Kushboo Sundar: ನನ್ನನ್ನು ಎತ್ತಿ ಆಡಿಸಿದ ಅಪ್ಪನಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ! ಮೌನ ಮುರಿದ ‘ರಣಧೀರ’ನ ಬೆಡಗಿ ಖುಷ್ಬೂ ಸುಂದರ್
Aug 28, 2024 02:04 PM IST
ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದೊಂದೆ ಆಚೆ ಬರುತ್ತಿದ್ದಂತೆ, ಒಂದು ಕಾಲದ ಸ್ಟಾರ್ ನಟಿ ಖುಷ್ಬೂ ಸುಂದರ್ ಸಹ ಸುದೀರ್ಘ ಬರಹದ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ.
- ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದೊಂದೆ ಆಚೆ ಬರುತ್ತಿದ್ದಂತೆ, ಒಂದು ಕಾಲದ ಸ್ಟಾರ್ ನಟಿ ಖುಷ್ಬೂ ಸುಂದರ್ ಸಹ ಸುದೀರ್ಘ ಬರಹದ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ತನ್ನ ತಂದೆಯಿಂದಲೇ ಲೈಂಗಿಕ ನಿಂದನೆ ಅನುಭವಿಸಿದ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ.
Khushbu Sundar Opens Up About Sexual Abuse: ಒಂದು ಕಾಲದಲ್ಲಿ ಸೌತ್ ಸಿನಿಮಾರಂಗದ ಸ್ಟಾರ್ ನಟಿಯಾಗಿ ಮಿಂಚಿ, ಇಂದಿಗೂ ಸಿನಿಮಾ ಜತೆಗೆ ರಾಜಕೀಯದಲ್ಲಿ ಸಕ್ರಿಯರಾದವರು ನಟಿ ಖುಷ್ಬೂ ಸುಂದರ್. ದಕ್ಷಿಣದ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಬಾಲಿವುಡ್‌ನಲ್ಲಿಯೂ ಗುರುತಿಸಿಕೊಂಡವರು ಖುಷ್ಬೂ. ಹಿಂದಿಯಲ್ಲಿ ಬಾಲನಟಿಯಾಗಿ ನಟಿಸಿ, ಅದಾದ ಬಳಿಕ ನಾಯಕಿ ಪಟ್ಟ ಅಲಂಕರಿಸಿದರು. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಂಜದ ಗಂಡು ಸಿನಿಮಾ ಮೂಲಕ ಚಂದನವನದ ಬಾಗಿಲು ತಟ್ಟಿದ ಈ ನಟಿ, ಅದಾದ ಮೇಲೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. ಆದರೆ, ಇದೇ ನಟಿಗೆ ಆ ಸಮಯದಲ್ಲಿಯೇ ಲೈಂಗಿಕ ಕಿರುಕುಳದಂಥ ಕೆಟ್ಟ ಅನುಭವಗಳಾಗಿದ್ದವು. ಅದೂ ಹೆತ್ತ ಅಪ್ಪನಿಂದಲೇ!
ಪಕ್ಕದ ಮಾಲಿವುಡ್‌ನಲ್ಲೀಗ ಮೀಟೂ ಚಳವಳಿಯೇ ಆರಂಭವಾಗಿದೆ. ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ, ನಟಿಯರು ಎದುರಿಸುತ್ತಿರುವ ಸಮಸ್ಯೆಗಳೇನು? ಸಿನಿಮಾ ಅವಕಾಶಕ್ಕಾಗಿ ನಟಿಯರನ್ನು ಹೇಗೆಲ್ಲ ಬಳಸಿಕೊಳ್ಳಲಾಗುತ್ತಿದೆ.. ಹೀಗೆ ಒಂದಷ್ಟು ದೂರು ಆಧರಿಸಿ ಜಸ್ಟಿಸ್ ಹೇಮಾ ಸಮಿತಿ ವಿಸ್ತೃತ ವರದಿಯನ್ನು ಇತ್ತೀಚೆಗಷ್ಟೇ ಕೇರಳ ಸರ್ಕಾರಕ್ಕೆ ಒಪ್ಪಿಸಿತ್ತು. ಅದಾದ ಮೇಲೆ ಆ ವರದಿಯಲ್ಲಿನ ಅಂಶಗಳು ಬೆಳಕಿಗೆ ಬರುತ್ತಿದ್ದಂತೆ, ಇಡೀ ಮಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಲೈಂಗಿಕ ಕಿರುಕುಳ ಅನುಭವಿಸಿದ ನಟಿಯರು ಮಾಧ್ಯಮದ ಮುಂದೆ ಬಂದು, ತಮಗಾದ ಕೆಟ್ಟ ಅನುಭವ ಬಿಚ್ಚಿಡುತ್ತಿದ್ದಾರೆ.
ಪೋಸ್ಟ್ ಹಂಚಿಕೊಂಡ ಖುಷ್ಬೂ
ಅದೇ ರೀತಿ ಈ ಸಮಿತಿಯ ಕಾರ್ಯವನ್ನು ಶ್ಲಾಘಿಸಿದ ನಟಿ, ರಾಜಕಾರಣಿ ಖುಷ್ಬೂ ಸುಂದರ್, ಇಂಥ ಬದಲಾವಣೆಗಳು ಚಿತ್ರೋದ್ಯಮಕ್ಕೆ ಬೇಕು. ಕೆಟ್ಟ ಅನುಭವ ಆದ ತಕ್ಷಣವೇ ಅದನ್ನು ಕಾನೂನಿನ ಮುಂದಿಡಬೇಕು, ತನಿಖೆಗೂ ಅದು ಅನುಕೂಲ ಎಂದಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸುದೀರ್ಘ ಬರಹ ಬರೆದುಕೊಂಡಿರುವ ಖುಷ್ಬೂ ಸುಂದರ್, ತಮ್ಮ ತಂದೆಯಿಂದಲೇ ನಿಂದನೆಗೊಳಗಾದ ವಿಚಾರವನ್ನು ಮತ್ತೊಮ್ಮೆ ಈ ವೇಳೆ ಹೇಳಿಕೊಂಡಿದ್ದಾರೆ. ಹೀಗಿವೆ ಖುಷ್ಬೂ ಬರೆದ ಸಾಲುಗಳು.
ಹೆತ್ತ ತಂದೆಯಿಂದಲೇ ನಿಂದನೆ..
"ನನ್ನ ತಂದೆಯ ನಿಂದನೆಯ ಬಗ್ಗೆ ಮಾತನಾಡಲು ನನಗೆ ಇಷ್ಟು ಸಮಯ ತೆಗೆದುಕೊಂಡಿತು ಎಂದು ಕೆಲವರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಈ ಮಾತನ್ನು ನಾನು ಒಪ್ಪುತ್ತೇನೆ. ಮತ್ತು ನಾನು ಈ ನಿಂದನೆಯ ಬಗ್ಗೆ ಆವತ್ತೇ ಮಾತನಾಡಬೇಕಿತ್ತೆಂದು. ಆದರೆ ನನಗೆ ಏನಾಯಿತು ಎಂದು ನಾನೇ ತೋಚದಂತಾದೆ. ನನ್ನ ವೃತ್ತಿಜೀವನವನ್ನು ಸುಂದರವಾಗಿಸಿಕೊಳ್ಳಲು ನಾನು ರಾಜಿಯಾಗಲಿಲ್ಲ. ನಾನು ಬಿದ್ದರೆ ನನ್ನನ್ನು ಎತ್ತಿ ಹಿಡಿಯಬೇಕಿದ್ದ ಬಲವಾದ ತೋಳುಗಳೇ ನನ್ನನ್ನು ನಿಂದಿಸಿದವು. ಅಪ್ಪ ಎನಿಸಿಕೊಳ್ಳುವ ವ್ಯಕ್ತಿಯ ಕೈಯಲ್ಲಿ ನಾನು ನಿಂದನೆಗೆ ಒಳಗಾಗಿದ್ದೇನೆ" ಎಂದಿದ್ದಾರೆ ಖುಷ್ಬೂ.
ತಕ್ಷಣಕ್ಕೆ ಹೇಳಿಕೊಳ್ಳಿ..
ಮುಂದುವರಿದು, "ಮಾಲಿವುಡ್ ಚಿತ್ರೋದ್ಯಮದಲ್ಲಿನ ಈ ಸಂಚಲನ ಕಂಡು ನನ್ನ 24 ವರ್ಷದ ಮತ್ತು 21 ವರ್ಷದ ಇಬ್ಬರು ಹೆಣ್ಣುಮಕ್ಕಳಿಬ್ಬರು ಸಂತ್ರಸ್ತೆಯರಿಗಾಗಿ ಮಿಡಿದರು. ಅವರ ಜತೆಗೆ ಈ ಬಗ್ಗೆ ಸುದೀರ್ಘ ಸಂಭಾಷಣೆ ನಡೆಸಿದೆ. ಸಂತ್ರಸ್ತರ ಬಗ್ಗೆ ಅವರ ಸಹಾನುಭೂತಿ ತೋರಿಸಿದರು. ಆದರೆ, ಇದೆಲ್ಲದಕ್ಕಿಂತ ಮುಖ್ಯವಾದದ್ದು ಏನೆಂದರೆ, ಇಂಥ ಘಟನೆ ಬಗ್ಗೆ ನೀವು ಇಂದು ಅಥವಾ ನಾಳೆ ಮಾತನಾಡುತ್ತೀರಾ ಎಂಬುದು ಮುಖ್ಯವಲ್ಲ, ಮಾತನಾಡುವುದು ಮಹತ್ವದ್ದಾಗಿದೆ. ಇಂಥ ಕೃತ್ಯ ನಡೆದ ತಕ್ಷಣವೇ ಮಾತನಾಡುವುದರಿಂದ ಪರಿಣಾಮಕಾರಿ ತನಿಖೆಗೂ ಸಹಾಯವಾಗುತ್ತದೆ" ಎಂದಿದ್ದಾರೆ.
ಒಬ್ಬ ಮಹಿಳೆ ಮತ್ತು ತಾಯಿಯಾಗಿ, ಇಂತಹ ಹಿಂಸಾಚಾರದಿಂದ ಉಂಟಾದ ಗಾಯಗಳು ದೇಹದಲ್ಲಿ ಮಾತ್ರವಲ್ಲದೆ ಆತ್ಮದಲ್ಲಿಯೂ ಆಳವಾಗಿ ನಮ್ಮನ್ನು ಇರಿದಿರುತ್ತವೆ. ಈ ಕ್ರೂರ ಕೃತ್ಯಗಳು ನಮ್ಮ ನಂಬಿಕೆ, ನಮ್ಮ ಪ್ರೀತಿ ಮತ್ತು ನಮ್ಮ ಶಕ್ತಿಯ ಅಡಿಪಾಯವನ್ನು ಅಲ್ಲಾಡಿಸುತ್ತವೆ. ಪ್ರತಿ ತಾಯಿಯ ಹಿಂದೆ, ಪೋಷಿಸುವ ಮತ್ತು ರಕ್ಷಿಸುವ ಇಚ್ಛೆ ಇರುತ್ತದೆ. ಆ ಪವಿತ್ರತೆಯು ಛಿದ್ರಗೊಂಡಾಗ, ಅದು ನಮ್ಮೆಲ್ಲರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ" ಎಂದೂ ಹೇಳಿದ್ದಾರೆ.