ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿ ಮತ್ತೆ ಟ್ರೋಲ್ ಆದ ನಟ ಜಗ್ಗೇಶ್; ಆನೆ ಆಗೋಕೆ ಮಾತ್ರವಲ್ಲ ಶ್ವಾನ ಆಗೋಕೂ ಯೋಗ, ಯೋಗ್ಯತೆ ಬೇಕು ಎಂದ ಜನ
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್ ಮತ್ತೆ ಮತ್ತೆ ಟ್ರೋಲ್ ಆಗುತ್ತಲೇ ಇದ್ದಾರೆ. ಆನೆ ಆಗೋಗೆ ಯೋಗ ಬೇಕು ಎಂದೆಲ್ಲಾ ಟ್ವೀಟ್ ಮಾಡಿದ ಜಗ್ಗೇಶ್‌ಗೆ ಜನರು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶ್ವಾನ ಆಗಲು ಕೂಡಾ ಯೋಗ್ಯತೆ ಬೇಕು ಎಂದಿದ್ದಾರೆ.
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಯಾಗುತ್ತಿದೆ. ಅಷ್ಟು ಪ್ರತಿಭಾನ್ವಿತ ನಿರ್ದೇಶಕ ಈ ರೀತಿ ದುರಂತ ಅಂತ್ಯ ಕಂಡಿದ್ದು ಎಲ್ಲರಿಗೂ ಬೇಸರ ಉಂಟಾಗಿದೆ. ಗುರುಪ್ರಸಾದ್, ಆತ್ಮಹತ್ಯೆಯಂತ ನಿರ್ಧಾರಕ್ಕೆ ಬರಬಾರದಿತ್ತು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಜಗ್ಗೇಶ್ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದ ನೆಟಿಜನ್ಸ್
ಮಠ ಚಿತ್ರದಲ್ಲಿ ನಟಿಸಿದ್ದ ಜಗ್ಗೇಶ್ ಗುರುಪ್ರಸಾದ್ ಅವರ ಸಾವಿನ ವಿಚಾರವಾಗಿ ಬಹಳ ಟ್ರೋಲ್ ಆಗುತ್ತಲೇ ಇದ್ದಾರೆ. ಗುರುಪ್ರಸಾದ್ ನಮ್ಮ ಜೊತೆ ಇದ್ದಾಗ ಎಲ್ಲವೂ ಸರಿ ಇತ್ತು. ಅದರೆ ನಂತರ ಅವನು ಬೇರೆಯವರ ಸಹವಾಸಕ್ಕೆ ಬಿದ್ದು ಹಾಳಾದ. ಕುಡಿತದ ಚಟಕ್ಕೆ ದಾಸನಾದ, ಎರಡನೇ ಮದುವೆ ಆದ. ಸಾಲ ಮಾಡಿದ, ಅವನಿಗೆ ಸೋರಿಯಾಸಿಸ್ ಇತ್ತು. ಹೇಳದೆ ಕೇಳದೆ ಬಂದು ನಮ್ಮ ತಟ್ಟೆಗೆಲ್ಲಾ ಕೈ ಹಾಕಿಬಿಡುತ್ತಿದ್ದ, ಮೊದಲೆಲ್ಲಾ ಸೆಟ್‌ಗೆ ಪುಸ್ತಕ ಹಿಡಿದು ಬರುತ್ತಿದ್ದವನು ನಂತರ ಮದ್ಯದ ಬಾಟಲಿ ಹಿಡಿದು ಬರುತ್ತಿದ್ದ, ನಾನು ಬಹಳ ಬುದ್ಧಿ ಹೇಳಿದ್ದೆ. ರಂಗನಾಯಕ ಸಿನಿಮಾ ಮಾಡಿ ಎಲ್ಲರಿಂದ ನನಗೆ ಬೈಯಿಸಿ ಹೋದ ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಜಗ್ಗೇಶ್ ಅವರ ಮಾತಿಗೆ ಎಲ್ಲರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸತ್ತ ವ್ಯಕ್ತಿಯ ಬಗ್ಗೆ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದಿದ್ದರು. ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದರು. ಕಾಮೆಂಟ್‌ಗಳಿಗೆ, ಟ್ರೋಲರ್‌ಗಳಿಗೆ ಪ್ರತಿಕ್ರಿಯಿಸಿದ್ದ ಜಗ್ಗೇಶ್ ಬುಧವಾರ ಟ್ವೀಟ್ ಮಾಡಿ ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ ಅದಕ್ಕೆ Scientific ಕಾರಣ "ಭಯ". ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ ಆನೆ ಮಾತ್ರ ಮುಗಿಲೆತ್ತರ ಬೆಳೆದಿದೆ ಎಂಬ ಸಂಕಟ. ತಾತ್ಪರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು ಎಂದು ಬರೆದುಕೊಂಡಿದ್ದರು. ಜೊತೆಗೆ ತಮಗೆ ಬೈದವರನ್ನು ಸೋಷಿಯಲ್ ಮೀಡಿಯಾದಿಂದ ಬ್ಲಾಕ್ ಮಾಡಿದ್ದರು.
ಶ್ವಾನ ಆಗಲೂ ಯೋಗ್ಯತೆ ಬೇಕು ಎಂದ ಜನರು
ಈ ರೀತಿ ಟ್ವೀಟ್ ಮಾಡಿ ಇದೀಗ ಜಗ್ಗೇಶ್ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಜಗ್ಗೇಶ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನೆಟಿಜನ್ಸ್, ಆದರೂ ಸತ್ತವರ ಬಗ್ಗೆ ಕೆಟ್ಟದಾಗಿ ಮಾತಾಡೋದು ತಪ್ಪಲ್ಲವೇ ಅಣ್ಣ? ರೀ ಸ್ವಾಮಿ ನಿಮಗೆ ಏನು ನೈತಿಕತೆ ಇದೆ ಅಂತ ಗುರುಪ್ರಸಾದ್ ಅವರ ಬಗ್ಗೆ, ಅದು ಸತ್ತಿರುವ ವ್ಯಕ್ತಿಯ ಬಗ್ಗೆ ಮಾತಾಡುತ್ತೀರಿ..?, ಸರ್ ನಿಮ್ಮ ಚಲನಚಿತ್ರಗಳನ್ನ ನೋಡಿ ನಕ್ಕು ಬೆಳೆದವರು ನಾವು! ನಾನು ಸಹ ನಿಮ್ಮ ಹಾಸ್ಯದ ಟೈಮಿಂಗಿನ ಅಭಿಮಾನಿ! ನಿಮ್ಮ ಹೇಳಿಕೆಗಳು ನಿಜವಿರಬಹುದು, ಆದರೆ ಈ ಬಾರಿ ಟೈಮಿಂಗ್ ಸರಿಯಿಲ್ಲ! ಬಹಳಷ್ಟು ಜನ ನಿಮ್ಮ ಬಗ್ಗೆ ವ್ಯಂಗ್ಯ ಮಾಡ್ತಾ ಇರೋರು ಟೀಕಿಸುತ್ತಿರುವವರು ಸಹ ಚಿಕ್ಕ ಹುಡುಗರೇ! ಚಿಕ್ಕ ಹುಡುಗರ ಮಾತಿಗೆ ಬೇಸರಗೊಂಡು, ಬ್ಲಾಕ್ ಮಾಡುವುದನ್ನು ನಿಲ್ಲಿಸಿ! Take a break! Find some peace!ರಾಯರು ಎಲ್ಲರಿಗೂ ಒಳ್ಳೇದ್ ಮಾಡ್ಲಿ, ಜಗ್ಗಣ್ಣ ಇಲ್ಲಿ ಆನೆ ಯಾರು, ಶ್ವಾನ ಯಾರು? ಆನೆ ಆಗೋಕೂ, ಶ್ವಾನ ಆಗೋಕೂ ಯೋಗ್ಯತೆ ಬೇಕು. ನಿಮಗೆ ಆನೆ ಗಾಂಭೀರ್ಯನೂ ಇಲ್ಲ, ಶ್ವಾನದ ನಿಯತ್ತು ಇಲ್ಲ ನೀವು ಎಲ್ಲಂದ್ರಲ್ಲಿ ಲದ್ದಿ ಹಾಕ್ತಿರಾ, ಎಲ್ಲಂದ್ರಲ್ಲಿ ಬೊಗುಳ್ತೀರ ಅಷ್ಟೇ. ಅದ್ಕೆ scientific ಕಾರಣ "ಸಂಸ್ಕಾರ ಇಲ್ದಿರೋದು"
ತಾತ್ಪರ್ಯ: 1.ಉದ್ದುದ್ದ ಮಾತಿನವರ ಮೊಳಕೈ ಮೊಂಡ
2.ಆಡೋದು ಮಡಿ ಉಂಬೋದು ಮೈಲಿಗೆ ಎಂದೆಲ್ಲಾ ನೆಟ್ಟಿಗರು ಮತ್ತೆ ಜಗ್ಗೇಶ್ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.