logo
ಕನ್ನಡ ಸುದ್ದಿ  /  ಮನರಂಜನೆ  /  ಮತ್ತೆಮತ್ತೆ ಸಿನಿಮಾ ಈ ವಾರ ಬಿಡುಗಡೆ; ಪತ್ರಿಕೋದ್ಯಮ ಓದಿ ಸಿನೆಮಾ ಮಾಡಲು ಹೊರಟವರ ಕಥೆಯಿದು

ಮತ್ತೆಮತ್ತೆ ಸಿನಿಮಾ ಈ ವಾರ ಬಿಡುಗಡೆ; ಪತ್ರಿಕೋದ್ಯಮ ಓದಿ ಸಿನೆಮಾ ಮಾಡಲು ಹೊರಟವರ ಕಥೆಯಿದು

Praveen Chandra B HT Kannada

Jan 17, 2024 06:29 PM IST

google News

ಮತ್ತೆಮತ್ತೆ ಸಿನಿಮಾ ತಂಡ

    • ಸ್ಯಾಂಡಲ್‌ವುಡ್‌ನಲ್ಲಿ ಈ ವಾರ "ಮತ್ತೆ ಮತ್ತೆ" ಹೆಸರಿನ ಸಿನಿಮಾವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಲೆಕ್ಚರರ್ ಡಾ. ಅರುಣ್ ಹೊಸಕೊಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರ ಈ ಶುಕ್ರವಾರ ಅಂದರೆ ಜನವರಿ 19ರಂದು ಬಿಡುಗಡೆಯಾಗಲಿದೆ.
ಮತ್ತೆಮತ್ತೆ ಸಿನಿಮಾ ತಂಡ
ಮತ್ತೆಮತ್ತೆ ಸಿನಿಮಾ ತಂಡ

ಬೆಂಗಳೂರು: ಜರ್ನಲಿಸಂ ಮುಗಿಸಿ, ಸಿನಿಮಾ ಮಾಡಲು ಹೊರಟ ಐವರು ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆ ಹೊಂದಿದ ಚಿತ್ರವೊಂದು ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮತ್ತೆ ಮತ್ತೆ ಎಂಬ ಹೆಸರಿನ ಈ ಸಿನಿಮಾವನ್ನು ಲೆಕ್ಚರರ್ ಡಾ.ಅರುಣ್ ಹೊಸಕೊಪ್ಪ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಬಂಡವಾಳ ಎಲ್ಲವೂ ಇವರದ್ದೇ. ಅಂದಹಾಗೆ ಈ ಚಿತ್ರಕ್ಕೆ "ಪ್ರೊಡ್ಯೂಸರ್ ಬೇಕಾಗಿದ್ದಾರೆ" ಎಂಬ ಟ್ಯಾಗ್‌ಲೈನ್‌ ಅಥವಾ ಅಡಿಬರಹ ಇದೆ.

ಮತ್ತೆ ಮತ್ತೆ ಚಿತ್ರದ 3 ಹಾಡುಗಳಿಗೆ ಇಮ್ತಿಯಾಜ್ ಸುಲ್ತಾನ್ ಸಂಗೀತ ಸಂಯೋಜನೆ ಮಾಡಿದ್ದು, ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಹಾಡುಗಳ ಜೊತೆಗೆ ಟ್ರೈಲರ್ ಪ್ರದರ್ಶನದ ಸಂದರ್ಭದಲ್ಲಿ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

"ಈ ಚಿತ್ರ ಅರುಣ್‌ ಅವರ ಕನಸಿನ ಕೂಸು. ಇಲ್ಲಿ ಕಥೆಯೇ ಹೀರೋ. ಮನದೀಪ್‌ರಾಯ್, ಸತ್ಯಜಿತ್, ರಾಕ್‌ಲೈನ್ ಸುಧಾಕರ್ ಇಂದು ನಮ್ಮೊಂದಿಗಿಲ್ಲ, ಆದರೆ ಈ ಚಿತ್ರ ಅವರನ್ನು ಜೀವಂತವಾಗಿರಿಸಿದೆ. ಅರುಣ್ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ, ಬೇರೆಯವರಾಗಿದ್ದರೆ ಅರ್ಧಕ್ಕೇ ಬಿಟ್ಟಿರುತ್ತಿದ್ರು. ಅವರ ಶ್ರಮಕ್ಕೆ ಫಲ ಸಿಗಬೇಕು, ಈ ಚಿತ್ರ ಯಶಸ್ವಿಯಾದರೆ ಹತ್ತಾರು ಜನಕ್ಕೆ ಅನ್ನ ಕೊಡುತ್ತಾರೆ, ಚಿತ್ರದಲ್ಲಿ ನನ್ನದು ಮನೆ ಮಾಲೀಕನ ಪಾತ್ರ, ಹೆಣ್ಣುಮಕ್ಕಳನ್ನು ಕಂಡರೆ ಜೊಲ್ಲು ಸುರಿಸುವವ, ಸಂಜನಾ ಅವರ ಜೊತೆ ಡ್ರೀಮ್ ಸಾಂಗ್ ಮಾಡಿದ್ದೇನೆ. ಅಣ್ಣಾವ್ರನ್ನು ನೆನಪಿಸುವ ಹಾಡಿದು" ಎಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯನಟ ಎಂ. ಎಸ್. ಉಮೇಶ್ ಹೇಳಿದ್ದಾರೆ.

ಮತ್ತೆ ಮತ್ತೆ ಸಿನಿಮಾದ ಕಥೆಯೇನು?

ಇದು ಸಂಪೂರ್ಣ ಕಾಮಿಡಿ ಜಾನರ್ ಸಿನಿಮಾ. ನಾನೊಬ್ಬ ಉಪನ್ಯಾಸಕ. ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತು, ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದು ಈ ಕಥೆ ರೆಡಿಮಾಡಿದೆ. ಚಿಕ್ಕ ಪಾತ್ರದಲ್ಲೂ ಅಭಿನಯಿಸಿದ್ದೇನೆ. ಚಿತ್ರ ನೋಡಿದ ಎಲ್ಲರೂ ತುಂಬಾ ಚೆನ್ನಾಗಿ ಬಂದಿದೆ ಎಂದಿದ್ದಾರೆ. ಜರ್ನಲಿಸಂ ಮುಗಿಸಿದ 5 ಜನ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಅಂತ ಯೋಚಿಸಿ ನಂತರ ಅವರೆಲ್ಲ ಸೇರಿ ಸಿನಿಮಾವೊಂದನ್ನು ನಿರ್ಮಿಸಿ, ಅದರಿಂದ ಬಂದ ಹಣದಲ್ಲಿ ಒಂದು ಚಾನಲ್ ಪ್ರಾರಂಭಿಸಲು ಯೋಚಿಸುತ್ತಾರೆ. ಆ ಹಂತದಲ್ಲಿ ಏನೇನೆಲ್ಲ ಆಗಿಹೋಯ್ತು, ಸಾಕಷ್ಟು ಅಡೆ, ತಡೆಗಳನ್ನು ಎದುರಿಸಿ, ಕೊನೆಗೂ ಅವರು ಸಿನಿಮಾ ಮಾಡಿ ಮುಗಿಸಿದರೇ, ಇಲ್ಲವೇ ಎನ್ನುವುದೇ ಮತ್ತೆ ಮತ್ತೆ ಚಿತ್ರದ ಕಥಾಹಂದರ ಎಂದು ನಿರ್ಮಾಪಕ ಕಮ್ ನಿರ್ದೇಶಕ ಡಾ.ಅರುಣ್ ಹೊಸಕೊಪ್ಪ ವಿವರಿಸಿದ್ದಾರೆ.

"ಹಿರಿಯ ಕಲಾವಿದರನ್ನು ಕರೆಸಿ ನಮ್ಮ ಚಿತ್ರದಲ್ಲಿ ಪಾತ್ರ ಮಾಡಿಸಿದ್ದೇನೆ. ಕನ್ನಡ ಚಿತ್ರರಂಗದ ಬಹುತೇಕ ಹಿರಿಯ, ಹಾಸ್ಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದರಿಂದ ಬರುವ ಲಾಭದಲ್ಲಿ ಶೇ.25ರಷ್ಟು ಹಣವನ್ನು ಬಡ ಕಲಾವಿದರಿಗೆ ಕೊಡಬೇಕು ಎಂದುಕೊಂಡಿದ್ದೇನೆ. ಇದೇ 19ಕ್ಕೆ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಒಮ್ಮೆ ಸಿನಿಮಾ ನೋಡಿ ನಂತರ ಅಭಿಪ್ರಾಯ ವ್ಯಕ್ತಪಡಿಸಿ ಎನ್ನುವುದೇ ನನ್ನ ಪ್ರಾರ್ಥನೆ. ಚಿತ್ರದಲ್ಲಿ ಉಮೇಶಣ್ಣ ಅವರ ಜೊತೆ ಸಿಹಿಕಹಿ ಚಂದ್ರು ಅವರು ಮುಖ್ಯಮಂತ್ರಿಯಾಗೇ ಕಾಣಿಸಿಕೊಂಡಿದ್ದಾರೆ. ಇನ್ನು ಸಂಜನಾ ಗರ್ಲಾನಿ ಅವರದು ಚಿಕ್ಕ ಪಾತ್ರವಾದರೂ ಕಥೆಗೆ ತಿರುವು ಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಶಂಖನಾದ ಅಂಜಿನಪ್ಪ, ಪ್ರಕಾಶ್ ತುಮ್ಮಿನಾಡ್, ಶ್ರೀನಿವಾಸ್‌ಗೌಡ, ವೈಷ್ಣವಿ ಮೆನನ್, ತುಮಕೂರು ಮೋಹನ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ, ಬೆಂಗಳೂರು, ನೆಲಮಂಗಲ, ಮುರುಡೇಶ್ವರ, ಶಿರಾಲಿ ಹೀಗೆ ಹಲವಾರು ಲೊಕೇಶನ್‌ಗಳಲ್ಲಿ 50 ದಿನಗಳವರೆಗೆ ಚಿತ್ರೀಕರಣ ನಡೆಸಿದ್ದೇವೆ ಎಂದು ವಿವರಿಸಿದರು. ನಂತರ ಕೋಟೆ ಪ್ರಭಾಕರ್, ಆರ್‌.ಜೆ. ವಿಕ್ಕಿ, ಸ್ವಾತಿ, ನೃತ್ಯನಿರ್ದೇಶಕ ಅನಿ ಇವರೆಲ್ಲ ಚಿತ್ರದ ಕುರಿತಂತೆ ಅನುಭವ ಹಂಚಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ