ಕನ್ನಡ ಬೈಗುಳ ಪದಗಳು: ಸೆಡೆ ಪದದ ಅರ್ಥವೇನು? ಬಿಗ್‌ಬಾಸ್‌ ಕನ್ನಡದಲ್ಲಿ ರಜತ್‌ ಕಿಶನ್‌ ಬಳಸಿದ ಪದ ಅಶ್ಲೀಲವೇ, ಬೈಗುಳವೇ ತಿಳಿಯಿರಿ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ಬೈಗುಳ ಪದಗಳು: ಸೆಡೆ ಪದದ ಅರ್ಥವೇನು? ಬಿಗ್‌ಬಾಸ್‌ ಕನ್ನಡದಲ್ಲಿ ರಜತ್‌ ಕಿಶನ್‌ ಬಳಸಿದ ಪದ ಅಶ್ಲೀಲವೇ, ಬೈಗುಳವೇ ತಿಳಿಯಿರಿ

ಕನ್ನಡ ಬೈಗುಳ ಪದಗಳು: ಸೆಡೆ ಪದದ ಅರ್ಥವೇನು? ಬಿಗ್‌ಬಾಸ್‌ ಕನ್ನಡದಲ್ಲಿ ರಜತ್‌ ಕಿಶನ್‌ ಬಳಸಿದ ಪದ ಅಶ್ಲೀಲವೇ, ಬೈಗುಳವೇ ತಿಳಿಯಿರಿ

ಕನ್ನಡ ಬೈಗುಳ ಪದಗಳು: ಇತ್ತೀಚೆಗೆ ಬಿಗ್‌ಬಾಸ್‌ ಕನ್ನಡದಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಜತ್ "ಸೆಡೆ" ಎಂಬ ಪದ ಬಳಸಿದಾಗ ಗೋಲ್ಡ್‌ ಸುರೇಶ್‌ ಆಕ್ರೋಶಗೊಂಡು ಮನೆಯಿಂದ ಹೊರಹೋಗಲು ಮುಂದಾಗಿದ್ದರು. ಹಾಗಾದರೆ, ಈ ಪದದ ಅರ್ಥವೇನು? ಇದು ಅಶ್ಲೀಲ ಪದವೇ, ಕೆಟ್ಟ ಬೈಗುಳವೇ? ತಿಳಿಯೋಣ ಬನ್ನಿ.

ಕನ್ನಡ ಬೈಗುಳ ಪದಗಳು: ಸೆಡೆ ಪದದ ಅರ್ಥವೇನು?
ಕನ್ನಡ ಬೈಗುಳ ಪದಗಳು: ಸೆಡೆ ಪದದ ಅರ್ಥವೇನು?

ಕನ್ನಡ ಬೈಗುಳ ಪದಗಳು: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭವಾಗಿ 50 ದಿನಗಳು ಕಳೆದಿವೆ.ಈ ಸಮಯದಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಎಂಟ್ರಿಯಾದ ಬಳಿಕ ಮನೆಯೊಳಗಿನ ಆಟ ಬದಲಾಗಿವೆ. ಮೊದಲ ದಿನ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾ ಶೆಟ್ಟಿ ಮಂಜು ವಿರುದ್ಧ ಅಬ್ಬರಿಸಿದ್ದರು. ಮತ್ತೊಂದು ದಿನ ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಜತ್‌ ಕಿಶನ್‌ ಅವರು ಗೋಲ್ಡ್‌ ಸುರೇಶ್‌ ವಿರುದ್ಧ ಆಟದ ರೋಷದಲ್ಲಿ ಸೆಡೆ ಎಂಬ ಪದ ಬಳಸಿದ್ದರು. ಬೆಂಗಳೂರು, ಮಂಡ್ಯ ಸೇರಿದಂತೆ ಕೆಲವು ಕಡೆ ಈ ಪದಗಳನ್ನು ಜನರು ದಿನನಿತ್ಯ ಕೇಳುತ್ತಿರಬಹುದು. ಆದರೆ, ಉಳಿದ ಕಡೆಯ ಸಾಕಷ್ಟು ಜನರಿಗೆ ಈ ಪದದ ಅರ್ಥವೇನು? ಇದು ಡಬಲ್‌ ಮೀನಿಂಗ್‌ ಅರ್ಥವನ್ನು ಹೊಂದಿರುವುದೇ? ಇದು ಕೊಳಕು ಬೈಗುಳವೇ? ಇತ್ಯಾದಿ ಪ್ರಶ್ನೆಗಳು ಇರುವುದು ಸಹಜ. ಯಾವುದೇ ಬೈಗುಳ ಪದದ ಅರ್ಥ ಹುಡುಕಲು ಹೊರಡದೆ ಇರುವುದು ಒಳ್ಳೆಯದು ಎನ್ನುವುದು ಸಾಕಷ್ಟು ಜನರ ಅಭಿಪ್ರಾಯ. ಯಾಕೆಂದರೆ, ಕೆಲವು ಬೈಗುಳಗಳು ಅತ್ಯಂತ ಕೆಟ್ಟ ಅರ್ಥ ಹೊಂದಿರುತ್ತವೆ. ಆದರೆ, ಸೆಡೆ ಎಂಬ ಪದ ಮೇಲ್ನೋಟಕ್ಕೆ ಅಂತಹ ಕೆಟ್ಟ, ಕೊಳಕು ಅರ್ಥ ಹೊಂದಿಲ್ಲ ಎನ್ನಬಹುದು. ಇದು ಒಂದು ನಿಂದನಾ ಪದ ಎನ್ನಬಹುದು. ಅಂದರೆ, ತನ್ನ ಎದುರಿಗೆ ಇರುವವರನ್ನು ನಿಂದಿಸಿ ಮಾತನಾಡುವಂತಹ, ಕೆಳಮಟ್ಟಕ್ಕೆ ಇಳಿಸಿ ಮಾತನಾಡುವಂತಹ ಪದ ಎನ್ನಬಹುದು.

ಸೆಡೆ ಪದದ ಅರ್ಥವೇನು?

ಬಿಗ್‌ಬಾಸ್‌ ಕನ್ನಡದಲ್ಲಿ ರಜತ್‌ ಈ ಪದ ಬಳಕೆ ಮಾಡುವ ಮೊದಲೇ ಇಂಟರ್‌ನೆಟ್‌ ಲೋಕದಲ್ಲಿ ಈ ಪದದ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಸೆಡೆ ಪದದ ಅರ್ಥವೇನು ಎಂದು ಹುಡುಕಾಟ ನಡೆಸಿದ್ದಾರೆ. ಜನರು "ಸೆಡೆ ಪದದ ಅರ್ಥ, ಸೆಟೆಪದದ ಅರ್ಥ" ಎಂದೆಲ್ಲ ಸರ್ಚ್‌ ಮಾಡಿದ್ದಾರೆ.

ಜಿ.ವಿ. ಕನ್ನಡ ನಿಘಂಟು: ಸೆಡೆ ಎಂದರೇನು?

ಜಿ.ವಿ. ಕನ್ನಡ ನಿಘಂಟು ಪ್ರಕಾರ ಸೆಡೆ ಪದದ ಅರ್ಥ " ಉಬ್ಬು, ದಪ್ಪವಾಗು, ಗರ್ವಿಸು, ಅಹಂಕರಿಸು, ನಿಗುರು, ನೆಟ್ಟಗಾಗು, ಕುಗ್ಗು, ವಕ್ರವಾಗು, ಸಂಕೋಚಗೊಳ್ಳು, ಮುದುರು, ನಡುಗು, ಅದುರು, ತೂಗು, ತೊನೆ, ಹೆದರು, ಭಯಪಡು" ಎಂದಾಗಿದೆ. ಒಟ್ಟಾರೆ ಹೆಚ್ಚು ನಿಗರಾಡುವವರಿಗೆ ಈ ಪದ ಬಳಸುವಂತೆ ಇದೆ.

ಪದಾರ್ಥ ಚಿಂತಾಮಣಿ ಗ್ರೂಪ್‌ನಲ್ಲಿ ಸೆಡೆ ಪದದ ಚರ್ಚೆ

ಆಸಕ್ತಿದಾಯ ಸಂಗತಿಯೆಂದರೆ ಫೇಸ್‌ಬುಕ್‌ನಲ್ಲಿ ಪದಗಳ ಅರ್ಥದ ಕುರಿತು ಚರ್ಚಿಸುವ ಜನಪ್ರಿಯ ಗ್ರೂಪ್‌ "ಪದಾರ್ಥ ಚಿಂತಾಮಣಿ"ಯಲ್ಲೂ ಈ ಸೆಡೆ ಪದದದ ಕುರಿತು ಹಲವು ವರ್ಷಗಳ ಹಿಂದೆಯೇ ಚರ್ಚೆ ನಡೆದಿದೆ. ಅಲ್ಲಿ ಸಾಕಷ್ಟು ಜನರು ಸೆಡೆ ಪದದ ಅರ್ಥವನ್ನು ನೀಡಿದ್ದಾರೆ.

ಬೆಂಗಳೂರು ಕಡೇ " ಸೆಡೆ " ಎನ್ನೋ ಬಯ್ಗುಳ ಇದೇ ಅಲ್ವ ಹಾಗೇ ಅಂದ್ರೆ ಏನು? ಎಂದು 2021ರಲ್ಲಿ ಒಬ್ಬರು ಕೇಳಿದ ಪ್ರಶ್ನೆಗೆ ಸಾಕಷ್ಟು ಜನರು ಉತ್ತರ ನೀಡಿದ್ದಾರೆ. "ಮೈಸೂರು ಸೀಮೆಯಲ್ಲಿ ಈ ಪದದ ಬಳಕೆ ಇದೆ. ಸೊಕ್ಕು ಪ್ರದರ್ಶಿಸುವವರಿಗೆ "ಸೆಡೆ" ಎನ್ನುವರು" " ಸಡೆ ಅನ್ನೋದನ್ನ waste body, ನಾಲಾಯಕ್ಕು ಅನ್ನೋ ಅರ್ಥದಲ್ಲಿ ಬಳಸಲಾಗುತ್ತಿದೆ" "ನಮ್ಮಕಡೆ ಸಿಟ್ಟಾಗು, ನಿಗುರು ಎಂಬ ಅರ್ಥ ಹೊಂದಿದೆ" "ಸೆಡೆ ಅನ್ನುವ ಬೈಗುಳಪದವನ್ನು ನಾನೂ ಕೇಳಿಲ್ಲ. ಆದರೆ ಮಂಡ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾವಿನ ಹೆಡೆಗೆ ಸೆಡೆ ಎಂಬ (ಗ್ರಾಮ್ಯ)ಪದವನ್ನು ಬಳಸುವ ವಾಡಿಕೆಯಿದೆ" "ಸೆಡೆ ಎಂದರೆ ಚೈಲ್ಡ್ ಅಂತ. ಎಲ್ ಬೋರ್ಡ್ ಅಂತ ಅರ್ಥ" ಎಂದು ಕೆಲವರು ಸೆಡೆ ಪದದ ಅರ್ಥದ ಕುರಿತು ಮಾಹಿತಿ ನೀಡಿದ್ದಾರೆ.

"ಸೆಡೆ ಪದಕ್ಕೆ ಏನ್ ಅರ್ಥ ಇದಿಯೊ ಗೊತ್ತಿಲ್ಲ; ಆದರೆ ನಾವು Friendship ಅಲ್ಲಿ ಸೆಡೆ ನನ್ ಮಗ ಕರಿತಿವಿ. ಇದು ಸರಳವಾಗಿರುವ ಉಚ್ಚಾರಣೆ ಅನ್ಸುತ್ತೆ" "ಕೈಲಾಗದವರು ಅಥವ ಅಸಮರ್ಥರು ಅಂತ ಅರ್ಥ" "ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸಲು ಅನುಕೂಲವಾಗುವಂತೆ ನಾಲ್ಕಾರು ಹೋಳುಗಳಾಗಿ ವಿಭಾಗಿಸುತ್ತಾರಲ್ಲ, ಅಂಥ ಒಂದು ಹೋಳು ಶ್ಯಾಡೆ ಎನ್ನಿಸಿಕೊಳ್ಳುತ್ತದೆ" "ಸೆಡೆ ಎಂಬುದು ಧಾತು. ಸೇಡೆ, ಶೇಡೆ, ಶ್ಯಾಡೆ ಎಂಬುದು ನಾಮಪದ" "ಸೆಡವು ಎಂಬ ಶಬ್ದ ಶೇಡೆ, ಸೆಡೆ ಆದಂತಿದೆ. ಸಿಟ್ಟು ಸೆಡವು ಎಂಬಲ್ಲಿ ಈ ಶಬ್ದ ಜೋಡಿಪದವಾಗಿ ಕಾಣಿಸಿಕೊಳ್ಳುತ್ತದೆ. ಸೆಡವು ಎಂದರೆ ಸೆಟೆದುಕೊಳ್ಳುವುದು. ಸಿಟ್ಟಿನಿಂದ ಶರೀರ ಬಿರುಸಾಗುವುದು" ಎಂದು ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.

"ಶೆತ್ತೆ / ಶಾಡೆ / ಸೆತ್ತೆ / ಸ್ಯಾಡೆ / ಸೆದೆ ಮುಂತಾದವು ನಂಟಿನ ಪದಗಳು. ಸೆಡವೂ ಕೂಡ ಇದಕ್ಕೆ ನಂಟುಳ್ಳ ಪದವೆಂದೇ ಹೇಳಬಹುದು. ಹುಲ್ಲು/ ಸೊಪ್ಪು ಉಪಯೋಗಕ್ಕೆ ಬರುವಂತದ್ದು. ಕೊಳೆತ ಸೊಪ್ಪು / ಹುಲ್ಲು ಉಪಯೋಗಕ್ಕೆ ಬಾರದ್ದು. ಇದೇ ಸೆತ್ತೆ. ಸೊಪ್ಪು-ಸೆದೆ ಜೋಡಿ ಪದ. ಹಲಸಿನ ಹಣ್ಣೊಳಗೆ ಹಣ್ಣನ್ನು ಸುತ್ತಿಕೊಂಡಿರುವ ಎಳೆಗಳಿಗೆ ಶಾಡೆ ಅಂತೀವಿ. ಇದು ಹಣ್ಣಿಗಂಟಿಕೊಂಡಿದ್ದರೂ ಹಣ್ಣಲ್ಲ. ಸಿಪ್ಪೆಯೂ ಅಲ್ಲ. ನೋಡೋಕೆ ಹಣ್ಣಿನ ತರ ಇದ್ರೂ ರುಚಿಯಿರಲ್ಲ. ಈ ಶಾಡೆಯಿಂದ ಹಣ್ಣನ್ನು ಬಿಡಿಸುಕೊಳ್ಳುವುದು ತುಸು ಕಷ್ಟವೇ. ನಾವು "ಶಾಡೆನನ್ಮಗ" ಅಂತ ಬೈತೀವಿ. ಒಂತಾರ "ಅಂಟುಮ್ಯಾಣ" ಅಂತ ಬೈತೀವಲ ಅದೇ ತೆರನ ಹುರುಳು ಪದಕ್ಕಿದೆ. 'ಬೇಡವಾದವನು ಆದರೆ ಬಿಟ್ಟು‌ಹೋಗದವನು" ಎನ್ನುವ ಹುರುಳು ಹೇಳಬಹುದು" ಎಂದು ಇನ್ನೊಬ್ಬರು ಪದಾರ್ಥ ಚಿಂತಾಮಣಿ ಪುಟದಲ್ಲಿ ವಿವರವಾದ ಉತ್ತರ ನೀಡಿದ್ದಾರೆ.

ಅಂದಹಾಗೆ, ಇವತ್ತು ಕಿಚ್ಚ ಸುದೀಪ್‌ ಪಂಚಾಯಿತಿಯಲ್ಲಿ ಸೆಡೆ ಪದ ಬಳಕೆ ಮಾಡಿರುವ ಕುರಿತು ರಜತ್‌ಗೆ ಯಾವ ರೀತಿ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

Whats_app_banner