Yash: ಗೇಲಿ ಮಾಡೋರ ಬಾಯಿಗೆ ಗೋಲಿ ಹೊಡೆದ ಯಶ್; ‘ನೀನು ನೀನಾಗಿರು..’ ಎಂದು ನಾಲ್ಕು ಭಾಷೆಯಲ್ಲಿ ಹೊಸ ವಿಡಿಯೋ ಶೇರ್ ಮಾಡಿದ ರಾಕಿಂಗ್ ಸ್ಟಾರ್
Mar 23, 2023 03:46 PM IST
ಗೇಲಿ ಮಾಡೋರ ಬಾಯಿಗೆ ಗೋಲಿ ಹೊಡೆದ ಯಶ್; ‘ನೀನು ನೀನಾಗಿರು..’ ಎಂದು ನಾಲ್ಕು ಭಾಷೆಯಲ್ಲಿ ಹೊಸ ವಿಡಿಯೋ ಶೇರ್ ಮಾಡಿದ ರಾಕಿಂಗ್ ಸ್ಟಾರ್..
ಖಡಕ್ ಡೈಲಾಗ್ ಇರುವ ಯಶ್ ಅವರ ಹೊಸ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Yash: ಸ್ಯಾಂಡಲ್‌ವುಡ್ ನಟ ಯಶ್ ಸಿನಿಮಾಗಾಗಿ ಕೇವಲ ಕರ್ನಾಟಕದ ಅಭಿಮಾನಿಗಳು ಮಾತ್ರವಲ್ಲ ಅವರ ಪ್ಯಾನ್ ಇಂಡಿಯಾ ಫ್ಯಾನ್ಸ್ ಸಹ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ತುಟಿ ಬಿಚ್ಚಿಲ್ಲ. ಮಹತ್ತರವಾದದ್ದು ನಡೆಯುತ್ತಿದೆ ಎಂದು ತಮ್ಮ ಹುಟ್ಟುಹಬ್ಬದ ದಿನ ಹೇಳಿಕೊಂಡಿದ್ದನ್ನು ಬಿಟ್ಟರೆ, ತಮ್ಮ #Yash19 ಚಿತ್ರದ ಬಗ್ಗೆ ಸಣ್ಣ ಸುಳಿವೂ ಹೊರಬಿದ್ದಿಲ್ಲ. ಈ ನಡುವೆ ಅವರ ಸೋಷಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋವೊಂದು ತೇಲಿಬಂದಿದೆ. ಗೇಲಿ ಮಾಡುವವರಿಗೆ ಗೋಲಿ ಹೊಡಿ ಎಂದು ಸ್ವತಃ ಯಶ್ ಹೇಳಿದ್ದಾರೆ.
ಹೌದು, ವಿಡಿಯೋ ಏನೋ ಹೊರಬಿದ್ದಿದೆ. ಲಕ್ಷಾಂತರ ವೀಕ್ಷಣೆ ಕಂಡಿದೆ. ಆದರೆ, ಅಭಿಮಾನಿಗಳು ಮಾತ್ರ ಥ್ರಿಲ್ ಆಗಿಲ್ಲ. ಅಂದರೆ, ಯಶ್ ಶೇರ್ ಮಾಡಿದ ವಿಡಿಯೋ ಸಿನಿಮಾಕ್ಕೆ ಸಂಬಂಧಿಸಿದ್ದಲ್ಲ! ಬದಲಿಗೆ ಪೆಪ್ಸಿ ಕಂಪನಿಯ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ವಿಡಿಯೋ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿದೆ. ಇನ್ನುಳಿದ ಮೂರು ಭಾಷೆಯಲ್ಲಿಯೂ ಯಶ್ ಅವರೇ ಧ್ವನಿಯಾಗಿದ್ದಾರೆ.
ಯಶ್ ಹೇಳಿದ ಡೈಲಾಗ್
ಈ ಜಾಹೀರಾತಿನಲ್ಲಿ ನಟ ಯಶ್ ಸಿನಿಮಾ ರೀತಿಯಲ್ಲಿಯೇ ಡೈಲಾಗ್ ಹೊಡೆದಿದ್ದಾರೆ. ‘ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿ ಮಾತಿನ ದಾಳಿ ಮಾಡ್ತಾರೆ. ಇದು ಮಾಡು, ಅದು ಬೇಡ ಅಂತಾರೆ. ಹೇಳಿದ್ದು ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ, ಮಾತಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರು’ ಎಂದಿದ್ದಾರೆ ಯಶ್.
ಜಾಹೀರಾತು ಕ್ಷೇತ್ರದಲ್ಲಿ ಯಶ್‌ಗೆ ಬೇಡಿಕೆ..
ಕೆಜಿಎಫ್ ಸರಣಿ ಸಿನಿಮಾಗಳಿಂದ ಯಶ್ ಕೇವಲ ಚಂದನವನಕ್ಕೆ ಸೀಮಿತವಾದ ನಟರಾಗಿ ಹೊರಹೊಮ್ಮಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಬೆಳೆದು ನಿಂತಿದ್ದಾರೆ. ಸಿನಿಮಾಗಳಷ್ಟೇ ಅಲ್ಲ ಜಾಹೀರಾತು ಕಂಪನಿಗಳೂ ಸಹ ಅವರ ಹಿಂದೆ ಬಿದ್ದಿವೆ. ಹಲವು ಬ್ರಾಂಡ್‌ಗಳಿಗೆ ಯಶ್ ರಾಯಭಾರಿ ಆಗಿದ್ದಾರೆ. ಅದರಂತೆ ಪೆಪ್ಸಿ ಕಂಪನಿಗೂ ಯಶ್ ಈ ಹಿಂದೆಯೇ ರಾಯಭಾರಿಯಾಗಿದ್ದರು. ಇದೀಗ ಅದೇ ಕಂಪನಿಯ ಹೊಸ ವಿಡಿಯೋದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಕನ್ನಡದಲ್ಲಿ ಪೆಪ್ಸಿ ಕಂಪನಿಗೆ ರಾಯಭಾರಿಯಾದ ಮೊದಲ ಸ್ಯಾಂಡಲ್‌ವುಡ್ ನಟ ಎಂಬ ಉಪಮೇಯವೂ ಯಶ್‌ಗೆ ಲಭಿಸಿದೆ.
ತಮಿಳು ನಟನ ದೇವಕಾರ್ಯಕ್ಕೆ ಯಶ್ ಸಹಾಯ
ಡೇನಿಯಲ್ ಬಾಲಾಜಿ ತಮಿಳು ಖ್ಯಾತ ನಟ ಸಿದ್ದಲಿಂಗಯ್ಯ ಅವರ ಸೋದರ ಸಂಬಂಧಿ. ತಮಿಳು ಸಿನಿಮಾರಂಗದಲ್ಲಿ ಬಾಲಾಜಿ ವಿಲನ್ ಆಗಿ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಕೂಡಾ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ತೆರೆ ಕಂಡ 'ಕಿರಾತಕ' ಚಿತ್ರದ ಮೂಲಕ ಡೇನಿಯಲ್ ಬಾಲಾಜಿ ಕನ್ನಡಕ್ಕೆ ಬಂದರು. ಕಿರಾತಕ ಸಿನಿಮಾದಲ್ಲಿ ನಟಿಸುವ ಮುನ್ನ ನಟ ಯಶ್, ತಮ್ಮ ಸಿನಿಮಾದಲ್ಲಿ ನಟಿಸಲು ಬಾಲಾಜಿ ಅವರಿಗೆ ಕರೆ ಮಾಡಿದ್ದಾರೆ. ಆದರೆ ಆ ಸಮಯದಲ್ಲಿ ಬಾಲಾಜಿ, ತಮಿಳುನಾಡಿನಲ್ಲಿ ದೇವಸ್ಥಾನ ಕಟ್ಟಿಸುತ್ತಿದ್ದರಿಂದ ನನಗೆ ದೇವಸ್ಥಾನದ ಕೆಲಸ ಇದೆ ಆದ್ದರಿಂದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಂಭಾವನೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಯಶ್ ಹಾಗೂ ಬಾಲಾಜಿ ಒಂದೆರಡು ನಿಮಿಷ ಮಾತನಾಡಿದ್ದಾರೆ. ನಂತರ ನಿರ್ಮಾಪಕರ ಬಳಿ ಮಾತನಾಡುವಂತೆ ಹೇಳಿ ಯಶ್ ಪೋನ್ ಇಟ್ಟಿದ್ದಾರೆ. ಅದಾದ ಮರುಕ್ಷಣ ಬಾಲಾಜಿ ಅವರ ಮೊಬೈಲ್‌ಗೆ ಮೆಸೇಜ್ ಬಂದಿದೆ. ಅದೇನು ಎಂದು ತೆರೆದು ನೋಡಿದರೆ ಯಶ್, ಬಾಲಾಜಿಗೆ ಒಂದಿಷ್ಟು ಹಣ ಕಳಿಸಿದ್ದಾರೆ. ಆಶ್ಚರ್ಯ ವ್ಯಕ್ತಪಡಿಸಿದ ಬಾಲಾಜಿ ಯಶ್‌ಗೆ ಕರೆ ಮಾಡಿ, ಇದೇನು ಸರ್ ಇನ್ನೂ ನಾನು ಸಂಭಾವನೆ ವಿಚಾರವಾಗಿ ಮಾತನಾಡಿಲ್ಲ ಆಗಲೇ ದುಡ್ಡು ಕಳಿಸಿದ್ದೀರಿ? ಎಂದು ಕೇಳಿದಾಗ, ಇದು ನಾನು ನಿಮ್ಮ ದೇವಸ್ಥಾನಕ್ಕೆ ನೀಡುತ್ತಿರುವ ದೇಣಿಗೆ ಎಂದು ಯಶ್ ಹೇಳುತ್ತಾರೆ.
ಈ ವಿಚಾರವನ್ನು ಡೇನಿಯಲ್ ಬಾಲಾಜಿ ಇತ್ತೀಚೆಗೆ ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಯಶ್ ಸಹಾಯದ ಮನೋಭಾವ ತಿಳಿದು ನೆಟಿಜನ್ಸ್ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಯಶ್ ಇಮೇಜ್ ಕೆಜಿಎಫ್ ನಂತರ ಸಂಪೂರ್ಣ ಬದಲಾಗಿದೆ. ಆದರೆ ಅದಕ್ಕೂ ಮುನ್ನವೇ ಯಶ್ ಜನರಿಗೆ ಈ ರೀತಿ ಸಹಾಯ ಮಾಡುತ್ತಿದ್ದರು ಎಂದು ಕೇಳಿ ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.