logo
ಕನ್ನಡ ಸುದ್ದಿ  /  ಮನರಂಜನೆ  /  ಭೂ ಸುಧಾರಣೆ ಕಾಯ್ದೆ ಬಗ್ಗೆ ಮಾತನಾಡುವ ‘ಧೀರ ಭಗತ್‌ ರಾಯ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ದುನಿಯಾ ವಿಜಯ್‌

ಭೂ ಸುಧಾರಣೆ ಕಾಯ್ದೆ ಬಗ್ಗೆ ಮಾತನಾಡುವ ‘ಧೀರ ಭಗತ್‌ ರಾಯ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ದುನಿಯಾ ವಿಜಯ್‌

Oct 27, 2024 07:17 PM IST

google News

ಭೂ ಸುಧಾರಣೆ ಕಾಯ್ದೆ ಬಗ್ಗೆ ಮಾತನಾಡುವ ‘ಧೀರ ಭಗತ್‌ ರಾಯ್‌’ ಚಿತ್ರದ ಟ್ರೇಲರ್‌ ಬಿಡುಗಡೆ

    • Dheera Bhagath Roy Trailer: ಭೂ ಸುಧಾರಣೆ ಕಾಯ್ದೆ ಹಿನ್ನೆಲೆಯಲ್ಲಿ ನಿರ್ಮಾಣವಾದ ಧೀರ ಭಗತ್ ರಾಯ್ ಸಿನಿಮಾ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮೊದಲು ಏನಿದು ಸಿನಿಮಾ ಎಂಬುದನ್ನು ಹೇಳುವ ಸಲುವಾಗಿಯೇ, ಟ್ರೇಲರ್‌ ಹೊರ ತಂದಿದೆ ಚಿತ್ರತಂಡ. 
ಭೂ ಸುಧಾರಣೆ ಕಾಯ್ದೆ ಬಗ್ಗೆ ಮಾತನಾಡುವ ‘ಧೀರ ಭಗತ್‌ ರಾಯ್‌’ ಚಿತ್ರದ ಟ್ರೇಲರ್‌ ಬಿಡುಗಡೆ
ಭೂ ಸುಧಾರಣೆ ಕಾಯ್ದೆ ಬಗ್ಗೆ ಮಾತನಾಡುವ ‘ಧೀರ ಭಗತ್‌ ರಾಯ್‌’ ಚಿತ್ರದ ಟ್ರೇಲರ್‌ ಬಿಡುಗಡೆ

Dheera Bhagath Roy Trailer: ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌ ಇದೀಗ ಧೀರ ಭಗತ್‌ ರಾಯ್‌ ಚಿತ್ರಕ್ಕೆ ಸಾಥ್‌ ನೀಡಿದ್ದಾರೆ. ಅಂದರೆ, ಈ ಚಿತ್ರದ ಟ್ರೇಲರ್‌ಅನ್ನು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಪ್ರಸನ್ನ ಥಿಯೇಟರಿನಲ್ಲಿ ಹೌಸ್ ಫುಲ್ ಆಗಿದ್ದ ಪ್ರೇಕ್ಷಕರೆದುರಿಗೆ ಧೀರ ಭಗತ್ ರಾಯ್ ಚಿತ್ರದ ಟ್ರೇಲರ್‌ ಅನಾವರಣಗೊಂಡಿದೆ. ಹೊಸ ನಿರ್ದೇಶಕ, ಹೊಸ ನಾಯಕ, ಹೊಸ ನಿರ್ಮಾಣ ಸಂಸ್ಥೆಯ ಈ ಪ್ರಯತ್ನಕ್ಕೆ ದುನಿಯಾ ವಿಜಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದುನಿಯಾ ವಿಜಯ್‌ ಟ್ರೇಲರ್‌ ನೋಡಿ ಏನಂದ್ರು?

"ಈ ತರಹದ ಕಾರ್ಯಕ್ರಮಗಳಿಗೆ ಬರೋದು ನನಗೆ ತುಂಬಾ ಇಷ್ಟ. ಧೀರ ಭಗತ್ ರಾಯ್ ಸಮಾನತೆಗೆ ಒತ್ತು ಕೊಡುವ ಚಿತ್ರ. ತಂಡದ ಜೊತೆಗೆ ನಾ ಇರ್ತೀನಿ. ಯಾಕಂದ್ರೆ ಸಮಾನತೆ ಅನ್ನೋದು ನನಗೆ ಬಹಳ ಹೆಮ್ಮೆ ತರುವಂತ ವಿಚಾರ. ಅದರಲ್ಲೂ ಹೋರಾಟಗಾರರ ಕಥೆ ಅಂದ್ರೆ ನನಗೆ ಪ್ರೀತಿ. ಹೋರಾಟದ ಕಥೆಗಳಲ್ಲಿ ಕಿಚ್ಚು ಇರುತ್ತೆ. ನ್ಯಾಯ ನೀತಿ ಇರುತ್ತೆ. ಅದಕ್ಕೆ ಈ ಚಿತ್ರ ಜೊತೆಗೆ ನಾ ನಿಂತಿದ್ದೀನಿ. ಹೊಸ ತಂಡದ ಹೊಸಬರು ಮಾಡುವಂತಹ ಕಥೆಗಳು ವಿಭಿನ್ನವಾಗಿರುತ್ತವೆ" ಎಂದಿದ್ದಾರೆ.

"ನಾವು ಸಿನಿಮಾ ಮಾಡುವಾಗಲೇ ತುಂಬಾ ಕಷ್ಟ ಇತ್ತು, ಆದರೆ ಈಗ ಇನ್ನೂ ಕಷ್ಟ ಜಾಸ್ತಿ ಇದೆ. ಒಂದು ಚಿತ್ರ ಮಾಡೋದು ಅಂದ್ರೆ ಏಳೆಂಟು ಜನ್ಮ ಎತ್ತಿದ ಹಾಗೆ. ಧೀರ ಭಗತ್ ರಾಯ್ ಸತ್ಯ ನ್ಯಾಯ ನೀತಿ ಹೋರಾಟ ಇವೆಲ್ಲವುಗಳನ್ನ ಒಳಗೊಂಡ ಚಿತ್ರ ಅನ್ನೋದು ನನ್ನ ಭಾವನೆ. ಈ ಕುರಿತು ಚಿತ್ರತಂಡ ನನ್ನೊಟ್ಟಿಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದೆ. ಪೊಲೀಸು, ಕೋರ್ಟು, ನ್ಯಾಯ ಅನ್ನೋದನ್ನ ನಾವು ನಂಬಬೇಕು. ಸತ್ಯಕ್ಕೆ ಜಯ ಸಿಗ್ತಾ ಇದೆ. ನಾನು ಇವೆಲ್ಲವನ್ನು ನಂಬ್ತಿನಿ. ಬೆಂಬಲಿಸ್ತೀನಿ" ಎಂದರು ದುನಿಯಾ ವಿಜಯ್.‌

"ಪೊಲೀಸ್ ವ್ಯವಸ್ಥೆ, ಕೋರ್ಟು, ನ್ಯಾಯ ಅನ್ನೋದು ಇಲ್ಲದೆ ಹೋಗಿದ್ರೆ ಭಾರತದ ಪರಿಸ್ಥಿತಿ, ನಮ್ಮ ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು. ಧೀರ ಭಗತ್ ರಾಯ್ ಟ್ರೈಲರ್ ಲಾಂಚ್ ಮಾಡಿ ಟ್ರೈಲರ್ ನೋಡಿದಾಗ ನನಗೆ ತುಂಬಾ ಹೆಮ್ಮೆ ಅನಿಸ್ತಿದೆ. ಇಂತಹ ಸಿನಿಮಾಗಳು ಗೆಲ್ಲಬೇಕು. ನ್ಯಾಯ ನೀತಿ ಸತ್ಯ ಯಾವತ್ತೂ ಜನರಿಗೆ ಸಿಗುವಂತಾಗಬೇಕು. ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಒಳ್ಳೆಯ ನಾಯಕ, ನಾಯಕಿ. ನಿರ್ದೇಶಕರು ಹಾಗೂ ಒಂದು ಒಳ್ಳೆಯ ತಂಡ ಸಿಕ್ಕಂತಾಗಿದೆ ಅನ್ನೋ ಭರವಸೆ ನನಗಿದೆ. ನೀವೆಲ್ಲರೂ ನಾವೆಲ್ಲರೂ ಕಥೆಯನ್ನ ಆರಾಧಿಸೋಣ. ಕಥೆ ಗೆದ್ದರೆ ನಾವು ಗೆಲ್ತಿವಿ. ನಮ್ಮನ್ನು ನಾವು ಆರಾಧಿಸಿಕೊಳ್ಳುವುದು ಬೇಡ ಇದು ನನ್ನ ಸಲಹೆ" ಎಂಬುದು ದುನಿಯಾ ವಿಜಯ್‌ ಮಾತು.

ಹೀಗಿದೆ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗ

ಧೀರ ಭಗತ್ ರಾಯ್ ಚಿತ್ರವನ್ನು ನವ ನಿರ್ದೇಶಕ ಕರ್ಣನ್ ಈ ಚಿತ್ರಕ್ಕೆ ಕಥೆ, ಚಿತ್ರಕತೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ರಾಕೇಶ್ ದಳವಾಯಿ ನಾಯಕನಾದರೆ, ಸುಚರಿತಾ ನಾಯಕಿಯಾಗಿ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಇನ್ನುಳಿದಂತೆ ನಟರಾದ ಶರತ್ ಲೋಹಿತಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ ಹೆಚ್ ಸಿ, ಹರಿರಾಮ್, ಕೆ.ಎ ಮ್ ಸಂದೇಶ್, ಸುಧೀರ್ ಕುಮಾರ್ ಮುರೋಳಿ ಸೇರಿ ಹಲವು ಕಲಾವಿದರು ನಟಿಸಿದ್ದಾರೆ.

ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ತಾಂತ್ರಿಕವಾಗಿ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿರೋ ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಸೆಲ್ಪಂ ಜಾನ್ ಛಾಯಾಗ್ರಹಣ ಮಾಡಿದ್ದಾರೆ. ಎನ್.ಎಂ ವಿಶ್ವ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಭೂ ಸುಧಾರಣೆ ಕಾಯ್ದೆ ಹಿನ್ನೆಲೆಯಲ್ಲಿ ಈ ಸಿನಿಮಾ ಸಿದ್ಧವಾಗಿದ್ದು, ಡಿಸೆಂಬರ್‌ನಲ್ಲಿ ರಿಲೀಸ್‌ ಆಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ