ಶ್ರೇಷ್ಠಾ ಒತ್ತಾಯಕ್ಕೆ ಡ್ಯಾನ್ಸ್ ಮಾಡಿದ ತಾಂಡವ್, ಮದುವೆ ಮನೆಗೆ ಟ್ಯ್ರಾಕ್ಟರ್ ನುಗ್ಗಿಸಿದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
Sep 18, 2024 08:32 AM IST
ಶ್ರೇಷ್ಠಾ ಒತ್ತಾಯಕ್ಕೆ ಡ್ಯಾನ್ಸ್ ಮಾಡಿದ ತಾಂಡವ್, ಮದುವೆ ಮನೆಗೆ ಟ್ಯ್ರಾಕ್ಟರ್ ನುಗ್ಗಿಸಿದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಂಗಳವಾರದ ಎಪಿಸೋಡ್. ಡ್ಯಾನ್ಸ್ ಮಾಡುತ್ತಿರುವ ಶ್ರೇಷ್ಠಾ ನೋಡಿ ಯಶೋಧಾ ಬೇಸರ ವ್ಯಕ್ತಪಡಿಸುತ್ತಾಳೆ. ಮದುವೆ ನಿಲ್ಲಿಸಲು ಬೇರೆ ದಾರಿ ಕಾಣದೆ ಪೂಜಾ ಟ್ರ್ಯಾಕ್ಟರ್ ಹತ್ತಿ, ರೆಸಾರ್ಟ್ ಗೇಟ್ ಒಡೆದು ಒಳ ನುಗ್ಗುತ್ತಾಳೆ.
Bhagyalakshmi Serial: ಶ್ರೇಷ್ಠಾ-ತಾಂಡವ್ ಮದುವೆಗೆ ಇನ್ನು ಕೆಲವೇ ನಿಮಿಷಗಳು ಬಾಕಿ ಇದೆ. ಶ್ರೇಷ್ಠಾ ಸಂಭ್ರಮ ಮುಗಿಲು ಮುಟ್ಟಿದೆ. ಇಷ್ಟು ದಿನಗಳ ಕಾಲ ಕಾದಿದ್ದ ಕನಸು ಇಂದು ನನಸಾಗುತ್ತಿದೆ. ಇನ್ನು ನಮ್ಮ ಮದುವೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶ್ರೇಷ್ಠಾ ಖುಷಿಯಾಗುತ್ತಾಳೆ. ಆದಷ್ಟು ಬೇಗ ಈ ಮದುವೆ ಮುಗಿದರೆ ಸಾಕು ಎಂದು ತಾಂಡವ್ ಅಂದುಕೊಳ್ಳುತ್ತಾನೆ.
ಮಗಳ ಡ್ಯಾನ್ಸ್ ನೋಡಿ ಕೋಪಗೊಂಡ ಯಶೋಧಾ
ಧಾರೆಗೆ ಬರುವಾಗ ಶ್ರೇಷ್ಠಾ ಕನ್ನಡಕ ಧರಿಸಿ ಡ್ಯಾನ್ಸ್ ಮಾಡುತ್ತಾ ಬರುತ್ತಾಳೆ. ಇದನ್ನು ನೋಡಿದ ಯಶೋಧಾ ಕೋಪಗೊಳ್ಳುತ್ತಾಳೆ. ಇದೆಲ್ಲಾ ನಮ್ಮ ಸಂಪ್ರದಾಯ ಅಲ್ಲ, ಸುಮ್ಮನೆ ಸೈಲೆಂಟಾಗಿ ಬಂದು ಹಸೆಮಣಿ ಮೇಲೆ ಕುಳಿತು ಕೋ ಎಂದು ಗದರುತ್ತಾಳೆ. ಆದರೆ ಅಮ್ಮನ ಮಾತಿಗೆ ಕೇರ್ ಮಾಡದ ಶ್ರೇಷ್ಠಾ, ಅದನ್ನೆಲ್ಲಾ ಕೇಳಲು ನೀವು ಯಾರು? ಇದು ನನ್ನ ಮದುವೆ ನನ್ನಿಷ್ಟ, ಸುಮ್ಮನೆ ಬಂದೆವಾ? ಮದುವೆ ಮುಗಿಸಿಕೊಂಡೆವಾ? ತಿಂದೆವಾ ಅಂತ ಇರಬೇಕು, ಅದು ಬಿಟ್ಟು ನನ್ನ ವಿಚಾರಕ್ಕೆ ಬಂದರೆ ತಂದೆ ತಾಯಿ ಎನ್ನುವುದನ್ನೂ ನೋಡದೆ ನಿಮ್ಮನ್ನು ಇಲ್ಲಿಂದ ಹೊರ ಹಾಕುತ್ತೇನೆ ಎಂದು ಹೆದರಿಸುತ್ತಾಳೆ. ಮಗಳ ವರ್ತನೆ ಕಂಡು ಶ್ರೀವರ ಬೇಸರಗೊಳ್ಳುತ್ತಾನೆ. ಮಂಟಪದ ಬಳಿ ಹೋಗುವ ಶ್ರೇಷ್ಠಾ, ತಾಂಡವ್‌ನನ್ನು ಕರೆ ತಂದು ಡ್ಯಾನ್ಸ್ ಮಾಡುವಂತೆ ಒತ್ತಾಯ ಮಾಡುತ್ತಾಳೆ. ಇಷ್ಟವಿಲ್ಲದಿದ್ದರೂ ತಾಂಡವ್, ಎಲ್ಲರ ಜೊತೆ ಕುಣಿದು ಕುಪ್ಪಳಿಸುತ್ತಾನೆ.
ಡ್ಯಾನ್ಸ್ ಸಂಭ್ರಮ ಮುಗಿಸಿ ಶ್ರೇಷ್ಠಾ-ತಾಂಡವ್ ಇಬ್ಬರೂ ಧಾರೆಗೆ ರೆಡಿಯಾಗುತ್ತಾರೆ. ಶಾಸ್ತ್ರ ಹೇಳುವ ಪುರೋಹಿತರನ್ನು ತಡೆಯುವ ಶ್ರೇಷ್ಠಾ, ಈ ಶಾಸ್ತ್ರಗಳೆಲ್ಲಾ ಬೇಡ, ನೇರವಾಗಿ ಮಾಂಗಲ್ಯಧಾರಣೆ ಮಾಡಿಸಿ ಸಾಕು ಎನ್ನುತ್ತಾಳೆ. ಶಾಸ್ತ್ರ ಪೂರ್ಣಗೊಳ್ಳದೆ ತಾಳಿ ಕಟ್ಟಿಸಿಕೊಳ್ಳಬಾರದು ಎಂದು ಯಶೋಧಾ ಮಗಳಿಗೆ ಬುದ್ಧಿ ಹೇಳುತ್ತಾಳೆ. ಯಾರು ನೀವು, ಪರಿಚಯವಿಲ್ಲದವರು ನನ್ನ ಮದುವೆ ವಿಚಾರಕ್ಕೆ ತಲೆ ಹಾಕುವುದು ನನಗೆ ಇಷ್ಟವಿಲ್ಲ. ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಬೈಯ್ಯುತ್ತಾಳೆ. ಅವಳು ಹೇಗಾದರೂ ಮಾಡಿಕೊಳ್ಳಲಿ ನೀನು ಸುಮ್ಮನಿರು ಎಂದು ಶ್ರೀವರ, ಹೆಂಡಿಗೆ ಸಮಾಧಾನ ಮಾಡುತ್ತಾನೆ. ಶ್ರೇಷ್ಠಾ ಹೇಳಿದಂತೆ ಪುರೋಹಿತರು ಮಾಂಗಲ್ಯಧಾರಣೆ ಮಾಡಿಸಲು ಸಿದ್ಧವಾಗುತ್ತಾರೆ.
ಟ್ರ್ಯಾಕ್ಟರ್ ಹತ್ತಿ ರೆಸಾರ್ಟ್ ಗೇಟ್ ಒಡೆದ ಪೂಜಾ
ಹೊರಗೆ ರೆಸಾರ್ಟ್ ಸಿಬ್ಬಂದಿ ಪೂಜಾ ಹಾಗೂ ಕುಸುಮಾ ಇಬ್ಬರನ್ನೂ ಒಳಗೆ ಬಿಡದೆ ತಡೆಯುತ್ತಾರೆ. ಈ ಮದುವೆ ನಿಲ್ಲಿಸಲೇಬೇಕು. ಯಾವ ಕಾರಣಕ್ಕೂ ಭಾಗ್ಯಕ್ಕನಿಗೆ ನಾನು ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಪೂಜಾ ಒಳ ಹೋಗಲು ಏನಾದರೂ ದಾರಿ ದೊರೆಯುವುದಾ ಅಂತ ಸುತ್ತ ಮುತ್ತ ನೋಡುತ್ತಾಳೆ. ಪಕ್ಕದಲ್ಲೇ ಒಂದು ಟ್ರ್ಯಾಕ್ಟರ್ ಕಾಣುತ್ತದೆ. ಅತ್ತೆಯನ್ನು ಅಲ್ಲಿಗೆ ಕರೆದೊಯ್ಯುವ ಪೂಜಾ, ಟ್ರ್ಯಾಕ್ಟರ್ ಹತ್ತಿ ಅತ್ತೆಯನ್ನೂ ಹತ್ತಿ ಕೂರಿಸಿಕೊಳ್ಳುತ್ತಾಳೆ. ಆ ಹುಡುಗಿ ಸುಮ್ಮನೆ ತಮಾಷೆ ಮಾಡುತ್ತಿದ್ದಾಳೆ. ನಾವು ಒಳಗೆ ಬಿಡಲಿಲ್ಲವಲ್ಲಾ ಅದಕ್ಕೆ ಟ್ರ್ಯಾಕ್ಟರ್ ಮೇಲೆ ಕುಳಿತು ಒಂದೆರಡು ರೀಲ್ಸ್ ಮಾಡಿ ಇಲ್ಲಿಂದ ಹೋಗುತ್ತಾಳೆ ಎಂದು ಅಪಹಾಸ್ಯ ಮಾಡಿದ ರೆಸಾರ್ಟ್ ಸಿಬ್ಬಂದಿ ಪೂಜಾ ತಮ್ಮ ಕಡೆಗೆ ಬರುವುದನ್ನು ನೋಡಿ ಗಾಬರಿ ಆಗುತ್ತಾರೆ. ಪೂಜಾ ಟ್ರ್ಯಾಕ್ಟರ್ ಚಾಲನೆ ಮಾಡುತ್ತಾ ರೆಸಾರ್ಟ್ ಗೇಟನ್ನು ಬೀಳಿಸುತ್ತಾಳೆ. ಇದನ್ನು ನೋಡಿ ಸಿಬ್ಬಂದಿಗೆ ಗಾಬರಿ ಆಗುತ್ತದೆ.
ಮತ್ತೊಂದೆಡೆ ಎಷ್ಟು ಹೇಳಿದರೂ ಕೇಳದೆ ಭಾಗ್ಯಾ , ಧರ್ಮರಾಜ್ ಮದುವೆ ಮನೆಗೆ ಹೊರಟು ನಿಂತಿದ್ದನ್ನು ಕಂಡು ಸುಂದ್ರಿ ಗಾಬರಿ ಆಗುತ್ತಾಳೆ. ತಾಂಡವ್ ಮದುವೆ ವಿಚಾರ ಯಾವುದೇ ಕಾರಣಕ್ಕೂ ಭಾಗ್ಯಾಗೆ ಗೊತ್ತಾಗಬಾರದು ಎಂದು ಸುಂದ್ರಿ ಬಹಳ ಪ್ರಯತ್ನಿಸುತ್ತಾಳೆ. ಭಾಗ್ಯಾ ಹತ್ತಿದ ಆಟೋಗೆ ಅಡ್ಡಲಾಗಿ ಸುಂದ್ರಿ ನಿಲ್ಲುತ್ತಾಳೆ. ಪದೇ ಪದೆ ನಮ್ಮ ದಾರಿಗೆ ಅಡ್ಡಿ ಬರುವುದನ್ನು ನೋಡಿ ಭಾಗ್ಯಾ ಕೋಪಗೊಳ್ಳುತ್ತಾಳೆ. ದಯವಿಟ್ಟು ನಮ್ಮನ್ನು ಹೋಗಲು ಬಿಡು ಎಂದು ಮನವಿ ಮಾಡುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್