OTT Revenue: ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ಒಟಿಟಿಗಳು ಹೇಗೆ ಆದಾಯ ಗಳಿಸುತ್ತವೆ? ಇಲ್ಲಿದೆ 5 ಆದಾಯದ ಮೂಲ
Dec 11, 2024 03:50 PM IST
OTT Revenue: ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ಒಟಿಟಿಗಳು ಹೇಗೆ ಆದಾಯ ಗಳಿಸುತ್ತವೆ?
- OTT Revenue: ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಜಿಯೋ ಸಿನಿಮಾ, ಜೀ5, ಸನ್‌ನೆಕ್ಸ್ಟ್‌ನಂತಹ ಒಟಿಟಿಗಳಿಗೆ ಆದಾಯದ ಮೂಲ ಯಾವುವು? ಕೋಟ್ಯಾಂತರ ಹಣ ನೀಡಿ ಸಿನಿಮಾ ಖರೀದಿಸುವ ಈ ಪ್ಲಾಟ್‌ಫಾರ್ಮ್‌ಗಳು ಆದಾಯ ಹೇಗೆ ಗಳಿಸುತ್ತವೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
OTT Revenue: ಒಟಿಟಿ ಮೂಲಕ ಸಿನಿಮಾ, ವೆಬ್ ಸರಣಿ ನೋಡುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲರ ಮನೆಗಳ ಟಿವಿಗಳಲ್ಲಿ ಈಗ ಒಟಿಟಿಗಳು ದೊರಕುತ್ತಿರಬಹುದು. ಒಟಿಟಿಯನ್ನು ಮೊಬೈಲ್ ಮೂಲಕ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಜಿಯೋ ಸಿನಿಮಾ, ಜೀ5, ಸನ್‌ನೆಕ್ಸ್ಟ್ ಸೇರಿದಂತೆ ಲೆಕ್ಕವಿಲ್ಲದ್ದಷ್ಟು ಒಟಿಟಿಗಳು ಇವೆ. ಪ್ರಮುಖ ಒಟಿಟಿ ಸಂಸ್ಥೆಗಳು ಬಿಗ್‌ಬಜೆಟ್ ಮತ್ತು ಸಾಮಾನ್ಯ ಸಿನಿಮಾಗಳನ್ನು ಕೋಟ್ಯಂತರ ರೂಪಾಯಿ ನೀಡಿ ಖರೀದಿಸುತ್ತವೆ. ಈ ರೀತಿ ಸಿನಿಮಾ ವೆಬ್ ಸರಣಿಯ ಒಟಿಟಿ ಹಕ್ಕುಗಳನ್ನು ಖರೀದಿಸಲು ನೀಡಿದ ಹಣವನ್ನು ಇವು ಹೇಗೆ ವಾಪಸ್ ಪಡೆಯುತ್ತವೆ? ಪ್ರೇಕ್ಷಕರು ಚಂದಾದಾರಿಕೆಗೆ ನೀಡಿದ ಹಣದಿಂದಲೇ ಒಟಿಟಿ ಹಕ್ಕುಗಳನ್ನು ಮತ್ತು ಒಟಿಟಿ ಸಂಸ್ಥೆಗಳ ಒಟ್ಟಾರೆ ಖರ್ಚುಗಳನ್ನು ನಿಭಾಯಿಸಲು ಸಾಧ್ಯವೇ? ಈ ರೀತಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಒಟಿಟಿ ವೇದಿಕೆಗಳ ಪ್ರಮುಖ ಆದಾಯದ ಮೂಲಗಳು ಯಾವುವು ಎಂದು ತಿಳಿಯೋಣ.
ಒಟಿಟಿ ಪ್ಲಾಟ್‌ಫಾರ್ಮ್‌ಗಳ ಆದಾಯ
ಈಗ ಪ್ರತಿಮನೆಯಲ್ಲೂ ಸ್ಮಾರ್ಟ್ ಟಿವಿ ಇದೆ. ಸ್ಮಾರ್ಟ್ ಟಿವಿ ಇಲ್ಲದೆ ಇದ್ದರೂ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿಯಾದರೂ ಒಟಿಟಿ ಕಂಟೆಂಟ್ ನೋಡುವವರಿದ್ದಾರೆ. ಈಗ ಬಹುತೇಕ ಒಟಿಟಿ ಕಂಪನಿಗಳು ಸ್ಥಿರ ಬೆಳವಣಿಗೆಗೆ ಗಮನ ನೀಡುತ್ತವೆ. ಒಂದು ಕಡೆ ತಮ್ಮ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಲು ನೋಡುತ್ತವೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್‌ನಂತಹ ಕಂಪನಿಗಳಿಗೆ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರಿದ್ದಾರೆ.
ಚಂದಾದಾರಿಕೆ ಆದಾಯ
ಬಹುತೇಕ ಎಲ್ಲಾ ಒಟಿಟಿಗಳು ಚಂದಾದಾರಿಕೆ ಆಧರಿತವಾಗಿ ಆದಾಯ ಗಳಿಸುತ್ತವೆ. ತಿಂಗಳಿಗೆ ಕನಿಷ್ಠ 149 ಪ್ಲ್ಯಾನ್‌ಗೆ ಚಂದಾದಾರರಾಗಲು ನೆಟ್‌ಫ್ಲಿಕ್ಸ್‌ನಂತಹ ಪ್ರಮುಖ ಒಟಿಟಿಗಳು ಅವಕಾಶ ನೀಡುತ್ತವೆ. ಮೊದಲೆಲ್ಲ ಒಟಿಟಿ ಚಂದಾದಾರಿಕೆ ದುಬಾರಿಯಾಗಿತ್ತು. ಈಗ ಸ್ಪರ್ಧೆ ಹೆಚ್ಚಾಗಿ ಕಡಿಮೆ ದರದಲ್ಲಿ ಕೆಲವು ಒಟಿಟಿಗಳನ್ನು ಸಬ್‌ಸ್ಕ್ರಿಪ್ಷನ್ ಮಾಡಿಕೊಳ್ಳಬಹುದು. ಇಂತಹ ಒಟಿಟಿಗಳಿಗೆ ಹೆಚ್ಚು ಜನರು ಚಂದಾದಾರರಾದರೆ ಹೆಚ್ಚು ಆದಾಯ ದೊರಕುತ್ತದೆ.
ಜಾಹೀರಾತು ಆದಾಯ
ಚಂದಾದಾರರಾಗಲು ಸಾಧ್ಯವಿಲ್ಲದವರಿಗೆ ಒಟಿಟಿ ವೇದಿಕೆಗಳು ಕೆಲವು ಕಂಟೆಂಟ್‌ಗಳನ್ನು ಜಾಹೀರಾತಿನೊಂದಿಗೆ ನೀಡುತ್ತವೆ. ಈಗ ಸಾಕಷ್ಟು ಜನರು ಬಿಗ್‌ಬಾಸ್ ಕನ್ನಡ 11 ಅನ್ನು ಜಿಯೋ ಸಿನಿಮಾದಲ್ಲಿ ನೋಡುತ್ತಿರಬಹುದು. ಅಥವಾ ಜಿಯೋ ಸಿನಿಮಾದಲ್ಲಿ ಯಾವುದಾದರೂ ಸಿನಿಮಾ ನೋಡಬಹುದು. ಆ ಸಿನಿಮಾ, ಸೀರಿಯಲ್, ರಿಯಾಲಿಟಿ ಶೋಗಳ ನಡುವೆ ಲೆಕ್ಕವಿಲ್ಲದಷ್ಟು ಜಾಹೀರಾತುಗಳು ಬರುತ್ತವೆ. ಜಾಹೀರಾತುಗಳನ್ನು ಸಹಿಸಿಕೊಳ್ಳುತ್ತ ಪ್ರೇಕ್ಷಕರು ನೋಡಬೇಕಾಗುತ್ತದೆ. ಈ ಜಾಹೀರಾತುಗಳಿಂದ ಒಟಿಟಿ ಕಂಪನಿಗಳ ಕೋಟ್ಯಂತರ ರೂಪಾಯಿ ಹಣ ಗಳಿಸುತ್ತವೆ.
ಪ್ರತಿ ಕಂಟೆಂಟ್‌ಗೆ ಪಡೆಯುವ ಆದಾಯ
ಕೆಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಚಲನಚಿತ್ರಗಳು ಅಥವಾ ಕ್ರೀಡಾ ಕಂಟೆಂಟ್‌ಗಳನ್ನು ರೆಂಟ್ ಅಥವಾ ಖರೀದಿ ಆಯ್ಕೆ ಮೂಲಕ ವೀಕ್ಷಿಸಲು ಅವಕಾಶ ನೀಡುತ್ತವೆ. ಯೂಟ್ಯೂಬ್‌ನಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಿನಿಮಾಗಳು ರೆಂಟ್ ಆಧಾರದಲ್ಲಿವೆ. ಕೆಲವು ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ಒಟಿಟಿಗಳಲ್ಲಿ ರೆಂಟ್ ಮಾದರಿಯಲ್ಲಿ ದೊರಕುತ್ತವೆ. ನೀವು ಈ ಒಟಿಟಿಗಳಿಗೆ ಚಂದಾದಾರರಾಗಿದ್ದರೂ ನಿರ್ದಿಷ್ಟ ಸಿನಿಮಾ ನೋಡಲು ಬಾಡಿಗೆ ಹಣ ಪಾವತಿಸಬೇಕಾಗುತ್ತದೆ. ಇದು ಕೂಡ ಒಟಿಟಿಗಳಿಗೆ ಪ್ರಮುಖ ಆದಾಯದ ಮೂಲವಾಗಿದೆ.
ಸ್ವಂತ ಕಂಟೆಂಟ್
ಈಗ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ಒಟಿಟಿಗಳು ತಮ್ಮ ಸ್ವಂತ ಸಿನಿಮಾ, ವೆಬ್ ಸರಣಿಗಳನ್ನು ನಿರ್ಮಿಸುತ್ತವೆ. ಇಂತಹ ಸಿನಿಮಾ, ಸರಣಿಗಳನ್ನು ಇತರೆ ಪ್ಲಾಟ್‌ಫಾರ್ಮ್‌ಗಳು, ಟಿವಿ ನೆಟ್‌ವರ್ಕ್‌ಗಳಿಗೆ ಮಾರಾಟ ಮಾಡುವ ಮೂಲಕವೂ ಆದಾಯ ಗಳಿಸುತ್ತವೆ.
ಪಾಲುದಾರಿಕೆಗಳು, ಪ್ರಾಯೋಜಕತ್ವಗಳು
ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅನೇಕ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುತ್ತವೆ. ಆ ಬ್ರ್ಯಾಂಡ್‌ಗಳಿಗೆ ತಮ್ಮ ವೇದಿಕೆಗಳಲ್ಲಿ ಪ್ರಚಾರ ನೀಡುತ್ತವೆ. ಈ ಮೂಲಕ ಉತ್ತಮ ಆದಾಯ ಗಳಿಸುತ್ತಿವೆ. ಪ್ರತಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ವಿವಿಧ ಚಾನಲ್‌ಗಳ ಮೂಲಕ ಗಳಿಸುವ ಆದಾಯವು ಕ್ರಮೇಣ ಹೆಚ್ಚುತ್ತಿದೆ. ಕಳೆದ ವರ್ಷ, ಜಗತ್ತಿನಾದ್ಯಂತ ಮಾರುಕಟ್ಟೆಯ ಒಟ್ಟು ಆದಾಯವು 295 ಶತಕೋಟಿ ಡಾಲರ್‌ಗಳನ್ನು ತಲುಪಿತು. ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕವಾಗಿ 28 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ.