logo
ಕನ್ನಡ ಸುದ್ದಿ  /  ಮನರಂಜನೆ  /  ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಹಿಂದೂಗಳ ಹೆಸರು; ವಿವಾದ ಸೃಷ್ಟಿಸಿದ Ic 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿ

ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಹಿಂದೂಗಳ ಹೆಸರು; ವಿವಾದ ಸೃಷ್ಟಿಸಿದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿ

Rakshitha Sowmya HT Kannada

Sep 03, 2024 08:50 AM IST

google News

ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಹಿಂದೂಗಳ ಹೆಸರು; ವಿವಾದ ಸೃಷ್ಟಿಸಿದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿ

  • ಆಗಸ್ಟ್‌ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿದ್ದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿ ಹೆಚ್ಚು ವೀಕ್ಷಣೆ ಪಡೆದಿದೆ. ಅದಕ್ಕಿಂತ ಹೆಚ್ಚಾಗಿ ಈ ಸರಣಿ ವಿವಾದ ಸೃಷ್ಟಿಸಿದೆ. ಅನುಭವ್‌ ಸಿನ್ಹಾ ನಿರ್ದೇಶನದ ಈ ಸೀರೀಸ್‌ನಲ್ಲಿ ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಹಿಂದೂಗಳ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. 

ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಹಿಂದೂಗಳ ಹೆಸರು; ವಿವಾದ ಸೃಷ್ಟಿಸಿದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿ
ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಹಿಂದೂಗಳ ಹೆಸರು; ವಿವಾದ ಸೃಷ್ಟಿಸಿದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿ (PC: @rishibagree)

ಸಿನಿಮಾಗಳು ವಿವಾದ ಹುಟ್ಟುಹಾಕುವುದು ಹೊಸತೇನಲ್ಲ. ಈಗ ವೆಬ್‌ ಸೀರೀಸ್‌ಗಳು ಕೂಡಾ ಇದೇ ದಾರಿ ಹಿಡಿದಿವೆ. ದಿ ಫ್ಯಾಮಿಲಿ ಮ್ಯಾನ್‌, ಸೆಕ್ರೇಡ್‌ ಗೇಮ್ಸ್‌, ತಾಂಡವ್‌, ಮಿರ್ಜಾಪುರ್‌, ಸೂಟಬಲ್‌ ಬಾಯ್‌ ಸೇರಿದಂತೆ ಅನೇಕ ವೆಬ್‌ ಸೀರೀಸ್‌ಗಳು ಹಿಂದೆ ಸಾಕಷ್ಟು ವಿವಾದ ಹುಟ್ಟುಹಾಕಿದ್ದವು. ಇತ್ತೀಚೆಗೆ ಒಟಿಟಿಯಲ್ಲಿ ತೆರೆ ಕಂಡ IC 814 ಕೂಡಾ ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ.

ಅನುಭವ್ ಸಿನ್ಹಾ ನಿರ್ದೇಶನದ ವೆಬ್‌ ಸರಣಿ

ಆಗಸ್ಟ್‌ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದ್ದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿಯು 1999 ರಲ್ಲಿ ಪಾಕಿಸ್ತಾನಿ ಹರ್ಕತ್-ಉಲ್-ಮುಜಾಹಿದ್ದೀನ್ ಭಯೋತ್ಪಾದಕರು ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 814 ಹೈಜಾಕ್ ಮಾಡುವ ಕಥೆಯನ್ನು ಹೊಂದಿದೆ. ಅನುಭವ್ ಸಿನ್ಹಾ ಈ ವೆಬ್‌ ಸೀರೀಸ್‌ ನಿರ್ದೇಶನ ಮಾಡಿದ್ದಾರೆ. ಫ್ಲೈಟ್ ಕ್ಯಾಪ್ಟನ್ ದೇವಿ ಸರಣ್ ಮತ್ತು ಕೋ ಪೈಲಟ್ ಸೃಜನ್ ಚೌಧರಿ ಅವರ ಅನುಭವಗಳನ್ನು ಆಧರಿಸಿ ನಿರ್ದೇಶಕರು ಈ ಸರಣಿಯನ್ನು ತಯಾರಿಸಿದ್ದಾರೆ. ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ಮುಜಾಹಿದ್ದೀನ್ ಉಗ್ರರು ಅಪಹರಿಸಿದ್ದರು. ಈ ಸಮಯದಲ್ಲಿ ಹೈಜಾಕರ್‌ಗಳು ಭಾರತದಲ್ಲಿ ಬಂಧಿಯಾಗಿದ್ದ ಅಹ್ಮದ್ ಒಮರ್ ಸಯೀದ್ ಶೇಖ್, ಮಸೂದ್ ಅಜರ್ ಮತ್ತು ಮುಷ್ತಾಕ್ ಅಹ್ಮದ್ ಮೂವರನ್ನೂ ಬಿಡುಗಡೆ ಮಾಡುವ ಬೇಡಿಕೆ ಇಟ್ಟಿದ್ದರು.

24 ಡಿಸೆಂಬರ್ 1999 ರಂದು 154 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ವಿಮಾನವನ್ನು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ದೆಹಲಿಗೆ ಹೊರಟ 40 ನಿಮಿಷಗಳ ನಂತರ ಈ ಐವರು ಭಯೋತ್ಪಾದಕರು ಹೈಜಾಕ್ ಮಾಡಿದ್ದರು. ಒತ್ತೆಯಾಳುಗಳ ಜೀವ ಉಳಿಸುವಂತೆ ಒತ್ತಡಕ್ಕೆ ಒಳಗಾಗಿದ್ದ ಭಾರತ ಸರ್ಕಾರ, ಅಂತಿಮವಾಗಿ ಭಯೋತ್ಪಾದಕರ ಬೇಡಿಕೆಯನ್ನು ಮನ್ನಿಸಿ ಉಗ್ರರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿತು. ಆಗಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಖುದ್ದಾಗಿ ಭಯೋತ್ಪಾದಕರನ್ನು ಕಂದಹಾರ್‌ಗೆ ಕರೆದೊಯ್ದಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ

ಈ ವೆಬ್‌ ಸೀರೀಸ್‌ನಲ್ಲಿ ವಿಜಯ್‌ ವರ್ಮಾ, ನಾಸಿರುದ್ದೀನ್‌ ಶಾ, ಪಂಕಜ್ ಕಪೂರ್, ದಿಯಾ ಮಿರ್ಜಾ, ಅರವಿಂದ್ ಸ್ವಾಮಿ, ಮನೋಜ್ ಪಹ್ವಾ, ಕುಮುದ್ ಮಿಶ್ರಾ, ಆದಿತ್ಯ ಶ್ರೀವಾಸ್ತವ್‌ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ತಿಂಗಳು 29ರಂದು ಬಿಡುಗಡೆದ್ದ ಈ ಸರಣಿ ಈಗ ಭಾರೀ ಚರ್ಚೆಯಲ್ಲಿದೆ. ಈ ಸರಣಿ ಪ್ರಸಾರ ಮಾಡುತ್ತಿರುವುದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ನಿರ್ದೇಶಕ , ನೆಟ್‌ಫ್ಲಿಕ್ಸ್‌ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌ ಅವರಿಗೆ ಸಮನ್ಸ್ ಜಾರಿ ಮಾಡಿದೆ. ವೆಬ್‌ ಸರಣಿಯಲ್ಲಿ ಇಬ್ಬರು ಅಪಹರಣಕಾರಿಗೆ ಹಿಂದೂಗಳ ಹೆಸರಿಟ್ಟಿರುವುದಕ್ಕೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಿದೆ. ವೆಬ್‌ ಸರಣಿಯಲ್ಲಿ ಹೈಜಾಕರ್‌ಗಳಿಗೆ ಚೀಫ್‌, ಡಾಕ್ಟರ್, ಬರ್ಗರ್, ಭೋಲಾ, ಶಂಕರ್ ಎಂಬ ಹೆಸರನ್ನು ಇಡಲಾಗಿದೆ. ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಭೋಲಾ ಮತ್ತು ಶಂಕರ್ ಎಂಬ ದೇವರ ಹೆಸರುಗಳನ್ನು ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಭಾರತೀಯ ಜನತಾ ಪಕ್ಷದ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಕೂಡಾ ಈ ವಿಚಾರವನ್ನು ಟೀಕಿಸಿದ್ದಾರೆ. ಭಯೋತ್ಪಾದಕ ಪಾತ್ರಗಳಿಗೆ ಉದ್ದೇಶಪೂರ್ವಕವಾಗಿ ಹಿಂದೂಗಳ ಹೆಸರುಗಳನ್ನು ಇಡಲಾಗಿದೆ ಎಂದು ನಿರ್ದೇಶಕ ಅನುಭವ್ ಸಿನ್ಹಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಾಸ್ತವ ಪರಿಸ್ಥಿತಿಯನ್ನು ತಿರುಚಲಾಗಿದೆ, ಹೈಜಾಕರ್‌ಳ ನಿಜವಾದ ಹೆಸರುಗಳನ್ನು ಮರೆ ಮಾಚಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಅನುಭವ ಸಿನ್ಹಾ ವಿವರಣೆ ನೀಡಬೇಕು ಎಂದು ಅಮಿತ್‌ ಮಾಳವೀಯ ಒತ್ತಾಯಿಸಿದ್ದಾರೆ. 

ನೆಟ್‌ಫ್ಲಿಕ್ಸ್ ಇಂಡಿಯಾ ವಿಷಯದ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌ ಅವರಿಗೂ ಕೂಡಾ, ಸಮಗ್ರ ವಿವರಣೆ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಆದೇಶಿಸಿದ್ದಾರೆ. ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ತಿಳಿಸಲಾಗಿದೆ. ಈ ವೆಬ್‌ ಸರಣಿ ವಿವಾದ ಹುಟ್ಟುಹಾಕಿದ್ದರೂ ಬಿಡುಗಡೆಯಾದ ದಿನದಿಂದ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವೆಬ್‌ ಸೀರೀಸ್‌ಗಳಲ್ಲಿ ಒಂದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ