ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಎರಡನೇ ಹಂತ ಆರಂಭ, ದುಬಾರಿ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಸರಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಉಚಿತ
Mar 16, 2024 11:54 AM IST
ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಎರಡನೇ ಹಂತ ಆರಂಭ
- Puneeth Rajkumar Hrudaya Jyothi Scheme: ಮಾರ್ಚ್ 17ರಂದು ಸ್ಯಾಂಡಲ್‌ವುಡ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಇದಕ್ಕೂ ಮುನ್ನ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯ ಎರಡನೇ ಹಂತಕ್ಕೆ ಕರ್ನಾಟಕದಲ್ಲಿ ಚಾಲನೆ ನೀಡಲಾಗಿದೆ. ಎರಡನೇ ಹಂತದಲ್ಲಿ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಲಭ್ಯವಿದೆ. ಈ ಯೋಜನೆಯ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯ ಎರಡನೇ ಹಂತಕ್ಕೆ ಧಾರಾವಾಡದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಹಠಾತ್ ಹೃದಯಾಘಾತ ತಡೆಯುವಲ್ಲಿ ಕರ್ನಾಟಕ ಸರಕಾರದ ಪ್ರಮುಖ ಯೋಜನೆ ಇದಾಗಿದೆ. ಈ ಯೋಜನೆಯ ಎರಡನೇ ಹಂತವು ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಬಾಗಲಕೋಟೆ,ಬಳ್ಳಾರಿ ಹಬ್, ದಾವಣಗೆರೆ, ಶಿವಮೊಗ್ಗಗಳಲ್ಲಿ ಆರಂಭವಾಗುತ್ತಿದೆ.
"ಹಠಾತ್ ಹಾರ್ಟ್ ಅಟ್ಯಾಕ್ ತಡೆಯಲು ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಯಾರಿಗಾದರೂ ಎದೆನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡಬೇಡಿ. ಸರ್ಕಾರಿ ಆಸ್ಪತ್ರೆಗಳಲ್ಲಿ ತಕ್ಷಣ ಇಸಿಜಿ ಮಾಡಿಕೊಳ್ಳಿ. ಈ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಜೀವರಕ್ಷಕ ಇಂಜೆಕ್ಷನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಟೆನೆಕ್ಟೆಪ್ಲೇಸ್ ಎಂಬ ದುಬಾರಿ ಇಂಜೆಕ್ಷನ್ ಇನ್ಮುಂದೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರಕುತ್ತದೆ. ಗ್ರಾಮೀಣ ಜನರು ಇದರ ಉಪಯೋಗ ಪಡೆಯಿರಿ. ಹಾರ್ಟ್ ಅಟ್ಯಾಕ್ ತಡೆಯುವಲ್ಲಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಇಂಜೆಕ್ಷನ್ ಇದಾಗಿದೆ" ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು ದಿವಂಗತ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಹೃದಯಾಘಾತದಂತಹ ಸಂದರ್ಭದಲ್ಲಿ ಜನರ ಜೀವ ಉಳಿಸುವ ಸರಕಾರದ ಇಂತಹ ಯೋಜನೆಗಳಿಗೆ ದಿ. ಪುನೀತ್ ರಾಜ್‌ಕುಮಾರ್ ಮೇಲಿನಿಂದ ಆಶೀರ್ವಾದ ಮಾಡ್ತಾರೆ" ಎಂದು ದಿನೇಶ್ ಗುಂಡುರಾವ್ ಹೇಳಿದ್ದಾರೆ. ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಈ ಯೋಜನೆಯ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವ 5 ಪಾನೀಯ
ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಎಂದರೇನು?
ಇದು ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಪ್ರಮುಖ ಯೋಜನೆ. ಹಬ್, ಸ್ಟ್ರೋಕ್ ಮಾದರಿಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. 86 ಸರ್ಕಾರಿ ಆಸ್ಪತ್ರೆಗಳನ್ನು ಸ್ಟ್ರೋಕ್ ಕೇಂದ್ರವಾಗಿ ಮಾಡಲಾಗಿದೆ. ಇದರಲ್ಲಿ 71 ತಾಲೂಕು ಆಸ್ಪತ್ರೆಗಳಾಗಿವೆ. ಇದೇ ರೀತಿ ಬೆಂಗಳೂರಿನ ಜಯದೇವ ಸೇರಿದಂತೆ ಹನ್ನೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಕೇಂದ್ರವಾಗಿ ಮಾಡಲಾಗಿದೆ. ಎದೆನೋವು ಕಾಣಿಸಿಕೊಂಡರವು ಸ್ಪೋಕ್ ಕೇಂದ್ರಗಳಿಗೆ ತಕ್ಷಣ ಭೇಟಿ ನೀಡಬೇಕು. ಅವರು ಆಸ್ಪತ್ರೆಗೆ ಭೇಟಿ ನೀಡಿದ ಆರು ನಿಮಿಷದೊಳಗೆ ಅವರ ಆರೋಗ್ಯ ಸ್ಥಿತಿ ಯಾವ ಸ್ಥಿತಿಯಲ್ಲಿದೆ ಎಂದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿ ಮೂಲಕ ಪತ್ತೆಹಚ್ಚಲಾಗುತ್ತದೆ. ಟ್ರಿಕಾಗ್ ಸಂಸ್ಥೆಯ ಈ ಎಐ ಟೆಕ್ನಾಲಜಿ ಮೂಲಕ ಮತ್ತು ಇಸಿಜಿ ಪರೀಕ್ಷೆ ಮೂಲಕ ಹಾರ್ಟ್ ಅಟ್ಯಾಕ್‌ನ ಮುನ್ಸೂಚನೆ ಪಡೆಯಲಾಗುತ್ತದೆ.
ಎಲ್ಲಾದರೂ ರೋಗಿಯ ಸ್ಥಿತಿ ನಿರ್ಣಾಯಕ ಅಥವಾ ಕ್ರಿಟಿಕಲ್ ಎಂದು ತಿಳಿದರೆ ತಕ್ಷಣ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ನೀಡಲಾಗುತ್ತದೆ. ಈ ಇಂಜೆಕ್ಷನ್ ಸ್ಪೋಕ್ ಕೇಂದ್ರಗಳಾದ ತಾಲೂಕು ಆಸ್ಪತ್ರೆಗಳಲ್ಲಿಯೇ ಲಭ್ಯ ಇರುತ್ತದೆ. ಇದರಿಂದ ಹಠಾತ್ ಹಾರ್ಟ್‌ಅಟ್ಯಾಕ್ ಆಗುವುದು ತಪ್ಪುತ್ತದೆ. ಬಳಿಕ ಅತ್ಯಾಧುನಿಕ ಅಂಬ್ಯುಲೆನ್ಸ್‌ನಲ್ಲಿ ಹಬ್ ಕೇಂದ್ರ ಅಂದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ಇಂತಹ ಹಬ್ ಕೇಂದ್ರಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಗೋಲ್ಡನ್ ಅವರ್ ಎಂಬ ಈ ಪ್ರಮುಖ ಅವಧಿಯಲ್ಲಿ ರೋಗಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಮೂಲಕ ಹಠಾತ್ ಹೃದಯಾಘಾತದಿಂದ ರೋಗಿಗಳನ್ನು ಬದುಕಿಸುವ ಯತ್ನ ಮಾಡಲಾಗುತ್ತದೆ. ಇಂತಹ ವಿಶೇಷ ಯೋಜನೆಯ ಹೆಸರೇ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ. ಮೊದಲ ಹಂತದಲ್ಲಿ 45 ಆಸ್ಪತ್ರೆಗಳಲ್ಲಿ ಆರಂಭಿಸಲಾಗಿತ್ತು. ಆ ಹಂತದಲ್ಲಿ ಟೆನೆಕ್ಟೆಪ್ಲೇಸ್ ಲಭ್ಯವಿರಲಿಲ್ಲ. ಎರಡನೇ ಹಂತದಲ್ಲಿ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಲಭ್ಯವಿದೆ. ಇದು ರೋಗಿಗಳ ಪಾಲಿಗೆ ಸಂಜೀವಿನಿಯಾಗಲಿದೆ.