಿಲ್ಲ.

ಆಟಗಾರರ ವೈಫಲ್ಯದ ಜತೆಗೆ ಟಾಸ್ ವಿಚಾರದಲ್ಲೂ ಭಾರತಕ್ಕೆ ಹಿನ್ನಡೆಯಾಯಿತು. ಏಕೆಂದರೆ ಪಂದ್ಯದ ಆರಂಭಕ್ಕೂ ಮುನ್ನ ಮಳೆಯಿಂದ ಪಿಚ್ ತೇವವಾಗಿತ್ತು. ಪಂದ್ಯದ ಮೊದಲ ದಿನವೂ ಮಳೆಯಿಂದ ರದ್ದಾಗಿತ್ತು. ಪಿಚ್ ಮರ್ಮ ಅರಿಯದೆ ನಾಯಕ ರೋಹಿತ್​ ಶರ್ಮಾ ಟಾಸ್ ಗೆದ್ದರೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದರ ಲಾಭ ಪಡೆದ ಕಿವೀಸ್, ಟೀಮ್ ಇಂಡಿಯಾ ವಿರುದ್ಧ ಮೇಲುಗೈ ಸಾಧಿಸಿತು. ಬ್ಯಾಟರ್​​ಗಳು ಇನ್ನೂ ಉತ್ತಮ ಪ್ರದರ್ಶನ ನೀಡುವುದು ಅಗತ್ಯ ಇದೆ.

Whats_app_banner