ಟಿಆರ್‌ಪಿಯಲ್ಲಿ ಲಕ್ಷ್ಮೀಯರದ್ದೇ ಮೇಲುಗೈ; ಬಿಗ್‌ಬಾಸ್‌ನಲ್ಲಿ ಕಿಚ್ಚನ ಏಪಿಸೋಡ್‌ಗೆ ಡಿಮಾಂಡ್, ವಾರದ ಸಂಚಿಕೆಗಳಿಗೆ ಸಿಕ್ಕ ನಂಬರ್ ಎಷ್ಟು?
Dec 19, 2024 01:26 PM IST
ಕನ್ನಡ ಸೀರಿಯಲ್ ಟಿಆರ್‌ಪಿ
- ಟಿಆರ್‌ಪಿ ರೇಸ್‌ನಲ್ಲಿ ಈ ವಾರ ಗೆದ್ದ ಸೀರಿಯಲ್ ಯಾವುದು, ಈ ಹಿಂದಿನ ಬಿಗ್ ಬಾಸ್ ಏಪಿಸೋಡ್‌ಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಟಿಆರ್‌ಪಿ ಲೆಕ್ಕಾಚಾರದಲ್ಲಿ ಟಾಪ್ 10 ಕನ್ನಡದ ಧಾರಾವಾಹಿಗಳು ಯಾವವು? ಇದೆಲ್ಲದರ ಸಂಪೂರ್ಣ ವಿವರ ಹೀಗಿದೆ.
Kannada Serial TRP: ಕನ್ನಡ ಕಿರುತೆರೆಯಲ್ಲಿ ಸೀರಿಯಲ್, ರಿಯಾಲಿಟಿ ಶೋಗಳ ಟಿಆರ್‌ಪಿ ರೇಸಿಂಗ್ ಬಲು ತುರುಸಾಗಿದೆ. ವಾರದಿಂದ ವಾರಕ್ಕೆ ಸಾಕಷ್ಟು ಏರಿಳಿತ ಕಾಣುತ್ತಿವೆ. ಕಳೆದ ವಾರ ಟಾಪ್ ಸ್ಥಾನದಲ್ಲಿದ್ದ ಧಾರಾವಾಹಿ ಕುಸಿತ ಕಂಡರೆ, ಈ ವಾರ ಹಳೇ ಧಾರಾವಾಹಿ ಮತ್ತೆ ಟಾಪ್ ಒನ್‌ಗೆ ಬಂದು ನಿಂತಿದೆ. ಇದೆಲ್ಲದರ ನಡುವೆ, ಸರಿ ಸುಮಾರು ಎರಡು ವರ್ಷ ಟಾಪ್ ಸ್ಥಾನದಲ್ಲಿದ್ದು, ಬಳಿಕ ಕುಸಿತ ಕಂಡ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮಗದೊಮ್ಮೆ ಟಾಪ್‌ಗೆ ಬಂದು ಈಗ ಕೆಳ ಕ್ರಮಾಂಕದಲ್ಲಿ ಸ್ಥಾನ ಪಡೆದುಕೊಳ್ಳುವತ್ತ ಸಾಗುತ್ತಿದೆ. ಇದೀಗ 50ನೇ ವಾರದ ಅಂಕಿಅಂಶ ಹೊರಬಿದ್ದಿದೆ. ಇತ್ತ ಬಿಗ್ ಬಾಸ್ ಸಹ ತಟಸ್ಥವಾದಂತಿದೆ.
ಬಿಗ್‌ಬಾಸ್ ಶೋ ಟಿಆರ್‌ಪಿ ಹೇಗಿದೆ?
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಬಿಗ್‌ಬಾಸ್ ಈಗಾಗಲೇ ಮುಕ್ಕಾಲು ಭಾಗ ಕ್ರಮಿಸಿದೆ. ಇನ್ನೇನು ಇನ್ನೊಂದು ತಿಂಗಳಲ್ಲಿ ಶೋ ಅಂತ್ಯ ಕಾಣಲಿದೆ. ಆದರೆ, ಟಿಆರ್‌ಪಿಯಲ್ಲಿ ಈ ಸೀಸನ್ ಒಂದಷ್ಟು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಸಾರ್ವಕಾಲಿಕ ಅತ್ಯಧಿಕ ನಂಬರ್ ಪಡೆದುಕೊಂಡಿದೆ. ಈಗ ಬಿಗ್ ಬಾಸ್ ಸೀಸನ್ 11ರ ಈ ಹಿಂದಿನ ವಾರದ ಟಿಆರ್‌ಪಿ ಹೊರಬಿದ್ದಿದೆ. ಸೋಮವಾರದಿಂದ ಶುಕ್ರವಾರದವರೆಗಿನ ಸಂಚಿಕೆಗಳಿಗೆ 7.8 ಟಿಆರ್‌ಪಿ ಸಿಕ್ಕರೆ, ಕಿಚ್ಚನ ವಾರದ ಪಂಚಾಯ್ತಿ ಶನಿವಾರದ ಸಂಚಿಕೆಗೆ 9.0 ಟಿಆರ್‌ಪಿ ಬಂದಿದೆ. ಅದೇ ರೀತಿ ಭಾನುವಾರದ ಸೂಪರ್ ಸಂಡೇ ವಿಥ್ ಸುದೀಪ್ ಸಂಚಿಕೆಗೆ 8.7 ನಂಬರ್ ಬಂದಿದೆ.
ಕನ್ನಡದ ಟಾಪ್ 10 ಸೀರಿಯಲ್‌ಗಳ ಟಿಆರ್‌ಪಿ
ಸೀರಿಯಲ್‌ಗಳ ಲೆಕ್ಕಾಚಾರ ನೋಡುವುದಾದರೆ, ಈ ವಾರ ಟಾಪ್ 10ರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ, ಅವುಗಳು ಪಡೆದ ಟಿಆರ್‌ಪಿ ಎಷ್ಟು? ಇಲ್ಲಿದೆ ಮಾಹಿತಿ. ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್ ಈ ವಾರ ಮತ್ತೆ ಮೊದಲ ಸ್ಥಾನಕ್ಕೆ ಬಂದು ನಿಂತಿದೆ. ಕಳೆದ ವಾರ ಅಚ್ಚರಿಯ ರೀತಿಯಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದ ಈ ಧಾರಾವಾಹಿ ಈ ವಾರ 8.1 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.
ಅಕ್ಕತಂಗಿಯರದ್ದೇ ಮೇಲುಗೈ
ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ ಈ ವಾರವೂ ಟಾಪ್ ಮೂರರಲ್ಲಿ ಸ್ಥಾನ ಪಡೆದುಕೊಂಡಿವೆ. ಕಳೆದ ವಾರ ಮೊದಲ ಸ್ಥಾನಕ್ಕೆ ಬಂದು ದಾಖಲೆ ಬರೆದಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ಈ ವಾರ 7.8 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ. ಇತ್ತ ಭಾಗ್ಯಲಕ್ಷ್ಮೀ ಧಾರಾವಾಹಿ 7.4 ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ಜೀ ಕನ್ನಡದಲ್ಲಿ ರೋಚಕ ಟ್ವಿಸ್ಟ್‌ಗಳೊಂದಿಗೆ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿ ಈ ವಾರ 7.2 ಟಿಆರ್‌ಪಿ ಪಡೆದು, ನಾಲ್ಕನೇ ಸ್ಥಾನದಲ್ಲಿದ್ದರೆ, ಅಣ್ಣಯ್ಯ 7.0 ಟಿಆರ್‌ಪಿಯೊಂದಿಗೆ ಐದನೇ ಸ್ಥಾನದಲ್ಲಿದೆ. ಸದಾ ಅಗ್ರಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್‌ಪಿಯಲ್ಲಿ ದಿನೇ ದಿನೆ ಕುಸಿತ ಕಾಣುತ್ತಿದೆ. ಈ ವಾರ ಈ ಸೀರಿಯಲ್‌ಗೆ 6.9 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ.
ಅದೇ ರೀತಿ ಟಾಪ್ ಮೂರರಲ್ಲಿ ಸ್ಥಾನ ಪಡೆದಿರುತ್ತಿದ್ದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಈ ವಾರ 6.7 ಟಿಆರ್‌ಪಿ ಪಡೆದುಕೊಂಡು, ಏಳನೇ ಸ್ಥಾನದಲ್ಲಿದ್ದರೆ, ಕಲರ್ಸ್ ಕನ್ನಡದ ರಾಮಾಚಾರಿ 6.3 ಟಿಆರ್‌ಯೊಂದಿಗೆ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಲರ್ಸ್‌ನ ಮತ್ತೊಂದು ಸೀರಿಯಲ್ ನಿನಗಾಗಿ 6.1 ಟಿಆರ್‌ಪಿಯೊಂದಿಗೆ ಒಂಭತ್ತನೇ ಸ್ಥಾನದಲ್ಲಿದೆ. ಸೀತಾ ರಾಮ ಸೀರಿಯಲ್ 5.1 ಟಿಆರ್‌ಪಿಯೊಂದಿಗೆ 10ನೇ ಸ್ಥಾನದಲ್ಲಿದೆ.