ತಾನೇ ಪಾಶ್ ಸಮಿತಿ ರಚಿಸಿ, ತಾನೇ ತಡೆ ಹಿಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ; ತರಾತುರಿಯಲ್ಲಿ ಸಮಿತಿ ರಚನೆಯಾಗಿದ್ದು ಯಾಕೆ?
Dec 03, 2024 09:33 AM IST
ತಾನೇ ಸಮಿತಿ ರಚಿಸಿ, ತಾನೇ ತಡೆ ಹಿಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು 11 ಸದಸ್ಯರ POSH ಸಮಿತಿಯೊಂದನ್ನು ರಚಿಸಿತ್ತು. ಈಗ ಚುನಾವಣೆಯ ನೆಪವೊಡ್ಡಿ ಆ ಸಮಿತಿಯನ್ನು ತಡೆ ಹಿಡಿದಿದೆ. ತರಾತುರಿಯಲ್ಲಿ ಸಮಿತಿ ರಚನೆಯಾಗಿದ್ದು ಯಾಕೆ? ಇದೇನು ಕಣ್ಣೊರೆಸುವ ತಂತ್ರವಾ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
POSH committee: ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕಲಾವಿದರು, ತಂತ್ರಜ್ಞರು ಹಾಗೂ ರಕ್ಷಣೆಗಾಗಿ ಪಾಶ್ ಸಮಿತಿಯನ್ನು (Prevention of Sexual Harassment Committee -POSH) ರಚಿಸಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಒತ್ತಾಯಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು 11 ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಈಗ ಚುನಾವಣೆಯ ನೆಪವೊಡ್ಡಿ ಆ ಸಮಿತಿಯನ್ನು ತಡೆ ಹಿಡಿದಿದೆ.
ಚಿತ್ರರಂಗಲ್ಲಿ ಮಹಿಳೆಯರು ಎದುರಿಸುತತಿರುವ ಸಮಸ್ಯೆಗಳ ಅಧ್ಯಯನಕ್ಕೆ ಕೇರಳ ಸರ್ಕಾರವು ಕೆಲವು ವರ್ಷಗಳ ಹಿಂದೆ ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ರಚಿಸಿತ್ತು. ಕೆಲವು ತಿಂಗಳುಗಳ ಹಿಂದೆ ಈ ಸಮತಿಯ ವರದಿ ಬಹಿರಂಗಗೊಂಡಿತ್ತು. ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲೂ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು ಎಂದು ಫೈರ್ (Film Industry For Rights and Equality - FIRE) ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಪಾಶ್ ಸಮಿತಿ ರಚಿಸಬೇಕೆಂದು ಆಗ್ರಹಿಸಿತ್ತು. ಈ ಸಮಿತಿ ರಚನೆಗೆ ಮಂಡಳಿ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು. 15 ದಿನಗಳಲ್ಲಿ ಸಮಿತಿ ರಚನೆ ಆಗಬೇಕು ಎಂದು ಆಯೋಗವು ವಾಣಿಜ್ಯ ಮಂಡಳಿಗೆ ಗಡುವು ನೀಡಿತ್ತು. ಆದರೆ, ಗಡುವು ನೀಡಿ ಎರಡು ತಿಂಗಳಾದರೂ ವಾಣಿಜ್ಯ ಮಂಡಳಿಯಿಂದ ಯಾವುದೇ ಉತ್ತರ ಬರದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಒತ್ತಡ ಹೆಚ್ಚಾದ ಕಾರಣ ಮಂಡಳಿಯ ಅಧ್ಯಕ್ಷ ಎನ್.ಎಂ. ಸುರೇಶ್, ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ 11 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದರು.
ಈ ಸಮಿತಿಯಲ್ಲಿ ಕವಿತಾ ಲಂಕೇಶ್ ಜೊತೆಗೆ ವಾಣಿಜ್ಯ ಮಂಡಳಿಯ ಆಯಾ ಅವಧಿಯ ಚುನಾಯಿತ ಅಧ್ಯಕ್ಷರು, ನಟಿ ಪ್ರಮಿಳಾ ಜೋಷಾಯ್, ಪತ್ರಕರ್ತ ಮುರಳೀಧರ್ ಖಜಾನೆ, ವಕೀಲೆ ರಾಜಲಕ್ಷ್ಮೀ ಅಂಕಲಗಿ, ನಿರ್ಮಾಪಕರಾದ ಎನ್.ಎಂ. ಸುರೇಶ್, ಸಾ.ರಾ. ಗೋವಿಂದು, ಮಹಿಳಾ ಹಕ್ಕು ಹೋರಾಟಗಾರ್ತಿ ವಿಮಲಾ ಕೆ.ಎಸ್, ನಟಿ ಶ್ರುತಿ ಹರಿಹರರನ್, ರಂಗಕರ್ಮಿ ಶಶಿಕಾಂತ್ ಯಡಹಳ್ಳಿ ಮತ್ತು ಟ್ರಾನ್ಸ್ಜೆಂಡರ್ ಆಕ್ಟಿವಿಸ್ಟ್ ಮಲ್ಲು ಕಂಬಾರ್ ಇದ್ದರು. ವಿಚಿತ್ರವೆಂದರೆ, ಈ ಸಮಿತಿ ರಚಿಸಬೇಕು ಎಂದಾಗ ಇದಕ್ಕೆ ಸುರೇಶ್ ಮತ್ತು ಸಾ.ರಾ. ಗೋವಿಂದು ಸಹ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಅವರೇ ಈ ಸಮಿತಿಯಲ್ಲಿ ಇದ್ದಾರೆ.
ಹೀಗೆ ತಾನೇ ಆಯ್ಕೆ ಮಾಡಿದ ಸಮಿತಿಯನ್ನು, ಇದೀಗ ವಾಣಿಜ್ಯ ಮಂಡಳಿ ತಡೆ ಹಿಡಿದಿದೆ. ಅದಕ್ಕೆ ಕಾರಣ ಚುನಾವಣೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಚುನಾವಣೆ ಡಿ. 14ಕ್ಕೆ ನಿಗದಿಯಾಗಿದೆ. ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ, ಪಾಶ್ ಸಮಿತಿ ರಚನೆಯನ್ನು ತಡೆ ಹಿಡಿಯಲಾಗಿದೆ. ಎನ್.ಎಂ. ಸುರೇಶ್ ಅಧ್ಯಕ್ಷರಾಗಿ ಸಹಿ ಮಾಡಿದರೆ, ಅದು ಊರ್ಜಿತವಾಗುವುದಿಲ್ಲವಾದ್ದರಿಂದ ಚುನಾವಣೆ ಬಳಿಕ ಸಮಿತಿ ರಚನೆಯಾಗಲಿದೆಯಂತೆ. ಹಾಗಾದರೆ, ತರಾತುರಿಯಲ್ಲಿ ಸಮಿತಿ ರಚನೆಯಾಗಿದ್ದು ಯಾಕೆ? ಇದೇನು ಕಣ್ಣೊರೆಸುವ ತಂತ್ರವಾ? ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: ಸೀತಾ ರಾಮ ಧಾರಾವಾಹಿ ಡೈಲಾಗ್ ರೈಟರ್ ಚೈತ್ರಿಕಾ ಹೆಗಡೆ ಸಂದರ್ಶನ; ಮುದ್ದು ಕಣ್ಮಣಿ ಸಿಹಿ ಬಗ್ಗೆ ಹೇಳಿದ್ದೇನು ನೋಡಿ