Raayan: ರಾಯನ್ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರಕಾಶ್ ರಾಜ್- ಧನುಷ್; ಫಸ್ಟ್ ಲುಕ್ ಬಿಡುಗಡೆ
Feb 25, 2024 03:36 PM IST
Raayan: ರಾಯನ್ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರಕಾಶ್ ರಾಜ್- ಧನುಷ್; ಫಸ್ಟ್ ಲುಕ್ ಬಿಡುಗಡೆ
- ಪ್ರಕಾಶ್ ರಾಜ್ ಹಾಗೂ ಧನುಷ್ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಕಮಾಲ್ ಮಾಡಿದ್ದರು. ಅಪ್ಪ ಮಗನಾಗಿ ಪ್ರೇಕ್ಷಕರನ್ನು ರಂಜಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈಗ ರಾಯನ್ ಚಿತ್ರದ ಮೂಲಕ ಮತ್ತೊಂದು ಸುಂದರ ಪಯಣಕ್ಕೆ ಧನುಷ್ -ಪ್ರಕಾಶ್ ರಾಜ್ ಸಜ್ಜಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ಅವರ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ ಧನುಷ್.
Raayan movie Prakash Raj first Look: ಕನ್ನಡದ ನಟ, ಪರಭಾಷೆಗಳಲ್ಲಿಯೂ ಕರುನಾಡನ್ನು ಪ್ರತಿನಿಧಿಸುವ ಪ್ರಕಾಶ್ ರಾಜ್, ತಮ್ಮ ಅಭಿನಯದ ಮೂಲಕವೇ ಎಲ್ಲರನ್ನು ಸೆಳೆದವರು. ಯಾವುದೇ ಪಾತ್ರ ಕೊಟ್ಟರು ಅವರು ಲೀಲಾಜಾಲವಾಗಿ ನಟಿಸುತ್ತಾರೆ. ಕೆಲವೊಮ್ಮೆ ಭಾರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಪಾತ್ರ ಚಿಕ್ಕದೇ ಇರಲಿ, ದೊಡ್ಡದೇ ಇರಲಿ ಅದಕ್ಕೆ ಪ್ರಕಾಶ್ ರಾಜ್ ನ್ಯಾಯ ಒದಗಿಸುತ್ತಾರೆ. ಹೀಗಾಗಿ ಕಾಲಿವುಡ್ ನಟ ಧನುಷ್ ತಮ್ಮ ನಿರ್ದೇಶನದಲ್ಲಿ ಪ್ರಕಾಶ್ ರಾಜ್ ಅವರಿಗೊಂದು ತೂಕದ ಪಾತ್ರವನ್ನೇ ನೀಡಿದ್ದಾರೆ.
2017ರಲ್ಲಿ ತೆರೆಕಂಡ ‘ಪಾ ಪಾಂಡಿ’ ಸಿನಿಮಾದ ಮೂಲಕ ಪ್ರಕಾಶ್ ರಾಜ್ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಒಂದಷ್ಟು ಗ್ಯಾಪ್ ಬಳಿಕ ನಿಲವುಕ್ಕು ಎನ್ ಮೆಲ್ ಎನ್ನಡಿ ಕೋಬಮ್ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇದೀಗ ರಾಯನ್ ಚಿತ್ರದ ಮೂಲಕ ಧನುಷ್ ಮತ್ತೊಮ್ಮ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಇದು ಅವರ 50ನೇ ಚಿತ್ರ ಅನ್ನೋದು ವಿಶೇಷ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಮೂಡಿ ಬರ್ತಿರುವ ರಾಯನ್ ಬಳಗಕ್ಕೀಗ ಕನ್ನಡದ ಪ್ರಕಾಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ.
ಪ್ರಕಾಶ್ ರಾಜ್ ಹಾಗೂ ಧನುಷ್ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಕಮಾಲ್ ಮಾಡಿದ್ದರು. ಅಪ್ಪ ಮಗನಾಗಿ ಪ್ರೇಕ್ಷಕರನ್ನು ರಂಜಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈಗ ರಾಯನ್ ಚಿತ್ರದ ಮೂಲಕ ಮತ್ತೊಂದು ಸುಂದರ ಪಯಣಕ್ಕೆ ಧನುಷ್ ಪ್ರಕಾಶ್ ರಾಜ್ ಸಜ್ಜಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ಅವರ ಆನ್ ಬೋರ್ಡ್ ಲುಕ್ ಹಂಚಿಕೊಂಡು ಧನುಷ್ ತಮ್ಮ ತಂಡಕ್ಕೆ ಸ್ವಾಗತಿಸಿದ್ದಾರೆ.
ಕುರ್ಚಿ ಮೇಲೆ ಕುಳಿತಿರುವ ಪ್ರಕಾಶ್ ರಾಜ್ ಯಾವುದೋ ಗಾಢ ಯೋಚನೆಯಲ್ಲಿ ಮಗ್ನರಾಗಿದ್ದಾರೆ. ಪೋಸ್ಟರ್ ನಲ್ಲಿ ಕಪ್ಪು ಬೆಳಕಿನ ಆಟವಿದೆ. ಎ.ಆರ್ ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ತಯಾರಾಗುತ್ತಿರುವ ರಾಯನ್ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ.
ದರ್ಶನ್ ತಗಡು ಹೇಳಿಕೆಗೆ ಪ್ರಕಾಶ್ ರಾಜ್ ಏನಂದ್ರು
"ಇಬ್ಬರ ಭಾಷೆ ಸರಿ ಇಲ್ಲ. ಕನ್ನಡ ಭಾಷೆಯನ್ನು ನೀವು ಅಪ್ಪಾಜಿ ಹತ್ರ ಕಲೀಬೇಕು. ಭಾಷೆ ಅಂದ್ರೆ ಬರೀ, ಕನ್ನಡ ಮಾತನಾಡೋದಲ್ಲ. ಅದರೊಳಗಿನ ವಿನಯ, ಅದರೊಳಗಿನ ಅಗಾಧ ಜ್ಞಾನ, ನಿಮ್ಮ ಅನುಭವ, ನಿಮ್ಮ ಮಾತಿನ ಮೂಲಕ ನಿಮ್ಮ ಸೌಂದರ್ಯ ಹೊರಗಡೆಗೆ ಬರುತ್ತೆ. ಸುಮ್ನೆ ಮಾತನಾಡೋದಲ್ಲ. ಅದು ಕಿರಿಕಿರಿಯಾಗುತ್ತೆ. ಯಾರು ಏನು ಹೇಳಿದ್ರು ಅನ್ನೋದು ಮುಖ್ಯ ಅಲ್ಲ. ಇಬ್ಬರ ಭಾಷೆ ತಪ್ಪಾಗಿದೆ. ಕೇಳೋಕೆ ಕಷ್ಟವಾಗುತ್ತೆ. ಮುಜುಗರ ಆಗುತ್ತೆ. ನಮ್ಮಂಥವರಿಗಂತೂ ಮುಜುಗರ ಆಗುತ್ತೆ. ಅಪ್ಪಾಜಿ ಅವರು ಹೇಗೆ ಮಾತಾಡ್ತಿದ್ರು? ಅವರ ನಿಲುವುಗಳು ಏನಿದ್ವು? ಅದು ಮುಖ್ಯ ಅಲ್ಲ. ಆ ಭಾಷೆಯಲ್ಲಿದ್ದ ಧೀಮಂತಿಕೆ. ಒಂದು ಘನತೆ, ಒಂದು ಗಾಂಭೀರ್ಯ, ಒಂದು ಪ್ರೀತಿ, ಅಗಾಧ ಜ್ಞಾನ, ಅನುಭವಕ್ಕೆ ತಕ್ಕಹಾಗೆ ಇರಬೇಕು" ಎಂದಿದ್ದಾರೆ.
"ಜನರ ಪ್ರೀತಿ ಕಲಾವಿದನಿಗೆ ಸಿಕ್ತಾ ಸಿಕ್ತಾ ಹೋದಂತೆ, ಅವನು ಸುಂದರವಾಗಬೇಕೇ ಹೊರತು ಅಸಹ್ಯ ಆಗಬಾರದು! ಯಾರು ಸರಿ, ಯಾರದ್ದು ತಪ್ಪು ಎಂಬುದು ಮುಖ್ಯ ಅಲ್ಲ. ಒಬ್ಬ ಪ್ರೇಕ್ಷಕನಾಗಿ, ಒಬ್ಬ ಪ್ರಜೆಯಾಗಿ, ಒಂದು ಕುಟುಂಬದ ಸದಸ್ಯನಾಗಿ ನನಗೆ ಆ ಭಾಷೆ ಇಷ್ಟ ಆಗಲ್ಲ. ಅದರಲ್ಲೂ ವೇದಿಕೆ ಮೇಲೆ ಯಾವಾಗಲೂ ಚೆನ್ನಾಗಿಯೇ ಮಾತನಾಡಬೇಕು. ಯಾರ್ಯಾರೋ ಮಾತನಾಡ್ತಾರೆ ಅಂತ, ನಾವೂ ಮಾತನಾಡೋಕೆ ಆಗಲ್ಲ. ಪ್ರೀತಿಯಿಂದ ಒಂದು ಸ್ಥಾನದಲ್ಲಿ ನಿಲ್ಲಿಸಿರ್ತಾರೆ. ನಾವು ಅವರಿಗೆ ಮಾದರಿಯಾಗಬೇಕು. ನಮ್ಮ ಮಾತುಗಳ ಮೂಲಕ, ನಮ್ಮ ಅನುಭವಗಳ ಮೂಲಕ, ನಾವು ಹಂಚಿಕೊಳ್ಳುವ ವಿಷಯದ ಮೂಲಕ.. ಜನ ಎಲ್ಲರಿಗೂ ಆ ಸ್ಥಾನ ಕೊಡಲ್ಲ. ನಿಮ್ಮ ಮಾತನ್ನು ಕೇಳುವಷ್ಟು ಜನ ಅಲ್ಲಿದ್ದಾಗ, ಭಾಷೆಯ ಮೇಲೆ ಹಿಡಿತ ಇರಬೇಕು. ಅದಕ್ಕಾಗಿ ನಿಮ್ಮೊಳಗಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು" ಎಂದಿದ್ದಾರೆ ಪ್ರಕಾಶ್ ರಾಜ್.