‘ಜನ್ರ ಪ್ರೀತಿ ಸಿಗ್ತಿದ್ದಂತೆ ಸುಂದರವಾಗಬೇಕೇ ಹೊರತು, ಅಸಹ್ಯ ಆಗ್ಬಾರ್ದು!’ ದರ್ಶನ್ ‘ತಗಡು’ ಮಾತಿಗೆ ಪ್ರಕಾಶ್ ರಾಜ್ ಬೇಸರ
ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ನಡುವಿನ ಕಿತ್ತಾಟಕ್ಕೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ಭಾಷೆ ತಪ್ಪಾಗಿದೆ. ಕೇಳೋಕೆ ಕಷ್ಟವಾಗುತ್ತೆ. ಮುಜುಗರ ಆಗುತ್ತೆ ಎಂದು ಬೇಸರ ಹೊರಹಾಕಿದ್ದಾರೆ. ಡಾ. ರಾಜ್‌ಕುಮಾರ್ ಹೇಗಿದ್ದರು, ಹೇಗೆ ಮಾತನಾಡಬೇಕು ಎಂದು ಅವರನ್ನು ನೋಡಿಯಾದರೂ ಕಲಿಯಬೇಕು ಎಂದಿದ್ದಾರೆ
Prakasha Raj on Darshan: ತಮ್ಮ ನೇರ ನಿಲುವುಗಳನ್ನು ಅಷ್ಟೇ ನೀಟಾಗಿ ಎಲ್ಲರ ಮುಂದೆ ಹೇಳಿಕೊಳ್ಳುತ್ತಿರುತ್ತಾರೆ ಬಹುಭಾಷಾ ನಟ ಪ್ರಕಾಶ್ ರಾಜ್. ಯಾರ ಭಾವನೆಗೂ ಧಕ್ಕೆ ತರದಂತೆ, ಹೇಳಬೇಕಾಗಿದ್ದ ವಿಷಯವನ್ನು ಅಷ್ಟೇ ನಾಜೂಕಾಗಿಯೇ ತೆರೆದಿಡುತ್ತಾರೆ. ಆಡುವ ಮಾತಲ್ಲೂ ಅಷ್ಟೇ ಗಂಭೀರವಾಗಿರುತ್ತಾರೆ. ಇದೀಗ ಇದೇ ಪ್ರಕಾಶ್ ರಾಜ್, ಸ್ಯಾಂಡಲ್‌ವುಡ್‌ನಲ್ಲಿನ ಇತ್ತೀಚಿನ ದರ್ಶನ್ ಮತ್ತು ಉಮಾಪತಿ ಬಗೆಗಿನ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಾಟೇರ ಸಿನಿಮಾ ಶೀರ್ಷಿಕೆ ವಿಚಾರವಾಗಿ ಶುರುವಾದ ಈ ವಾದ ವಿವಾದ, ಇದೀಗ ದೂರು ನೀಡುವ ವರೆಗೂ ಹೋಗಿದೆ. ನಿರ್ಮಾಪಕ ಉಮಾಪತಿ ಪರವಾಗಿ ಒಕ್ಕಲಿಗ ಸಮುದಾಯ ಒಟ್ಟಾಗಿ ದರ್ಶನ್ ವಿರುದ್ಧ ತಿರುಗಿ ಬಿದ್ದಿದೆ. ತಗಡು, ಗುಮ್ಮಿಸ್ಕೋತಿಯ ಎಂಬ ಪದ ಬಳಕೆ ಮಾಡಿದ್ದಕ್ಕೆ ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ದೂರು ನೀಡಿದ್ದಾರೆ. ಇದೊಂದು ಕಡೆಯಾದರೆ, ಇವತ್ತು ಇವಳು, ನಾಳೆ ಅವಳು ಎಂಬ ದರ್ಶನ್ ಮಾತಿಗೂ ಮಹಿಳೆಯರೂ ಕೆಂಡ ಕಾರುತ್ತಿದ್ದಾರೆ.
ಹೀಗೆ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಈ ವಿಚಾರದ ಬಗ್ಗೆ ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಷ್ಟೇ ಫೋಟೋ ಶೀರ್ಷಿಕೆಯ ಸಿನಿಮಾವನ್ನು ಪ್ರಸೆಂಟ್ ಮಾಡುತ್ತಿದ್ದಾರೆ. ಆ ಸಿನಿಮಾದ ವಿಚಾರವಾಗಿ ನಡೆದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಬ್ಬರ ಭಾಷೆ ತಪ್ಪಾಗಿದೆ. ಕೇಳೋಕೆ ಕಷ್ಟವಾಗುತ್ತೆ. ಮುಜುಗರ ಆಗುತ್ತೆ ಎಂದು ಬೇಸರ ಹೊರಹಾಕಿದ್ದಾರೆ. ಡಾ. ರಾಜ್‌ಕುಮಾರ್ ಹೇಗಿದ್ದರು, ಹೇಗೆ ಮಾತನಾಡಬೇಕು ಎಂದು ಅವರನ್ನು ನೋಡಿಯಾದರೂ ಕಲಿಯಬೇಕು ಎಂದಿದ್ದಾರೆ
ಅಂಥ ಮಾತು ಕೇಳೋಕೆ ಕಷ್ಟವಾಗುತ್ತೆ!
"ಇಬ್ಬರ ಭಾಷೆ ಸರಿ ಇಲ್ಲ. ಕನ್ನಡ ಭಾಷೆಯನ್ನು ನೀವು ಅಪ್ಪಾಜಿ ಹತ್ರ ಕಲೀಬೇಕು. ಭಾಷೆ ಅಂದ್ರೆ ಬರೀ, ಕನ್ನಡ ಮಾತನಾಡೋದಲ್ಲ. ಅದರೊಳಗಿನ ವಿನಯ, ಅದರೊಳಗಿನ ಅಗಾಧ ಜ್ಞಾನ, ನಿಮ್ಮ ಅನುಭವ, ನಿಮ್ಮ ಮಾತಿನ ಮೂಲಕ ನಿಮ್ಮ ಸೌಂದರ್ಯ ಹೊರಗಡೆಗೆ ಬರುತ್ತೆ. ಸುಮ್ನೆ ಮಾತನಾಡೋದಲ್ಲ. ಅದು ಕಿರಿಕಿರಿಯಾಗುತ್ತೆ. ಯಾರು ಏನು ಹೇಳಿದ್ರು ಅನ್ನೋದು ಮುಖ್ಯ ಅಲ್ಲ. ಇಬ್ಬರ ಭಾಷೆ ತಪ್ಪಾಗಿದೆ. ಕೇಳೋಕೆ ಕಷ್ಟವಾಗುತ್ತೆ. ಮುಜುಗರ ಆಗುತ್ತೆ. ನಮ್ಮಂಥವರಿಗಂತೂ ಮುಜುಗರ ಆಗುತ್ತೆ. ಅಪ್ಪಾಜಿ ಅವರು ಹೇಗೆ ಮಾತಾಡ್ತಿದ್ರು? ಅವರ ನಿಲುವುಗಳು ಏನಿದ್ವು? ಅದು ಮುಖ್ಯ ಅಲ್ಲ. ಆ ಭಾಷೆಯಲ್ಲಿದ್ದ ಧೀಮಂತಿಕೆ. ಒಂದು ಘನತೆ, ಒಂದು ಗಾಂಭೀರ್ಯ, ಒಂದು ಪ್ರೀತಿ, ಅಗಾಧ ಜ್ಞಾನ, ಅನುಭವಕ್ಕೆ ತಕ್ಕಹಾಗೆ ಇರಬೇಕು" ಎಂದಿದ್ದಾರೆ.
ನೋಡುಗರಿಗೆ ಅಸಹ್ಯ ಅನಿಸಬಾರದು..
"ಜನರ ಪ್ರೀತಿ ಕಲಾವಿದನಿಗೆ ಸಿಕ್ತಾ ಸಿಕ್ತಾ ಹೋದಂತೆ, ಅವನು ಸುಂದರವಾಗಬೇಕೇ ಹೊರತು ಅಸಹ್ಯ ಆಗಬಾರದು! ಯಾರು ಸರಿ, ಯಾರದ್ದು ತಪ್ಪು ಎಂಬುದು ಮುಖ್ಯ ಅಲ್ಲ. ಒಬ್ಬ ಪ್ರೇಕ್ಷಕನಾಗಿ, ಒಬ್ಬ ಪ್ರಜೆಯಾಗಿ, ಒಂದು ಕುಟುಂಬದ ಸದಸ್ಯನಾಗಿ ನನಗೆ ಆ ಭಾಷೆ ಇಷ್ಟ ಆಗಲ್ಲ. ಅದರಲ್ಲೂ ವೇದಿಕೆ ಮೇಲೆ ಯಾವಾಗಲೂ ಚೆನ್ನಾಗಿಯೇ ಮಾತನಾಡಬೇಕು. ಯಾರ್ಯಾರೋ ಮಾತನಾಡ್ತಾರೆ ಅಂತ, ನಾವೂ ಮಾತನಾಡೋಕೆ ಆಗಲ್ಲ. ಪ್ರೀತಿಯಿಂದ ಒಂದು ಸ್ಥಾನದಲ್ಲಿ ನಿಲ್ಲಿಸಿರ್ತಾರೆ. ನಾವು ಅವರಿಗೆ ಮಾದರಿಯಾಗಬೇಕು. ನಮ್ಮ ಮಾತುಗಳ ಮೂಲಕ, ನಮ್ಮ ಅನುಭವಗಳ ಮೂಲಕ, ನಾವು ಹಂಚಿಕೊಳ್ಳುವ ವಿಷಯದ ಮೂಲಕ.. ಜನ ಎಲ್ಲರಿಗೂ ಆ ಸ್ಥಾನ ಕೊಡಲ್ಲ. ನಿಮ್ಮ ಮಾತನ್ನು ಕೇಳುವಷ್ಟು ಜನ ಅಲ್ಲಿದ್ದಾಗ, ಭಾಷೆಯ ಮೇಲೆ ಹಿಡಿತ ಇರಬೇಕು. ಅದಕ್ಕಾಗಿ ನಿಮ್ಮೊಳಗಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು" ಎಂದಿದ್ದಾರೆ ಪ್ರಕಾಶ್ ರಾಜ್.