Bhairathi Ranagal Vs Kanguva: ಬೆಂಗಳೂರಲ್ಲಿ ತಮಿಳಿನ ಕಂಗುವ ಸಿನಿಮಾಕ್ಕೇ ಹೆಚ್ಚು ಶೋಗಳು, ಭೈರತಿ ರಣಗಲ್ ಚಿತ್ರಕ್ಕೆ ಸಿಕ್ಕಿದ್ದೆಷ್ಟು?
Nov 12, 2024 03:45 PM IST
ಬೆಂಗಳೂರಲ್ಲಿ ತಮಿಳಿನ ಕಂಗುವ ಸಿನಿಮಾಕ್ಕೇ ಹೆಚ್ಚು ಶೋಗಳು
- Theatrical Releases This Week: ಈ ವಾರ (ನ. 14, 15) ಬೇರೆ ಬೇರೆ ಭಾಷೆಗಳ ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿವೆ. ತಮಿಳಿನ ಕಂಗುವ, ಹಿಂದಿಯ ದಿ ಸಾಬರಮತಿ ರಿಪೋರ್ಟ್, ಹಾಲಿವುಡ್‌ನ ಗ್ಲಾಡಿಯೇಟರ್ 2, ತೆಲುಗಿನ ಮಟ್ಕಾ ಸೇರಿ ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ. ಆ ಪೈಕಿ ಕನ್ನಡದಲ್ಲಿ ಭೈರತಿ ರಣಗಲ್ ರಿಲೀಸ್ ಆಗಲಿದೆ.
Kanguva Vs Bhairathi Ranagal: ಈ ವಾರ ಸ್ಯಾಂಡಲ್‌ವುಡ್ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಗಳ ಹಲವು ಸಿನಿಮಾಗಳು ಚಿತ್ರಮಂದಿರಕ್ಕೆ ಎಂಟ್ರಿಕೊಡುತ್ತಿವೆ. ದೊಡ್ಡ ಮಟ್ಟದ ಕ್ರೇಜ್ ಪಡೆದ ಸಿನಿಮಾಗಳಿಗೆ ಬೆಂಗಳೂರು ದೊಡ್ಡ ಮಾರುಕಟ್ಟೆ! ಅದರಲ್ಲೂ ಪಕ್ಕದ ತೆಲುಗು ಮತ್ತು ತಮಿಳು ಸಿನಿಮಾಗಳಿಗೆ, ಬೆಂಗಳೂರಿನಲ್ಲಿ ಡಿಮಾಂಡ್ ಜಾಸ್ತಿ. ಕನ್ನಡ ಸಿನಿಮಾಗಳಿಗಿಂತ ತಮಿಳು, ತೆಲುಗು, ಹಿಂದಿ ಸಿನಿಮಾಗಳಿಗೇ ಇಲ್ಲಿ ಹೆಚ್ಚು ಬೇಡಿಕೆ. ಶೋಗಳ ಸಂಖ್ಯೆಯ ವಿಚಾರದಲ್ಲಿ ಈಗಾಗಲೇ ಅದು ಹಲವು ಬಾರಿ ಸಾಬೀತಾಗಿದೆ. ಈಗ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಪ್ಯಾನ್ ಇಂಡಿಯಾ ಭೈರತಿ ರಣಗಲ್ ಸಿನಿಮಾ ಮತ್ತು ತಮಿಳು ಸ್ಟಾರ್ ನಟ ಸೂರ್ಯ ಅಭಿನಯದ ಕಂಗುವ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ.
ಭೈರತಿ ರಣಗಲ್‌ಗೆ ಹೇಗಿದೆ ರೆಸ್ಪಾನ್ಸ್
ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಹೈಪ್ ಸೃಷ್ಟಿಸಿ ಬಿಡುಗಡೆ ಆಗುತ್ತಿರುವ ಸಿನಿಮಾ ಭೈರತಿ ರಣಗಲ್. ಈ ಹಿಂದೆ ತೆರೆಕಂಡಿದ್ದ ಮಫ್ತಿ ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ನರ್ತನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಈ ಗಟ್ಟಿ ಕಥೆಗೆ ಗೀತಾ ಪಿಕ್ಚರ್ಸ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ನವೆಂಬರ್ 15ರಂದು ಬಿಡುಗಡೆ ಆಗುತ್ತಿದೆ. ಖಳನಾಗಿ ಬಾಲಿವುಡ್ ನಟ ರಾಹುಲ್ ಬೋಸ್ ಕಾಣಿಸಿಕೊಂಡರೆ, ನಾಯಕಿಯಾಗಿ ರುಕ್ಮಿಣಿ ವಸಂತ್ ಶಿವಣ್ಣನಿಗೆ ಜೋಡಿಯಾಗಿದ್ದಾರೆ. ಮೊದಲ ಭಾಗದ ಒಂದಷ್ಟು ಕಲಾವಿದರು ಈ ಸಿನಿಮಾದಲ್ಲಿ ಮುಂದುವರಿದಿದ್ದಾರೆ.
2D 3Dಯಲ್ಲಿ ಕಂಗುವ ರಿಲೀಸ್
ಇತ್ತ ಕಂಗುವ ಸಿನಿಮಾ ಶಿವ ನಿರ್ದೇಶನದಲ್ಲಿ ಮೂಡಿಬಂದಿದೆ. ನಟ ಸೂರ್ಯ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಕಂಗುವ ಚಿತ್ರ ನವೆಂಬರ್ 14ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಸುಮಾರು 6000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರವನ್ನು ಕರ್ನಾಟಕದಲ್ಲಿ ಕೆವಿಎನ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ವಿಶೇಷ ಏನೆಂದರೆ 2D ಮತ್ತು 3Dಯಲ್ಲಿಯೂ ಈ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಟ್ರೇಲರ್ ಮೂಲಕ ಹೈಪ್ ಹೆಚ್ಚಿಸಿಕೊಂಡರುವ ಈ ಸಿನಿಮಾವನ್ನು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಸೂರ್ಯ ಕಾಣಿಸಿಕೊಂಡರೆ, ಖಳನಾಗಿ ಬಾಬಿ ಡಿಯೋಲ್, ದಿಶಾ ಪಟಾನಿ , ನಟರಾಜನ್ ಸುಬ್ರಮಣ್ಯಂ , ಯೋಗಿ ಬಾಬು, ಕೋವೈ ಸರಳಾ, ಆನಂದರಾಜ್, ಕೆ.ಎಸ್ ರವಿಕುಮಾರ್ ಇತರರು ನಟಿಸಿದ್ದಾರೆ.
ಮುಂಗಡ ಬುಕಿಂಗ್‌ನಲ್ಲಿ ಯಾರು ಮುಂದೆ?
ಬೆಂಗಳೂರಿನಲ್ಲಿ ಈ ಎರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿವೆ. ಶಿವರಾಜ್‌ಕುಮಾರ್ ಅವರ ಭೈರತಿ ರಣಗಲ್ ಸಹ ಅಷ್ಟೇ ಟ್ರೆಂಡ್ ಕ್ರಿಯೇಟ್ ಮಾಡಿದೆ. ಈ ಎರಡು ಸಿನಿಮಾಗಳ ಶೋಗಳ ಪೈಪೋಟಿಯನ್ನು ಗಮನಿಸಿದರೆ, ಕರುನಾಡಲ್ಲಿ ತಮಿಳಿನ ಕಂಗುವ ಚಿತ್ರವೇ ಮುಂದಿದೆ. ಮೂಲ ಕನ್ನಡದ ಭೈರತಿ ರಣಗಲ್ ಸಿನಿಮಾಕ್ಕೆ ತವರಿನಲ್ಲಿಯೇ ಕಡಿಮೆ ಶೋಗಳು ಸಿಕ್ಕಿವೆ. ತಮಿಳು ವರ್ಷನ್‌ನ ಕಂಗುವ ಚಿತ್ರಕ್ಕೆ ಬೆಂಗಳೂರಿನಲ್ಲಿ 200ಕ್ಕೂ ಅಧಿಕ ಶೋಗಳು ಸಿಕ್ಕರೆ, ಅದೇ ಕನ್ನಡದ ಅವತರಣಿಕೆಗೆ ಕೇವಲ 41 ಶೋಗಳು ಪ್ರಾಪ್ತವಾಗಿವೆ. ಭೈರತಿ ರಣಗಲ್ ಸಿನಿಮಾಕ್ಕೆ 90 ಪ್ಲಸ್ ಶೋಗಳು ಮಾತ್ರ ಸಿಕ್ಕಿವೆ. (ನವೆಂಬರ್ 12ರ 3:30ರ ಲೆಕ್ಕಾಚಾರದ ಪ್ರಕಾರ)
ಈ ಸಿನಿಮಾಗಳ ಜತೆಗೆ ಹಿಂದಿ ದಿ ಸಾಬರಮತಿ ರಿಪೋರ್ಟ್ ಸೇರಿ, ಹಾಲಿವುಡ್‌ನ ಗ್ಲಾಡಿಯೇಟರ್ 2, ತೆಲುಗಿನ ಮಟ್ಕಾ ಸೇರಿ ಇನ್ನೂ ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ.