ಆಸ್ಟ್ರೇಲಿಯಾದ ಸಚಿವರಿಗೂ ಆರ್‌ಸಿಬಿ ಫೇವರೆಟ್, ವಿರಾಟ್ ಕೊಹ್ಲಿ ಅಚ್ಚುಮೆಚ್ಚು; ಕಿಂಗ್ ಗತ್ತು ಎಲ್ಲರಿಗೂ ಗೊತ್ತು!
ಆಸ್ಟ್ರೇಲಿಯಾದ ಸಚಿವ ಟಿಮ್ ವ್ಯಾಟ್ಸ್, ವಿರಾಟ್ ಕೊಹ್ಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಐಪಿಎಲ್‌ನಲ್ಲಿ ತಾವು ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನೂ ನೀಡಿದ್ದಾರೆ.
ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ವಿಶ್ವದ ಜನಪ್ರಿಯ ಕ್ರಿಕೆಟ್ ಆಟಗಾರನಿಗೆ ಆಸ್ಟ್ರೇಲಿಯಾದಲ್ಲೂ ಅಭಿಮಾನಿಗಳಿದ್ದಾರೆ. ಕಾಂಗರೂಗಳ ನಾಡಿನ ಜನರಿಂದ ಸಾಕಷ್ಟು ಮೆಚ್ಚುಗೆ ಪಡೆದಿರುವ ಕೊಹ್ಲಿ, ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದರು. ಆಸೀಸ್ ನೆಲದಲ್ಲಿ ಅವರದ್ದು ಏಳನೇ ಟೆಸ್ಟ್ ಶತಕ ಎಂಬುದು ಗಮನಾರ್ಹ. ಹೀಗಾಗಿ ಕಿಂಗ್ ಕೊಹ್ಲಿಗೆ ಫ್ಯಾನ್ಸ್ ಹೆಚ್ಚು. ಎಲ್ಲಿಯವರೆಗೆ ಎಂದರೆ, ಆಸ್ಟ್ರೇಲಿಯಾದ ಸಚಿವರಿಗೂ ವಿರಾಟ್ ಕೊಹ್ಲಿ ಎಂದರೆ ಫೇವರೆಟ್. ಇದೇ ವೇಳೆ ವಿರಾಟ್ ಪ್ರತಿನಿಧಿಸುವ ಆರ್‌ಸಿಬಿ ತಂಡವೆಂದರೆ ಅಚ್ಚುಮೆಚ್ಚು.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಡುವೆ ಭಾರತ ತಂಡವು ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧದ ಪಂದ್ಯವಾಡುತ್ತಿದೆ. ಅಭ್ಯಾಸ ಪಂದ್ಯ ಆಡುವ ಸಲುವಾಗಿ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾಗೆ ತೆರಳಿದ ಭಾರತ ತಂಡ, ಸಂಸತ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾಗವಿಸಿದ್ದರು. ಈ ವೇಳೆ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾ ಆಟಗಾರರನ್ನು ಸ್ವಾಗತಿಸಲಾಯಿತು. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಕ್ಯಾಬಿನೆಟ್ ಸಚಿವರನ್ನು ಕ್ರಿಕೆಟಿಗರು ಭೇಟಿಯಾದರು. ಅವರಲ್ಲಿ ಒಬ್ಬರು ಸಚಿವರು, ವಿರಾಟ್ ಕೊಹ್ಲಿ ಕುರಿತ ಅಭಿಮಾನದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಟಿಮ್ ವ್ಯಾಟ್ಸ್, ಕೊಹ್ಲಿ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಸಂಸತ್ ಭವನದಲ್ಲಿ ನಡೆಯಲಿರುವ ಪ್ರಧಾನಿ ಇಲೆವೆನ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತೀಯ ಆಟಗಾರರನ್ನು ಭೇಟಿಯಾಗಲು ರೋಮಾಂಚನವಾಗಿದೆ” ಎಂದು ಅವರು ಬರೆದಿದ್ದಾರೆ.
“ನಾನು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುತ್ತೇನೆ ಎಂದು ನಾನು ವಿರಾಟ್ ಕೊಹ್ಲಿಗೆ ಹೇಳಿದೆ. ವಿರಾಟ್ ಅವರಿಗೆ ನಾನು ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ನೀಡಬಹುದಾದ ಅತ್ಯುನ್ನತ ಪ್ರಶಂಸೆ ನೀಡುತ್ತೇನೆ. ಏಕೆಂದರೆ ಅವನು ಆಸ್ಟ್ರೇಲಿಯಾ ಕ್ರಿಕೆಟಿಗನಂತೆ ಆಡುವ ಕಾರಣದಿಂದ ನಾನು ಅವನ ಆಟವನ್ನು ನೋಡುವುದನ್ನು ಇಷ್ಟಪಡುತ್ತೇನೆ. ಆದರೆ ಅವರು ಆಸ್ಟ್ರೇಲಿಯಾದ ವಿರುದ್ಧ ಆಡುವಾಗ ಅಲ್ಲ” ಎಂದು ಸಚಿವ ಬರೆದುಕೊಂಡಿದ್ದಾರೆ.
ಸಚಿವ ಶೇರ್ ಮಾಡಿದ ಫೋಟೋ
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊಹ್ಲಿ ಉತ್ತಮ ಆರಂಭ ಪಡೆದಿದ್ದಾರೆ. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ 295 ರನ್‌ಗಳ ಪ್ರಬಲ ಗೆಲುವು ಸಾಧಿಸಲು ಸಹಾಯ ಮಾಡಿದರು.
ತಂಡವು ಮುಂದೆ ಅಡಿಲೇಡ್‌ನಲ್ಲಿ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಡಲಿದೆ. ಅದಕ್ಕೂ ಮುನ್ನ ಕ್ಯಾನ್ಬೆರಾದಲ್ಲಿ ಪಿಎಂ-ಇಲೆವೆನ್ ತಂಡವನ್ನು ಎದುರಿಸಲಿದೆ. ಆದರೆ, ಮೊದಲ ದಿನದಾಟವವು ಮಳೆಯಿಂದ ರದ್ದಾಗಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್, ಹರ್ಷಿತ್ ರಾಣಾ, ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್.