ಬಾಲಿವುಡ್ ನಟ ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಅವಾರ್ಡ್; ಪ್ರಧಾನಿ ಮೋದಿಯಿಂದ ಶುಭಾಶಯ
Dadasaheb Phalke Award 2024: ಕೇಂದ್ರ ಸರ್ಕಾರ ಕೊಡಮಾಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಲಭಿಸಿದೆ. ನಟನ ಐದು ದಶಕಗಳ ಸಿನಿಮಾ ಲೋಕದ ಸಾಧನೆಗೆ ಈ ಗೌರವ ದಕ್ಕಿದೆ.
Dada Saheb Phalke Award 2024: ಸಿನಿಮಾ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ ಕೊಡಮಾಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಲಭಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ (ಸೆಪ್ಟೆಂಬರ್ 30) ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ಅಕ್ಟೋಬರ್ 8ರಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರಶಸ್ತಿ ವಿತರಿಸಲಾಗುವುದು.
ಮಿಥುನ್ ಚಕ್ರವರ್ತಿ ತಮ್ಮ ಸುದೀರ್ಘ 5 ದಶಕಗಳ ಸಿನಿಮಾ ವೃತ್ತಿಜೀವನದಲ್ಲಿ ಬೆಂಗಾಲಿ, ಹಿಂದಿ, ತಮಿಳು, ತೆಲುಗು, ಕನ್ನಡ, ಒಡಿಯಾ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ಒಟ್ಟು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1976ರಲ್ಲಿ ಮೃಗಯಾ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮಿಥುನ್, ತಮ್ಮ ಮೊದಲ ಚಿತ್ರದಲ್ಲೇ ರಾಷ್ಟ್ರಪ್ರಶಸ್ತಿ ಪಡೆದರು. 1982ರಲ್ಲಿ ಡಿಸ್ಕೋ ಡ್ಯಾನ್ಸರ್ ಸಹ ದೊಡ್ಡ ಮನ್ನಣೆ ತಂದುಕೊಟ್ಟಿತು. ಒಟ್ಟು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಮಿಥುನ್, ಇದೇ ವರ್ಷದ ಜನವರಿಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಪ್ರಶಸ್ತಿ ಬಗ್ಗೆ ಮಿಥುನ್ ಚಕ್ರವರ್ತಿ ಮಾತು..
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮಿಥುನ್ ಚಕ್ರವರ್ತಿ, "ನಿಜ ಹೇಳಬೇಕೆಂದರೆ, ನನಗೆ ಯಾವುದೇ ಭಾಷೆ ಇಲ್ಲ. ನನಗೆ ನಗಲೂ ಆಗುವುದಿಲ್ಲ, ಸಂತೋಷದಿಂದ ಅಳಲೂ ಆಗುವುದಿಲ್ಲ. ಇದು ತುಂಬಾ ದೊಡ್ಡ ವಿಷಯ. ನಾನು ಎಲ್ಲಿಂದ ಬಂದಿದ್ದೇನೋ, ಅಲ್ಲಿನ ಒಬ್ಬ ಹುಡುಗನಿಗೆ ಇಷ್ಟು ದೊಡ್ಡ ಗೌರವ ಸಿಕ್ಕಿದೆ ಎಂದು ನಾನು ಊಹಿಸಲೂ ಸಾಧ್ಯವಿಲ್ಲ. ನಾನು ಇದನ್ನು ನನ್ನ ಕುಟುಂಬ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಅರ್ಪಿಸುತ್ತೇನೆ" ಎಂದಿದ್ದಾರೆ ಮಿಥುನ್.
16 ಜೂನ್ 1950ರಂದು ಕೋಲ್ಕತ್ತಾದಲ್ಲಿ ಜನಿಸಿದ ಮಿಥುನ್ ಚಕ್ರವರ್ತಿ ಮೂಲ ಹೆಸರು ಗೌರಂಗ್ ಚಕ್ರವರ್ತಿ. ಸ್ಕ್ರೀನ್ ನೇಮ್ ಆಗಿ ಮಿಥುನ್ ಎಂದು ಬದಲಿಸಿಕೊಂಡಿದ್ದರು. ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದ ಮಿಥುನ್, ಪದವಿ ಮುಗಿದ ಬಳಿಕ ನಕ್ಸಲ್ ಚಳವಳಿಗೆ ಸೇರಿಕೊಂಡರು. ಕಟ್ಟಾ ನಕ್ಸಲ್ ಆಗಿ ಬದಲಾಗಿ, ನಕ್ಸಲ್ ಚಟುವಟಿಕೆಗಳಲ್ಲಿ ಭಾಗವಹಿಸಿ ಮನೆಯಿಂದ ದೂರವೇ ಉಳಿದಿದ್ದರು. ಹೀಗಿರುವಾಗ ಮಿಥುನ್ ಅವರ ಸಹೋದರ ಅಪಘಾತದಲ್ಲಿ ನಿಧನರಾದ ಬಳಿಕ ನಕ್ಸಲಿಸಂ ತೊರೆದು ಮನೆಗೆ ಮರಳಿದರು.
ಪ್ರಧಾನಿ ಮೋದಿಯಿಂದಲೂ ಶುಭಾಶಯ
ಮೊದಲ ಚಿತ್ರದಲ್ಲಿಯೇ ರಾಷ್ಟ್ರ ಪ್ರಶಸ್ತಿ
ಪುಣೆಯ ಖ್ಯಾತ ಚಲನಚಿತ್ರ ನಿರ್ಮಾಪಕ ಮೃಣಾಲ್ ಸೇನ್ ಅವರ ಕಣ್ಣಿಗೆ ಬಿದ್ದ ಮಿಥುನ್, ಮೃಗಯಾ ಸಿನಿಮಾ ಮೂಲಕ 1976ರಲ್ಲಿ ನಟನೆ ಆರಂಭಿಸಿದರು. ಈ ಕಲಾತ್ಮಕ ಚಿತ್ರದ ಮೂಲಕ ನಾಯಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೃಗಯಾ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ಮಿಥುನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಅವರ ಬಳಿ ಹಣವಿರಲಿಲ್ಲ. ಆಗ ಮಿಥುನ್ ಪರವಾಗಿ ರೇಖಾ ಅವು ಪ್ರಶಸ್ತಿ ಪಡೆದಿದ್ದರು.
1979ರಲ್ಲಿ ತೆರೆಕಂಡ ಸುರಕ್ಷಾ ಚಿತ್ರ ಮಿಥುನ್ ಅವರನ್ನು ಸೂಪರ್ ಸ್ಟಾರ್ ಪಟ್ಟಕ್ಕೇರಿಸಿತು. ಈ ಚಿತ್ರದ ನಂತರ, ಹೆಸರಾಂತ ನಿರ್ಮಾಪಕರು ಮತ್ತು ನಿರ್ದೇಶಕರ ಮಿಥುನ್ ಅವರ ಕಾಲ್‌ಶೀಟ್‌ಗೆ ಕೈ ಜೋಡಿಸಿದರು. 1982ರಲ್ಲಿ ಮಿಥುನ್ ನಟನೆಯ ಡಿಸ್ಕೋ ಡಾನ್ಸರ್ ಸಿನಿಮಾ ಆಗಿನ ಕಾಲದಲ್ಲಿಯೇ 100 ಕೋಟಿ ಗಳಿಸಿದ ಅವರ ಮೊದಲ ಚಿತ್ರ. ಬಳಿಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದರು.
ಇನ್ನೂ ಮುರಿಯದ ಲಿಮ್ಕಾ ದಾಖಲೆ
1989ರಲ್ಲಿ ಮಿಥುನ್ ಚಕ್ರವರ್ತಿ ನಟನೆಯ ಒಟ್ಟು 19 ಸಿನಿಮಾಗಳು ಕೇವಲ ಒಂದೇ ವರ್ಷದ ಅವಧಿಯಲ್ಲಿ ಬಿಡುಗಡೆ ಆಗಿದ್ದವು. ಆ ಎಲ್ಲ ಸಿನಿಮಾಗಳಲ್ಲಿಯೂ ಅವರು ನಾಯಕ ನಟನಾಗಿ ನಟಿಸಿದ್ದರು. ಈ ದಾಖಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಈಗ ಸುಮಾರು 35 ವರ್ಷಗಳ ನಂತರವೂ ಅವರ ಆ ದಾಖಲೆಯನ್ನು ಈ ವರೆಗೆ ಯಾರೂ ಮುರಿದಿಲ್ಲ. ಮುರಿಯುವುದೂ ಅಸಾಧ್ಯ.
ಕಳೆದ ವರ್ಷ ವಹೀದಾ ರೆಹಮಾನ್‌ಗೆ ಪ್ರಶಸ್ತಿ
2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ಲಭಿಸಿತ್ತು. ಈ ಪ್ರಶಸ್ತಿ ಪಡೆದ 8ನೇ ಮಹಿಳೆ ಅವರಾಗಿದ್ದರು. ಅವರಿಗಿಂತ ಮೊದಲು ದೇವಿಕಾ ರಾಣಿ, ರೂಬಿ ಮೇಯರ್ಸ್, ಕಾನನ್ ದೇವಿ, ದುರ್ಗಾ ಖೋಟೆ, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಮತ್ತು ಆಶಾ ಪರೇಖ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೀಗ ಇದೇ ಪ್ರಶಸ್ತಿ ಮಿಥುನ್ ಚಕ್ರವರ್ತಿ ಅವರಿಗೆ ಲಭಿಸಿದೆ.