UI ಚಿತ್ರದಿಂದ ಹಿಡಿದು ಸೇತುಪತಿಯ ವಿಡುದಲೈ 2 ವರೆಗೆ.. ಚಿತ್ರಮಂದಿರಗಳಲ್ಲಿ ಈ ವಾರ ರಿಲೀಸ್‌ ಆಗಲಿರುವ ಟಾಪ್‌ ಐದು ಸಿನಿಮಾಗಳು
ಕನ್ನಡ ಸುದ್ದಿ  /  ಮನರಂಜನೆ  /  Ui ಚಿತ್ರದಿಂದ ಹಿಡಿದು ಸೇತುಪತಿಯ ವಿಡುದಲೈ 2 ವರೆಗೆ.. ಚಿತ್ರಮಂದಿರಗಳಲ್ಲಿ ಈ ವಾರ ರಿಲೀಸ್‌ ಆಗಲಿರುವ ಟಾಪ್‌ ಐದು ಸಿನಿಮಾಗಳು

UI ಚಿತ್ರದಿಂದ ಹಿಡಿದು ಸೇತುಪತಿಯ ವಿಡುದಲೈ 2 ವರೆಗೆ.. ಚಿತ್ರಮಂದಿರಗಳಲ್ಲಿ ಈ ವಾರ ರಿಲೀಸ್‌ ಆಗಲಿರುವ ಟಾಪ್‌ ಐದು ಸಿನಿಮಾಗಳು

ಈ ಶುಕ್ರವಾರ (ಡಿ 20) ಚಿತ್ರಮಂದಿರಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕನ್ನಡದಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ UI ಸಿನಿಮಾ ತೆರೆಗೆ ಬರುತ್ತಿದ್ದರೆ, ವೆಟ್ರಿಮಾರನ್‌ ನಿರ್ದೇಶನದ, ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್‌ 2 ರಿಲೀಸ್‌ ಆಗುತ್ತಿದೆ. ಹಾಲಿವುಡ್‌ ಜತೆಗೆ ಬಾಲಿವುಡ್‌ ಚಿತ್ರಗಳೂ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿವೆ.

ಚಿತ್ರಮಂದಿರಗಳಲ್ಲಿ ಈ ವಾರ ರಿಲೀಸ್‌ ಆಗುತ್ತಿರುವ ಟಾಪ್‌ ಐದು ಸಿನಿಮಾಗಳು
ಚಿತ್ರಮಂದಿರಗಳಲ್ಲಿ ಈ ವಾರ ರಿಲೀಸ್‌ ಆಗುತ್ತಿರುವ ಟಾಪ್‌ ಐದು ಸಿನಿಮಾಗಳು

Theatrical Releases This Friday December 20: ಡಿಸೆಂಬರ್‌ ಮಾಸಾಂತ್ಯ ಸಮೀಸುತ್ತಿದ್ದಂತೆ, ಸಾಲು ಸಾಲು ರಜೆಗಳ ಆಗಮನವಾಗುತ್ತದೆ. ಕ್ರಿಸ್‌ಮಸ್‌ ಸಂಭ್ರಮವೂ ಕಳೆಗಟ್ಟಿರುತ್ತದೆ. ಇದೆಲ್ಲದರ ನಡುವೆ ಚಿತ್ರಮಂದಿರಗಳಲ್ಲಿಯೂ ತರಹೇವಾರಿ ಸಿನಿಮಾಗಳ ಎಂಟ್ರಿಯೂ ಆಗಿರುತ್ತದೆ. ವರ್ಷಾತ್ಯಂಕ್ಕೆ ದೊಡ್ಡ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಆಗಮಿಸುವುದು ವಾಡಿಕೆ. ಅದರಂತೆ, ಈ ಡಿಸೆಂಬರ್‌ನಲ್ಲೂ ಬಹುನಿರೀಕ್ಷಿತ ಸಾಲು ಸಾಲು ಸಿನಿಮಾಗಳು ಥಿಯೇಟರ್‌ ಅಂಗಳ ಪ್ರವೇಶಿಸುತ್ತಿವೆ. ಆ ಪೈಕಿ ಈ ವಾರವೂ ಕನ್ನಡದ ಜತೆಗೆ ಬೇರೆ ಭಾಷೆಯ ಸಿನಿಮಾಗಳ ಆಗಮನವಾಗುತ್ತಿವೆ.

ಈ ಶುಕ್ರವಾರ (ಡಿ 20) ಚಿತ್ರಮಂದಿರಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲೂ ಕನ್ನಡದಲ್ಲಿ ಬಹುನಿರೀಕ್ಷಿತ ಉಪೇಂದ್ರ ನಟಿಸಿ, ನಿರ್ದೇಶಿಸಿದ UI ಸಿನಿಮಾ ಗ್ರ್ಯಾಂಡ್‌ ಆಗಿಯೇ ತೆರೆಗೆ ಬರುತ್ತಿದ್ದರೆ, ವೆಟ್ರಿಮಾರನ್‌ ನಿರ್ದೇಶನದ, ವಿಜಯ್‌ ಸೇತುಪತಿ ನಟಿಸಿದ ವಿಡುದಲೈ ಪಾರ್ಟ್‌ 2 ಸಿನಿಮಾ ಸಹ ತೆರೆಗೆ ಬರುತ್ತಿದೆ. ಈ ಸಿನಿಮಾಗಳ ಜತೆಗೆ ತೆಲುಗು, ಹಾಲಿವುಡ್‌ ಜತೆಗೆ ಬಾಲಿವುಡ್‌ ಸಿನಿಮಾಗಳೂ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿವೆ. ಆ ಪೈಕಿ ಈ ವಾರದ ಟಾಪ್‌ 5 ಸಿನಿಮಾಗಳು ಇಲ್ಲಿವೆ.

ಉಪೇಂದ್ರ UI ಸಿನಿಮಾ

ಸೂಪರ್‌ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ UI ಸಿನಿಮಾ ಸದ್ಯ ಉಳಿದೆಲ್ಲ ಸಿನಿಮಾಗಳಿಗಿಂತ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾ. 2015ರಲ್ಲಿ ಉಪ್ಪಿ 2 ಸಿನಿಮಾ ಮೂಲಕ ನಿರ್ದೇಶಕನಾಗಿದ್ದ ಉಪೇಂದ್ರ, ಈಗ 9 ವರ್ಷಗಳ ಬಳಿಕ ಮತ್ತೆ ನಾನು ನೀನು ಎರಡರ ಪರಿಕಲ್ಪನೆಯ UI ಜತೆಗೆ ಆಗಮಿಸುತ್ತಿದ್ದಾರೆ. 2040ರ ಕಾಲಘಟ್ಟದಲ್ಲಿ ನಡೆಯುವ ಕಥೆಯಲ್ಲಿ ರಾಜಕೀಯದ ಜತೆಗೆ ಜಾತಿ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಜಾಗತಿಕ ತಾಪಮಾನ ಸೇರಿ, ಎಐ ತಂತ್ರಜ್ಞಾನವನ್ನೂ ಟಚ್‌ ಮಾಡಿದ್ದಾರೆ. ಈ ಸಿನಿಮಾ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಡಿ. 20ರಂದು ಬಿಡುಗಡೆ ಆಗಲಿದೆ.

ವಿಡುದಲೈ ಪಾರ್ಟ್‌ 2

ತಮಿಳಿನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ವೆಟ್ರಿಮಾರನ್‌ ಅವರ ವಿಡುದಲೈ ಪಾರ್ಟ್‌ 2 ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ವಿಡುದಲೈ ಚಿತ್ರದ ಮೊದಲ ಭಾಗ ಬಿಡುಗಡೆ ಆಗಿತ್ತು. ಖ್ಯಾತ ಬರಹಗಾರ ಜಯಮೋಹನ್‌ ಅವರ ಕಾದಂಬರಿ ಆಧರಿತ ಕಥೆಯಾಗಿತ್ತು. ಮೊದಲ ಭಾಗದಲ್ಲಿ ಸೂರಿ ಕಥೆಯ ನಾಯಕನಾಗಿ ಇಡೀ ಸಿನಿಮಾವನ್ನು ಹೊತ್ತು ಸಾಗಿದ್ದರು. ಇದೀಗ ಕಥೆ ಪೂರ್ತಿ ವಿಜಯ್‌ ಸೇತುಪತಿ ಹೆಗಲಿಗೆ ಜಾರಿದೆ. ಎರಡನೇ ಭಾಗದಲ್ಲಿ, ಇಡೀ ಸಿನಿಮಾ ಸೇತುಪತಿಯ ಪಾತ್ರದ ಸುತ್ತ ಕೇಂದ್ರೀಕೃತವಾಗಿದೆ. ಜತೆಗೆ ಮಂಜು ವಾರಿಯರ್ ಸಹ ಎದುರಾಗಿದ್ದಾರೆ. ಇಳಯರಾಜ ಅವರ ಸಂಗೀತ ಮತ್ತು ವೆಲ್ರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಒಟ್ಟಾರೆ ಕುತೂಹಲದ ಗುಚ್ಛದಂತಿರುವ ಈ ಸಿನಿಮಾ, ಡಿಸೆಂಬರ್ 20 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಮಲಯಾಳಂ ಮಾರ್ಕೊ

ಮಾಲಿವುಡ್‌ನ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ಮಾರ್ಕೊ. ಉನ್ನಿ ಮುಕುಂದನ್‌ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಹನೀಫ್‌ ಅದೇನಿ ನಿರ್ದೇಶನ ಮಾಡಿದ್ದಾರೆ. ಶರೀಫ್ ಮಹಮ್ಮದ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುಕುಂದನ್‌ ಜತೆಗೆ ಜಗದೀಶ್, ಸಿದ್ದಿಕ್, ಅನ್ಸನ್ ಪೌಲ್, ಯುಕ್ತಿ ಥರೇಜಾ, ರಿಯಾಜ್ ಖಾನ್, ಜಿನು ಜೋಸೆಫ್, ಶ್ರೀಜಿತ್ ರವಿ ಮತ್ತು ಕಬೀರ್ ದುಹಾನ್ ಸಿಂಗ್ ತಾರಾಗಣದಲ್ಲಿದ್ದಾರೆ. ವಿಶೇಷ ಏನೆಂದರೆ ಕನ್ನಡದ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಚಂದ್ರು ಸೆಲ್ವರಾಜ್ ಮತ್ತು ಶಮೀರ್ ಮುಹಮ್ಮದ್ ನಿರ್ವಹಿಸಿದ್ದಾರೆ. 2019ರ ಮಲಯಾಳಂ ಮೈಕೆಲ್‌ ಸಿನಿಮಾದ ಮತ್ತೊಂದು ರೂಪಕವಾಗಿ ಹೊರಬರುತ್ತಿದೆ.

ಮುಫಾಸಾ: ದಿ ಲಯನ್ ಕಿಂಗ್

ಜೆಫ್ ನಾಥನ್ಸನ್ ಬರೆದ ಕಥೆಯನ್ನೇ ಮುಫಾಸಾ: ದಿ ಲಯನ್ ಕಿಂಗ್ ರೂಪದಲ್ಲಿ ಹೊರತಂದಿದ್ದಾರೆ ಬ್ಯಾರಿ ಜೆಂಕಿನ್ಸ್. ವಾಲ್ಟ್ ಡಿಸ್ನಿ ಪಿಕ್ಚರ್ಸ್ ನಿರ್ಮಿಸಿದ ಈ ಆನಿಮೇಟೆಡ್‌ ಸಿನಿಮಾ, 2019ರಲ್ಲಿ ಬಿಡುಗಡೆ ಆಗಿದ್ದ ದಿ ಲಯನ್‌ ಕಿಂಗ್‌ ಚಿತ್ರದ ಪ್ರೀಕ್ವೆಲ್‌ ಆಗಿದೆ. ಡೊನಾಲ್ಡ್ ಗ್ಲೋವರ್, ಸೇಥ್ ರೋಜೆನ್, ಬಿಲ್ಲಿ ಐಚ್ನರ್, ಜಾನ್ ಕಾನಿ ಮತ್ತು ಬೆಯಾನ್ಸ್ ನೋಲ್ಸ್-ಕಾರ್ಟರ್ ಈ ಚಿತ್ರದಲ್ಲಿಯೂ ಮುಂದುವರಿದಿದ್ದಾರೆ. ಹೊಸದಾಗಿ ಆರನ್ ಪಿಯರ್, ಕೆಲ್ವಿನ್ ಹ್ಯಾರಿಸನ್ ಜೂನಿಯರ್, ಟಿಫಾನಿ ಬೂನ್, ಮ್ಯಾಡ್ಸ್ ಮಿಕ್ಕೆಲ್ಸೆನ್, ಲೆನ್ನಿ ಜೇಮ್ಸ್, ಅನಿಕಾ ನೋನಿ ರೋಸ್ ಮತ್ತು ಬ್ಲೂ ಐವಿ ಕಾರ್ಟರ್ ಸೇರ್ಪಡೆಯಾಗಿದ್ದಾರೆ. ಈ ಸಿನಿಮಾ ಡಿ. 20ರಂದು ಭಾರತದ ಹಲವು ಭಾಷೆಗಳಿಗೆ ಡಬ್‌ ಆಗಿ ಬಿಡುಗಡೆ ಆಗುತ್ತಿದೆ.

1990ರ ಕಾಲಘಟ್ಟದ ಬಚ್ಚಲ ಮಲ್ಲಿ

ಟಾಲಿವುಡ್‌ನಲ್ಲಿ ಸುಬ್ಬು ಮಂಗದೇವಿ ನಿರ್ದೇಶನದ ಆಕ್ಷನ್‌ ಡ್ರಾಮಾ ಸಿನಿಮಾ ಬಚ್ಚಲ ಮಲ್ಲಿ ಸಿನಿಮಾ ಡಿ. 20ರಂದು ಬಿಡುಗಡೆ ಆಗುತ್ತಿದೆ. ಅಲ್ಲರಿ ನರೇಶ್ ನಾಯಕನಾಗಿ ನಟಿಸಿದರೆ, ಅಮೃತಾ ಅಯ್ಯರ್ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಹರಿತೇಜಾ, ಸಾಯಿ ಕುಮಾರ್ ತಾರಾಗಣದಲ್ಲಿದ್ದಾರೆ. ರಜೇಶ್‌ ದಂಡ, ಬಾಲಾಜಿ ಗುಟ್ಟ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. 1990ರ ಕಾಲಘಟ್ಟದಲ್ಲಿ ಈ ಸಿನಿಮಾ ಸಾಗಲಿದೆ.

Whats_app_banner