ಅಪ್ರಬುದ್ಧ ಆಟಗಾರ; ಧೋನಿ ಕುರಿತ ಯಶ್ ದಯಾಳ್ ಇನ್‌ಸ್ಟಾಗ್ರಾಮ್ ಸ್ಟೋರಿ ನೋಡಿ ಸಿಡಿದ ಸಿಎಸ್‌ಕೆ ಫ್ಯಾನ್ಸ್
Dec 03, 2024 11:18 AM IST
ಧೋನಿ ಕುರಿತ ಯಶ್ ದಯಾಳ್ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸಿಡಿದ ಸಿಎಸ್‌ಕೆ ಫ್ಯಾನ್ಸ್
- ಎಂಎಸ್ ಧೋನಿ ವಿಕೆಟ್ ಪಡೆದ ಬೌಲಿಂಗ್ ಸಂದರ್ಭದ ಫೋಟೋವನ್ನು ಆರ್‌ಸಿಬಿ ವೇಗಿ ಯಶ್ ದಯಾಳ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸಿಎಸ್‌ಕೆ ಅಭಿಮಾನಿಗಳು ಎಕ್ಸ್‌ನಲ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ
ಆರ್‌ಸಿಬಿ ಮತ್ತು ಭಾರತ ತಂಡದ ಯುವ ವೇಗಿ ಯಶ್ ದಯಾಳ್ ಅವರು ಸಿಎಸ್‌ಕೆ ಮಾಜಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕುರಿತಾದ ಇನ್‌ಸ್ಟಾಗ್ರಾಮ್ ಸ್ಟೋರಿಯೊಂದನ್ನು ಪೋಸ್ಟ್ ಮಾಡಿ, ಸಿಎಸ್‌ಕೆ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕಳೆದ ಬಾರಿಯ ಯಶಸ್ಸಿನ ಬಳಿಕ, ಮುಂದಿನ ಆವೃತಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿರುವ ದಯಾಳ್, ಐಪಿಎಲ್ 2024ರ ಲೀಗ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕೀಪರ್ ಎಂಎಸ್ ಧೋನಿ ಅವರ ವಿಕೆಟ್ ಪಡೆದರು. ಅವರ ಓವರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆ ಪಂದ್ಯ ಆರ್‌ಸಿಬಿ ಅಭಿಮಾನಿಗಳಿಗೆ ಐಪಿಎಲ್ ಟ್ರೋಫಿ ಗೆದ್ದಷ್ಟೇ ಖುಷಿ ಕೊಟ್ಟಿತ್ತು.
ಎಡಗೈ ವೇಗಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿ ವಿಕೆಟ್ ಪಡೆಯುವುದಕ್ಕಿಂತ ಮುಂಚಿನ ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸಿಎಸ್‌ಕೆ ಅಭಿಮಾನಿಗಳು, ಆರ್‌ಸಿಬಿ ಆಟಗಾರನ ಪೋಸ್ಟ್ ನೋಡಿ ಅಸಮಾಧಾನದ ಕಾಮೆಂಟ್ ಮಾಡಿದ್ದಾರೆ.
ಐಪಿಎಲ್ 2024ರ ಪ್ಲೇಆಫ್ ಸ್ಥಾನಕ್ಕಾಗಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವೆ ಮಾಡು ಇಲ್ಲವೇ ಮಡಿ ಹೋರಾಟ ನಡೆಯಿತು. ದಯಾಳ್ ಅವರಿಗೆ ತಮ್ಮ ಅಂತಿಮ ಓವರ್‌ನಲ್ಲಿ 17 ರನ್‌ಗಳನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ನೀಡಲಾಯಿತು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಡೇಂಜರಸ್ ಫಿನಿಶರ್‌ಗಳಾದ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಮೈದಾನದಲ್ಲಿದ್ದರು. ಹೀಗಾಗಿ ದಯಾಳ್ ಪಾಲಿಗೆ ಅದು ತುಂಬಾ ಕಠಿಣ ಸವಾಲು. ಆದರೆ, ಅದನ್ನು ಸಮರ್ಥವಾಗಿ ನಿಭಾಯಿಸಿ, ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿಸಿದವರು ದಯಾಳ್. ಧೋನಿ ಮೊದಲ ಎಸೆತದಲ್ಲಿ ಎಡಗೈ ವೇಗಿಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಆದರೆ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಂತೆಯೇ, ನಿಧಾನಗತಿಯ ಚೆಂಡನ್ನು ಎಸೆದ ದಯಾಳ್, ಸಿಎಸ್‌ಕೆ ಮಾಜಿ ನಾಯಕನ ವಿಕೆಟ್ ಪಡೆದರು. ದೊಡ್ಡ ಶಾಟ್ ಹೊಡೆಯಲು ಹೋದ ಮಾಹಿ, ಬೌಂಡರಿ ಲೈನ್ ಬಳಿ ನಿಂತಿದ್ದ ಸ್ವಪ್ನಿಲ್ ಸಿಂಗ್‌ಗೆ ಕ್ಯಾಚ್ ಕೊಟ್ಟು ಔಟಾದರು.
ದಯಾಳ್ ಆ ಓವರ್‌ನಲ್ಲಿ ಕೇವಲ ಏಳು ರನ್‌ಗಳನ್ನು ನೀಡಿ ಸಿಎಸ್‌ಕೆ ತಂಡವನ್ನು ಟೂರ್ನಿಯಿಂದ ಹೊರದಬ್ಬಿದರು. ಐಪಿಎಲ್ ಇತಿಹಾಸದಲ್ಲೇ ಅಚ್ಚರಿಯ ಕಂಬ್ಯಾಕ್ ಮಾಡಿದ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯಿತು.
ದಯಾಳ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಸಂದರ್ಭದ ಫೋಟೋವನ್ನು ಹಂಚಿಕೊಂಡಿದ್ದಾರೆ. ಏಕೆಂದರೆ ಅದು ಅವರ ವೃತ್ತಿಜೀವನವನ್ನೇ ಬದಲಾಯಿಸಿದ ಸಂದರ್ಭ. ಅಂದು ಪಂದ್ಯ ಗೆಲ್ಲಿಸಿದ ಅವರು, ಈ ಬಾರಿಯ ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡದಿಂದ ರಿಟೈನ್ ಆಗಿದ್ದಾರೆ.
ಸಿಎಸ್‌ಕೆ ಅಭಿಮಾನಿಗಳಿಂದ ಟ್ರೋಲ್
ಧೋನಿ ಫೋಟೋ ಇರುವ ಪೋಸ್ಟ್ ನೋಡಿ, ಅಭಿಮಾನಿಗಳು ಕೋಪಗೊಂಡಿದ್ದಾರೆ. ಎಕ್ಸ್‌ನಲ್ಲಿ ದಯಾಳ್ ಅವರ ಬಗ್ಗೆ ಟ್ರೋಲ್ ಮಾಡಿದ್ದಾರೆ. ಈ ಹಿಂದೆ ಜಹೀರ್ ಖಾನ್ ಕೂಡಾ ಒಮ್ಮೆ ಧೋನಿಯನ್ನು ಇದೇ ರೀತಿ ಔಟ್ ಮಾಡಿದ್ದರು ಎಂಬುದನ್ನು ದಯಾಳ್ ಜೊತೆಗೆ ಹೋಲಿಸಿದ್ದಾರೆ. ಅಲ್ಲದೆ ದಯಾಳ್ ಒಬ್ಬ ಅಪ್ರಬುದ್ಧ ಆಟಗಾರ ಎಂದು ಒಬ್ಬ ಕಾಮೆಂಟ್ ಮಾಡಿದರೆ, ಧೋನಿ ವಿಕೆಟ್ ಪಡೆದಿದ್ದೇ ಆರ್‌ಸಿಬಿಯ ದೊಡ್ಡ ಸಾಧನೆ ಎಂದು ಛೇಡಿಸಿದ್ದಾನೆ.
ಯಶ್ ದಯಾಳ್‌ಗೆ ವೃತ್ತಿಜೀವನ ಕೊಟ್ಟಿದ್ದೇ ಧೋನಿ. ಹೊಸ ಚೆಂಡಿನಿಂದಾಗಿ ಧೋನಿ ಹೊಡೆತ ಕ್ಯಾಚ್ ಆಯ್ತು. ಅದೇ ಕಾರಣದಿಂದ ಆರ್‌ಸಿಬಿ ತಂಡ ಸಿರಾಜ್ ಹೊರತಾಗಿ ದಯಾಳ್ ರಿಟೈನ್ ಮಾಡಿಕೊಂಡಿತು ಎಂದು ಬರೆದಿದ್ದಾರೆ.
ಇನ್ನು ಆರ್‌ಸಿಬಿ ಅಭಿಮಾನಿಗಳು ಕೂಡಾ, ಈ ಪೋಸ್ಟ್ ನೋಡಿ ಸಿಎಸ್‌ಕೆ ಅಭಿಮಾನಿಗಳನ್ನು ಕಾಡಿದ್ದಾರೆ. ಈ ಪೋಸ್ಟ್ ನೋಡಿ ಸಿಎಸ್‌ಕೆ ಅಭಿಮಾನಿಗಳು 5 ತಿಂಗಳ ನಂತರವೂ ಅಳುತ್ತಿದ್ದಾರೆ. ಆರ್‌ಸಿಬಿ ಧೋನಿ ಅವರನ್ನು ಇನ್ನೂ ಒಂದು ವರ್ಷ ಆಡುವಂತೆ ಮಾಡಿದೆ ಎಂದು ಟೀಕಿಸಿದ್ದಾರೆ.