logo
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ನಿಮಗಿಂತ ಅಮ್ಮನೇ ವಾಸಿ, ಕೊನೆಗೂ ತಾಂಡವ್‌ ಮುಂದೆ ಭಾಗ್ಯಾಗೆ ತನ್ವಿಯಿಂದ ಶಹಬ್ಬಾಸ್‌ಗಿರಿ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ನಿಮಗಿಂತ ಅಮ್ಮನೇ ವಾಸಿ, ಕೊನೆಗೂ ತಾಂಡವ್‌ ಮುಂದೆ ಭಾಗ್ಯಾಗೆ ತನ್ವಿಯಿಂದ ಶಹಬ್ಬಾಸ್‌ಗಿರಿ; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Mar 27, 2024 08:30 AM IST

google News

ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಾರ್ಚ್‌ 26ರ ಎಪಿಸೋಡ್‌

  • Bhagyalakshmi Serial: ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಾರ್ಚ್‌ 26ರ ಎಪಿಸೋಡ್‌. ತಮ್ಮ ಮೇಲಿನ ಆರೋಪ ಸುಳ್ಳು ಎಂದು ಸಾಬೀತು ಮಾಡಲು ಭಾಗ್ಯಾ ಹೋರಾಟಕ್ಕೆ ಇಳಿಯುತ್ತಾಳೆ. ಮಗಳನ್ನು ತನ್ನ ಕಡೆ ಒಲಿಸಿಕೊಳ್ಳಲು ತಾಂಡವ್‌ ಸೋಲುತ್ತಾನೆ. ಅಪ್ಪನ ಜೊತೆ ಪದೇ ಪದೇ ಶ್ರೇಷ್ಠಾಳನ್ನು ನೋಡುವ ತನ್ವಿ, ಇಬ್ಬರ ಮೇಲೂ ಕೆಂಡ ಕಾರುತ್ತಾಳೆ.

 ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಾರ್ಚ್‌ 26ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಾರ್ಚ್‌ 26ರ ಎಪಿಸೋಡ್‌ (PC: Colors Kannada)

Bhagyalakshmi Serial: ತನ್ವಿ, ಭಾಗ್ಯಾ ಮೇಲೆ ಕಾಪಿ ಆರೋಪ ಬಂದಿದೆ. ಇಬ್ಬರೂ ಎಕ್ಸಾಂ ಹಾಲ್‌ನಿಂದ ಹೊರಗೆ ಬಂದಿದ್ದಾರೆ. ಇದುವರೆಗೂ ಓದಿನಲ್ಲಿ ಆಸಕ್ತಿ ತೋರದ ತನ್ವಿ ಈಗ ಅಮ್ಮನ ಮೇಲಿನ ಚಾಲೆಂಜ್‌ಗೆ ಓದಿನ ಕಡೆ ಆಸಕ್ತಿ ತೋರುತ್ತಿದ್ದಾಳೆ. ಆದರೆ ಎಕ್ಸಾಂನಲ್ಲಿ ಡೆಸ್ಕ್‌ ಮೇಲೆ ಗಣಿತ ಫಾರ್ಮುಲಾ ಬರೆಸಿದ ಕನ್ನಿಕಾ ಅಮ್ಮ, ಮಗಳ ಮೇಲೆ ಆರೋಪ ಬರುವಂತೆ ಮಾಡಿದ್ದಾಳೆ.

ಮಗಳಿಗೆ ಈ ರೀತಿ ಆಗಿದೆ ಎಂದು ತಿಳಿದು ತಾಂಡವ್‌ ಕೂಡಾ ಸ್ಕೂಲ್‌ ಬಳಿ ಬಂದಿದ್ದಾನೆ. ತನ್ವಿ ಪರೀಕ್ಷೆ ಬರೆಯಲು ಏನೂ ಸಹಾಯ ಮಾಡದ ತಾಂಡವ್‌, ಆಕೆಯದ್ದು ಏನೂ ತಪ್ಪಿಲ್ಲ ಎಂದು ಎಲ್ಲರಿಗೂ ಹೇಳಲು ಪ್ರಯತ್ನವೇ ಪಡದ ತಾಂಡವ್‌ ಪ್ರತಿಯೊಂದಕ್ಕೂ ಭಾಗ್ಯಾಳನ್ನೂ ದೂಷಿಸುತ್ತಿದ್ದಾನೆ. ನನ್ನ ಮಗಳಿಗೆ ಈ ಪರಿಸ್ಥಿತಿ ಬರಲು ನೀನೇ ಕಾರಣ, ನಿನ್ನ ಓದಿನ ಆಸೆಗೆ ಮಗಳ ಜೀವನ ಈ ರೀತಿ ಆಗುತ್ತಿದೆ. ನೀನು ಎಲ್ಲರ ಬಳಿ ಜಗಳ ಮಾಡುವುದರಿಂದಲೇ ತನ್ವಿಗೆ ಇಂದು ಈ ಗತಿ ಬಂದಿದೆ. ಮಗಳಿಗೆ ಈ ಪರಿಸ್ಥಿತಿ ತಂದಿದ್ದೀಯ, ನೀನು ಎಂಥಾ ತಾಯಿ ಎಂದು ಹಂಗಿಸುತ್ತಾನೆ. ತನ್ನದಲ್ಲದ ತಪ್ಪಿಗೆ ಹೊಣೆಯನ್ನಾಗಿ ಮಾಡುವ ತಾಂಡವ್‌ ಬಗ್ಗೆ ಭಾಗ್ಯಾಗೆ ಬೇಸರ ಎನಿಸುತ್ತದೆ. ನನ್ನಿಂದ ನನ್ನ ಮಗಳ ಜೀವನ ಹಾಳಾಗುವುದು ಬೇಡ. ನಾನು ಎಲ್ಲವನ್ನೂ ಸರಿ ಮಾಡುತ್ತೇನೆ. ಇಂದು ನಾನು, ನನ್ನ ಮಗಳು ಇಬ್ಬರೂ ಪರೀಕ್ಷೆ ಬರೆದೇ ತೀರುತ್ತೇವೆ ಎಂದು ಭಾಗ್ಯಾ ಹೊರಡುತ್ತಾಳೆ.

ಒಬ್ಬಂಟಿಯಾಗಿ ಹೋರಾಡಲು ಮುಂದಾದ ಭಾಗ್ಯಾ

ಈಗ ಏನು ಮಾಡಲು ಹೊರಟಿದ್ದೀಯ ನಾವೂ ನಿನ್ನ ಜೊತೆ ಬರುತ್ತೇವೆ ಎಂದು ಕುಸುಮಾ, ಪೂಜಾ ಭಾಗ್ಯಾ ಜೊತೆ ಹೋಗುತ್ತಾರೆ. ಇಲ್ಲ ಅತ್ತೆ ಇದನ್ನು ನಾನೇ ಸರಿ ಪಡಿಸಬೇಕು, ನಾನೊಬ್ಬಳೇ ಹೋರಾಡುತ್ತೇನೆ. ನನಗೂ ಸುಮ್ಮನಿದ್ದು ಸಾಕಾಗಿದೆ. ಇಷ್ಟು ದಿನಗಳ ಕಾಲ ಎಲ್ಲವನ್ನೂ ಸಹಿಸುತ್ತಾ ಬಂದೆ. ಇನ್ಮುಂದೆ ಕನ್ನಿಕಾ ನನ್ನ ಸಹವಾಸಕ್ಕೆ ಬರಬಾರದು ಹಾಗೆ ಮಾಡುತ್ತೇನೆ ಎಂದು ಅತ್ತೆಗೆ ಹೇಳುತ್ತಾಳೆ. ಸಾಧ್ಯವಾದರೆ ಕನ್ನಿಕಾ ಎಲ್ಲಿದ್ದಾಳೆ ತಿಳಿದುಕೋ ಎಂದು ಪೂಜಾ ಬಳಿ ಮನವಿ ಮಾಡುತ್ತಾಳೆ. ಸೊಸೆ ಮೇಲಿನ ನಂಬಿಕೆಯಿಂದ ಕುಸುಮಾ ಆಕೆಗೆ ಆಶೀರ್ವಾದ ಮಾಡಿ ಕಳಿಸಿಕೊಡುತ್ತಾಳೆ.

ಇತ್ತ ತಾಂಡವ್‌, ತನ್ವಿಯನ್ನು ಐಸ್‌ಕ್ರೀಮ್‌ ಶಾಪ್‌ಗೆ ಕರೆ ತರುತ್ತಾನೆ. ಇಲ್ಲಿಗೆ ಏಕೆ ಕರೆದುಕೊಂಡು ಬಂದ್ರಿ ಎಂದು ತನ್ವಿ ಕೇಳುತ್ತಾಳೆ. ನೀನು ಎಕ್ಸಾಂ ವಿಚಾರವಾಗಿ ತಲೆ ಕೆಡಿಸಿಕೊಂಡಿದ್ದೀಯ, ನಿನಗೆ ಇಷ್ಟವಾದ ಐಸ್‌ಕ್ರೀಮ್‌ ತಿನ್ನು, ಎಲ್ಲಾ ಸರಿ ಆಗುತ್ತದೆ ಎಂದು ತಾಂಡವ್‌ ಹೇಳುತ್ತಾನೆ. ನನಗೆ ಐಸ್‌ಕ್ರೀಮ್‌ ಬೇಡ, ನಾನು ಈ ಬಾರಿ ಚೆನ್ನಾಗಿ ಓದಿಕೊಂಡು ಬಂದಿದ್ದೆ, ಇಂದು ನಾನು ಪರೀಕ್ಷೆ ಬರೆಯಲೇಬೇಕು ಏನಾದರೂ ಮಾಡಿ ಎಂದು ತನ್ವಿ, ಅಪ್ಪನ ಬಳಿ ಮನವಿ ಮಾಡುತ್ತಾಳೆ. ಆದರೆ ತಾಂಡವ್‌, ಏನೂ ಮಾಡಲು ಸಾಧ್ಯವಿಲ್ಲ. ರೂಲ್ಸ್‌ ಇರೋದೇ ಹಾಗೆ. ನೀನು ಸಪ್ಲಿಮೆಂಟರಿ ಬರೆದು ಪಾಸ್‌ ಆಗುವಂತೆ ಈಗ ಐಸ್‌ಕ್ರೀಮ್‌ ತಿನ್ನು, ಯಾವ ಫ್ಲೇವರ್‌ ಬೇಕು ಎಂದು ಕೇಳುತ್ತಾನೆ.

ಶ್ರೇಷ್ಠಾ ಮೇಲೆ ಐಸ್‌ಕ್ರೀಮ್‌ ಎರಚಿದ ತನ್ವಿ

ಅದೇ ಸಮಯಕ್ಕೆ ಶ್ರೇಷ್ಠಾ ಅಲ್ಲಿಗೆ ಬರುತ್ತಾಳೆ. ತನ್ವಿಗೆ ಯಾವ ಐಸ್‌ಕ್ರೀಮ್‌ ಇಷ್ಟ ಎಂದು ನನಗೆ ಗೊತ್ತು ಅದಕ್ಕೆ ಅದನ್ನೇ ತಂದಿದ್ದೇನೆ ಎನ್ನುತ್ತಾಳೆ. ಶ್ರೇಷ್ಠಾಳನ್ನು ನೋಡುತ್ತಿದ್ದಂತೆ ತನ್ವಿ ಕೋಪಗೊಳ್ಳುತ್ತಾಳೆ. ನಿಮ್ಮನ್ನು ಕಂಡರೆ ನನಗೆ ಇಷ್ಟವಿಲ್ಲ ಎಂದು ಗೊತ್ತಿದ್ದರೂ ಏಕೆ ನಮ್ಮನ್ನು ಹಿಂಬಾಲಿಸುತ್ತಿದ್ದೀರಿ. ನಿಮಗೆ ನಾನು ಡಿಬಾರ್‌ ಆದ ವಿಚಾರ ಯಾರು ಹೇಳಿದ್ದು? ಇದು ನಮ್ಮ ಮನೆ ವಿಚಾರ ನೀವು ಎಲ್ಲದಕ್ಕೂ ಏಕೆ ಮೂಗು ತೂರಿಸುತ್ತೀರಿ ಎಂದು ಪ್ರಶ್ನಿಸುತ್ತಾಳೆ. ಕೋಪದಿಂದ ಐಸ್‌ಕ್ರೀಮನ್ನು ಶ್ರೇಷ್ಠಾ ಮೇಲೆ ಎಸೆಯುತ್ತಾಳೆ. ಸಾರ್ವಜನಿಕವಾಗಿ ಹೀಗೆಲ್ಲಾ ವರ್ತಿಸಬೇಡ, ಸುಮ್ಮನಿರು ಎಂದು ತಾಂಡವ್‌ ತನ್ವಿಯನ್ನು ಗದರುತ್ತಾನೆ.

ನನಗೆ ಉತ್ತರ ಬೇಕು ಪ್ರತಿಯೊಂದಕ್ಕೂ ಶ್ರೇಷ್ಠಾ ನಮ್ಮ ಮನೆ ವಿಚಾರಕ್ಕೆ ಮೂಗು ತೂರಿಸುತ್ತಾರೆ. ಇವರೇನು ನನ್ನ ಅಮ್ಮಾನಾ ಅಥವಾ ನಿಮ್ಮ ಗರ್ಲ್‌ಫ್ರೆಂಡಾ? ನಾನು ಪರೀಕ್ಷೆ ವಿಚಾರವಾಗಿ ಯೋಚಿಸುತ್ತಿದ್ದೇನೆ, ಆದರೆ ನೀವು ಐಸ್‌ಕ್ರೀಮ್‌ ಕೊಡಿಸಲು ಕರೆ ತಂದಿದ್ದೀರಿ, ನೀವು ಏನು ಎಫರ್ಟ್‌ ಹಾಕುತ್ತಿದ್ದೀರ? ನಿಮಗಿಂಥ ಅಮ್ಮನೇ ವಾಸಿ, ಏನು ಮಾಡುತ್ತಾಳೋ ಇಲ್ಲವೋ, ಆದರೆ ಪ್ರಯತ್ನ ಪಡಲು ಹೋಗಿದ್ದಾಳೆ. ನಾನು ಅಮ್ಮ ಬರುವವರೆಗೂ ಕಾಯುತ್ತೇನೆ ಎಂದು ಅಲ್ಲಿಂದ ಎದ್ದು ಹೋಗುತ್ತಾಳೆ.

ಕನ್ನಿಕಾಗೆ ಬುದ್ಧಿ ಕಲಿಸಲು ಭಾಗ್ಯಾ ಏನು ಪ್ಲ್ಯಾನ್‌ ಮಾಡುತ್ತಾಳೆ? ಮಗಳನ್ನು ಸೆಳೆಯಲು ತಾಂಡವ್‌ ಮತ್ತೆ ಏನು ತಂತ್ರ ಮಾಡುತ್ತಾನೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ