ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚಗೆ ಹಗ್ಗ ಚಿತ್ರತಂಡದಿಂದ ಸೀಮಂತ ಶಾಸ್ತ್ರ, ಚಂದನವನದಲ್ಲಿ 25 ವರ್ಷ ಪೂರೈಸಿದ ಖುಷಿಯಲ್ಲಿ ಅನು ಪ್ರಭಾಕರ್
ಕನ್ನಡ ಸುದ್ದಿ  /  ಮನರಂಜನೆ  /  ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚಗೆ ಹಗ್ಗ ಚಿತ್ರತಂಡದಿಂದ ಸೀಮಂತ ಶಾಸ್ತ್ರ, ಚಂದನವನದಲ್ಲಿ 25 ವರ್ಷ ಪೂರೈಸಿದ ಖುಷಿಯಲ್ಲಿ ಅನು ಪ್ರಭಾಕರ್

ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚಗೆ ಹಗ್ಗ ಚಿತ್ರತಂಡದಿಂದ ಸೀಮಂತ ಶಾಸ್ತ್ರ, ಚಂದನವನದಲ್ಲಿ 25 ವರ್ಷ ಪೂರೈಸಿದ ಖುಷಿಯಲ್ಲಿ ಅನು ಪ್ರಭಾಕರ್

ಅನು ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಗ್ಗ ಚಿತ್ರತಂಡ ಅವರನ್ನು ವಿಶೇಷವಾಗಿ ಅಭಿನಂದಿಸಿದೆ. ಇತ್ತ ನಟಿ ಹರ್ಷಿಕಾ ಪೂಣಚ್ಚ ಅವರ ಸೀಮಂತ ಶಾಸ್ತ್ರವೂ ಅದೇ ವೇದಿಕೆ ಮೇಲೆ ನೆರವೇರಿದೆ.

ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚಗೆ ಹಗ್ಗ ಚಿತ್ರತಂಡದಿಂದ ಸೀಮಂತ ಶಾಸ್ತ್ರ ನೆರವೇರಿಸಲಾಯ್ತು.
ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚಗೆ ಹಗ್ಗ ಚಿತ್ರತಂಡದಿಂದ ಸೀಮಂತ ಶಾಸ್ತ್ರ ನೆರವೇರಿಸಲಾಯ್ತು.

ಹಗ್ಗ ಸಿನಿಮಾ ಇನ್ನೇನು ಇದೇ ವಾರ ತೆರೆಗೆ ಬರಲು ರೆಡಿಯಾಗಿದೆ. ಹೀಗಿರುವಾಗ ಇಡೀ ತಂಡ ಈ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಒಂದಾಗಿತ್ತು. ಬರೀ ಇದೊಂದು ಟ್ರೇಲರ್‌ ಬಿಡುಗಡೆ ಸಮಾರಂಭ ಮಾತ್ರ ಆಗದೆ, ಕುಟುಂಬದ ಕಾರ್ಯಕ್ರಮದಂತೆ ಕಂಡಿತ್ತು. ಏಕೆಂದರೆ, ಹಗ್ಗ ಚಿತ್ರದ ನಾಯಕಿಯಲ್ಲೊಬ್ಬರಾದ ಹರ್ಷಿಕಾ ಪೂಣಚ್ಚ ಅವರ ಸೀಮಂತ ಶಾಸ್ತ್ರವನ್ನು ಚಿತ್ರತಂಡ ಆಯೋಜಿಸಿತ್ತು. ಜತೆಗೆ ಮತ್ತೋರ್ವ ನಾಯಕಿ ಅನು ಪ್ರಭಾಕರ್‌ ಚಿತ್ರರಂಗಕ್ಕೆ ಬಂದು 25 ವರ್ಷ ಕಳೆದ ಹಿನ್ನೆಲೆಯಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಲಾಯಿತು.

ಅನು ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ 25 ವರ್ಷಗಳನ್ನು ಪೂರೈಸಿದ್ದಾರೆ. ಅವರ ಮೊದಲ ಚಿತ್ರ ‘ಹೃದಯ ಹೃದಯ’, 1999ರ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಆ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಅವರು, ಈ 25 ವರ್ಷಗಳಲ್ಲಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ, ಅನು ಪ್ರಭಾಕರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಹಗ್ಗ’ ಚಿತ್ರವು ಸೆಪ್ಟೆಂಬರ್ 20ರಂದು ಬಿಡುಗಡೆಯಾಗುತ್ತಿದೆ. ಅನು ಅಭಿನಯದ ಮೊದಲ ಚಿತ್ರ ಬಿಡುಗಡೆಯಾದ ದಿನವೇ ‘ಹಗ್ಗ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಅನು ಪ್ರಭಾಕರ್ ಅವರನ್ನು ಗೌರವಿಸಿದ್ದಾರೆ. ಕೇಕ್‍ ಕಟ್ ಮಾಡುವ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಾಚ್ಛ ಅವರ ಸೀಮಂತಶಾಸ್ತ್ರವನ್ನೂ ಚಿತ್ರತಂಡ ಆಯೋಜಿಸಿತ್ತು. ಈ ಸಂದರ್ಭದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ಗಾಯತ್ರಿ ಪ್ರಭಾಕರ್ ಮತ್ತು ರಘು ಮುಖರ್ಜಿ ಸಹ ಹಾಜರಿದ್ದರು.

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಅನು ಪ್ರಭಾಕರ್

ನಾನು ಈ ಚಿತ್ರ ಒಪ್ಪಿದ್ದು ನಿರ್ದೇಶಕ ಅವಿನಾಶ್ ಹೇಳಿದ ಕಥೆಗಾಗಿ ಎಂದು ಮಾತನಾಡಿದ ಅನು ಪ್ರಭಾಕರ್, "ನನಗೆ ಹಾರರ್ ಚಿತ್ರಗಳೆಂದರೆ ಇಷ್ಟವಿಲ್ಲ. ನಾನು ಹಾರರ್ ಚಿತ್ರಗಳನ್ನು ನೋಡುವುದಿಲ್ಲ. ಆದರೂ ನಾನು ಒಪ್ಪಿದ್ದು ಅವರು ಹೇಳಿದ ಕಥೆಗಾಗಿ. ನನಗೆ ಅವರ ಸ್ಪಷ್ಟತೆ ಇಷ್ಟವಾಯಿತು. ಅವರು ಏನು ಹೇಳಿದ್ದರೊ, ಅದನ್ನು ತೆರೆಯ ಮೇಲೆ ತಂದಿದ್ದಾರೆ. ಮೊದಲ ಚಿತ್ರದಲ್ಲೇ ಇಷ್ಟೊಂದು ಚೆನ್ನಾಗಿ ಕೆಲಸ ಮಾಡಿದ್ದು ನೋಡಿ ಖುಷಿಯಾಯಿತು. ಹಾಗಂತ ಚಿತ್ರೀಕರಣ ಸುಲಭವಾಗಿರಲಿಲ್ಲ. ನನ್ನ ಭಾಗದ ಚಿತ್ರೀಕರಣ ರಾತ್ರಿ 7ಕ್ಕೆ ಶುರುವಾಗಿ ಬೆಳಗ್ಗಿನ ಜಾವಕ್ಕೆ ಮುಗಿಯುತ್ತಿತ್ತು. ಆದರೆ, ನಾನು ಎಲ್ಲ ಹೋದ ಮೇಲೆ ಹೋಗಬೇಕಿತ್ತು. ಏಕೆಂದರೆ, ಮೇಕಪ್‍ ಹಾಕುವುದಕ್ಕೆ, ತೆಗೆಯುವುದಕ್ಕೆ ಎರಡು ತಾಸು ಬೇಕಾಗುತ್ತಿತ್ತು. ನನ್ನ ಜೊತೆಗೆ ತಾಳ್ಮೆಯಿಂದ ಕಾದಿದ್ದ ನನ್ನ ತಂಡಕ್ಕೆ ಧನ್ಯವಾದ ಹೇಳಬೇಕು ಎಂದರು.

ಇಂದಿಗೂ ಅವ್ರು ಟೈಟಾನಿಕ್‌ ಹೀರೋಯಿನ್...

ಅನು ಪ್ರಭಾಕರ್ ಅವರನ್ನು ನೋಡಿದರೆ, ಅವರಿಗೆ 25 ವರ್ಷ ಆಗಿದೆ ಎಂದನಿಸುತ್ತದೆಯೇ ಹೊರತು, ಚಿತ್ರರಂಗದಲ್ಲಿ ಅವರು 25 ವರ್ಷಗಳಿಂದ ಇದ್ದಾರೆ ಎಂದನಿಸುವವುದಿಲ್ಲ. ನಮಗೆಲ್ಲ ಸ್ಫೂರ್ತಿ ಅವರು. ಅವರು ನಮ್ಮ ಪಾಲಿಗೆ ‘ಟೈಟಾನಿಕ್‍ ಹೀರೋಯಿನ್‍’. ಅವರ 25ನೇ ವರ್ಷದ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಖುಷಿಯಾಗುತ್ತಿದೆ. ಈ ಚಿತ್ರದಲ್ಲಿ ಅಭಿನಯಿಸಿದ್ದು ಒಂದೊಳ್ಳೆಯ ಅನುಭವ. ನಿರ್ದೇಶಕರಿಗೆ ತಾವೇನು ಮಾಡುತ್ತಿದ್ದೀನಿ ಎಂದು ಚೆನ್ನಾಗಿ ಗೊತ್ತಿತ್ತು ಎಂದರು ನಟಿ ಹರ್ಷಿಕಾ ಪೂಣಚ್ಛ.

ನಿರ್ದೇಶಕರು ಹೇಳುವುದೇನು?

ಇದಕ್ಕೂ ಮೊದಲು ರಾಜ್ ಭಾರದ್ವಾಜ್ ನಿರ್ಮಾಣದಲ್ಲಿ ಒಂದು ಕಿರುಚಿತ್ರ ನಿರ್ದೇಶಿಸಿದ್ದೆ. ಇದು ನನ್ನ ಮೊದಲ ಚಿತ್ರ. ಈ ಚಿತ್ರದಲ್ಲಿ ಹಗ್ಗವನ್ನು ಆಯುಧವನ್ನಾಗಿ ಬಳಸಿಕೊಳ್ಳಲಾಗಿದೆ. ಒಳ್ಳೆಯ ವಿಷಯಕ್ಕಾಗಿ ಹಗ್ಗ ಹೋರಾಟ ಮಾಡುತ್ತದೆ. ಇದೊಂದು ಹಾರರ್ ಫ್ಯಾಂಟಸಿ ಆ್ಯಕ್ಷನ್‍ ಥ್ರಿಲ್ಲರ್ ಚಿತ್ರ. ಇಲ್ಲಿ ಸಂದೇಶವಿದೆ, ಸಾಕಷ್ಟು ಗ್ರಾಫಿಕ್ಸ್ ಇದೆ. ಒಂದು ಪಾತ್ರಕ್ಕಾಗಿ ಅನು ಪ್ರಭಾಕರ್ ಇದ್ದರೇ ಚೆನ್ನ ಎಂದನಿಸಿತು. ಅವರೂ ಒಪ್ಪಿಕೊಂಡರು. ಆ ನಂತರ ಆ ಪಾತ್ರವನ್ನು ಅವರು ಬಿಟ್ಟರೆ ಯಾರಿಂದಲೂ ಸಾಧ್ಯವಿಲ್ಲ ಎಂದನಿಸಿತು" ಎಂದರು ನಿರ್ದೇಶಕ ಅವಿನಾಶ್.

ನಮ್ಮ ಟೀಸರ್ ಬಹಳ ಯಶಸ್ವಿಯಾಯಿತು. ಹಲವು ದಿನಗಳ ಕಾಲ ಟ್ರೆಂಡ್‍ ಆಗಿತ್ತು. ಈ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ. ಅದರಲ್ಲೂ ಅನು ಪ್ರಭಾಕರ್ ಅವರು ದ್ವಿತೀಯಾರ್ಧವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ತಮ್ಮ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ನಿರ್ಮಾಪಕ ರಾಜ್ ಭಾರದ್ವಾಜ್ ತಿಳಿಸಿದರು.

Whats_app_banner