ಈ ದಡ್ ನನ್ ಮಗಂಗೇ ಯಾವೋನಾದ್ರೂ ಇನ್ಮೇಲೆ ಬುದ್ಧಿವಂತ ಅಂದ್ರೆ ಅಷ್ಟೇ ಸೆಂದಾಗಿರಕ್ಕಿಲ್ಲಾ; ಚುನಾವಣೆ ಬಗ್ಗೆ ಉಪೇಂದ್ರ ಮಾತು, ಮಂಥನ
Jun 07, 2024 07:09 AM IST
ಈ ದಡ್ ನನ್ ಮಗಂಗೇ ಯಾವೋನಾದ್ರೂ ಇನ್ಮೇಲೆ ಬುದ್ಧಿವಂತ ಅಂದ್ರೆ ಅಷ್ಟೇ ಸೆಂದಾಗಿರಕ್ಕಿಲ್ಲಾ; ಚುನಾವಣೆ ಬಗ್ಗೆ ಉಪೇಂದ್ರ ಮಾತು, ಮಂಥನ
- ಪಕ್ಕದ ತೆಲುಗು ರಾಜ್ಯಗಳಲ್ಲಿ ಈ ಸಲ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಅಭೂತಪೂರ್ವ ಗೆಲುವು ಕಂಡಿದೆ. ಇದರ ಬೆನ್ನಲ್ಲೇ ನಟ ಉಪೇಂದ್ರ ಅವರೂ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಹರಿದಾಡುತ್ತಿರುವ ಮೀಮ್‌ಗೆ ಸ್ವತಃ ಉಪೇಂದ್ರ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.
Upendra on Lok sabha Election 2024: ಸ್ಯಾಂಡಲ್‌ವುಡ್ ನಟ ಮತ್ತು ರಾಜಕಾರಣಿ ಉಪೇಂದ್ರ ಪ್ರಜಾಕೀಯ ಪಕ್ಷ ಘೋಷಿಸಿ ಹಲವು ವರ್ಷಗಳೇ ಕಳೆದಿವೆ. ಆ ಪಕ್ಷಕ್ಕೆ ತಮ್ಮದೇ ಆದ ಒಂದಷ್ಟು ಸಿದ್ಧಾಂತಗಳನ್ನು ರೂಪಿಸಿ, ಅದರ ಅಡಿಯಲ್ಲಿಯೇ ಎಲ್ಲವೂ ಸಾಗಬೇಕು ಎಂಬುದು ಅವರ ಬಯಕೆ. ಆದರೆ, ಪಕ್ಷ ಘೋಷಣೆ ಬಳಿಕ, ತಳಮಟ್ಟದಲ್ಲಿ ಪಕ್ಷ ಕಟ್ಟುವ ಕೆಲಸ ನಡೆದಿದೆಯಾದರೂ, ಅದಿನ್ನು ಪರಿಣಾಮಕಾರಿಯಾಗಿ ಗಟ್ಟಿಯಾಗಿ ನೆಲೆಯೂರಿಲ್ಲ. ಇದೀಗ ಲೋಕಸಭೆ ಚುನಾವಣೆ ಮುಗಿದಿದೆ. ಸರ್ಕಾರ ರಚನೆಯ ಕಸರತ್ತು ಚುರುಕಾಗಿದೆ. ಈ ನಡುವೆ ನಟ ಉಪೇಂದ್ರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿತ್ತು. ಅದಕ್ಕೆ ರಿಯಲ್ ಸ್ಟಾರ್ ಪ್ರತಿಕ್ರಿಯಿಸಿದ್ದಾರೆ.
ಪಕ್ಕದ ತೆಲುಗು ನಾಡಿನಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಈ ಮೂಲಕ ರಾಜಕೀಯದಲ್ಲಿ ಹೊಸ ದಾಖಲೆ ಜತೆಗೆ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್. ಅವರ ಗೆಲುವಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪವನ್ ಮತ್ತು ಉಪೇಂದ್ರ ಅವರಿರುವ ಫೋಟೋವೊಂದಕ್ಕೆ ಕ್ಯಾಪ್ಶನ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಆ ಪೋಸ್ಟ್‌ನಲ್ಲಿ ಏನಿದೆಯೆಂದರೆ, 'ಪವನ್ ಕಲ್ಯಾಣ್ ಅವರನ್ನು ಗೆಲ್ಲಿಸಲು ತೆಲುಗು ಜನ 14 ವರ್ಷ ತೆಗೆದುಕೊಂಡರು. ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಇನ್ನು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ' ಎಂದಿದೆ. ಇದು ಉಪೇಂದ್ರ ಅವರ ಗಮನಕ್ಕೂ ಬಂದಿದೆ.
ಮಹಾಪ್ರಭುಗಳ ಬಗ್ಗೆ ಉಪೇಂದ್ರ ಮಾತು
ಹೀಗೆ ಹರಿದಾಡಿದ ಪೋಸ್ಟ್ ಗಮನಿಸಿದ ಉಪೇಂದ್ರ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ದಿನ ಬುದ್ಧಿವಂತ ಎಂದೇ ಕರೆಸಿಕೊಳ್ಳುತ್ತಿದ್ದ ಉಪೇಂದ್ರ, ಇನ್ಮೇಲೆ ಬುದ್ಧಿವಂತ ಅಂದರೆ ಚೆನ್ನಾಗಿರಲ್ಲ ಎಂದು ವ್ಯಂಗ್ಯವಾಗಿಯೇ ಪೋಸ್ಟ್ ಹಂಚಿಕೊಂಡಿದ್ದಾರೆ. ಹೀಗಿದೆ ಉಪೇಂದ್ರ ಬರೆದ ಸಾಲುಗಳು.
"ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್… ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ! ಎಂತಾ ನಿಸ್ವಾರ್ಥ! ಎಂತಾ ತ್ಯಾಗ ಮನೋಭಾವ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ. ಡೋಂಟ್ ವರೀ… ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ. ಗೆದ್ದೇ ಗೆಲ್ತೀನಿ. ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ" ಎಂದಿದ್ದಾರೆ.
ಇನ್ಮೇಲೆ ಬುದ್ಧಿವಂತ ಅನ್ಬೇಡಿ..
"ನೆಕ್ಸ್ಟ್ ಎಲೆಕ್ಷನ್ ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ ಆಗ್ಲೂ ನೀವ್ ಎಮೋಸನಲ್ ಪ್ರಚಾರ ಮಾಡ್ರೀ.. ಸಭೆ ಸಮಾರಂಭ ಎಲ್ಲಾ ಮಾಡ್ರೀ.. ಕಷ್ಟ ಪಡ್ರೀ.. ಆಮೇಲ್ ಐದು ವರ್ಸ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ.. ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲಿರಪ್ಪೋ.. ಈ ದಡ್ ನನ್ ಮಗಂಗೇ ಯಾವೋನಾದ್ರ ಇನ್ ಮೇಲೆ ಬುದ್ದಿವಂತಾ ಅಂದ್ರೇ ಅಷ್ಟೇ… ಸೆಂದಾಗಿರಕ್ಕಿಲ್ಲಾ.." ಎಂದಿದ್ದಾರೆ ಉಪೇಂದ್ರ.
ಒಟ್ಟಿನಲ್ಲಿ ನೀವು ಎಲೆಕ್ಷನ್ ನಿಲ್ಲಿ, ಗೆಲ್ಲಿ ಎಂಬ ಜನರ ಅಭಿಪ್ರಾಯಕ್ಕೆ ಪ್ರತಿಯಾಗಿ ನಟ ಉಪೇಂದ್ರ ಈ ರೀತಿಯ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ, ಪ್ರಜಾಕೀಯ ಪಕ್ಷದ ತತ್ವ ಸಿದ್ಧಾಂತಗಳೇ ಬೇರೆ. ಆ ಸಿದ್ಧಾಂತಕ್ಕೂ ರಾಜಕೀಯಕ್ಕೂ ಅಜಗಜಾಂತರ ವ್ಯತ್ಯಾಸ. ಆ ವ್ಯತ್ಯಾಸವನ್ನೇ ನೀವಿನ್ನು ಅರಿತಿಲ್ಲವಲ್ಲ ಎಂದು ಕೊಂಚ ವ್ಯಂಗ್ಯವಾಗಿಯೇ ಪೋಸ್ಟ್ ಹಂಚಿಕೊಂಡಿದ್ದಾರೆ ಉಪೇಂದ್ರ.
ನೆಟ್ಟಿಗರು ಉಪ್ಪಿ ಮಾತಿಗೆ ಏನಂದ್ರು?
- ಉಪೇಂದ್ರ ಅವರು ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದಾಗಲೇ ಗೆದ್ದಾಯಿತು ಎನ್ನುವ ಸಾಮಾನ್ಯ ಜ್ಞಾನ ನಮಗಿದ್ದರೆ ಸಾಕು ,ಇನ್ನು ಗೆಲ್ಲಬೇಕಿರುವುದು ನಾವು ನೀವುಗಳು ಜೈ ಪ್ರಜಾಕೀಯ
- ಸುಮ್ನೆ ಮನೇಲಿ ಇದ್ಕೊಂಡು ನಿಮ್ಮ ಪಕ್ಷ ಇದು ನೀವೆ ಗೆಲ್ಲಿಸಿ ಅಂತ ಇದ್ರೆ ಯಾರು ಗೆಲ್ಸಲ್ಲ ಸರ್ .. ಫೀಲ್ಡ್ ಗೆ ಇಳಿಬೇಕು ಅವಾಗ್ಲೆ ನಮ್ಮ ಜನಕ್ಕೆ ಅರ್ಥ ಆಗೋದು. ರಿಯಲ್ ಪವರ್ ಸ್ಟಾರ್ ಅಂದ್ರೆ ಪವನ್ ಕಲ್ಯಾಣ್ ನೀವು ಸಹ ಇದೇ ರೀತಿ ಪುಟಿದು ಏದ್ದೇಳಿ ನಿಮಗೆ ಇನ್ನು ಸಾಮರ್ಥ್ಯ ಹೆಚ್ಚಿದೆ..
- ಪ್ರಚಾರ ಮಾಡಬೇಕು ಉಪ್ಪಿ. ಕನ್ನಡಿಗರು ಪಕ್ಕ ಗೆಲುಸುತ್ತಾರೆ
- ಆದ್ರೆ ಪವನ್ ಕಲ್ಯಾಣ್ ಮಾಡಿದಷ್ಟು ಕಾಲು ಭಾಗ ಮಾಡಿದ್ರೆ ಉಪ್ಪಿ ಸರ್ ಯಾವಾಗ್ಲೋ ಸಿಎಂ ಆಗಿರೋರು
ನಾನು ಬದಲಾಗಿದ್ದೇನೆ ನನ್ನ ತರ ಎಲ್ಲರೂ ಬದಲಾದರೆ ಉಪೇಂದ್ರ ಅವರು ಗೆದ್ದ ಹಾಗೆ, ಜನಗಳು ಗೆದ್ದ ಹಾಗೆ.. ನೀವೇನಂತೀರಾ?
- ನಮ್ ಜನ ದುಡ್ಡು ಖರ್ಚು ಮಾಡಿದರೆನೇ ವೋಟ್ ಹಾಕಲ್ಲ . ಇನ್ನೂ ಹಾಗೇ ಪ್ರಜಾಕಿಯಾ ಅಂತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಟ್ಟುಕೊಂಡು ಕೂತರೆ ಮುಗಿತು ಇನ್ನೂ ಎಷ್ಟು ವರ್ಷವಾದರು ಇಷ್ಟೆನೇ.....