ತಂದೆಗೆ ಎಡೆ ಇಟ್ಟು ಸಮಾಧಿ ಪೂಜೆ ಮಾಡಿ ದೀಪಾವಳಿ ವ್ಲಾಗ್ ಹಂಚಿಕೊಂಡ ನಟ, ಟಿಕ್‌ಟಾಕ್ ಸ್ಟಾರ್ ವರುಣ್ ಆರಾಧ್ಯ
Nov 08, 2024 08:50 AM IST
ತಂದೆಗೆ ಎಡೆ ಇಟ್ಟು ಸಮಾಧಿ ಪೂಜೆ ಮಾಡಿದ ನಟ ವರುಣ್ ಆರಾಧ್ಯ
ನಟ, ಟಿಕ್‌ಟಾಕ್ ಸ್ಟಾರ್ ವರುಣ್ ಆರಾಧ್ಯ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ದೀಪಾವಳಿ ವ್ಲಾಗ್ ಹಂಚಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ತಮ್ಮನ್ನು ಅಗಲಿದೆ ತಂದೆ ನಾಗರಾಜ್ ಅವರಿಗೆ ಮನೆಯಲ್ಲಿ ಎಡೆ ಇಟ್ಟು, ಸಮಾಧಿ ಪೂಜೆ ಮಾಡಿದ್ದಾರೆ. 4 ಲಕ್ಷ ಸಬ್ಸ್‌ಕ್ರೈಬರ್ ಆಗಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಾಜಿ ಗರ್ಲ್ ಫ್ರೆಂಡ್ ವಿಚಾರಕ್ಕೆ ಭಾರೀ ಸುದ್ದಿಯಲ್ಲಿ ವರುಣ್ ಆರಾಧ್ಯ ಈಗ ಆ ಜಂಜಾಟದಿಂದ ಹೊರ ಬಂದು ಮೊದಲಿನಂತೆ ತಮ್ಮ ಯೂಟ್ಯೂಬ್ ವಿಡಿಯೋಗಳತ್ತ ಗಮನ ಹರಿಸಿದ್ದಾರೆ. ವಿವಾದಕ್ಕೆ ಸಿಲುಕಿದ್ದ ವರುಣ್‌ಗೆ ತಾಯಿ, ತಂಗಿ, ಮನೆಯವರು ಹಾಗೂ ಸ್ನೇಹಿತರು ಬೆಂಬಲಕ್ಕೆ ನಿಂತಿದ್ದಾರೆ. ವರುಣ್, ಹೊಸ ವ್ಲಾಗ್‌ಗಳನ್ನು ಮಾಡಿ ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಕೂಡಾ ಮಾಡುತ್ತಿದ್ದಾರೆ.
ಕೋವಿಡ್ ಸಮಯದಲ್ಲಿ ತಂದೆಯನ್ನು ಕಳೆದುಕೊಂಡ ವರುಣ್ ಆರಾಧ್ಯ
ದೀಪಾವಳಿ ಹಬ್ಬದಂದು ತಮ್ಮ ಮನೆಯ ಹಿರಿಯರಿಗೆ ಎಡೆ ಇಟ್ಟು ಪೂಜೆ ಮಾಡಿದ ವಿಡಿಯೋವನ್ನು ಕೂಡಾ ವರುಣ್ ತಮ್ಮ ಯೂಟ್ಯೂಬ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವರುಣ್ ಆಗ್ಗಾಗ್ಗೆ ತಮ್ಮ ತಂದೆ ನಾಗರಾಜ್ ಅವರ ಬಗ್ಗೆ ಹೇಳಿಕೊಂಡು ಬಂದಿದ್ದಾರೆ. ಮನೆ ನಡೆಸಲು ಅವರು ಎಷ್ಟು ಕಷ್ಟ ಪಟ್ಟಿದ್ದರು ಎಂಬ ವಿಚಾರವನ್ನೂ ವರುಣ್ ಹೇಳಿಕೊಂಡಿದ್ದರು. ಕೋವಿಡ್ ಸಮಯದಲ್ಲಿ ವರುಣ್ ತಂದೆ ಅನಾರೋಗ್ಯದಿಂದ ನಿಧನರಾದರು. ಕಟ್ಟುನಿಟ್ಟಿನ ರೂಲ್ಸ್ ಇದ್ದರೂ ಮನೆ ನಡೆಸಲು ಆರ್ಥಿಕ ಸಮಸ್ಯೆ ಇದ್ದಿದ್ದರಿಂದ ಆಟೋ ಓಡಿಸುತ್ತಿದ್ದರು. ಬೆಳಗ್ಗೆ ಹೋದರೆ ರಾತ್ರಿಯೇ ಮನೆಗೆ ವಾಪಸ್ ಆಗುತ್ತಿದ್ದರು. ಅದೇ ಸಮಯದಲ್ಲಿ ಅನಾರೋಗ್ಯದಿಂದ ನಿಧನರಾದರು. ತಂದೆ ಅಗಲಿದ ನಂತರ ಮನೆಯ ಸಂಪೂರ್ಣ ಜವಾಬ್ದಾರಿ ವರುಣ್ ಆರಾಧ್ಯ ಹೇಗಲೇರಿದೆ. ಜೊತೆಗೆ ಅಕ್ಕನ ಮದುವೆ ಕೂಡಾ ಮಾಡಿದ್ದಾರೆ. ಈ ವಿಚಾರವನ್ನು ವರುಣ್ ಅನೇಕ ಇಂಟರ್‌ವ್ಯೂನಲ್ಲಿ ಹೇಳಿಕೊಂಡಿದ್ದಾರೆ.
ತಂದೆ ನಾಗರಾಜ್ ಸಮಾಧಿಗೆ ಪೂಜೆ
ಗುರುವಾರ, ದೀಪಾವಳಿ ಹಬ್ಬದಂದು ತಾತ, ಅಜ್ಜಿ, ತಂದೆಗೆ ಎಡೆ ಇಟ್ಟು ಪೂಜೆ ಮಾಡಿರುವ ವಿಡಿಯೋವನ್ನು ವರುಣ್ ಆರಾಧ್ಯ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ತಂದೆ ಫೋಟೋ ಒರೆಸಿ ಕುಂಕುಮ ಹಚ್ಚಿ ಪೂಜೆ ಮಾಡಿದ್ದಾರೆ. ಮನೆಗೆ ಸ್ನೇಹಿತರನ್ನು ಆಹ್ವಾನಿಸಿದ್ದಾರೆ. ತಂದೆ ಸಮಾಧಿಗೆ ಹೋಗುವ ಮಧ್ಯೆ ಅವರು, ಮೊದಲ ಬಾರಿ ಮೊಬೈಲ್ ಕೊಡಿಸಿದ್ದನ್ನು ನೆನೆಪಿಸಿಕೊಂಡಿದ್ದಾರೆ. ಅಪ್ಪ ಆ ದಿನ ನನಗೆ ಮೊಬೈಲ್ ಕೊಡಿಸಿದ್ದರಿಂದಲೇ ನಾನು ಈಗ ಒಂದು ಹಂತಕ್ಕೆ ಬಂದಿದ್ದೇನೆ ಎಂದು ತಂದೆಯನ್ನು ನೆನಪಿಸಿಕೊಳ್ಳುತ್ತಾರೆ. ಅಪ್ಪನ ಸಮಾಧಿ ಬಳಿ ಹೋಗಿ ಪೂಜೆ ಮಾಡಿದ್ದಾರೆ. ಆಗ ಆರ್ಥಿಕ ಸಮಸ್ಯೆ ಇದ್ದರಿಂದ ಸಿಂಪಲ್ ಆಗಿ ಸಮಾಧಿ ಕಟ್ಟಿದ್ದೆವು. ಈಗ ಅಮ್ಮ ಓಕೆ ಎಂದರೆ ಇಲ್ಲೊಂದು ದೇವಸ್ಥಾನ ಕಟ್ಟುತ್ತೇನೆ ಎಂದು ಅಕ್ಕನ ಜೊತೆ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.
4 ಲಕ್ಷ ಸಬ್ಸ್‌ಕ್ರೈಬರ್ ಆಗಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ವರುಣ್
ಅಪ್ಪ ಹೋಗಿದ್ದಾರೆ, ನಾಳೆ ನಾವು ಹೋಗಬಹುದು ಎಲ್ಲರಿಗೂ ಒಂದು ಸಮಯ ಬಂದೇ ಬರುತ್ತದೆ, ಆದ್ದರಿಂದ ಇರುವವರೆಗೂ ಖುಷಿಯಾಗಿರಿ, ಯಾರಿಗೂ ತೊಂದರೆ ಕೊಡಬೇಡಿ ಎಂದು ವರುಣ್ ಆರಾಧ್ಯ, ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. ತಂದೆ ಸಮಾಧಿಗೆ ಪೂಜೆ ಮಾಡಿ ಅಕ್ಕನ ಹೊಟ್ಟೆಯಲ್ಲಿ ತಂದೆಯೇ ಮಗನಾಗಿ ಜನಿಸಲಿ ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ವರುಣ್ ಹಂಚಿಕೊಂಡಿರುವ ವಿಡಿಯೋಗೆ ಫಾಲೋವರ್‌ಗಳು ಲೈಕ್ ಕೊಟ್ಟು, ಕಾಮೆಂಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೀರಿ, ನಮ್ಮೆಲ್ಲರ ಪ್ರೀತಿ , ಹಾರೈಕೆ ನಿಮ್ಮೊಂದಿಗೆ ನಿಮ್ಮ ಕುಟುಂಬದೊಂದಿಗೆ ಸದಾ ಇರುತ್ತದೆ ಎಂದಿದ್ದಾರೆ. 4 ಲಕ್ಷ ಸಬ್ಸ್‌ಕ್ರೈಬರ್ ಆಗಿದ್ದಕ್ಕೆ ವರುಣ್ ಸಂತೋಷ ವ್ಯಕ್ತಪಡಿಸಿದ್ದು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.