‘ಸಿದ್ದರಾಮಯ್ಯನವ್ರೇ ಸುಮ್ಮನೇ ಅರಚದೆ ಜಾತಿ ಗಣತಿ ಬಿಡುಗಡೆ ಮಾಡಿ’; ಅಮಿತ್ ಶಾ ಕುರಿತ ಸಿಎಂ ಹೇಳಿಕೆಗೆ ಚೇತನ್ ಅಹಿಂಸಾ ಪ್ರತಿಕ್ರಿಯೆ
Dec 19, 2024 03:09 PM IST
ಅಮಿತ್ ಶಾ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಚೇತನ್ ಅಹಿಂಸಾ ಪ್ರತಿಕ್ರಿಯೆ
- Ambedkar Row: ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುತ್ತಿದ್ದಂತೆ, ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇಷ್ಟಕ್ಕೆ ಸುಮ್ಮನಾಗದೇ, ಪ್ರತಿಭಟನೆಗೂ ಕರೆ ನೀಡಿದೆ. ಈ ನಡುವೆ, ಸಿಎಂ ಸಿದ್ಧರಾಮಯ್ಯ ಪೋಸ್ಟ್ ಖಂಡಿಸಿ, ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಖಂಡಿಸಿ, ಜಾತಿ ಗಣತಿಗೆ ಒತ್ತಾಯಿಸಿದ್ದಾರೆ.
Chetan Ahimsa on CM Siddaramaiah and Amit shah: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರು. ನಿತ್ಯದ ರಾಜಕೀಯ, ಸಿನಿಮಾ ಸೇರಿ ಪ್ರಸ್ತುತತೆಗೆ ಹತ್ತಿರ ಎನಿಸುವ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ಚೇತನ್, ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಮಾತನಾಡಿದ ವಿಚಾರ ರಾಷ್ಟ್ರ ವ್ಯಾಪಿ ಸದ್ದು ಮಾಡುತ್ತಿದೆ. ಈ ಬಗ್ಗೆಯೂ ತಮ್ಮ ಟ್ವಿಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.
"ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ"
ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ಸಿಎಂ ಸಿದ್ಧರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದಾರೆ. "ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಹೇಳಿಕೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯ. ಇದಕ್ಕೆ ಸ್ಪಷ್ಟೀಕರಣ ನೀಡಿ ಆತ್ಮವಂಚನೆ ಮಾಡಿಕೊಳ್ಳದೆ, ಕೊಟ್ಟ ಹೇಳಿಕೆ ಸಮರ್ಥಿಸಿ ದೇಶವನ್ನು ಎದುರಿಸಿ. ನೀವೂ ತುಚ್ಛೀಕರಿಸಿದಷ್ಟು ಪುಟಿದು ಪುಟಿದು ಮೇಲೆದ್ದು ಬಂದು, ನಮ್ಮ ಹಾದಿಗೆ ಅವರು ಬೆಳಕಾಗುತ್ತಾರೆ ಎಂದು ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ಸಿಎಂ ಹೇಳಿಕೆಗೆ ಚೇತನ್ ಅಹಿಂಸಾ ಕೌಂಟರ್ ಆಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಚೇತನ್ ಅಹಿಂಸಾ ಹೇಳಿದ್ದೇನು?
ಈ ಬಗ್ಗೆ ನೇರವಾಗಿ ಸಿಎಂ ಸಿದ್ಧರಾಮಯ್ಯ ಅವರಿಗೆ ಟಾಂಗ್ ಕೊಟ್ಟ ಚೇತನ್ ಅಹಿಂಸಾ, "ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ಅಂಕ ಗಳಿಸಲು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ: ‘ಅಂಬೇಡ್ಕರ್ ನಮಗೆ ವ್ಯಸನವಲ್ಲ— ನಿತ್ಯ ಸ್ಮರಣೆ’. ಎಂತಹ ಕಾವ್ಯಾತ್ಮಕ ವಾಕ್ಚಾತುರ್ಯ! ಸಿಎಂ ಸಿದ್ದು ಸುಮ್ಮನೆ ಅರಚಿಕೊಂಡು ಮಾತನಾಡುವ ಬದಲು ಜಾತಿ ಗಣತಿ ಬಿಡುಗಡೆ ಮಾಡುವ ಮೂಲಕ (ನುಡಿದಂತೆ) ನಡೆಯಲಿ" ಎಂದಿದ್ದಾರೆ.
ಶಾ ಮಾತಿಗೂ ಚೇತನ್ ಪ್ರತಿಕ್ರಿಯೆ
"ಗೃಹ ಸಚಿವ ಅಮಿತ್ ಶಾ ಅವರು ಬಾಬಾಸಾಹೇಬ್ ಬಗ್ಗೆ ಆಡಿದ ಮಾತುಗಳನ್ನು ಪ್ರಶ್ನಿಸಲಾಗುತ್ತಿದೆ. ಶಾ ಅವರ ಹೇಳಿಕೆಯ ಮೊದಲಾರ್ಧ ನಿಜ- ಅಂಬೇಡ್ಕರ್ ಅವರನ್ನು ಹೈಜಾಕ್ ಮಾಡುವುದು ಎಲ್ಲಾ ಅಸಮಾನತೆಯ ಪಕ್ಷಗಳ 'ಫ್ಯಾಶನ್' ಆಗ್ಬಿಟ್ಟಿದೆ: ಕಾಂಗ್ರೆಸ್/ ಬಿಜೆಪಿ/ ಎಎಪಿ/ ಕಮ್ಯುನಿಸ್ಟರು. 'ದೇವರು' ಮತ್ತು 'ಸ್ವರ್ಗ' ಕುರಿತ ಅವರ ಹೇಳಿಕೆಯ ದ್ವಿತೀಯಾರ್ಧವು ಶಾ ಅವರ ಸೀಮಿತ ಚಿಂತನೆಯ ಪ್ರಕ್ರಿಯೆಯನ್ನು ಬಹಿರಂಗಪಡಿಸುತ್ತದೆ. ಶಾ ಅವರಂತಹ ರಾಜಕಾರಣಿಗಳು ತರ್ಕಬದ್ಧವಾಗಿ ಯೋಚಿಸುವುದನ್ನು ಕಲಿಯಲು ಬಾಬಾಸಾಹೇಬರನ್ನು ಅಧ್ಯಯನ ಮಾಡಬೇಕು" ಎಂದಿದ್ದಾರೆ.
ಅಷ್ಟಕ್ಕೂ ಅಮಿತ್ ಶಾ ಹೇಳಿದ್ದೇನು?
ಡಿ 17ರಂದು ರಾಜ್ಯಸಭೆಯಲ್ಲಿ ಅಮಿತ್ ಶಾ ಭಾಷಣದ 11 ಸೆಕೆಂಡ್ ವಿಡಿಯೋ ತುಣುಕನ್ನು ಕಾಂಗ್ರೆಸ್ ನಾಯಕರು ಶೇರ್ ಮಾಡಿದ್ದಾರೆ. ಅದರಲ್ಲಿ, “ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳ್ತಿದ್ದೀರಿ.. ಇಷ್ಟು ಸಲ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗ್ತಿತ್ತು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವ ದೃಶ್ಯವಿದೆ. ಇದನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಜತೆಗೆ ದೇಶವ್ಯಾಪಿ ಇದನ್ನೇ ಅಸ್ತ್ರವಾಗಿಟ್ಟುಕೊಂಡು, ಬಿಜೆಪಿ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ಕರೆ ಕೊಟ್ಟಿದೆ.