ನವಜೋತ್ ಸಿಂಗ್ರಂತೆ ರಾಜಕೀಯದಲ್ಲೂ ಸಿಕ್ಸರ್ ಕಿಂಗ್ ಆಗಲು ಹೊರಟ ಯುವರಾಜ್ ಸಿಂಗ್; ಈ ಪಕ್ಷದಿಂದ ಕಣಕ್ಕೆ, ಕ್ಷೇತ್ರವೂ ಫಿಕ್ಸ್?
Feb 25, 2024 06:00 AM IST
ನವಜೋತ್ ಸಿಂಗ್ರಂತೆ ರಾಜಕೀಯದಲ್ಲೂ ಸಿಕ್ಸರ್ ಕಿಂಗ್ ಆಗಲು ಹೊರಟಾ ಯುವರಾಜ್ ಸಿಂಗ್
- Yuvraj Singh : ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಬಿಜೆಪಿ ಸೇರಲಿದ್ದು, ಪಂಜಾಬ್ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಲಿಯಲಿದ್ದಾರೆ ಎಂದು ವರದಿಯಾಗಿದೆ.
ಚಂಡೀಗಢ: ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಬಿಜೆಪಿಗೆ ಮರಳುತ್ತಿದ್ದಾರೆ ಎಂಬ ಸುದ್ದಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ಈ ನಡುವೆ ಕೇಸರಿ ಪಕ್ಷ ಪಂಜಾಬ್ ರಾಜಕೀಯದಲ್ಲಿ ಮತ್ತೊಬ್ಬ ಕ್ರಿಕೆಟಿಗನಿಗೆ ಗಾಳ ಹಾಕಿದೆ. ಆ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಯುವರಾಜ್ ಸಿಂಗ್ (Yuvraj Singh). ಭಾರತದ ಮಾಜಿ ಆಲ್ರೌಂಡರ್ನನ್ನು ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಸಜ್ಜಾಗಿದೆ ಎಂದು ವರದಿಯಾಗಿದೆ.
ನವಜೋತ್ ಸಿಂಗ್ ಸಿಧು ಅವರು ಸಹ ಭಾರತ ತಂಡದ ಮಾಜಿ ಕ್ರಿಕೆಟಿಗ. ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ ಸಹ ಸಿಧು ಮತ್ತೆ ಬಿಜೆಪಿಗೆ ಮರಳಬಹುದು. ಪಂಜಾಬ್‌ನಿಂದ ಲೋಕಸಭೆ ಟಿಕೆಟ್ ಪಡೆಯಬಹುದು ಎಂದು ಮಜಾ ಪ್ರದೇಶದ ಪಂಜಾಬ್ ಬಿಜೆಪಿ ನಾಯಕರು ಭಾವಿಸಿದ್ದಾರೆ. ಮಜಾ ಎಂಬುದು ಭಾರತ-ಪಾಕಿಸ್ತಾನದ ನಡುವಿನ ಐತಿಹಾಸಿಕ ಪಂಜಾಬ್ನ ಮಧ್ಯ ಭಾಗಗಳಲ್ಲಿ ನೆಲೆಗೊಂಡಿರುವ ಪ್ರದೇಶವಾಗಿದೆ.
ಸನ್ನಿ ಡಿಯೋಲ್ ಬದಲಿಗೆ ಯುವರಾಜ್ ಕಣಕ್ಕೆ?
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗುರುದಾಸ್‌ಪುರ ಸಂಸದೀಯ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪ್ರಸ್ತುತ, ಸನ್ನಿ ಡಿಯೋಲ್ ಗುರುದಾಸ್‌ಪುರದ ಬಿಜೆಪಿ ಸಂಸದರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಡಿಯೋಲ್ ಬದಲಿಗೆ ಯುವರಾಜ್ ಬರಲಿದ್ದಾರೆ ಎಂದು ವರದಿಗಳು ಹೇಳಿವೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ನಂತರ ಯುವಿ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದವು.
ಸಿಧು ಬಗ್ಗೆ ಬಿಜೆಪಿ ನಾಯಕ ಹೇಳಿದ್ದೇನು?
ಬಿಜೆಪಿ ನಾಯಕ ಸೋಮದೇವ್ ಶರ್ಮಾ ಅವರು ಕೇಸರಿ ಪಕ್ಷಕ್ಕೆ ಸಿಧು ಸೇರುವ ಬಗ್ಗೆ ಬಲವಾದ ಸೂಚನೆಗಳಿವೆ ಎಂದು ಹೇಳಿದ್ದರು. ಅವರು ಸೇರ್ಪಡೆಗೊಳ್ಳುವ ನಿರೀಕ್ಷೆಯಲ್ಲಿ ಇತರ ಬಿಜೆಪಿ ನಾಯಕರು ಮತ್ತು ಸಂಭಾವ್ಯ ಅಭ್ಯರ್ಥಿಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಹೆಚ್ಚಿನ ವಿವರಗಳನ್ನು ನಿಕಟವಾಗಿ ಕಾಯ್ದಿರಿಸಲಾಗುತ್ತಿದೆ. ಅಮೃತಸರ ಲೋಕಸಭಾ ಕ್ಷೇತ್ರವು ಸಾಂಪ್ರದಾಯಿಕವಾಗಿ ಪಕ್ಷದ ಭದ್ರಕೋಟೆ ಎಂದ ಸೋಮದೇವ್, ಪಕ್ಷವು ಸಿಧು ಅವರನ್ನು ಅಮೃತಸರದಿಂದ ಕಣಕ್ಕಿಳಿಸಿದರೆ ಗೆಲ್ಲಲಿದ್ದಾರೆ ಎಂದು ಹೇಳಿದ್ದರು.
ಆದರೆ, ಕಾಂಗ್ರೆಸ್ ನಾಯಕ ರಮಣ್ ಬಕ್ಷಿ ಅವರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ನಾಯಕ ತನ್ನ ಆಕರ್ಷಣೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳಿದ್ದಾರೆ. ಆ ಮೂಲಕ ಸಿಧು ಬಿಜೆಪಿಗೆ ಮರಳುವುದನ್ನು ತಳ್ಳಿಹಾಕಿದ್ದಾರೆ. ಆದರೆ ಖಚಿತ ಮೂಲಗಳು ನವಜೋತ್ ಸಿಂಗ್ ಸಿಧು, ಬಿಜೆಪಿ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.