ಹೊಸ ಕುದುರೆಗಳ ಮೇಲೆ ಮತ್ತೆ ಬೆಟ್ ಕಟ್ಟಿದ ಯೋಗರಾಜ್ ಭಟ್; ‘ಮನದ ಕಡಲು’ ಸಿನಿಮಾದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ನೋಡಿ
Nov 28, 2024 08:33 AM IST
ಹೊಸ ಕುದುರೆಗಳ ಮೇಲೆ ಮತ್ತೆ ಬೆಟ್ ಕಟ್ಟಿದ ಯೋಗರಾಜ್ ಭಟ್
- ಯೋಗರಾಜ್ ಭಟ್‌ರ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾ 'ಮನದ ಕಡಲು' ತೆರೆ ಕಾಣಲು ರೆಡಿಯಾಗುತ್ತಿದೆ. ‘ಮುಂಗಾರು ಮಳೆ’ ಮತ್ತು ‘ಮೊಗ್ಗಿನ ಮನಸ್ಸು’ ಚಿತ್ರಗಳ ನಂತರ ಈ ಬಾರಿ ಸಹ ಹೊಸ ಕುದುರೆಗಳ ಜೊತೆಗೆ ಸಿನಿಮಾ ಮಾಡೋಣ ಎಂದು ಇ. ಕೃಷ್ಣಪ್ಪ ಮೊದಲೇ ಹೇಳಿದ್ದರಂತೆ.
‘ಕರಟಕ ದಮನಕ’ ಚಿತ್ರದ ನಂತರ ಮುಂದೇನು ಎಂಬ ಪ್ರಶ್ನೆ ಕೇಳಿಬರುವಾಗಲೇ, ಇ. ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ಒಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಂದಿತ್ತು. ಆದರೆ, ಆ ಚಿತ್ರದ ಹೆಸರೇನು? ಕಥೆಯೇನು? ಯಾರು ನಟಿಸುತ್ತಿದ್ದಾರೆ? ಎಂಬ ವಿಷಯವನ್ನೆಲ್ಲಾ ಅವರು ರಹಸ್ಯವಾಗಿಟ್ಟಿದ್ದರು. ಈಗ ಅದು ಕೊನೆಗೂ ಬುಧವಾರ (ನವೆಂಬರ್ 27) ಸಂಜೆ ಬಹಿರಂಗವಾಗಿದೆ.
‘ಮುಂಗಾರು ಮಳೆ’ ಮತ್ತು ‘ಮೊಗ್ಗಿನ ಮನಸ್ಸು’ ಚಿತ್ರಗಳ ನಂತರ ಈ ಬಾರಿ ಸಹ ಹೊಸ ಕುದುರೆಗಳ ಜೊತೆಗೆ ಸಿನಿಮಾ ಮಾಡೋಣ ಎಂದು ಇ. ಕೃಷ್ಣಪ್ಪ ಮೊದಲೇ ಹೇಳಿದ್ದರಂತೆ. ‘ಕೃಷ್ಣಪ್ಪ ಮೊದಲೇ ಹೊಸ ಕುದುರೆ ಜೊತೆಗೇ ಸಿನಿಮಾ ಮಾಡೋಣ ಎಂದರು. ಹೊಸಬರ ಜೊತೆಗೆ ಸಿನಿಮಾ ಮಾಡೋದು ಸುಲಭವಲ್ಲ. ಹೊಸಬರನ್ನು ಇಟ್ಟುಕೊಂಡು ಯಾವ ತರಹದ ಕಥೆ ಹೇಳಬೇಕು? ಅದು ಕನೆಕ್ಟ್ ಆಗುತ್ತದಾ? ಎರಡೂವರೆ ಗಂಟೆ ಅವರಿಗೆ ಪ್ರೇಕ್ಷಕರನ್ನು ಕೂರಿಸಿಕೊಳ್ಳುವುದಕ್ಕೆ ಸಾಧ್ಯವಾ? ಮುಂತಾದ ಎಲ್ಲಾ ವಿಷಯಗಳನ್ನು ಗಮನಿಸಬೇಕು. ಜೊತೆಗೆ ಹೊಸಬರಿಗೆ ಪ್ಯಾಶನ್ ಮತ್ತು ಹಸಿವು ಇರಬೇಕು. ಇವೆಲ್ಲವನ್ನೂ ಯೋಚಿಸಬೇಕು. ಹಾಗಾದಾಗ, ಮಾತ್ರ ಹೊಸದೇನೋ ಹುಟ್ಟುವುದಕ್ಕೆ ಸಾಧ್ಯ. ಹೊಸಬರ ಜೊತೆಗೆ ಕೆಲಸ ಮಾಡುವುದರಿಂದ ತುಂಬಾ ಕಲಿಯುತ್ತೇವೆ. ಅವರ ಎನರ್ಜಿ ಲೆವೆಲ್ ಅದ್ಭುತವಾಗಿರುತ್ತದೆ. ಇವತ್ತಿನ ಯುವಕರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದರೆ ಅವರ ಸಹವಾಸ ಮಾಡಬೇಕು’ ಎನ್ನುತ್ತಾರೆ ಯೋಗರಾಜ್ ಭಟ್.
ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ‘ಮನದ ಕಡಲು’ ಎಂಬ ಹೆಸರನ್ನು ಇಡಲಾಡಗಿದೆ. ಚಿತ್ರವನ್ನು ಇ.ಕೆ. ಎಂಟರ್‍ಟೈನರ್ಸ್ ಸಂಸ್ಥೆಯಡಿ ಇ. ಕೃಷ್ಣಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಟಿಸಿರುವ, ಆದರೂ ಹೊಸಬರೇ ಆಗಿರುವ ಸುಮುಖ, ಅಂಜಲಿ ಅನೀಶ್ ಮತ್ತು ರಾಶಿಕಾ ಚಿತ್ರದಲ್ಲಿ ನಾಯಕ-ನಾಯಕಿಯರಾಗಿ ನಟಿಸಿದರೆ, ದತ್ತಣ್ಣ, ರಂಗಾಯಣ ರಘು ಮುಂತಾದ ಹಿರಿಯರಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.
ಹೊಸ ಹಾಗೂ ಹಳೆ ಕಲಾವಿದರ ಸಂಗಮ
ಒಂದು ಕಡೆ ಹೊಸಬರು, ಇನ್ನೊಂದು ಕಡೆ ಹಿರಿಯರು. ಒಂದು ಕಡೆ ಆಧುನಿಕತೆ, ಇನ್ನೊಂದು ಕಡೆ ಆದಿವಾಸಿ ಜನಾಂಗದ ಕಥೆ. ಈ ಬಾರಿ ಯೋಗರಾಜ್ ಭಟ್ ಏನು ಹೇಳೋಕೆ ಹೊರಟಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಚಿತ್ರದಲ್ಲಿ ಆ ವ್ಯತಿರಿಕ್ತ ವಿಷಯವನ್ನೇ ಹೇಳುತ್ತಾರೆ. ‘ಆಧುನಿಕ ಮನೋಭಾವದ ಯುವಜನಾಂಗ ತಾವೆಲ್ಲಾ ರೀತಿಯಲ್ಲೂ ಶ್ರೇಷ್ಠ ಎಂದು ಭಾವಿಸಿರುತ್ತಾರೆ. ಆದರೆ, ಹಿಂದುಳಿದವರು ಎನ್ನುವ ಆದಿವಾಸಿಗಳ ಎದುರು ಇವರು ಎಷ್ಟು ಕೆಳಗೆ ಬಿದ್ದಿದ್ದಾರೆ ಎಂದು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಇಲ್ಲಿ ರಂಗಾಯಣ ರಘು ಆದಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹೊಸ ಭಾಷೆ ಸೃಷ್ಟಿ ಮಾಡಿದ್ದೇವೆ. ರಂಗಾಯಣ ರಘು ಸಹ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ’ ಎಂದರು ಭಟ್.
ಇದು ಕಡಲಿನ ಕಥೆ
ಈ ಚಿತ್ರದಲ್ಲಿ ಕಡಲು ಒಂದು ಪ್ರಮುಖ ಪಾತ್ರ ವಹಿಸುತ್ತದಂತೆ. ಈ ಕುರಿತು ಮಾತನಾಡುವ ಭಟ್, ‘ಕಡಲಿಗೆ ಒಂದು ಕಾವು ಇದೆ. ಅದು ಸಿಹಿಯಲ್ಲ. ನದಿ ಅಥವಾ ಝರಿಯ ತರಹ ಮಧುರವಲ್ಲ. ಕಡಲು ನೋಡಿದರೆ ಕೀಳರಿಮೆ ಬರುತ್ತದೆ. ಪ್ರಕೃತಿ ಮುಂದೆ ನಾವೆಷ್ಟು ಚಿಕ್ಕವರು ಎಂದನಿಸುತ್ತದೆ. ಈ ಚಿತ್ರದ ಆರಂಭ, ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್ನಲ್ಲಿ ಕಡಲು ಬರುತ್ತದೆ. ಚಿತ್ರದ ಪಾತ್ರಗಳು ಕಡಲು ನೋಡಿ ಹೇಗೆ ತಮ್ಮ ಬದುಕನ್ನು ಹೇಗೆ ರಿಪೇರಿ ಮಾಡಿಕೊಳ್ಳುತ್ತಾರೆ ಎನ್ನುವುದು ಚಿತ್ರದ ಕಥೆ. ನನಗೂ ಸಮುದ್ರ ಹೊಸದು. ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಕಡಲನ್ನು ಇಷ್ಟೊಂದು ಬಳಸಿಕೊಂಡಿದ್ದೇನೆ’ ಎಂದಿದ್ದಾರೆ.
ಎಲ್ಲೆಲ್ಲಿ ಚಿತ್ರೀಕರಣ ಮಾಡಿದ್ದಾರೆ?
‘ಮನದ ಕಡಲು’ ಚಿತ್ರಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ‘ಅದರಲ್ಲೂ ಕರ್ನಾಟಕದ 12 ಜಿಲ್ಲೆಗಳಲ್ಲಿ ಜಿತ್ರೀಕರಣ ಮಾಡಿದ್ದೇವೆ. ಮಹಾರಾಷ್ಟ್ರದ ಮುರುಡ್ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದಕ್ಕೆ 15 ರೀತಿಯ ಪರ್ಮಿಷನ್ ಬೇಕು. ಅದೊಂದು ಯುದ್ಧ ಮಾಡಿದ ಅನುಭವ. ಬಿಸಿಲು, ರಣಮಳೆಯ ನಡುವೆ ಚಿತ್ರೀಕರಣ ಸುಲಭವಲ್ಲ. ದೃಶ್ಯಗಳು ಬಹಳ ಚೆನ್ನಾಗಿ ಮೂಡಿಬಂದಿವೆ. ಈಗಾಗಲೇ ಶೇ. 95ರಷ್ಟು ಚಿತ್ರೀಕರಣಣ ಮುಗಿದಿದೆ. ಉಳಿದ ಚಿತ್ರೀಕರಣ ಮುಗಿಸಿ, ಆದಷ್ಟು ಬೇಗ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: Lakshmi Baramma Serial: ಲಾಯರ್ ಮುಂದೆ ಸತ್ಯ ಒಪ್ಪಿಕೊಂಡ ಕಾವೇರಿ; ಕೀರ್ತಿ ಕೊಲೆ ಮಾಡಿದ್ದು ಇವಳೇ