logo
ಕನ್ನಡ ಸುದ್ದಿ  /  ಮನರಂಜನೆ  /  ಕರಾವಳಿ ಸೊಗಡಿನ ಮಾರ್ನಮಿ ಚಿತ್ರದಲ್ಲಿ ನಿನಗಾಗಿ ಸೀರಿಯಲ್‌ ನಟ ರಿತ್ವಿಕ್‌ ಮಠದ್‌ಗೆ ಜೋಡಿಯಾದ ಚೈತ್ರಾ ಆಚಾರ್‌

ಕರಾವಳಿ ಸೊಗಡಿನ ಮಾರ್ನಮಿ ಚಿತ್ರದಲ್ಲಿ ನಿನಗಾಗಿ ಸೀರಿಯಲ್‌ ನಟ ರಿತ್ವಿಕ್‌ ಮಠದ್‌ಗೆ ಜೋಡಿಯಾದ ಚೈತ್ರಾ ಆಚಾರ್‌

Sep 19, 2024 03:00 PM IST

google News

ಕರಾವಳಿ ಸೊಗಡಿನ ಮಾರ್ನಮಿ ಚಿತ್ರದ ಶೀರ್ಷಿಕೆ ಟೀಸರ್‌ ಬಿಡುಗಡೆ ಆಗಿದೆ.

    • ಕರಾವಳಿ ಸೊಗಡಿನ ಮಾರ್ನಮಿ ಸಿನಿಮಾ ಇದೀಗ ಶೀರ್ಷಿಕೆ ಟೀಸರ್‌ ಮೂಲಕ ಗಮನ ಸೆಳೆಯುತ್ತಿದೆ. ನಿನಗಾಗಿ ಸೀರಿಯಲ್‌ ನಟ ರಿತ್ವಿಕ್‌ ಮಠದ್‌ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದರೆ, ಚೈತ್ರಾ ಆಚಾರ್‌ ನಾಯಕಿಯಾಗಿದ್ದಾರೆ. 
ಕರಾವಳಿ ಸೊಗಡಿನ ಮಾರ್ನಮಿ ಚಿತ್ರದ ಶೀರ್ಷಿಕೆ ಟೀಸರ್‌ ಬಿಡುಗಡೆ ಆಗಿದೆ.
ಕರಾವಳಿ ಸೊಗಡಿನ ಮಾರ್ನಮಿ ಚಿತ್ರದ ಶೀರ್ಷಿಕೆ ಟೀಸರ್‌ ಬಿಡುಗಡೆ ಆಗಿದೆ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ನಟ ರಿತ್ವಿಕ್‌ ಮಠದ್, ಇದೀಗ ಬೆಳ್ಳಿತೆರೆಗೆ ನಾಯಕನಾಗಿ ಎಂಟ್ರಿಕೊಡುತ್ತಿದ್ದಾರೆ. ಕರಾವಳಿ ಸೊಗಡಿನ ಮಾರ್ನಾಮಿ ಸಿನಿಮಾ ಮೂಲಕ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್‌ ಬಿಡುಗಡೆ ಆಗಿದ್ದು, ಈ ಚಿತ್ರದಲ್ಲಿ ರಿತ್ವಿಕ್‌ ಮಠದ್‌ಗೆ ಜೋಡಿಯಾಗಿ ಚೈತ್ರಾ ಆಚಾರ್‌ ನಟಿಸುತ್ತಿದ್ದಾರೆ.

ಗಿಣಿರಾಮ ಸೀರಿಯಲ್‌ ಮೂಲಕ ಗಮನ ಸೆಳೆದಿದ್ದ ರಿತ್ವಿಕ್‌ಗೆ ಈಗಾಗಲೇ ಬೆಳ್ಳಿತೆರೆ ಹೊಸದೇನಲ್ಲ. ಈಗಾಗಲೇ ಉತ್ಸವ ಎಂಬ ಸಿನಿಮಾ ಮಾಡಿ ಮುಗಿಸಿದ್ದಾರೆ. ಇದಕ್ಕೂ ಮೊದಲು ಗಿಫ್ಟ್‌ ಬಾಕ್ಸ್‌ ಮತ್ತು ಆ ಎರಡು ವರ್ಷಗಳು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದೀಗ ತುಳುನಾಡಿನ ಕಥೆಯಲ್ಲಿ ನಾಯಕನಾಗಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾದ ಶೂಟಿಂಗ್‌ ಶುರುವಾಗಲಿದೆ.

ವಿಭಿನ್ನ ಕಂಟೆಂಟಿನ ಸುಳಿವಿನ ಮೂಲಕವೇ ಸದ್ದು ಮಾಡೋ ಸಿನಿಮಾಗಳು ಗೆದ್ದು ಬೀಗಿದ ಅನೇಕ ಉದಾಹರಣೆಗಳಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಸ್ಪಷ್ಟ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ ಮಾರ್ನಮಿ. ಪಿಂಗಾರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್ ಶೆಟ್ಟಿ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ರಿಶಿತ್ ಶೆಟ್ಟಿ ಚೊಚ್ಚಲ ಪ್ರಯತ್ನವೇ ಈ ಮಾರ್ನಮಿ. ಈ ಸಿನಿಮಾ ಬಗ್ಗೆ ಚಿತ್ರತಂಡದ ಸದಸ್ಯರು ಮಾತನಾಡಿದ್ದಾರೆ.

ಇದು ಕರಾವಳಿ ಭಾಗದ ಲವ್‌ಸ್ಟೋರಿ

ಚಿತ್ರದ ನಾಯಕ ರಿತ್ವಿಕ್ ಮಠದ್‌ ಮಾತನಾಡಿ, "ಈ ಚಿತ್ರದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಒಂದು ಕಥೆ. ಚೆನ್ನಾಗಿ ಎಳೆದುಕೊಂಡು ಬಂದಿದ್ದು ರಿಶಿತ್ ಶೆಟ್ಟಿ. ನಮಗೆ ಬೇಕು ಅಂದಿದೆಲ್ಲ ಕೊಡುತ್ತಿರುವುದು, ನಮಗೆ ಸಪೋರ್ಟ್ ಮಾಡುತ್ತಿರುವುದು ನಿರ್ಮಾಪಕ ನಿಶಾಂತ್ ಸರ್. ಇಂತಹ ನಿರ್ಮಾಪಕರು ಅಪರೂಪ. ಈ ರೀತಿ ನಿರ್ಮಾಪಕರು ಇಂಡಸ್ಟ್ರೀಗೆ ಸಿಗಬೇಕು. ಇವರು ಗೆದ್ದರೆ ಮತ್ತಷ್ಟು ಸಿನಿಮಾಗಳು ಮಾಡುತ್ತಾರೆ. ಕಥೆ ಚೆನ್ನಾಗಿದೆ. ಕರಾವಳಿ ಭಾಗದಲ್ಲಿ ನಡೆಯುವ ಅದ್ಭುತ ಲವ್ ಸ್ಟೋರಿ. ದಸರಾ ದಿನವನ್ನು ಮಾರ್ನಮಿ ಎಂದು ಕರೆಯುತ್ತಾರೆ ಎಂದರು ರಿತ್ವಿಕ್.

ಮತ್ತೆ ಕಥೆ ನನ್ನ ಬಳಿಯೇ ಬಂತು..

ಕಥೆ ಬಹಳ ಇಷ್ಟವಾಯ್ತು. ಡೇಟ್ ಸಮಸ್ಯೆ ಇದೆ ಆಗಲ್ಲ ಎಂದೆ. ಮತ್ತೆ ಕಥೆ ನನ್ನ ಬಳಿಯೇ ಬಂತು. ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳೋಣಾ ಎಂದರು. ಅದ್ಭುತ ಕಥೆ. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಷಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ರಿತ್ವಿಕ್ ಅವರ ಜೊತೆ ಕೆಲಸ ಮಾಡಲು ಖುಷಿ ಇದೆ. ಕಥೆ ನಂಬಿದ್ದೇವೆ, ಚರಣ್ ರಾಜ್ ಅವರ ಮ್ಯೂಸಿಕ್ ಇದೆ. ನಾನು ಶೂಟಿಂಗ್ ಗೆ ಹೊರಡಲು ಎಕ್ಸೈಟ್ ಆಗಿದ್ದೇನೆ ಎಂದರು ನಾಯಕಿ ಚೈತ್ರಾ ಆಚಾರ್.

ನಿರ್ದೇಶಕರು ಹೇಳುವುದೇನು?

ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೆಟ್ ಆಗಿ ರೈಟರ್ ಆಗಿ ಕೆಲಸ ಮಾಡಿದ್ದೇನೆ. ಪ್ರೀತಂ ಶೆಟ್ಟಿ ಅವರ ಜೊತೆ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಮಂಗಳೂರಲ್ಲಿ ಸ್ಕ್ರಿಪ್ಟ್ ಕೆಲಸಕ್ಕೆ ಹೋಗಿದ್ದಾಗ ಸುಧಿ ಪರಿಚಯವಾಗಿದ್ದು. ಅವರು ಒಂದು ಕಥೆ ಮಾಡಿಕೊಂಡಿದ್ದರು. ಅವರು ಡೈರೆಕ್ಷನ್ ಮಾಡಲು ಇಷ್ಟಇಲ್ಲ ಅಂದಾಗ ನಾನು ಕಥೆ ಕೇಳಿದೆ. ಅವರು ಪ್ರೀತಿಯಿಂದ ಕೊಟ್ಟರು. ರಿತ್ವಿಕ್ ಅವರಿಗೆ ಹೇಳಿದೆ. ಅವರು ಇದಕ್ಕೆ ಏನೋ ಬೇಕೋ ಅನಿಸುತ್ತಿದೆ ಎಂದರು. ಬಳಿಕ 6 ತಿಂಗಳ ವರ್ಕ್ ಮಾಡಿಕೊಂಡು ಅವರ ಬಳಿ ಹೋದೆ. ಅವರು ಕಥೆ ಕೇಳಿ ಖುಷಿಪಟ್ಟರು. ಬಳಿಕ ಪ್ರೊಡ್ಯೂಸರ್ ಹುಡುಕಾಟದಲ್ಲಿ ನಿಶಾಂತ್ ಸರ್ ಭೇಟಿಯಾದರು. ಆ ಬಳಿಕ ಟೈಟಲ್ ಟೀಸರ್ ಮಾಡಿಕೊಂಡು ಬಂದೆವು. ಆ ಬಳಿಕ ನಿರ್ಮಾಪಕರು ಇಷ್ಟಪಟ್ಟರು. ಚಿತ್ರದ ಪ್ರತಿ ಹಂತದಲ್ಲಿ ನಿಶಾಂತ್ ಸರ್ ಸಹಕಾರ ಕೊಟ್ಟಿದ್ದಾರೆ ಎಂದರು ರಿಶಿತ್‌ ಶೆಟ್ಟಿ.

ಚರಣ್‌ ರಾಜ್‌ ಸಂಗೀತ ನಿರ್ದೇಶನ

ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಹೊಸ ತಂಡ ಹೊಸ ನಿರ್ದೇಶಕರು. ಈ ತಂಡದಲ್ಲಿ ನನ್ನ ಅಚ್ಚುಮೆಚ್ಚಿನ ನಟರು ಎಲ್ಲಾ ಇದ್ದಾರೆ. ತುಂಬಾ ಒಳ್ಳೆ ಕಥೆ. ನನಗೂ ಒಳ್ಳೆ ಅವಕಾಶ ಇದೆ ಎನಿಸಿತು. ನನಗೂ ಅವಕಾಶ ಪಡೆದುಕೊಂಡಿದ್ದೇನೆ. ಸಂಗೀತದ ಕೆಲಸ ಶುರು ಮಾಡಿದ್ದೇವೆ. ಟೈಟಲ್ ಟೀಸರ್ ಮಾಡಿದ್ದೇವೆ. ಹಾಡುಗಳ ಕಂಪೋಸ್ ಮಾಡಲು ಶುರು ಮಾಡಿದ್ದೇವೆ. ಇಷ್ಟೇ ಸಾಂಗ್ ಇದೆ ಅಂತಾ ಡಿಸೈಡ್ ಮಾಡಿಲ್ಲ. ಆದರೆ ಐದು ಹಾಡುಗಳು ಇರುತ್ತವೆ ಎಂದರು.

ತಾರಾಗಣ ಮತ್ತು ತಾಂತ್ರಿಕ ವರ್ಗ ಹೀಗಿದೆ..

ಚಿತ್ರದ ಟೈಟಲ್ ಟೀಸರ್ ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ಬಿಡುಗಡೆಯಾಗಿದ್ದು, ಟೀಸರ್ ಪ್ರಾಮಿಸಿಂಗ್ ಆಗಿದೆ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಚಿತ್ರದಲ್ಲಿ ಇರಲಿದೆ. ಚೆಂದದ ಲವ್ ಸ್ಟೋರಿ ಜೊತೆಗೆ ಆಕ್ಷನ್, ಎಮೋಷನ್, ಕಾಮಿಡಿ ಮಿಶ್ರಣದ ಮಾರ್ನಮಿ ಚಿತ್ರವನ್ನು ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಅಕ್ಟೋಬರ್ ಒಂದರಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ನಡೆಸಲು ಚಿತ್ರತಂಡ ಸಜ್ಜಾಗಿದೆ.

ಮಾರ್ನಮಿ ಸಿನಿಮಾದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ