'UI' ಚಿತ್ರಕ್ಕೆ ಬಾಲಿವುಡ್‌ನಿಂದ ಬಂತು ಶುಭಹಾರೈಕೆ; ನಾನು ಉಪೇಂದ್ರ ಅಭಿಮಾನಿ ಎಂದ ಆಮೀರ್ ಖಾನ್
Dec 12, 2024 08:21 AM IST
'UI' ಚಿತ್ರಕ್ಕೆ ಬಾಲಿವುಡ್‌ನಿಂದಲೂ ಶುಭಹಾರೈಕೆ; ನಾನು ಉಪೇಂದ್ರ ಅಭಿಮಾನಿ ಎಂದ ಆಮೀರ್ ಖಾನ್
- ಉಪೇಂದ್ರ ಬಹಳ ಚೆನ್ನಾಗಿ ಟ್ರೇಲರ್ ಮಾಡಿದ್ದೀರಾ. ಇದು ದೊಡ್ಡ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಹಿಂದಿ ಪ್ರೇಕ್ಷಕರು ಸಹ ಈ ಚಿತ್ರವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ನನಗೆ ಟ್ರೇಲರ್ ನೋಡಿದಾಗ ನಿಜಕ್ಕೂ ಶಾಕ್ ಆಯ್ತು. ಅದ್ಭುತ ಟ್ರೇಲರ್ ಎಂದು ಬಾಲಿವುಡ್ ನಟ ಆಮೀರ್ ಖಾನ್ 'UI' ಚಿತ್ರಕ್ಕೆ ಶುಭಾಶಯ ಹೇಳಿದ್ದಾರೆ. (ವರದಿ: ಚೇತನ್ ನಾಡಿಗೇರ್)
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ 'UI' ಚಿತ್ರದ ಬಿಡುಗಡೆಗೆ ಇನ್ನು ಎಂಟು ದಿನಗಳು ಮಾತ್ರ ಬಾಕಿ ಇದೆ. ಆದರೆ, ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಲ್ಲಿದೆ. ಹೀಗಿರುವಾಗಲೇ, ಬಾಲಿವುಡ್ ನಟ ಆಮೀರ್ ಖಾನ್ ಚಿತ್ರದ ಟ್ರೇಲರ್ ನೋಡಿ ಮೆಚ್ಚಿಕೊಂಡಿರುವುದಷ್ಟೇ ಅಲ್ಲದೆ, ಚಿತ್ರ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ.
ಈ ಕುರಿತು ಮಾತನಾಡಿರುವ ಆಮೀರ್, ‘ನಾನು ಇವತ್ತು ಒಬ್ಬರ ಜೊತೆಗೆ ಇದ್ದೇನೆ. ನಾನು ಅವರ ದೊಡ್ಡ ಅಭಿಮಾನಿ. ಡಿಸೆಂಬರ್ 20ರಂದು ಅವರ ಚಿತ್ರ ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಹಳ ಅದ್ಭುತವಾಗಿದೆ. ನೋಡಿ ಖುಷಿಯಾಯ್ತು ಎಂದು ಉಪೇಂದ್ರ ಅವರನ್ನು ಪರಿಚಯಿಸುತ್ತಾರೆ. ‘ಉಪೇಂದ್ರ ಬಹಳ ಚೆನ್ನಾಗಿ ಟ್ರೇಲರ್ ಮಾಡಿದ್ದೀರಾ. ಇದು ದೊಡ್ಡ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಹಿಂದಿ ಪ್ರೇಕ್ಷಕರು ಸಹ ಈ ಚಿತ್ರವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ನನಗೆ ಟ್ರೇಲರ್ ನೋಡಿದಾಗ ನಿಜಕ್ಕೂ ಶಾಕ್ ಆಯ್ತು. ಅದ್ಭುತ ಟ್ರೇಲರ್. ನಿಜಕ್ಕೂ ಚೆನ್ನಾಗಿ ಮೂಡಿಬಂದಿದೆ. ನಿಮಗೆ ಒಳ್ಳೆಯದಾಗಬೇಕು, ಚಿತ್ರ ದೊಡ್ಡ ಯಶಸ್ಸು ಕಾಣಬೇಕು’ ಎಂದು ಹಾರೈಸಿದ್ದಾರೆ. ವಿಶೇಷವೆಂದರೆ, ಅವರೇ ವಿಡಿಯೋ ಮಾಡಿ, ಉಪೇಂದ್ರರನ್ನು ಅಪ್ಪಿಕೊಂಡು, ಶುಭಾಶಯ ಹೇಳಿದ್ದಾರೆ.
ಇದುವರೆಗೂ ಬೇರೆ ಭಾಷೆಗಳ ಹಲವು ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಉಪೇಂದ್ರ ಅವರ ಚಿತ್ರಗಳು ಮತ್ತು ಕಾರ್ಯವೈಖರಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಬಾಲಿವುಡ್ ನಟ ಆಮೀರ್ ಖಾನ್ ಸಹ ತಾನು ಉಪೇಂದ್ರ ಅವರ ಅಭಿಮಾನಿ ಎಂದಿರುವುದು ವಿಶೇಷ.
ಇದಕ್ಕೆ ಪ್ರತಿಕ್ರಿಯಿಸಿರುವ ಉಪೇಂದ್ರ, ‘ಆಮೀರ್ ಖಾನ್ ಅವರನ್ನು ಭೇಟಿ ಮಾಡುವ ನನ್ನ ಬಹು ವರ್ಷಗಳ ಕನಸು ಇಂದು ನನಸಾಗಿದೆ. ‘UI’ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಉಪೇಂದ್ರ ನಟನೆ, ನಿರ್ದೇಶನ
‘UI’ ಚಿತ್ರದ ವಾರ್ನರ್, ಕಳೆದ ವಾರ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ಯಶಸ್ವಿಯಗಿದೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಜಿ ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ಜೊತೆಯಾಗಿ ನಿರ್ಮಿಸಿರುವ ‘UI’ ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಉಪೇಂದ್ರ ನಾಯಕನಾಗಿಯೂ ಕಾಣಿಸಿಕೊಂಡಿದ್ದು, ಅವರ ಜೊತೆಗೆ ರೀಷ್ಮಾ ನಾಣಯ್ಯ ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ನಿಧಿ ಸುಬ್ಬಯ್ಯ, ಗುರುಪ್ರಸಾದ್ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.
- (ವರದಿ: ಚೇತನ್ ನಾಡಿಗೇರ್)
ಇದನ್ನೂ ಓದಿ | UI Movie: ನಟ ಉಪೇಂದ್ರ ಸಿನಿಮಾ ಚೌಕಟ್ಟಿದು, ಬುದ್ಧಿವಂತ ನಿರ್ದೇಶಕ ಅಂದ್ರೆ ಇದೇ-ಇಷ್ಟೇ ಅಲ್ಲವಾ?