9 ವರ್ಷದ ಬಳಿಕ ನಿರ್ದೇಶಕನ ಕ್ಯಾಪ್ ಧರಿಸಿದ ಸುದೀಪ್; ರಕ್ತಪಾತದ ಕಥೆಗೆ ಕೆಆರ್‌ಜಿ ಸ್ಟುಡಿಯೋಸ್ ಬಂಡವಾಳ
Sep 01, 2023 08:01 PM IST
Kichcha Sudeep: 9 ವರ್ಷದ ಬಳಿಕ ನಿರ್ದೇಶಕನ ಕ್ಯಾಪ್ ಧರಿಸಿದ ಸುದೀಪ್; ರಕ್ತಪಾತದ ಕಥೆಗೆ ಕೆಆರ್‌ಜಿ ಸ್ಟುಡಿಯೋಸ್ ಬಂಡವಾಳ
- 50 ಬರ್ತ್‌ಡೇ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ ಕಿಚ್ಚ ಸುದೀಪ್. ಸುದೀರ್ಘ 9 ವರ್ಷದ ಬಳಿಕ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.
Kichcha Sudeep: ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸುದೀರ್ಘ ಒಂಭತ್ತು ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ ಸುದೀಪ್. ಬರ್ತ್‌ಡೇಗೆ ಒಂದು ದಿನ ಮುಂಚಿತವಾಗಿಯೇ ಈ ವಿಚಾರ ಇದೀಗ ಹೊರಬಿದ್ದಿದ್ದು, ಫ್ಯಾನ್ಸ್ ವಲಯ ಪುಳಕಗೊಂಡಿದೆ.
ಈ ಹಿಂದೆ ಅಂದರೆ, 2014ರಲ್ಲಿ ತೆರೆಗೆ ಬಂದಿದ್ದ ಮಾಣಿಕ್ಯ ಸಿನಿಮಾಕ್ಕೆ ಸುದೀಪ್ ಆಕ್ಷನ್ ಕಟ್ ಹೇಳಿದ್ದರು. ಅದಾದ ಬಳಿಕ ನಿರ್ದೇಶನದಿಂದ ದೂರವೇ ಉಳಿದಿದ್ದರು. ಇದೀಗ 50 ಬರ್ತ್‌ಡೇಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಈ ಚಿತ್ರದಲ್ಲಿ ಅವರೇ ನಾಯಕನಾಗಿಯೂ ನಟಿಸಲಿದ್ದಾರೆ.
ಸಿನಿಮಾಕ್ಕೆ ತಾತ್ಕಾಲಿಕವಾಗಿ KK ಎಂಬ ಶೀರ್ಷಿಕೆ ಇಡಲಾಗಿದ್ದು, ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಸದ್ಯ ಸಿನಿಮಾದ ಲುಕ್‌ವೊಂದು ಬಿಡುಗಡೆ ಆಗಿದ್ದು, ಗಾಡ್ ಫಾರ್‌ಗಿವ್ಸ್, ಐ ಡೋಂಟ್.. ಎಂಬ ಅಡಿಬರಹವನ್ನೂ ನೀಡಲಾಗಿದೆ.
ಸದ್ಯ ಕೈಯಲ್ಲಿರುವ ಹಲವು ಸಿನಿಮಾಗಳ ಕೆಲಸವನ್ನು ಸುದೀಪ್ ಮುಗಿಸಿಕೊಳ್ಳಬೇಕಿದೆ. ಅದಾದ ಬಳಿಕ ಅಂದರೆ 2024ರಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಇತ್ತ ಸಿನಿಮಾದ ಕಥೆ ಮತ್ತು ಚಿತ್ರಕಥೆ ಕೆಲಸಗಳು ನಡೆಯುತ್ತಿದೆ. ಈ ಮೂಲಕ ಕೆಆರ್‌ಜಿ ಜತೆಗೆ ಸುದೀಪ್ ಮೊದಲ ಸಲ ಕೈ ಜೋಡಿಸುತ್ತಿದ್ದಾರೆ.
ಮೈ ಆಟೋಗ್ರಾಫ್ ಚಿತ್ರದಿಂದ ಡೈರೆಕ್ಷನ್ ಜರ್ನಿ ಆರಂಭ
ಇನ್ನು ಕಿಚ್ಚ ಸುದೀಪ್ ಅವರ ಮೊದಲ ನಿರ್ದೇಶನದ ಸಿನಿಮಾ ಮೈ ಆಟೋಗ್ರಾಫ್. 2006ರಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದ ಬಳಿಕ ನಂ.73 ಶಾಂತಿ ನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಸಿನಿಮಾಗಳಿಗೂ ನಿರ್ದೇಶನ ಮಾಡಿದ್ದರು. ಇದೀಗ ಬರೋಬ್ಬರಿ 9 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿಯುವ ಬಗ್ಗೆ ಸೂಚನೆ ನೀಡಿದ್ದಾರೆ.
ಆರ್. ಚಂದ್ರು ಜತೆ ಕಿಚ್ಚನ ಸಿನಿಮಾ
ಕಬ್ಜ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಿರ್ದೇಶಕ ಆರ್. ಚಂದ್ರು, ಇದೀಗ ಕಿಚ್ಚ ಸುದೀಪ್ ಸಿನಿಮಾಕ್ಕೆ ಆಕ್ಷನ್ ಕಟ್ ಕೇಳಲಿದ್ದಾರೆ. ಕಬ್ಜದಲ್ಲಿ ಉಪೇಂದ್ರ ಜತೆಗೆ ಸುದೀಪ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರಿಗಾಗಿ ಹೊಸದೊಂದು ಕಥೆ ಮಾಡಿ ತಂದಿದ್ದಾರೆ ಚಂದ್ರು. ವಿಶೇಷ ಏನೆಂದರೆ, ಮಗಧೀರ, ಬಾಹುಬಲಿ, RRR ರೀತಿಯ ಹಿಟ್ ಚಿತ್ರಗಳ ಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಸುದೀಪ್ ಅವರ ಸಿನಿಮಾಕ್ಕೆ ಸಾಥ್ ನೀಡಿಲಿದ್ದಾರೆ. ಈ ವಿಚಾರವೀಗ ಅಧಿಕೃತವಾಗಿದೆ.