Matinee OTT: ಎಂಟು ತಿಂಗಳ ಬಳಿಕ ಒಟಿಟಿಗೆ ಎಂಟ್ರಿ ಕೊಟ್ಟ ಸತೀಶ್ ನೀನಾಸಂ- ರಚಿತಾ ರಾಮ್ ಹಾರರ್ ಕಾಮಿಡಿ ಮ್ಯಾಟ್ನಿ; ವೀಕ್ಷಣೆ ಎಲ್ಲಿ?
Dec 06, 2024 12:50 PM IST
ಒಟಿಟಿಗೆ ಬಂದ ಮ್ಯಾಟ್ನಿ ಸಿನಿಮಾ
- Matinee OTT Release Date: ಮನೋಹರ್ ಕಾಂಪಲ್ಲಿ ನಿರ್ದೇಶನದ ಮ್ಯಾಟ್ನಿ ಸಿನಿಮಾ ಏಪ್ರಿಲ್ 5ರಂದು ತೆರೆಗೆ ಬಂದಿತ್ತು. ಇದೀಗ ಇದೇ ಸಿನಿಮಾ ಎಂಟು ತಿಂಗಳ ಬಳಿಕ ಒಟಿಟಿಗೆ ಆಗಮಿಸಿದೆ. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಕಾಂಬಿನೇಷನ್‌ನ ಈ ಸಿನಿಮಾವನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ಉತ್ತರ.
Matinee Movie OTT: ಹಾರರ್ ಕಾಮಿಡಿ ಕಥಾಹಂದರವುಳ್ಳ ಮ್ಯಾಟ್ನಿ ಸಿನಿಮಾ ಕೆಲ ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರೂ, ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೆಚ್ಚು ಕಾಲ ನಿಲ್ಲಲಿಲ್ಲ. ಆದರೆ, ವಿಮರ್ಶೆ ದೃಷ್ಟಿಯಿಂದ ಚಿತ್ರಕ್ಕೆ ಒಳ್ಳೆಯ ಟಾಕ್ ಕೇಳಿಬಂದಿತ್ತು. ಈಗ ಇದೇ ಸಿನಿಮಾ ಸುದೀರ್ಘ ಏಳು ತಿಂಗಳ ಬಳಿಕ ಒಟಿಟಿಗೆ ಆಗಮಿಸಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ? ಇಲ್ಲಿದೆ ಆ ಕುರಿತ ಸಂಪೂರ್ಣ ಮಾಹಿತಿ.
ಇದೇ ವರ್ಷದ ಏಪ್ರಿಲ್ 5ರಂದು ಮ್ಯಾಟ್ನಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ, ನಾಗಭೂಷಣ್, ಶಿವರಾಜ್ ಕೆ.ಆರ್ ಪೇಟೆ, ಪೂರ್ಣಚಂದ್ರ ತೇಜಸ್ವಿ ಸೇರಿ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಹಿಂದೆ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ರಾಮ್ ಗೋಪಾಲ್ ವರ್ಮಾಗೆ ಸಹಾಯಕರಾಗಿ ಕೆಲಸ ಮಾಡಿದ್ದ ಮನೋಹರ್ ಕಾಂಪಲ್ಲಿ, ಮಾಟ್ನಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಮ್ಯಾಟ್ನಿ ಸಿನಿಮಾದಲ್ಲಿ ನಾಗಭೂಷಣ್ ನೆಕ್ಸನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟ ಶಿವರಾಜ್ ಕೆಆರ್ ಪೇಟೆ ನವೀನ್ ಎನ್ನುವ ರಿಯಲ್ ಎಸ್ಟೆಟ್ ಉದ್ಯಮಿಯ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಶಿವರಾಜ್ ಕೆಆರ್ ಪೇಟೆ ಮತ್ತು ನೀನಾಸಂ ಸತೀಶ್ ಅವರ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾ ಇದಾಗಿದೆ. ಮತ್ತೋರ್ವ ಸ್ನೇಹಿತನ ಪಾತ್ರದಲ್ಲಿ ನಟ ದಿಗಂತ್ ದಿವಾಕರ್ ಮ್ಯಾಟ್ನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಏನಿದು ಮ್ಯಾಟ್ನಿ ಕಥೆ?
ಮ್ಯಾಟ್ನಿ ಒಂದು ದೆವ್ವದ ಮನೆಯ ಸುತ್ತ ಸುತ್ತುವ ಚಿತ್ರ. ಸ್ನೇಹಿತರ ಗುಂಪು ಆ ಮನೆಗೆ ಪ್ರವೇಶಿಸಿದ ನಂತರ, ಅಲ್ಲಿ ಅವರಿಗೆ ಪ್ರೇತವೊಂದು ಭಯಬೀಳಿಸುತ್ತದೆ. ಜತೆ ಜತೆಗೆ ಲವ್‌ಸ್ಟೋರಿಯ ಫ್ಲ್ಯಾಶ್‌ಬ್ಯಾಕ್ ಸಹ ತೆರೆದುಕೊಳ್ಳುತ್ತದೆ. ಅರುಣ್ (ನೀನಾಸಂ ಸತೀಶ್) ಶ್ರೀಮಂತ ಕುಟುಂಬದಿಂದ ಬಂದವ. ತಮ್ಮದೇ ಆದ ದೊಡ್ಡ ಬಂಗಲೆ ಹೊಂದಿರುತ್ತಾನೆ. ಸ್ನೇಹಿತರ ಜತೆ ಸೇರಿ ಆ ಮನೆಯನ್ನು ಮಾರುವ ಲೆಕ್ಕಾಚಾರಕ್ಕೆ ಬರುತ್ತಾರೆ. ಆದರೆ, ಅದೇ ಮನೆಯಲ್ಲಿನ ಅಗೋಚರ ಶಕ್ತಿಯೊಂದು ಇರುವುದು ಎಲ್ಲರ ಗಮನಕ್ಕೆ ಬರುತ್ತದೆ. ಹೀಗೆ ಸಾಗುವ ಈ ಸಿನಿಮಾ ಭಯದ ಜತೆಗೆ ಕಾಮಿಡಿ ಮೂಲಕವೂ ನಗಿಸುತ್ತ ಸಾಗುತ್ತದೆ.
ಯಾವ ಒಟಿಟಿಯಲ್ಲಿ ಮ್ಯಾಟ್ನಿ ವೀಕ್ಷಣೆ
ಹಾರರ್ ಕಾಮಿಡಿ ಶೈಲಿಯ ಮ್ಯಾಟ್ನಿ ಸಿನಿಮಾ ಇದೀಗ ಎಂಟು ತಿಂಗಳ ಬಳಿಕ ಒಟಿಟಿ ಅಂಗಳಕ್ಕೆ ಆಗಮಿಸಿದೆ. ಈ ಸಿನಿಮಾವನ್ನು ಸನ್ ನೆಕ್ಸ್ಟ್ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು. ಇಂದಿನಿಂದ (ಡಿಸೆಂಬರ್ 6) ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಎಫ್ 3 ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪಾರ್ವತಿ ಎಸ್ ಗೌಡ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ, ಪೂರ್ಣ ಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಕೆ.ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.