logo
ಕನ್ನಡ ಸುದ್ದಿ  /  ಮನರಂಜನೆ  /  ಚೆನ್ನೈ ಆಸ್ಪತ್ರೆಗೆ ದಾಖಲಾದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು

ಚೆನ್ನೈ ಆಸ್ಪತ್ರೆಗೆ ದಾಖಲಾದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು

Jayaraj HT Kannada

Oct 01, 2024 07:57 PM IST

google News

ನಟ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು

    • Rajinikanth: ತಮಿಳು ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಚೆನ್ನೈನ ಅಪೊಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್‌ ಮಾಡಲಾಗುತ್ತಿದ್ದು, ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಹೆಲ್ತ್‌ ಬುಲೆಟಿನ್‌ನಲ್ಲಿ ಹೇಳಲಾಗಿದೆ.
ನಟ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು
ನಟ ರಜನಿಕಾಂತ್‌ಗೆ ಆಗಿದ್ದೇನು; ಡಿಸ್ಚಾರ್ಜ್‌ಗೆ ಇನ್ನೆರಡು ದಿನ ಬೇಕು ಎಂದ ವೈದ್ಯರು (REUTERS)

ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ತಮಿಳು ನಟ, ಸೂಪರ್‌ಸ್ಟಾರ್‌ ರಜನಿಕಾಂತ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಗಾಬರಿಯಾಗಿದೆ. ಸದ್ಯ ಚೆನ್ನೈನ ಅಪೊಲೊ ಆಸ್ಪತ್ರೆಯು, ರಜನಿಕಾಂತ್‌ ಆರೋಗ್ಯ ಕುರಿತಾಗಿ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದೆ.‌ ಸದ್ಯ ನಟನ ಆರೋಗ್ಯ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಹೇಳಿಕೆ ತಿಳಿಸಿದೆ. ರಜನಿ ಅವರಿಗೆ ನಿಜಕ್ಕೂ ಏನಾಗಿದೆ ಹಾಗೂ ಆಸ್ಪತ್ರೆಯಿಂದ ಯಾವಾಗ ಡಿಸ್ಚಾರ್ಜ್‌ ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಎದ್ದಿದೆ. ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ ವಿವರ ಇಲ್ಲಿದೆ.

ಹೃದಯದಿಂದ ಹೊರಡುವ ಮುಖ್ಯ ರಕ್ತನಾಳದಲ್ಲಿ ಊತವಾಗಿದ್ದರಿಂದ, ರಜನಿಕಾಂತ್ ಅವರನ್ನು ಸೆಪ್ಟೆಂಬರ್ 30ರಂದು ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಾಪಧಮನಿಯಿಂದ ಹೊರಡುವ ರಕ್ತನಾಳದಲ್ಲಿ ಕಾಣಿಸಿಕೊಂಡಿದ್ದ ಊತಕ್ಕೆ ಟ್ರಾನ್ಸ್‌ಕ್ಯಾತಿಟರ್ (transcatheter) ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ. ಇದು ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಮಾಡದೆ ನೀಡುವ ಚಿಕಿತ್ಸೆ. ಎಂಡೋವಾಸ್ಕುಲರ್ ರಿಪ್ಯಾರ್‌ ಮೂಲಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಹಾಪಧಮನಿಯಲ್ಲಿ ಸ್ಟೆಂಟ್ ಅನ್ನು ಇರಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ಆಸ್ಪತ್ರೆಯ ಬುಲೆಟಿನ್‌ನಲ್ಲಿ ಹೇಳಲಾಗಿದೆ.

“ರಜನಿಕಾಂತ್ ಅವರನ್ನು ಸೆಪ್ಟೆಂಬರ್ 30ರಂದು ಗ್ರೀಮ್ಸ್ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದಿಂದ (ಮಹಾಪಧಮನಿಯ) ಹೊರಡುವ ಮುಖ್ಯ ರಕ್ತನಾಳದಲ್ಲಿ ಊತವಾಗಿತ್ತು. ಇದಕ್ಕೆ ಟ್ರಾನ್ಸ್‌ಕ್ಯಾತಿಟರ್ ವಿಧಾನದಿಂದ (ಶಸ್ತ್ರಚಿಕಿತ್ಸೆ ಮಾಡದೆ) ಚಿಕಿತ್ಸೆ ನೀಡಲಾಯಿತು. ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಸಾಯಿ ಸತೀಶ್ ಅವರು ಮಹಾಪಧಮನಿಯಲ್ಲಿ ಸ್ಟೆಂಟ್ ಇರಿಸಿದರು. ಆ ಮೂಲಕ ಊತವನ್ನು ಸಂಪೂರ್ಣವಾಗಿ ನಿವಾರಿಸಿದರು” ಎಂದು ಆಸ್ಪತ್ರೆ ಬುಲೆಟಿನ್‌ ಹೇಳಿದೆ.

ಆಸ್ಪತ್ರೆ ನೀಡಿರುವ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಹಿತೈಷಿಗಳು ಮತ್ತು ಅಭಿಮಾನಿಗಳಲ್ಲಿ ಆಸ್ಪತ್ರೆ ಹೇಳಿಕೊಂಡಿದೆ. ಸದ್ಯ ರಜನಿಕಾಂತ್ ಅವರು ಸ್ಥಿರವಾಗಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಇನ್ನೆರಡು ದಿನದಲ್ಲಿ ಅವರನ್ನು ಡಿಸ್ಚಾರ್ಜ್‌ ಮಾಡಲಾಗುತ್ತದೆ ಎಂದು ಹೇಳಿದೆ.

ಇತ್ತೀಚೆಗೆ ರಜನಿಕಾಂತ್ ತಮ್ಮ ಮುಂಬರುವ ಚಿತ್ರ ವೆಟ್ಟೈಯಾನ್ ಚಿತ್ರದ ಆಡಿಯೋ ಮತ್ತು ಪ್ರಿವ್ಯೂ ಲಾಂಚ್‌ ಸಮಾರಂಭದಲ್ಲಿ ಭಾಗವಹಿಸಿದ್ದರು. ಟಿಜೆ ಜ್ಞಾನವೇಲ್ ನಿರ್ದೇಶನದ ಈ ಚಿತ್ರ ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ. ರಜನಿಕಾಂತ್ ಅವರ 170ನೇ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶಾರಾ ವಿಜಯನ್ ಮತ್ತು ಅಭಿರಾಮಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ