ಕನ್ನಡದಲ್ಲಿ ಕಾಲಾಪತ್ಥರ್, ರೋನಿ ಜತೆಗೆ ವಿಕಾಸ ಪರ್ವ, ಮಲಯಾಳಂನ ARM; ಈ ವಾರ ಚಿತ್ರಮಂದಿರಕ್ಕೆ ಯಾವೆಲ್ಲ ಸಿನಿಮಾಗಳು?
Sep 11, 2024 01:13 PM IST
ಈ ವಾರ ಚಿತ್ರಮಂದಿರಕ್ಕೆ ಯಾವೆಲ್ಲ ಸಿನಿಮಾಗಳು ಬರಲಿವೆ. ಇಲ್ಲಿದೆ ನೋಡಿ ಮಾಹಿತಿ.
- Kannada Movies Releasing This Week: ಕನ್ನಡದಲ್ಲಿ ಈ ವಾರ ರೋನಿ, ಕಾಲಾಪತ್ಥರ್, ವಿಕಾಸಪರ್ವ ಸೇರಿ ಒಟ್ಟು ಐದು ಸಿನಿಮಾಗಳು ತೆರೆಗೆ ಬರಲಿವೆ. ಆ ಐದರ ಜತೆಗೆ ಮಲಯಾಳಂನ ARM ಪ್ಯಾನ್ ಇಂಡಿಯಾ ಚಿತ್ರ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಇಲ್ಲಿದೆ ನೋಡಿ ಈ ವಾರ ತೆರೆಗೆ ಬರಲಿರುವ ಸಿನಿಮಾಗಳ ಪಟ್ಟಿ.
Friday Releases: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ಕೆಲ ವಾರಗಳಿಂದ ತೆರೆಕಾಣುತ್ತಿರುವ ಸಿನಿಮಾಗಳಿಗೆ ಪ್ರೇಕ್ಷಕನಿಂದ ಮೆಚ್ಚುಗೆ ಸಿಗುತ್ತಿದೆ. ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆಗಳೆಂದರೆ, ಭೀಮ, ಕೃಷ್ಣಂ ಪ್ರಣಯ ಸಖಿ, ಪೆಪೆ, ಲಾಫಿಂಗ್ ಬುದ್ಧ ಸೇರಿ ಇನ್ನೂ ಹಲವು ಸಿನಿಮಾಗಳಿವೆ. ಇದೀಗ ಅದೇ ಯಶಸ್ಸನ್ನು ಈ ವಾರವೂ ಮುಂದುವರಿಸಿಕೊಂಡು ಹೋಗಲು ಮತ್ತಷ್ಟು ಚಿತ್ರಗಳು ತೆರೆಗೆ ಬರುತ್ತಿವೆ. ಅದರಲ್ಲಿ ಕನ್ನಡದ ಸಿನಿಮಾಗಳೆಷ್ಟು, ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಲಿರುವ ಪರಭಾಷೆಯ ಸಿನಿಮಾಗಳು ಯಾವವು ಎಂಬಿತ್ಯಾದಿ ವಿವರ ಇಲ್ಲಿದೆ.
ಕನ್ನಡದಲ್ಲಿ ಈ ವಾರ ಮೂರು ಸಿನಿಮಾಗಳಷ್ಟೇ ತೆರೆಗೆ ಬರುತ್ತಿವೆ. ಆ ಮೂರರಲ್ಲಿ ಎರಡು ಸಿನಿಮಾಗಳ ಮೇಲೆ ನಿರೀಕ್ಷೆ ತುಸು ಹೆಚ್ಚಿದೆ. ರಾನಿ ಸಿನಿಮಾ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಕನ್ನಡತಿ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್. ಗುರುತೇಜ ಶೆಟ್ಟಿ ನಿರ್ದೇಶನದ ಈ ಸಿನಿಮಾ ಈಗಾಗಲೇ ಒಂದಷ್ಟು ಕಾರಣಕ್ಕೆ ಕುತೂಹಲ ಕೆರಳಿಸಿದೆ. ಇದೀಗ ಆ ಕುತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ. ಅಂದರೆ, ಇದೇ ವಾರ ರೋನಿ ಸಿನಿಮಾ ತೆರೆಗೆ ಬರುತ್ತಿದೆ.
ರಾನಿ ಬರೀ ಚಿತ್ರವಲ್ಲ, ನನ್ನ ಕನಸೆಂದ ಕಿರಣ್
"ಇದು ಬರೀ ಚಿತ್ರವಲ್ಲ. ನನ್ನ ಕನಸು. ನನ್ನ ಕನಸಿಗೆ ಆಸರೆಯಾದವರು ನಮ್ಮ ನಿರ್ಮಾಪಕರು. ನನ್ನ ಮೇಲೆ ಭರವಸೆಯಿಟ್ಟು ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗುರುತೇಜ್ ಶೆಟ್ಟಿ ನಿರ್ದೇಶನ, ಪ್ರಮೋದ್ ಮರವಂತೆ ಸಾಹಿತ್ಯ, ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ ಹಾಗೂ ಮಣಿಕಾಂತ್ ಕದ್ರಿ ಅವರ ಸಂಗೀತ ಎಲ್ಲವೂ ಉತ್ತಮವಾಗಿದೆ. ಆಕ್ಷನ್ ಸನ್ನಿವೇಶಗಳು ಈ ಚಿತ್ರದ ಹೈಲೆಟ್ ಎನ್ನಬಹುದು. ನಾನು "ರಾನಿ" ಹಾಗೂ "ರಾಘವ" ಎರಡು ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಈ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ ನಾಯಕ ಕಿರಣ್ ರಾಜ್. ಈ ಸಿನಿಮಾ ಇದೇ ಸೆಪ್ಟೆಂಬರ್ 12ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಒಂದು ಕಲ್ಲಿನ ಕಥೆಯೇ ಕಾಲಾಪತ್ಥರ್
ಕಾಲಾಪತ್ಥರ್ ಸಿನಿಮಾ ಮೂಲಕ ಕೆಂಡಸಂಪಿಗೆ ಸಿನಿಮಾ ನಟ ವಿಕ್ಕಿ ವರುಣ್ ಬಹು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಮರಳಿದ್ದಾರೆ. ಕಾಲಾಪತ್ಥರ್ ಚಿತ್ರದಿಂದ ಮೊದಲ ಸಲ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ ವಿಕ್ಕಿ. ಒಂದು ಕಲ್ಲಿನ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗಲಿದೆ ಎಂಬ ಸುಳಿವನ್ನು ಇತ್ತೀಚೆಗಷ್ಟೇ ಶಿವಣ್ಣನ ಕೈಯಿಂದ ಬಿಡುಗಡೆಯಾದ ಟ್ರೇಲರ್ ನೀಡಿದೆ.
"ನಾನು ನಟ ಆಗಬೇಕೆಂದು ಇಲ್ಲಿ ಬಂದವನಲ್ಲ. ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು. ದುನಿಯಾ ಸೂರಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಇದೀಗ ಶಿವಣ್ಣ ಅವರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಆಗಿದೆ. ನಮ್ಮ ಸಿನಿಮಾ ಸೆಪ್ಟೆಂಬರ್ 13ರಂದು ಬಿಡುಗಡೆಯಾಗುತ್ತಿದೆ ನೋಡಿ ಪ್ರೋತ್ಸಾಹಿಸಿ"ಎಂದರು ನಿರ್ದೇಶಕ ಹಾಗೂ ನಟ ವಿಕ್ಕಿ ವರುಣ್. ಚಿತ್ರದಲ್ಲಿ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್ ಮುಂತಾದ ಕಲಾವಿದರು ನಟಿಸಿದ್ದಾರೆ.
ವಿಕಾಸಪರ್ವ ಈ ವಾರ ತೆರೆಗೆ
ಚಿತ್ರರಂಗದಲ್ಲಿ 22 ವರ್ಷಗಳಿಂದ ಕನ್ನಡ, ತೆಲುಗು ಸೇರಿದಂತೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ, ಕಿರುತೆರೆಯ 65 ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿರುವ ನಟ ರೋಹಿತ್ ನಾಗೇಶ್ ನಟಿಸಿರೋ ಚಿತ್ರ ವಿಕಾಸ ಪರ್ವ. ಈ ಸಿನಿಮಾ ಸೆ.13ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶೃತ್ ನಾಯಕ್ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿರುವ ಈ ಚಿತ್ರಕ್ಕೆ ಅನ್ಬು ಅರಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಕಾಸಪರ್ವ ಚಿತ್ರದಲ್ಲಿ ಎ.ಪಿ.ಓ. ಸಂಗೀತ ನಿರ್ದೇಶನದ ಮೂರು ಹಾಡುಗಳಿದ್ದು, ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ನವೀನ್ ಸುವರ್ಣ ಕ್ಯಾಮರಾ, ಶ್ರೀನಿವಾಸ ಕಲಾಲ್ ಅವರ ಸಂಕಲನ, ಟೈಗರ್ ಶಿವು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ನಾಯಕಿಯಾಗಿ ಸ್ವಾತಿ, ಇನ್ನುಳಿದಂತೆ ಅಶ್ವಿನ್ ಹಾಸನ್, ಕುರಿರಂಗ, ಬಲ ರಾಜವಾಡಿ, ನಿಶ್ವಿಕಾ ಗೌಡ ಪಾತ್ರವರ್ಗದಲ್ಲಿದ್ದಾರೆ.
ಕನ್ನಡದಲ್ಲಿ ಬರಲಿದೆ ಮಲಯಾಳಿ ARM
ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್ ನಾಯಕನಾಗಿ ನಟಿಸಿರುವ ARM ಸಿನಿಮಾ ಸೆಪ್ಟೆಂಬರ್ 12ರಂದು ತೆರೆಗೆ ಬರಲಿದೆ. ಇದೇ ಚಿತ್ರವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ್ದಾರೆ. ಟ್ರೇಲರ್ ಮೂಲಕ ನಿರೀಕ್ಷೆ ಮಟ್ಟ ಹೆಚ್ಚಿಸಿರುವ ಎಆರ್‌ಎಂ ಸಿನಿಮಾ, ಇದೀಗ 3D ಮೂಲಕ ಚಿತ್ರಮಂದಿರದತ್ತ ಆಗಮಿಸುತ್ತಿದೆ. ನಟ ಟೊವಿನೋ ಥಾಮಸ್ ಎರಡ್ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮೋಡಿ ಮಾಡಿರುವ ನಟಿಯರಾದ ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ ಎಆರ್‌ಎಂ ಸಿನಿಮಾದಲ್ಲಿದ್ದಾರೆ.
ಎ ಡೇ ಇನ್ ಡಾಲರ್ಸ್ ಪೇಟೆ ಕನ್ನಡ ಸಿನಿಮಾ ಇಂದು (ಸೆ. 11) ತೆರೆಕಂಡಿದೆ.
ಅನ್ನ ಮತ್ತು ದಿ ರೂಲರ್ಸ್ ಸಿನಿಮಾ ಸೆ. 12ರಂದು ತೆರೆಗೆ ಬರಲಿವೆ.