Raha Kapoor: ಎರಡು ಜುಟ್ಟು ಕಟ್ಟಿಕೊಂಡು ಮಲ್ಲಿಗೆ ಬಿರಿದ್ದಾಂಗೆ ನಕ್ಕಳು ರಹಾ; ಅಂಬಾನಿ ಮದುವೆ ಮನೆಯಲ್ಲಿ ಆಲಿಯಾ ಭಟ್ ಮಗಳದ್ದೇ ಹವಾ
Mar 05, 2024 10:16 AM IST
ಆಲಿಯಾ ಭಟ್ ಮಗಳು ರಹಾ
- Alia Bhatt daughter Raha Kapoor: ಜಾಮ್‌ನಗರದಲ್ಲಿ ನಡೆಯುತ್ತಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಡಗರದ ಕಾರ್ಯಕ್ರಮಗಳಲ್ಲಿ ಆಲಿಯಾ ಭಟ್ ತನ್ನ ಮಗಳು ರಹಾಳ ಜತೆ ಆಗಮಿಸಿದ್ದಾರೆ. ರಹಾಳ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಲಿವುಡ್ ನಟಿ ಆಲಿಯಾ ಭಟ್ ಇನ್‌ಸ್ಟಾಗ್ರಾಂನಲ್ಲಿ ಮಗಳು ರಹಾ ಕಪೂರ್‌ನ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ರಣಬೀರ್ ಕಪೂರ್, ರಹಾ ಮತ್ತು ಆಲಿಯಾ ಭಟ್ ಭಾಗವಹಿಸಿದ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜಾಮ್‌ನಗರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಆಲಿಯಾ ಭಟ್ ಕುಟುಂಬವೂ ಭಾಗವಹಿಸಿದೆ. ಈ ಸಂದರ್ಭದಲ್ಲಿ ಆಲಿಯಾ ಭಟ್ ಅಪ್ಪುಗೆಯಲ್ಲಿದ್ದ ರಹಾಳ ಚಂದದ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ರಹಾ ಮುದ್ದಾಗಿ ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾಳೆ. ಇನ್ನೊಂದು ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜತೆಗಿದ್ದಾರೆ. ಇನ್ನೊಂದು ಫೋಟೋದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.
ಈ ಫೋಟೋಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. "ಕೊನೆಗೂ ರಹಾ ಇನ್‌ಸ್ಟಾಗ್ರಾಂಗೆ ಆಗಮಿಸಿದಳು" ಎಂದು ಸಾಕಷ್ಟು ಅಭಿಮಾನಿಗಳು ಬರೆದಿದ್ದಾರೆ. "ರಹಾಳ ಮೊದಲ ಚಿತ್ರ ನಮ್ಮ ಹೃದಯಕ್ಕೆ ಇಷ್ಟವಾಯಿತು" "ಅಮ್ಮನ ರೀತಿಯೇ ಮುದ್ದಾಗಿದ್ದಾಳೆ ರಹಾ" ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯೇ ರಹಾ ಇರುವ ವಿಡಿಯೋ ವೈರಲ್ ಆಗಿತ್ತು. ಅನಂತ್ ಅಂಬಾನಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಆಲಿಯಾ ಭಟ್ ಕೈಯಲ್ಲಿ ರಹಾಳಿದ್ದಳು. ದೂರದಲ್ಲಿ ಆಲಿಯಾ ಭಟ್ ಕಾಣಿಸಿದಾಗ ಅನಂತ್ ಅಂಬಾನಿ ಹಾಯ್ ಹೇಳಿ ಹತ್ತಿರ ಬಂದಿದ್ದರು. ಅನಂತ್ ಅಂಬಾನಿಗೆ ಹಾಯ್ ಹೇಳುವಂತೆ ರಹಾಳ ಬಳಿ ಆಲಿಯಾ ಭಟ್ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸಿತ್ತು.
ಹಲವು ವರ್ಷ ಡೇಟಿಂಗ್ ಮಾಡಿದ ಬಳಿಕ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 2022ರಲ್ಲಿ ವಿವಾಹವಾಗಿದ್ದರು. 2022ರ ನವೆಂಬರ್ ತಿಂಗಳಲ್ಲಿ ಅವರಿಗೆ ರಹಾ ಜನಿಸಿದ್ದಳು. ಅಲ್ಲಿಂದ ರಹಾಳ ಮುಖವನ್ನು ಹೆಚ್ಚು ಸಾರ್ವಜನಿಕವಾಗಿ ತೋರಿಸಿರಲಿಲ್ಲ. ಇದೀಗ ಅನಂತ್ ಅಂಬಾನಿ ಮದುವೆ ಸಮಯದಲ್ಲಿ ರಹಾಳ ಮುಖ ಎಲ್ಲರಿಗೂ ಕಾಣಿಸಿದೆ. ಕಳೆದ ವರ್ಷ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ರಹಾಳ ಮುಖವನ್ನು ಮೊದಲ ಬಾರಿಗೆ ತೋರಿಸಲಾಗಿತ್ತು.
ಆಲಿಯಾ ಭಟ್ ಅವರು ಕೊನೆಯದಾಗಿ ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ರಣವೀರ್ ಸಿಂಗ್ ಜತೆ ನಟಿಸಿದ್ದರು. ಇತ್ತೀಚೆಗೆ ಇವರು ವಾಸನ್ ಬಾಲಾರ ಜಿಗ್ರಾ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ವೇದಾಂಗ್ ರೈನಾ ಜತೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಮುಂಬರುವ ಸಿನಿಮಾ ಲವ್ ಆಂಡ್ ವಾರ್‌ನಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.