logo
ಕನ್ನಡ ಸುದ್ದಿ  /  ಮನರಂಜನೆ  /  Ekam: ಕನ್ನಡ ವೆಬ್‌ ಸರಣಿಗಳ ಕುರಿತು ಒಟಿಟಿ ತಾಣಗಳ ತಾತ್ಸಾರಕ್ಕೆ ರಕ್ಷಿತ್‌ ಶೆಟ್ಟಿ ಬೇಸರ; ಶೆಟ್ರು ಕೈಗೊಂಡ ನಿರ್ಧಾರಕ್ಕೆ ವೀಕ್ಷಕರ ಶಹಬ್ಬಾಸ್

Ekam: ಕನ್ನಡ ವೆಬ್‌ ಸರಣಿಗಳ ಕುರಿತು ಒಟಿಟಿ ತಾಣಗಳ ತಾತ್ಸಾರಕ್ಕೆ ರಕ್ಷಿತ್‌ ಶೆಟ್ಟಿ ಬೇಸರ; ಶೆಟ್ರು ಕೈಗೊಂಡ ನಿರ್ಧಾರಕ್ಕೆ ವೀಕ್ಷಕರ ಶಹಬ್ಬಾಸ್

Praveen Chandra B HT Kannada

Jun 18, 2024 10:50 AM IST

google News

ಕನ್ನಡ ವೆಬ್‌ ಸರಣಿಗಳ ಕುರಿತು ಒಟಿಟಿ ವೇದಿಕೆಗಳ ತಾತ್ಸಾರಕ್ಕೆ ರಕ್ಷಿತ್‌ ಶೆಟ್ಟಿ ಬೇಸರ

    • Ekam web series: ಕನ್ನಡದ ಜನಪ್ರಿಯ ನಟ ರಕ್ಷಿತ್‌ ಶೆಟ್ಟಿ ಕನ್ನಡ ವೆಬ್‌ ಸರಣಿಗೆ ಸೂಕ್ತ ವೇದಿಕೆ ನೀಡದ ಒಟಿಟಿ ವೇದಿಕೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಜಿಯೋ ಸಿನಿಮಾ, ಝೀ 5, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸೇರಿದಂತೆ ಹಲವು ಒಟಿಟಿ ವೇದಿಕೆಗಳು ಏಕಂ  ವೆಬ್‌ ಸರಣಿಗೆ ಅವಕಾಶ ನೀಡಿರಲಿಲ್ಲ.
ಕನ್ನಡ ವೆಬ್‌ ಸರಣಿಗಳ ಕುರಿತು ಒಟಿಟಿ ವೇದಿಕೆಗಳ ತಾತ್ಸಾರಕ್ಕೆ ರಕ್ಷಿತ್‌ ಶೆಟ್ಟಿ ಬೇಸರ
ಕನ್ನಡ ವೆಬ್‌ ಸರಣಿಗಳ ಕುರಿತು ಒಟಿಟಿ ವೇದಿಕೆಗಳ ತಾತ್ಸಾರಕ್ಕೆ ರಕ್ಷಿತ್‌ ಶೆಟ್ಟಿ ಬೇಸರ

ಬೆಂಗಳೂರು: ಕನ್ನಡದ ಜನಪ್ರಿಯ ನಟ ರಕ್ಷಿತ್‌ ಶೆಟ್ಟಿ ಕನ್ನಡ ವೆಬ್‌ ಸರಣಿಗೆ ಸೂಕ್ತ ವೇದಿಕೆ ನೀಡದ ಒಟಿಟಿ ವೇದಿಕೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಜಿಯೋ ಸಿನಿಮಾ, ಝೀ 5, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸೇರಿದಂತೆ ಹಲವು ಒಟಿಟಿ ವೇದಿಕೆಗಳು ಇದ್ದರೂ ರಕ್ಷಿತ್‌ ಶೆಟ್ಟಿಯ ಏಕಂ ಎಂಬ ವೆಬ್‌ ಸರಣಿಗೆ ಎಲ್ಲೂ ವೇದಿಕೆ ದೊರಕಿರಲಿಲ್ಲ. ಕೃತಿ ಚೆನ್ನಾಗಿದೆಯೇ ಇಲ್ಲವೇ ಎಂದು ನಿರ್ಧರಿಸುವ ಅವಕಾಶ, ಹಕ್ಕು ಪ್ರೇಕ್ಷಕರಿಗೆ ಇರಬೇಕು ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದು, ಈ ಕುರಿತು ದೀರ್ಘ ಟಿಪ್ಪಣಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಏಕಂ ವೆಬ್‌ ಸರಣಿ ನೋಡುವುದು ಹೇಗೆ?

ಜನಪ್ರಿಯ ಒಟಿಟಿ ವೇದಿಕೆಗಳಲ್ಲಿ ಏಕಂ ವೆಬ್‌ ಸರಣಿಗೆ ಅವಕಾಶ ದೊರಕದೆ ಇದ್ದರೂ ತನ್ನದೇ ಒಟಿಟಿ ಮೂಲಕ ರಕ್ಷಿತ್‌ ಶೆಟ್ಟಿ ಏಕಂ ವೆಬ್‌ ಸರಣಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಕನ್ನಡ ವೆಬ್‌ ಸರಣಿಗಳ ಕುರಿತು ಒಟಿಟಿ ವೇದಿಕೆಗಳ ಧಿಮಾಕಿಗೆ ತಕ್ಕ ಉತ್ತರ ನೀಡಿದ್ದಾರೆ. ಆಸಕ್ತರು ಜುಲೈ 13ರಂದು ಏಕಂ ವೆಬ್‌ ಸರಣಿಯ ಮೊದಲ ಕಂತು ನೋಡಬಹುದು. ಈ ತಾಣದಲ್ಲಿ ನೋಡಲು 149 ರೂಪಾಯಿ ನೀಡಿ ಚಂದಾದಾರರಾಗಬಹುದು. ಚಂದಾದಾರರಿಗೆ ಏಕಂ ತಂಡದ ಜತೆ ಸಂವಾದದಲ್ಲಿ ಭಾಗಿಯಾಗುವ ಅವಕಾಶವೂ ದೊರಕಲಿದೆ.

ಒಟಿಟಿ ವೇದಿಕೆಗಳ ಕುರಿತು ರಕ್ಷಿತ್‌ ಶೆಟ್ಟಿ ಬೇಸರದ ಮಾತು

ರಕ್ಷಿತ್‌ ಶೆಟ್ಟಿ ಅವರು ಏಕಂ ವೆಬ್‌ ಸರಣಿಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅವಕಾಶ ನೀಡದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹೀಗೆ ಬರೆದಿದ್ದಾರೆ.

‘2020 ಜನವರಿ, ಅಥವಾ ಫೆಬ್ರವರಿಯೇ? ನೆನಪು ಮಬ್ಬಾಗಿದೆ! ಇರಲಿ… ಪರಂವಃ ಹಾಗೂ ‘ಜರ್ನಿಮ್ಯಾನ್ ಫಿಲ್ಮ್ಸ್​’ ಜತೆಯಾಗಿ‘ಏಕಂ’ ಎಂಬ ವೆಬ್‌ ಸೆಣಿ ಮಾಡಲು ಹೊರಟಿದ್ದು ಅಂದು. ಏನೋ ಹೊಸತೊಂದನ್ನು ಮಾಡುವ ಉತ್ಸಾಹ ನಮ್ಮಲ್ಲಿ ಆಗ ಇತ್ತು. ಕನ್ನಡದಲ್ಲೊಂದು ವೆಬ್ ಸೀರೀಸ್ ಹೊರಬರಲು ಇದೇ ಸೂಕ್ತ ಸಮಯ ಎಂದೆನಿಸಿತ್ತು. ಆದರೆ ಅದೇ ಸಮಯಕ್ಕೆ ಕೊವಿಡ್ ವಕ್ಕರಿಸಿತು. ಜಗತ್ತೇ ತಲೆ ಕೆಳಗಾದ ಸಮಯ. ನಮ್ಮಲ್ಲೂ ಆತಂಕ, ಅನಿಶ್ಚಿತತೆ. ಆದರೂ ಹಿಂದೆ ಸರಿಯದೆ ಮುನ್ನುಗ್ಗಿದೆವು’ ಎಂದು ಎಕ್ಸ್‌ನಲ್ಲಿ ದೀರ್ಘ ಟಿಪ್ಪಣಿ ಬರೆದಿದ್ದಾರೆ ರಕ್ಷಿತ್‌ ಶೆಟ್ಟಿ.

ಇದೇ ಸಮಯದಲ್ಲಿ ಕೃತಿಯ ಅರ್ಹತೆಯನ್ನು ನಿರ್ಧರಿಸುವ ಒಟಿಟಿ ವೇದಿಕೆಗಳ ಧಿಮಾಕಿನ ಕುರಿತೂ ರಕ್ಷಿತ್‌ ಶೆಟ್ಟಿ ಮಾತನಾಡಿದ್ದಾರೆ. ಕನ್ನಡ ವೆಬ್‌ ಸರಣಿಗಳ ಕುರಿತು ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಿಲುವಿನ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ‘ಕಟ್ ಟು ಅಕ್ಟೋಬರ್ 2021. ‘ಏಕಂ’ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು. ಇದನ್ನ ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು! ‘ಏಕಂ’ ಅನ್ನು ಹೊರ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ! ಎಲ್ಲೆಡೆ ನಿರಾಸೆ, ಅದೇ ನೆಪ, ಅದೇ ಸಬೂಬು! ಯಾವುದೇ ಕೃತಿಯ ಅರ್ಹತೆಯನ್ನ ನಿರ್ಧರಿಸುವ ಅವಕಾಶ ಹಾಗು ಹಕ್ಕು ಪ್ರೇಕ್ಷಕರಿಗಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

ಸ್ವಂತ ಒಟಿಟಿಯಲ್ಲಿ ಏಕಂ ಪ್ರಸಾರ

‘ಇದೇ ಕಾರಣಕ್ಕೆ ಏಕಂ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ. ‘ಏಕಂ’ ನಿಮಗೆ ಇಷ್ಟವಾಗಬಹುದು, ಇಷ್ಟವಾಗದೇ ಇರಬಹುದು. ಆದರೆ ಈ ಪ್ರಯತ್ನವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. ‘ಏಕಂ’ ಒಂದು ಶ್ಲಾಘನೀಯ ಪ್ರಯತ್ನ. ಇದನ್ನು ನಾವು ಎಷ್ಟು ಪ್ರೀತಿಯಿಂದ ಮಾಡಿದ್ದೇವೋ, ಅಷ್ಟೇ ಪ್ರೀತಿಯಿಂದ ನೀವು ನಮ್ಮ ಈ ಪ್ರಯತ್ನವನ್ನು ಸ್ವೀಕರಿಸುತ್ತೀರಿ ಅಂತ ಆಶಿಸುತ್ತೇನೆ’ ಎಂದು ರಕ್ಷಿತ್‌ ಶೆಟ್ಟಿ ದೀರ್ಘ ಬರಹ ಬರೆದಿದ್ದಾರೆ.

ಶೆಟ್ರು ಕೈಗೊಂಡ ನಿರ್ಧಾರಕ್ಕೆ ವೀಕ್ಷಕರ ಶಹಬ್ಬಾಸ್‌

ರಕ್ಷಿತ್‌ ಶೆಟ್ಟಿ ಕೈಗೊಂಡ ಈ ನಿರ್ಧಾರಕ್ಕೆ ವೀಕ್ಷಕರು ಖುಷಿಯಾಗಿದ್ದಾರೆ. ಸಾಕಷ್ಟು ಜನರು ಒಟಿಟಿ ವೇದಿಕೆಗಳು ಕನ್ನಡ ಭಾಷೆಯ ಕುರಿತು ತೋರುವ ತಾತ್ಸಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

"ಭಾಷೆಯ ಆಧಾರದ ಮೇಲೆ ನೀವು ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಬೆಂಬಲಿಸುತ್ತಿರುವ ಸಂಗತಿ ನಿರಾಶಾದಾಯಕ. ಇದು ಅವಮಾನಕರ ಮತ್ತು ಸ್ವೀಕಾರಾರ್ಹವಲ್ಲ" ಎಂದು ಅರುಣ್‌ ಎಂಬವರು ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮುಂತಾದ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಟ್ಯಾಗ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಾಕಷ್ಟು ಜನರು ಕನ್ನಡದ ಮೊದಲ ಪ್ರಮುಖ ವೆಬ್‌ ಸರಣಿಗೆ ಪ್ರೊತ್ಸಾಹ ನೀಡುವುದಾಗಿ ತಿಳಿಸಿದ್ದಾರೆ. "ಇದು ಕನ್ನಡದ ವೆಬ್‌ ಸರಣಿಗಳ ಭವಿಷ್ಯಕ್ಕೆ ಮುನ್ನುಡಿ" "ಕನ್ನಡ ಒಟಿಟಿ ವೇದಿಕೆಯ ಹೊಸ ಆರಂಭ" ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ