logo
ಕನ್ನಡ ಸುದ್ದಿ  /  ಮನರಂಜನೆ  /  Blink Movie: ದಿಯಾ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಹೊಸ ಸಿನಿಮಾ ಬ್ಲಿಂಕ್‌ 2ನೇ ಹಾಡು ರಿಲೀಸ್‌

Blink Movie: ದಿಯಾ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಹೊಸ ಸಿನಿಮಾ ಬ್ಲಿಂಕ್‌ 2ನೇ ಹಾಡು ರಿಲೀಸ್‌

HT Kannada Desk HT Kannada

Oct 13, 2023 02:57 PM IST

google News

ದೀಕ್ಷಿತ್‌ ಶೆಟ್ಟಿ ಅಭಿನಯದ ಬ್ಲಿಂಕ್‌ ಚಿತ್ರದ 2ನೇ ಹಾಡು ರಿಲೀಸ್

  • Dheekshith Shetty: ಬ್ಲಿಂಕ್ ಸಿನಿಮಾ ಯಾವುದೇ ಜಾನರ್‌ಗೆ ಸೇರಿಲ್ಲ. ಸೈನ್ಸ್ ಫಿಕ್ಷನ್ ಸಣ್ಣ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಮನುಷ್ಯತ್ವ, ಮನುಷ್ಯ ಪ್ರೀತಿ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ನಟ ದೀಕ್ಷಿತ್‌ ಶೆಟ್ಟಿ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. 

ದೀಕ್ಷಿತ್‌ ಶೆಟ್ಟಿ ಅಭಿನಯದ ಬ್ಲಿಂಕ್‌ ಚಿತ್ರದ 2ನೇ ಹಾಡು ರಿಲೀಸ್
ದೀಕ್ಷಿತ್‌ ಶೆಟ್ಟಿ ಅಭಿನಯದ ಬ್ಲಿಂಕ್‌ ಚಿತ್ರದ 2ನೇ ಹಾಡು ರಿಲೀಸ್

Dheekshith Shetty: ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ದೀಕ್ಷಿತ್‌ ಶೆಟ್ಟಿ ನಟನೆಯ 'ಬ್ಲಿಂಕ್‌' ಚಿತ್ರದ 2ನೇ ಹಾಡು ರಿಲೀಸ್‌ ಆಗಿದೆ. ಮೊದಲು ರಿಲೀಸ್‌ ಆಗಿದ್ದ ಆಗಂತುಕ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಬ್ಲಿಂಕ್ ಅಂಗಳದಿಂದ ಸಖಿಯೇ... ಎಂಬ ಮೆಲೋಡಿ ಹಾಡು ಬಿಡುಗಡೆ ಆಗಿದೆ. ಪ್ರಮೋದ್ ಮರವಂತೆ ಸಾಹಿತ್ಯದ ಗೀತೆಗೆ ಸಿದ್ದಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದು, ಪ್ರಸನ್ನ ಕುಮಾರ್ ಎಂಎಸ್ ಸಾಹಿತ್ಯ ಒದಗಿಸಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ಚಿತ್ರತಂಡ

ಇತ್ತೀಚೆಗೆ ಬೆಂಗಳೂರಿನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಚಿತ್ರತಂಡ ಹಾಡು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಚಿತ್ರತಂಡ ಬ್ಲಿಂಕ್‌ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, ''ರಂಗಭೂಮಿ ಜೊತೆಗೆ ಸಿನಿಮಾ ಮಾಡಬೇಕೆಂಬ ಕನಸು ಕೂಡಾ ಇತ್ತು. ಕೋವಿಡ್ ಸಮಯದಲ್ಲಿ ಒಂದಿಷ್ಟು ಸಿನಿಮಾ ನೋಡ್ತಾ ನಾವೂ ಏಕೆ ಈ ರೀತಿ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಬಾರದೆಂಬ ಯೋಚನೆ ಬಂತು. ಸ್ನೇಹಿತರು ಮತ್ತು ರಂಗಭೂಮಿ ಗೆಳೆಯರು ಜೊತೆ ಸೇರಿ ಈ ಸಿನಿಮಾವನ್ನು ಮಾಡಿದ್ದೇವೆ. ಸಿನಿಮಾ ಮಾಡಬೇಕೆಂಬ ಆಲೋಚನೆ ನಮ್ಮದು. ಸಿನಿಮಾ ಆಗಿದ್ದೆಲ್ಲಾ ಪ್ರಕೃತಿ ನಮಗೆ ಮಾಡಿದ ಬೆಂಬಲ'' ಎಂದರು.

ನಾಯಕ ದೀಕ್ಷಿತ್ ಶೆಟ್ಟಿ ಮಾತನಾಡಿ, ''ಬ್ಲಿಂಕ್ ಸಿನಿಮಾ ಯಾವುದೇ ಜಾನರ್‌ಗೆ ಸೇರಿಲ್ಲ. ಸೈನ್ಸ್ ಫಿಕ್ಷನ್ ಸಣ್ಣ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಮನುಷ್ಯತ್ವ, ಮನುಷ್ಯ ಪ್ರೀತಿ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸೈನ್ಸ್ ಫಿಕ್ಷನ್ ಎಂದರೆ ಒಂದು ಲ್ಯಾಬ್ ಅಥವಾ ಬೇರೆ ಪ್ರಪಂಚದಲ್ಲಿ ನಡೆಯುವ ಕಥೆಯಾಗಿರುತ್ತದೆ. ಆದರೆ ಇದು ಆ ರೀತಿ ಅಲ್ಲ. ನಮ್ಮಂತ ಮಧ್ಯಮ ವರ್ಗದ ನಡುವೆ ಸೈನ್ಸ್ ಫಿಕ್ಷನ್ ಆದರೆ ಏನೆಲ್ಲಾ ಕಳವಳ ಆಗಬಹುದು. ಏನೆಲ್ಲಾ ಸನ್ನಿವೇಶ ಎದುರಿಸಬಹುದು ಅನ್ನೋದು ಈ ಸಿನಿಮಾದ ಮುಖ್ಯ ಕಥೆ'' ಎಂದರು.

ರವಿಚಂದ್ರ ಎಜೆ ನಿರ್ಮಾಣದ ಚಿತ್ರ

ನಾಯಕಿ ಮಂದಾರ ಮಾತನಾಡಿ, ''ನಾನು ಈ ಚಿತ್ರದಲ್ಲಿ ಸ್ವಪ್ನ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಮ್ಮ ನಿರ್ದೇಶಕರು ನನಗೆ 5-6 ವರ್ಷಗಳಿಂದ ಪರಿಚಯ. ಅವರೇ ನಾಟಕಗಳನ್ನು ಬರೆದು ನಟಿಸಿ ನಿರ್ದೇಶಿಸುತ್ತಿದ್ದರು. ಅಂದಿನಿಂದ ಅವರು ನನಗೆ ಸ್ನೇಹಿತರು. ಬ್ಲಿಂಕ್ ಸಿನಿಮಾದ ಸ್ಕ್ರಿಪ್ಟ್‌ ಕೇಳಿದಾಗ ಖುಷಿಯಾಯಿತು. ನಾನು ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾದ ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ. ಕನ್ನಡದಲ್ಲಿ ಲೂಸಿಯಾ, ಬೆಲ್ ಬಾಟಂ, ರಂಗಿತರಂಗ ಸಿನಿಮಾಗಳು ಹೇಗೆ ಕ್ರಾಂತಿ ಮಾಡಿದವೋ. ಹಾಗೆಯೇ ಈ ಚಿತ್ರವೂ ಮೈಲಿಗಲ್ಲಾಗಲಿದೆ'' ಎಂಬ ಭರವಸೆ ವ್ಯಕ್ತಪಡಿಸಿದರು.

ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿ ಬರುತ್ತಿರುವ 'ಬ್ಲಿಂಕ್', ಕನ್ನಡದಲ್ಲಿ ಒಂದು ಹೊಸ ಶೈಲಿಯ ಸಿನಿಮಾ , ವಿನೂತನ ಚಿತ್ರಕಥೆಯ ಈ ಚಿತ್ರ ಕನ್ನಡದ ಮಟ್ಟಿಗೆ ಹೊಸ ಪ್ರಯೋಗ. ಬ್ಲಿಂಕ್ ಸಿನಿಮಾಗೆ ರವಿಚಂದ್ರ ಎಜೆ ಬಂಡವಾಳ ಹೂಡಿದ್ದು, ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಮೊದಲ ಹೆಜ್ಜೆ. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಹೇಗೆ ಅವನ ಸುತ್ತ ಮುತ್ತಲಿನ ವಾತಾವರಣವನ್ನು ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ. ಸೈಂಟಿಫಿಕ್‌ ಫಿಕ್ಷನ್‌ ಶೈಲಿಯಲ್ಲಿ ಮೂಡಿ ಬರುತ್ತಿರುವ 'ಬ್ಲಿಂಕ್' ಚಿತ್ರಕ್ಕೆ ನಾಯಕನಾಗಿ ದಿಯಾ ಹಾಗೂ ತೆಲುಗಿನ ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ನಾಯಕಿಯರಾಗಿ ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ಇದ್ದಾರೆ. ಇವರೊಂದಿಗೆ ವಜ್ರಧೀರ್ ಜೈನ್, ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರಕ್ಕೆ ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಾಗಿರ್ದಾರ್ ಸಂಕಲನ, ಪ್ರಸನ್ನ ಕುಮಾರ್ ಸಂಗೀತವಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ