ಮಂತ್ರಾಲಯದಲ್ಲಿ ನಟ ಜಗ್ಗೇಶ್; ಉತ್ತರ ಆರಾಧನೆಯಂದು ಅಭಿಮಾನಿಗಳಿಗೆ ರಾಯರ ದರ್ಶನ ಮಾಡಿಸಿದ ನವರಸನಾಯಕ
Aug 22, 2024 01:17 PM IST
ಮಂತ್ರಾಲಯದಲ್ಲಿ ನಟ ಜಗ್ಗೇಶ್; ಉತ್ತರ ಆರಾಧನೆಯಂದು ಅಭಿಮಾನಿಗಳಿಗೆ ರಾಯರ ದರ್ಶನ ಮಾಡಿಸಿದ ನವರಸನಾಯಕ
ಮಂತ್ರಾಲಯದಲ್ಲಿ ನಡೆಯುತ್ತಿರುವ ರಾಘವೇಂದ್ರ ಸ್ವಾಮಿಗಳ 1671ನೇ ಆರಾಧನಾ ಮಹೋತ್ಸವದಲ್ಲಿ ನಟ ಜಗ್ಗೇಶ್ ಭಾಗಿಯಾಗಿದ್ದಾರೆ. ಉತ್ತರ ಆರಾಧನೆಯಂದು ಮೂಲಕ ಬೃಂದಾವನದ ವಿಡಿಯೋವನ್ನು ಜಗ್ಗೇಶ್ ತಮ್ಮ ಸೋಷಿಯಲ್ ಮೀಡಿಯಾಗೆ ಹಂಚಿಕೊಂಡಿದ್ದಾರೆ.
ಇದೇ ತಿಂಗಳ 18 ರಿಂದ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯುತ್ತಿದೆ. ಆರಾಧನೆ ಪ್ರಯುಕ್ತ ಆ. 24 ವರೆಗೂ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ. ರಾಜ್ಯದಲ್ಲಿ ಆಗಸ್ಟ್ 20 ಮಂಗಳವಾರ ಪೂರ್ವಾರಾಧನೆ, ಆ.21 ಮಧ್ಯಾರಾಧನೆ ಹಾಗೂ ಇಂದು (ಆ 22)ರಂದು ಉತ್ತರ ಆರಾಧನೆ ನಡೆಯುತ್ತಿದೆ.
2 ದಿನಗಳ ಮುನ್ನವೇ ಮಂತ್ರಾಲಯಕ್ಕೆ ತೆರಳಿರುವ ಜಗ್ಗೇಶ್
ಆರಾಧನೆ ಪ್ರಯುಕ್ತ ಭಕ್ತರು ಮಂತ್ರಾಲಯಕ್ಕೆ ತೆರಳಿ ಗುರು ರಾಘವೇಂದ್ರರ ದರ್ಶನ ಪಡೆಯುತ್ತಿದ್ದಾರೆ. ಅಷ್ಟು ದೂರದವರೆಗೂ ತೆರಳಲು ಸಾಧ್ಯವಾಗದೆ ಇರುವವರು ಸಮೀಪದಲ್ಲೇ ಇರುವ ರಾಯರ ಮಠಕ್ಕೆ ಹೋಗಿ ಬರುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟ ನವರಸನಾಯಕ ಜಗ್ಗೇಶ್ ಕೂಡಾ ರಾಯರ ಭಕ್ತರು. ಪ್ರತಿವರ್ಷ ತಮ್ಮ ಹುಟ್ಟುಹಬ್ಬ, ರಾಘವೇಂದ್ರ ಸ್ವಾಮಿಗಳ ಆರಾಧನೆ ಸೇರಿದಂತೆ ತಮಗೆ ರಾಯರ ದರ್ಶನ ಮಾಡಬೇಕು ಎನಿಸಿದಾಗಲೆಲ್ಲಾ ಜಗ್ಗೇಶ್ ಮಂತ್ರಾಲಯಕ್ಕೆ ಹೋಗಿ ಬರುತ್ತಾರೆ. ಪ್ರತಿ ಗುರುವಾರ ಮೂಲ ಬೃಂದಾವನದ ಫೋಟೋ, ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ನಟ ಜಗ್ಗೇಶ್ ಇಂದು ಕೂಡಾ ಅಭಿಮಾನಿಗಳಿಗೆ ರಾಯರ ಬೃಂದಾವನ ದರ್ಶನ ಮಾಡಿಸಿದ್ದಾರೆ.
ಜಗ್ಗೇಶ್ ತಮ್ಮ ಕುಟುಂಬ ಸಹಿತ ಮೊನ್ನೆಯೇ ಮಂತ್ರಾಲಯಕ್ಕೆ ತೆರಳಿದ್ದಾರೆ. ಇಂದು ಮಂತ್ರಾಲಯದಲ್ಲಿ ಉತ್ತರ ಆರಾಧನೆ ನಡೆಯುತ್ತಿದೆ. ಜನರ ಮಧ್ಯೆ ಸಾಮಾನ್ಯ ಭಕ್ತನಂತೆ ಕುಳಿತಿರುವ ಜಗ್ಗೇಶ್ ರಾಯರ ಮೂಲಕ ಬೃಂದಾವನದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶುಭ ಗುರುವಾರ ಸರ್ವೇಜನಾಃಸುಖಿನೋಭವಂತು ಎಂದು ಜಗ್ಗೇಶ್ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಜಗ್ಗೇಶ್ ಹಂಚಿಕೊಂಡಿರುವ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಖಾತೆಗಳಿಗೂ ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ದಯೆಯಿಂದ ನಿಮ್ಮ ಮುಖಾಂತರ ದೂರದಿಂದಲೇ ರಾಯರ ದರ್ಶನ ಮಾಡಿದೇನು ಸರ್ , ನಿಮಗೆ ಕೋಟಿ ಕೋಟಿ ನಮನಗಳು,ರಾಯರ ದಶ೯ನ ಮಾಡಿಸಿ ನಮ್ಮನ ಪಾವನರಾಗಿಸಿದಿರಿ, ಧನ್ಯೋಸ್ಮಿ, ಒಳ್ಳೆಯ ವಿಡಿಯೋ, ಗುರು ರಾಘವೇಂದ್ರ ಸ್ವಾಮಿಗಳು ಎಲ್ಲಾರಿಗೂ ಒಳ್ಳೆದು ಮಾಡಲಿ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಜಗ್ಗೇಶ್ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.
ರಾಘವೇಂದ್ರ ಸ್ವಾಮಿಗಳ 1671ನೇ ಆರಾಧನೆ
ಇಂದು ರಾಘವೇಂದ್ರ ಸ್ವಾಮಿಗಳ 1671ನೇ ಆರಾಧನೆ, ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾದರು. ಅಂದಿನಿಂದ ಪ್ರತಿ ವರ್ಷವೂ ಈ ಸಮಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ ಆಚರಿಸಿಕೊಂಡು ಬರಲಾಗುತ್ತಿದೆ. ಆರಾಧನೆ ಪ್ರಯುಕ್ತ ಮಂತ್ರಾಲಯದಲ್ಲಿ ಪ್ರತಿದಿನ ಸಂಜೆ 5.30 ರಿಂದ 9.30ವರೆಗೆ ಭರತನಾಟ್ಯ, ದಾಸವಾಣಿ, ವಾದ್ಯ ಸಂಗೀತ, ಹಿಂದೂಸ್ತಾನಿ ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇನ್ನು ಜಗ್ಗೇಶ್ ಸಿನಿಮಾಗಳ ಬಗ್ಗೆ ಹೇಳುವುದಾರೆ ಇದೇ ವರ್ಷ ಮಾರ್ಚ್‌ನಲ್ಲಿ ಜಗ್ಗೇಶ್ ಅಭಿನಯದ ರಂಗನಾಯಕ ರಿಲೀಸ್ ಆಗಿತ್ತು. ಚಿತ್ರವನ್ನು ಮಠ ಸಿನಿಮಾ ನಿರ್ದೇಶಕ ಗುರುಪ್ರಸಾದ್ ನಿರ್ದೇಶಿಸಿದ್ದರು. ಈ ಸಿನಿಮಾ ನಂತರ ಜಗ್ಗೇಶ್ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ.