ಬೆಟ್ಟದ ಹೂವು ಅಪ್ಪುವನ್ನೇ ಹೋಲುತ್ತಾನೆ ಕುಂದಾಪುರದ ಈ ಪುಟ್ಟ ಪೋರ! ಧ್ವನಿಯೂ ಪುಟಾಣಿ ಪುನೀತ್ ರಾಜ್‌ಕುಮಾರ್ ರೀತಿ
Nov 23, 2024 04:11 PM IST
ಬೆಟ್ಟದ ಹೂವು ಅಪ್ಪುವನ್ನೇ ಹೋಲುತ್ತಾನೆ ಕುಂದಾಪುರದ ಈ ಪುಟ್ಟ ಪೋರ!
- Puneeth Rajkumar: ಅಭಿಷೇಕ್ ತೀರ್ಥಹಳ್ಳಿ ಎಂಬುವವರು ಕುಂದಾಪುರ ಬಳಿಯ ರಟ್ಟಾಡಿಯಲ್ಲಿ ಪುಟಾಣಿ ಅಪ್ಪುವನ್ನೇ ಹೋಲುವ ಬಾಲಕನ ಜತೆಗೆ ಮಾತಿಗಿಳಿದಿದ್ದಾರೆ. ಆ ವಿಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇ ತಡ, ಸಾಕಷ್ಟು ಮಂದಿ ಈ ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿದಂತಾಯ್ತು ಎಂದಿದ್ದಾರೆ.
Puneeth Rajkumar: ಸೆಲೆಬ್ರಿಟಿ ವಲಯದಲ್ಲಿ ಥೇಟ್ ಒಬ್ಬ ಕಲಾವಿದನನ್ನು ಹೋಲುವ ರೀತಿಯ ಸಾಕಷ್ಟು ಜನರಿದ್ದಾರೆ. ಶಾರೀರಿಕವಾಗಿ ಮಾತ್ರವಲ್ಲದೆ, ಅವರ ಧ್ವನಿಯನ್ನೂ ಅನುಕರಣೆ ಮಾಡುತ್ತ, ಅವರ ಆಂಗಿಕ ಭಾಷೆಯನ್ನೂ ರೂಢಿಸಿಕೊಂಡು, ವೇದಿಕೆ ಕಾರ್ಯಕ್ರಮಗಳಲ್ಲಿಯೂ ಮಿಂಚುತ್ತ, ವೃತ್ತಿಯನ್ನಾಗಿಯೂ ಮಾಡಿಕೊಂಡ ಎಷ್ಟೋ ಜನರಿದ್ದಾರೆ. ಅಣ್ಣಾವ್ರಿಂದ ಹಿಡಿದು, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್ ಸೇರಿ ಕನ್ನಡದ ಘಟಾನುಘಟಿ ನಟರನ್ನೇ ಹೋಲುವವರಿದ್ದಾರೆ. ಈಗ ಇಲ್ಲೊಬ್ಬ ಪುಟ್ಟ ಪೋರ, ಥೇಟ್ ಪುಟಾಣಿ ಅಪ್ಪುವನ್ನೇ ಹೋಲುತ್ತಿದ್ದಾನೆ!
ಪುನೀತ್ ರಾಜ್‌ಕುಮಾರ್ ಕಾಲವಾದ ಬಳಿಕ ಅವರನ್ನೇ ಹೋಲುವ ಒಂದಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದರು. ಹಾವ ಭಾವದ ಜತೆಗೆ ಮಾತನಾಡುವ ಶೈಲಿಯೂ ಪುನೀತ್ ಅವರನ್ನು ನೆನಪಿಸಿತ್ತು. ಈಗ ಅದೇ ಪುನೀತ್ ಪುಟಾಣಿಯಾಗಿದ್ದಾಗ ಹೇಗಿದ್ದರೋ, ಅಂಥ ಪುಟ್ಟ ಪೋರ ಸೋಷಿಯಲ್ ಮೀಡಿಯಾದಲ್ಲಿ ಕಣ್ಣಿಗೆ ಬಿದ್ದಿದ್ದಾನೆ. ಅರೇ ಕ್ಷಣ, ಎಲ್ಲರನ್ನು ಮತ್ತೆ ಬಾಲ್ಯಕ್ಕೆ ಕರೆದೊಯ್ದಿದ್ದಾನೆ. ಅಷ್ಟಕ್ಕೂ ಆ ಪೋರ ಯಾರು, ಯಾವ ಊರಿನವನು? ಇಲ್ಲಿದೆ ಮಾಹಿತಿ.
ಬಾಲ ನಟನಾಗಿಯೇ ಅಪ್ಪು ಹೆಚ್ಚು ಆಪ್ತ
ಪುನೀತ್ ರಾಜ್‌ಕುಮಾರ್ ಕರುನಾಡ ಮನೆ ಮಗನಾಗಲು ಕಾರಣ, ಬಾಲನಟನಾಗಿ ನಟಿಸಿದ ಅವರ ಸಿನಿಮಾಗಳು. ಚಿಕ್ಕಂದಿನಿಂದಲೇ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ಮಾಸ್ಟರ್ ಲೋಹಿತ್, ಅಪ್ಪ ಡಾ. ರಾಜ್‌ಕುಮಾರ್ ಜತೆಗೆ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಚಲಿಸುವ ಮೋಡಗಳು, ಭಾಗ್ಯವಂತ, ಬೆಟ್ಟದ ಹೂವು, ವಸಂತ ಗೀತ, ಹೊಸ ಬೆಳಕು, ಭಕ್ತ ಪ್ರಹ್ಲಾದ ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈ ನಡುವೆ ಮಾಸ್ಟರ್ ಲೋಹಿತ್ ಅವರನ್ನೇ ಹೋಲುವ ಮಣಿಕಂಠ ಎದುರಾಗಿದ್ದಾನೆ.
ಮಣಿಕಂಠನಲ್ಲಿ ಕಂಡ ಮಾಸ್ಟರ್ ಲೋಹಿತ್
ಅಭಿಷೇಕ್ ತೀರ್ಥಹಳ್ಳಿ ಎಂಬುವವರು ಪುಟಾಣಿ ಅಪ್ಪುವನ್ನೇ ಹೋಲುವ ಬಾಲಕನ ಜತೆಗೆ ಮಾತಿಗಿಳಿದಿದ್ದಾರೆ. ಆ ವಿಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕುಂದಾಪುರ ಬಳಿಯ ರಟ್ಟಾಡಿಗೆ ಆಗಮಿಸಿ, ಗ್ರಾಮೀಣ ಭಾಗದ ಮಕ್ಕಳಿಗೆ ಕಲೆಯನ್ನು ತಿಳಿಸುವ ಪ್ರಾಜೆಕ್ಟ್ ಜತೆಗೆ ಬಂದಿದ್ದೇವೆ. ಹೀಗಿರುವಾಗಲೇ ಇಲ್ಲೊಬ್ಬ ಹುಡುಗ ಇದ್ದಾನೆ ನೋಡಿ. ಸುಮ್ನೆ ನೋಡಿ, ಥೇಟ್ ಅಪ್ಪು ಸರ್ ಥರಾನೇ ಕಾಣ್ತಾನೆ. ನಿನ್ನನ್ನ ನೋಡಿ ಎಷ್ಟು ಖುಷಿಯಾಯ್ತು ಗೊತ್ತಾ? ಥೇಟ್ ಪುನೀತ್ ಸರ್ ಚಿಕ್ಕಂದಿನಲ್ಲಿ ಹೇಗಿದ್ದರೋ ಹಾಗೇ ಇದ್ದೀಯಾ ಎಂದಿದ್ದಾರೆ. ಬಳಿಕ ನಿನ್ನ ಹೆಸರೇನು ಎಂದೆಲ್ಲ ಕೇಳಿದ್ದಾರೆ. ಅದಕ್ಕೆ "ನನ್ನ ಹೆಸರು ಮಣಿಕಂಠ" ಎಂದಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಈ ವಿಡಿಯೋ ನೋಡುಗರ ಹೃದಯ ಕದ್ದಿದೆ. ಸಾಕಷ್ಟು ಮಂದಿ ಬಗೆಬಗೆ ಕಾಮೆಂಟ್ ಮೂಲಕ ಮತ್ತೆ ಪುಟಾಣಿ ಅಪ್ಪುವನ್ನು ನೋಡಿದಂತಾಯ್ತು ಎನ್ನುತ್ತಿದ್ದಾರೆ.
- "ನೋಡೋಕೆ ಅಷ್ಟೇ ಅಲ್ಲ ಅಪ್ಪು ಸರ್ ತರ .... ವಾಯ್ಸ್ ಕೂಡ ಹಾಗೆ ಇದೆ"
- ಬೆಟ್ಚದ ಹೂ
- ಅಹ್ ಹುಡುಗನ ನೋಡುವಾಗ ಕಣ್ಣಲ್ಲಿ ನೀರ್ ಬಂತು..
- ನಾನು ಮೊದ್ಲು ನೋಡಿದಾಗ ನಿಜ ಅಪ್ಪು ಅನ್ಕೊಂಡ್ ಬಿಟ್ಟೆ
- ಮತ್ತೆ ಹುಟ್ಟಿ ಬನ್ನಿ ಸರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್