ಕೆಜಿಎಫ್ ಸಿನಿಮಾ ಬರುವುದಕ್ಕೂ ಮುನ್ನ ಅವನ್ಯಾರು? ಯಶ್ ಬಗ್ಗೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಮಾತು
Nov 08, 2023 09:39 AM IST
ಕೆಜಿಎಫ್ ಸಿನಿಮಾ ಬರುವುದಕ್ಕೂ ಮುನ್ನ ಅವನ್ಯಾರು? ಯಶ್ ಬಗ್ಗೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಮಾತು
- ಕೆಜಿಎಫ್ ಸಿನಿಮಾಕ್ಕೂ ಮುನ್ನ ಯಶ್ ಯಾರು? ಯಶ್ ಮುನ್ನೆಲೆಗೆ ಬರಲು ಕಾರಣವಾಗಿದ್ದೇ ಅದ್ದೂರಿ ಮೇಕಿಂಗ್‌ನ ಕೆಜಿಎಫ್ ಸಿನಿಮಾ ಎಂದು ಟಾಲಿವುಡ್‌ನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಹೇಳಿದ್ದಾರೆ.
Allu Arvind About Yash: ಕೆಜಿಎಫ್ ಸಿನಿಮಾ ಸ್ಯಾಂಡಲ್‌ವುಡ್‌ನ ಚಹರೆಯನ್ನೇ ಬದಲಿಸಿದ ಚಿತ್ರ. ಆ ಒಂದೇ ಒಂದು ಚಿತ್ರದಿಂದ ಚಂದನವನನ್ನು ನೋಡುವ ದೃಷ್ಟಿಯೇ ಬದಲಾಯಿತು. ನಟ ಯಶ್ ರಾತ್ರೋ ರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ನಿರ್ದೇಶಕ ಪ್ರಶಾಂತ್ ನೀಲ್ ಸ್ಟಾರ್ ನಿರ್ದೇಶಕರಾದರೆ, ಹೊಂಬಾಳೆ ಫಿಲಂಸ್ ಕರ್ನಾಟಕಕ್ಕೆ ಸೀಮಿತವಾಗದೆ, ಪಕ್ಕದ ಸಿನಿಮಾ ಇಂಡಸ್ಟ್ರಿಯವರ ಗಮನ ಸೆಳೆಯಿತು. ಇದೀಗ ಇದೇ ನಟನ ಬಗ್ಗೆ ಟಾಲಿವುಡ್‌ನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಮಾತನಾಡಿದ್ದಾರೆ.
ಸಿನಿಮಾ ಬಜೆಟ್‌ಗಳ ಜತೆಗೆ ಸಂಭಾವನೆ ವಿಚಾರವೂ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸದ್ದು ಮಾಡುವ ವಿಷಯ. ಸಿನಿಮಾ ಬಜೆಟ್ ಹಿರಿದಾಗುತ್ತಿದ್ದಂತೆ, ಸಿನಿಮಾಗಳ ಗಳಿಕೆ ಹೆಚ್ಚಾದಂತೆ, ಕಲಾವಿದರಿಂದಲೂ ಸಂಭಾವನೆ ಹೆಚ್ಚು ಪ್ರಸ್ತಾಪ ಬರುವುದು ಸಹಜ. ಇದೀಗ ಟಾಲಿವುಡ್‌ನಲ್ಲಿ ಸ್ಟಾರ್‌ಗಳು ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಆದರೆ, ಸ್ಟಾರ್‌ಗಳ ಈ ನಿಲುವು ನಿರ್ಮಾಪಕರ ಸಂಘದಲ್ಲಿ ಚರ್ಚೆಯ ವಿಷಯವಾಗಿದೆ. ಸಂಭಾವನೆ ಕಡಿಮೆಯಾದರೆ, ಮತ್ತಷ್ಟು ಸಿನಿಮಾಗಳು ನಿರ್ಮಾಣವಾಗಬಹುದು ಎಂಬುದು ಅವರ ಅಭಿಪ್ರಾಯ.
ಇದೀಗ ಇದೇ ಸಂಭಾವನೆ ವಿಚಾರ ಸದ್ದು ಮಾಡುತ್ತಿದ್ದಂತೆ ಬರುತ್ತಿದ್ದಂತೆ, ನಟ ಯಶ್ ಹೆಸರೂ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಮಾತನಾಡಿರುವ ಅಲ್ಲು ಅರವಿಂದ್, "ಒಂದು ಸಿನಿಮಾದಲ್ಲಿ ನಾಯಕ ನಟನಾದವನು, ಆ ಚಿತ್ರದ ಶೇ. 20ರಿಂದ 25 ರಷ್ಟು ಮೊತ್ತವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾನೆ. ಆದರೆ, ಅವರ ಸಂಭಾವನೆಯಿಂದ ಮಾತ್ರವೇ ಸಿನಿಮಾದ ಬಜೆಟ್ ಹೆಚ್ಚಾಗುತ್ತದೆ ಎಂದು ಹೇಳುವಂತಿಲ್ಲ. ನಟರು ಯಾರೇ ಆದರೂ, ಸಿನಿಮಾ ಅದ್ಧೂರಿಯಾಗಿ ಮೂಡಿಬರಬೇಕು ಎಂಬ ಕಾರಣದಿಂದ ಅಲ್ಲಿ ಹೂಡಿಕೆ ಮಾಡಲಾಗುತ್ತದೆ" ಎಂದಿದ್ದಾರೆ.
ಇದೇ ವೇಳೆ ಯಶ್ ಹೆಸರನ್ನೂ ಹೇಳಿದ ಅಲ್ಲು ಅರವಿಂದ್, "ಕೆಜಿಎಫ್ ಸಿನಿಮಾ ಬರುವುದಕ್ಕೂ ಮುನ್ನ ಯಶ್ ಯಾರು? ಆ ಸಿನಿಮಾ ಏಕೆ ಸದ್ದು ಮಾಡಿತು? ಮೇಕಿಂಗ್‌ನಿಂದಲೇ, ಅದ್ಧೂರಿತನದಿಂದಲೇ ಸಿನಿಮಾವನ್ನು ಮೇಲಕ್ಕೆ ಎತ್ತಿದರು. ಆ ಶ್ರೀಮಂತಿಕೆಯೇ ಸಿನಿಮಾದ ಯಶಸ್ಸಿಗೆ ಕಾರಣವಾಯ್ತು. ಇದು ಕೇವಲ ಒಂದು ಉದಾಹರಣೆ ಮಾತ್ರ. ಸಿನಿಮಾದ ಹೀರೋ ಯಾರೇ ಆದರೂ, ಮೇಕಿಂಗ್‌ನಿಂದಲೇ ಅದು ಪ್ರೇಕ್ಷಕನನ್ನು ಸೆಳೆಯುತ್ತದೆ. ದೊಡ್ಡ ಕಲಾವಿದರನ್ನು ಆಯ್ಕೆ ಮಾಡಿದಾಕ್ಷಣ, ಸಿನಿಮಾ ಗೆಲ್ಲುವುದಿಲ್ಲ. ಕ್ವಾಲಿಟಿ ನೀಡುವುದೂ ಅಷ್ಟೇ ಮುಖ್ಯ" ಎಂದಿದ್ದಾರೆ ಅಲ್ಲು ಅರವಿಂದ್.
ದೀಪಾವಳಿಗೆ ಯಶ್ ಸಿನಿಮಾ ಘೋಷಣೆ?
ಕೆಜಿಎಫ್ 2 ಬಳಿಕ ನಟ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ವಿಚಾರ ಈ ವರೆಗೂ ರಿವೀಲ್ ಆಗಿಲ್ಲ. ಆ ಸಿನಿಮಾ, ಈ ಸಿನಿಮಾ ಎಂದು ವದಂತಿಗಳು ಹರಿದಾಡುತ್ತಿವೆಯಾದರೂ, ಅಧಿಕೃತ ಘೋಷಣೆ ಮಾತ್ರ ಇನ್ನೂ ಆಗಿಲ್ಲ. ಇದೀಗ ದೀಪಾವಳಿಯ ಪ್ರಯುಕ್ತ ನಟ ಯಶ್ ಕಡೆಯಿಂದ ಹೊಸ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಹೊರಬೀಳಲಿದೆ ಎಂಬ ಸುದ್ದಿ ಮತ್ತೆ ಚಾಲ್ತಿಯಲ್ಲಿದೆ. ಚಾತಕ ಪಕ್ಷಿಯಂತೆ ಕಾಯುತ್ತಿರುವ ಫ್ಯಾನ್ಸ್‌ಗೆ, ಬೆಳಕಿನ ಹಬ್ಬದ ವೇಳೆಯಾದರೂ ಯಶ್ ಸಿಹಿ ಸುದ್ದಿ ನೀಡ್ತಾರಾ ಕಾದು ನೋಡಬೇಕು.