ರಾಮನ ಅವತಾರ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ; ಚುನಾವಣಾ ಫಲಿತಾಂಶಕ್ಕೆ ಮುನ್ನ ಚಿತ್ರಮಂದಿರದಲ್ಲಿ ನಮ್ಮ ರಿಸಲ್ಟ್ ಅಂದ ಚಿತ್ರತಂಡ
Mar 31, 2024 07:00 AM IST
ರಾಮನ ಅವತಾರ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ
- Ramana Avatara Kannada Movie: ಮೇ 10ರಂದು ರಿಷಿ, ಪ್ರಣೀತಾ ಸುಭಾಷ್, ಶುಭ್ರ ಅಯ್ಯಪ್ಪ ನಟಿಸಿರುವ ರಾಮನ ಅವತಾರ ಸಿನಿಮಾ ಬಿಡುಗಡೆಯಾಗಲಿದೆ. ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣದ ಈ ಸಿನಿಮಾಕ್ಕೆ ವಿಕಾಸ್ ಪಂಪಾಪತಿ ನಿರ್ದೇಶನವಿದೆ.
ಬೆಂಗಳೂರು: ಚುನಾವಣೆ ಕಾರಣದಿಂದ ಕೆಲವೊಂದು ಸಿನಿಮಾಗಳ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಿದೆ. ಇದೀಗ ರಾಮನ ಅವತಾರವೆಂಬ ಸಿನಿಮಾವನ್ನು ಚುನಾವಣಾ ಗಡಿಬಿಡಿ ಕಳೆದ ಬಳಿಕ ಆದರೆ, ಚುನಾವಣಾ ಫಲಿತಾಂಶಕ್ಕೆ ಮೊದಲೇ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ. ರಾಮನ ಅವತಾರ ಸಿನಿಮಾವು ಮೇ 10ರಂದು ಬಿಡುಗಡೆಯಾಗಲಿದೆ. ರಿಷಿ, ಪ್ರಣೀತಾ ಸುಭಾಷ್, ಶುಭ್ರ ಅಯ್ಯಪ್ಪ ನಟಿಸಿರುವ ಈ ಸಿನಿಮಾಕ್ಕೆ ವಿಕಾಸ್ ಪಂಪಾಪತಿ ಆಕ್ಷನ್ ಕಟ್ ಹೇಳಿದ್ದಾರೆ.
ನಟ ರಿಷಿ ತಮ್ಮ ಕಾಮಿಡಿ ಟೈಮಿಂಗ್‌ಗೆ ಹೆಸರುವಾಸಿ. ಕಾಮಿಡಿ ಮಾತ್ರವಲ್ಲದೆ ಸೀರಿಯಸ್ ನಟನೆಗೂ ಸೈ ಎಂದು ಈಗಾಗಲೇ ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಕವಲುದಾರಿ'ಯಂತಹ ಗಂಭೀರ ಸಿನಿಮಾದಲ್ಲೂ ಮನಮುಟ್ಟುವಂತೆ ನಟಿಸಿರುವ ಪ್ರತಿಭಾನ್ವಿತ ನಟನೀತ. ಇದೀಗ ರಿಷಿ ರಾಮನ ಅವತಾರದಲ್ಲಿ ಸ್ಯಾಂಡಲ್‌ವುಡ್ ಚಿತ್ರಮಂದಿರಗಳಿಗೆ ಎಂಟ್ರಿ ನೀಡಲು ಸಿದ್ಧತೆ ನಡೆಸಿದ್ದಾರೆ. ರಾಮನ ಅವತಾರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ಕನ್ನಡ ನಟ ರಿಷಿ ನಟನೆಯ ರಾಮನ ಅವತಾರ ಚಿತ್ರವು ರಿಲೀಸ್ ಆಗಲು ದಿನಾಂಕ ನಿಗದಿಯಾಗಿದೆ. ಮೇ 10ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ. ಏಪ್ರಿಲ್ ತಿಂಗಳಲ್ಲಿ ಸಿನಿಮಾವನ್ನು ಬೆಳ್ಳಿಭೂಮಿ ಅಖಾಡದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೆ, ಲೋಕಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಈ ಸಿನಿಮಾ ಬಿಡುಗಡೆ ತಡವಾಗಿದೆ. ಚುನಾವಣೆ ಮುಗಿದ ತಕ್ಷಣ ಮೇಬಿ ಅಲ್ಲ ಪಕ್ಕ ಮೇಗೆ ಬರ್ತಿವೆ ಅಂತಾ ರಿಷಿ ಘೋಷಿಸಿದ್ದಾರೆ.
ನಟ ರಿಷಿ ವಿಶೇಷ ವಿಡಿಯೋ ಬಿಡುಗಡೆ ಮಾಡುವ ಮೂಲಕ ರಾಮನ ಅವತಾರ ಸಿನಿಮಾ ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ. ಮೇಬಿ ಅಲ್ಲ ಪಕ್ಕ ಮೇ 10ಕ್ಕೆ ಬರ್ತಿವೆ. ಎಲೆಕ್ಷನ್ ರಿಸಲ್ಟ್ ಗೂ ಮೊದ್ಲೇ ನಮ್ಮ ಸಿನಿಮಾ ರಿಸಲ್ಟ್ ಬರಲಿದೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಸಿನಿಮಾ ಪ್ರಮೋಷನ್ ಅಖಾಡಕ್ಕೆ ಇಳಿಯೋದಿಕ್ಕೆ ಇಡೀ ತಂಡ ಸಿದ್ಧವಾಗಿದ್ದು, ರಾಮರಾಜ್ಯ ಕಟ್ಟೋದಿಕ್ಕೆ ರಾಮನ ಅವತಾರ ಬಳಗ ಸಜ್ಜಾಗಿ ನಿಂತಿದೆ.
'ರಾಮನ ಅವತಾರ' ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ಪ್ರತಿಭಾನ್ವಿತ ಕನ್ನಡ ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ 'ರಾಮನ ಅವತಾರ' ಸಿನಿಮಾ ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಟೀಸರ್ ಹಾಗೂ ಹಾಡುಗಳ ಮೂಲಕ ರಾಮನ ಅವತಾರ ಸಿನಿಮಾ ಸಿನಿಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ 'ಆಪರೇಷನ್ ಅಲಮೇಲಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್‌ನ ಈ ಚಿತ್ರಕ್ಕೆ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಹಿಡಿದಿದ್ದಾರೆ. ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಕಲನವಿದೆ. ರಾಮನ ಅವತಾರ ಸಿನಿಮಾದ ಶೂಟಿಂಗ್ ಅನ್ನು ಉಡುಪಿ, ಬೆಂಗಳೂರು ಸುತ್ತಮುತ್ತ ಮಾಡಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.