logo
ಕನ್ನಡ ಸುದ್ದಿ  /  ಮನರಂಜನೆ  /  Bheema Ott Release: ಸುಳಿವು ನೀಡದೇ ಒಟಿಟಿಗೆ ಬಂದೇ ಬಿಟ್ಟ ಭೀಮ; ದುನಿಯಾ ವಿಜಯ್‌ ಚಿತ್ರದ ವೀಕ್ಷಣೆ ಎಲ್ಲಿ?

Bheema OTT Release: ಸುಳಿವು ನೀಡದೇ ಒಟಿಟಿಗೆ ಬಂದೇ ಬಿಟ್ಟ ಭೀಮ; ದುನಿಯಾ ವಿಜಯ್‌ ಚಿತ್ರದ ವೀಕ್ಷಣೆ ಎಲ್ಲಿ?

Sep 06, 2024 03:15 PM IST

google News

ಒಟಿಟಿಗೆ ಬಂದ ದುನಿಯಾ ವಿಜಯ್‌ ಭೀಮ ಸಿನಿಮಾ

    • ಆಗಸ್ಟ್‌ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ದುನಿಯಾ ವಿಜಯ್‌ ನಟನೆಯ ಭೀಮ ಸಿನಿಮಾ ಇದೀಗ ಯಾವುದೇ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದೆ. ಹಾಗಾದರೆ, ಈ ಚಿತ್ರವನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ನೋಡಿ ವಿವರ.
ಒಟಿಟಿಗೆ ಬಂದ ದುನಿಯಾ ವಿಜಯ್‌ ಭೀಮ ಸಿನಿಮಾ
ಒಟಿಟಿಗೆ ಬಂದ ದುನಿಯಾ ವಿಜಯ್‌ ಭೀಮ ಸಿನಿಮಾ

Bheema OTT Release: ದುನಿಯಾ ವಿಜಯ್‌ ಅವರ ಭೀಮ ಸಿನಿಮಾ ಇತ್ತೀಚೆಗಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿತ್ತು. ಕಲೆಕ್ಷನ್‌ ವಿಚಾರದಲ್ಲಿಯೂ ಭೀಮ ಗೆಲುವಿನ ನಗೆ ಬೀರಿದ್ದ. ಹೀಗೆ ಚಿತ್ರಮಂದಿರದಲ್ಲಿ ಇನ್ನೂ 25 ದಿನ ಕಳೆಯುವುದರೊಳಗೇ ಭೀಮನಿಗೆ ಒಟಿಟಿಯಿಂದ ಬುಲಾವ್‌ ಬಂದಿದೆ. ಹಾಗಾಗಿ ಯಾವುದೇ ಸದ್ದು ಮಾಡದೆ, ಒಟಿಟಿ ಅಂಗಳಕ್ಕೆ ಬಲಭೀಮನ ಆಗಮನವಾಗಿದೆ. ಹಾಗಾದರೆ, ಯಾವ ಒಟಿಟಿಯಲ್ಲಿ ಭೀಮ ಸಿನಿಮಾವನ್ನು ವೀಕ್ಷಣೆ ಮಾಡಬಹುದು? ಇಲ್ಲಿದೆ ನೋಡಿ ವಿವರ.

ಭೀಮ ಸಿನಿಮಾ ಹೆಚ್ಚು ನಿರೀಕ್ಷೆ ಹುಟ್ಟುಹಾಕಲು ಕಾರಣ; ಇದು ದುನಿಯಾ ವಿಜಯ್‌ ಅವರ ನಿರ್ದೇಶನದ ಎರಡನೇ ಸಿನಿಮಾ. 2021ರಲ್ಲಿ ತೆರೆಗೆ ಬಂದಿದ್ದ ಸಲಗ ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್‌ ಧರಿಸಿ ಯಶಸ್ಸು ಕಂಡಿದ್ದ ವಿಜಯ್‌, ಇದೀಗ ಅದೇ ಕಾಯಕವನ್ನು ಮುಂದುವರಿಸಿ ಗೆದ್ದು ಬೀಗಿದ್ದಾರೆ. ಮತ್ತೊಂದು ಹಿಟ್ ಮುಡಿಗೇರಿಸಿಕೊಂಡಿದ್ದಾರೆ. ಅಂದಹಾಗೆ ಭೀಮ ಸಿನಿಮಾವನ್ನು ಕೃಷ್ಣ ಸಾರ್ಥಕ್‌ ಮತ್ತು ಜಗದೀಶ್‌ ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ಆಗಸ್ಟ್‌ 9ರಂದು ತೆರೆಗೆ ಬಂದಿತ್ತು ಭೀಮ..

ದುನಿಯಾ ವಿಜಯ್‌ ಅವರ ಭೀಮ ಸಿನಿಮಾ ಚಿತ್ರಮಂದಿರಗಳಲ್ಲಿ ಆಗಸ್ಟ್‌ 8ರಂದು ತೆರೆಗೆ ಬಂದಿತ್ತು. ಸಹಜವಾಗಿ ಒಂದು ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 30 ದಿನಕ್ಕೋ 45, 60 ದಿನಕ್ಕೋ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸುತ್ತವೆ. ಇದೀಗ ಭೀಮ ಸಿನಿಮಾ ಒಂದು ತಿಂಗಳು ಭರ್ತಿಯಾಗುವುದಕ್ಕೂ ಮೂರು ದಿನ ಮೊದಲೇ ಒಟಿಟಿ ಅಂಗಳ ಪ್ರವೇಶಿಸಿದೆ. ಕರ್ನಾಟಕದಾದ್ಯಂತ 400ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತ್ತು. ಜತೆಗೆ ಮುಚ್ಚುವ ಹಂತದಲ್ಲಿದ್ದ 18 ಚಿತ್ರಮಂದಿರಗಳಲ್ಲಿ ಭೀಮ ಸಿನಿಮಾ ಪ್ರದರ್ಶನ ಕಂಡಿತ್ತು.

ಭೀಮ ಸಿನಿಮಾ ಕಥೆ ಏನು?

ಡ್ರಗ್‌ ವ್ಯಸನವನ್ನೇ ಪ್ರಧಾನ ಕಥೆಯನ್ನಾಗಿ ಮಾಡಿಕೊಂಡ ದುನಿಯಾ ವಿಜಯ್‌ ಮತ್ತವರ ತಂಡ, ಯುವ ಪೀಳಿಗೆ ಹಾದಿ ತಪ್ಪುತ್ತಿರುವುದು ಎಲ್ಲಿ, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಕೆಲಸ ಏನು ಎಂಬುದನ್ನು ಭೀಮ ಸಿನಿಮಾ ಮೂಲಕ ತೆರೆಮೇಲೆ ತಂದಿದ್ದರು. ಇದರ ಜತೆಗೆ ರೌಡಿಸಮ್‌ನ ರಕ್ತದೋಕುಳಿಯೂ ಚಿತ್ರದಲ್ಲಿ ಕಂಡಿತ್ತು. ಭೀಮ ಸಿನಿಮಾಕ್ಕೆ ಬಲಿಷ್ಠ ತಾಂತ್ರಿಕ ವರ್ಗವೇ ದುಡಿದಿದೆ. ಛಾಯಾಗ್ರಹಕರಾಗಿ ಶಿವಸೇನಾ, ಸಂಕಲನ ದೀಪು ಎಸ್. ಕುಮಾರ್, ಸಂಭಾಷಣೆ ಮಾಸ್ತಿ, ವಿನೋದ್ ಅವರ ಸಾಹಸ, ಚೇತನ್ ಡಿಸೋಜಾ, ಟೈಗರ್ ಶಿವ, ಗೌತಮ್ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫಿ ಬಿ. ಧನಂಜಯ, ರಾಜು ಅವರದ್ದು.

ಯಾವ ಒಟಿಟಿಯಲ್ಲಿ ಭೀಮನನ್ನು ನೋಡಬಹುದು?

ಸದ್ಯ ಯಾವುದೇ ಮುನ್ಸೂಚನೆ ನೀಡದೇ, ಒಟಿಟಿಗೆ ಆಗಮಿಸಿದೆ ದುನಿಯಾ ವಿಜಯ್‌ ಅವರ ಭೀಮ ಸಿನಿಮಾ. ಸೆನ್ಸಾರ್‌ ಅಂಗಳದಿಂದ A ಪ್ರಮಾಣ ಪತ್ರ ಪಡೆದ ಭೀಮ ಸಿನಿಮಾ, ಅಮೆಜಾನ್‌ ಪ್ರೈಂನಲ್ಲಿ ಈಗಿನಿಂದಲೇ ವೀಕ್ಷಣೆ ಮಾಡಬಹುದು. ಸದ್ಯ ಇಂಗ್ಲಿಷ್‌ ಸಬ್‌ಟೈಟಲ್‌ ಜತೆಗೆ ಕನ್ನಡ ಅವತರಣಿಕೆಯಲ್ಲಿ ಮಾತ್ರ ಭೀಮ ಸ್ಟ್ರೀಮಿಂಗ್‌ ಆರಂಭಿಸಿದೆ. ಒಟಿಟಿಯಲ್ಲಿ ಬೇರೆ ಭಾಷೆಗಳಿಗೆ ಈ ಸಿನಿಮಾ ಡಬ್‌ ಆಗುವುದು ಅನುಮಾನ ಎಂದೂ ಹೇಳಲಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ