Yuva OTT: ಯುವ ರಾಜ್‌ಕುಮಾರ್ ಚೊಚ್ಚಲ ಚಿತ್ರ ‘ಯುವ’ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ ನೋಡಬಹುದು?
Apr 13, 2024 10:08 AM IST
Yuva OTT: ಯುವ ರಾಜ್‌ಕುಮಾರ್ ಚೊಚ್ಚಲ ಚಿತ್ರ ‘ಯುವ’ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ ನೋಡಬಹುದು?
- ಚಿತ್ರಮಂದಿರದಲ್ಲಿ ಮೂರನೇ ವಾರವೂ ಭರ್ಜರಿ ಓಟ ಮುಂದುವರಿಸಿದ್ದಾನೆ ಯುವ. ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾಕ್ಕೆ ಮೆಚ್ಚುಗೆ ಸಿಕ್ಕಿದೆ. ಈ ನಡುವೆ ಇದೇ ಚಿತ್ರದ ಒಟಿಟಿ ಬಿಡುಗಡೆ ಯಾವಾಗ ಎಂಬುದಕ್ಕೂ ಇಲ್ಲಿ ಉತ್ತರವಿದೆ.
Yuva OTT: ದೊಡ್ಮನೆ ಕುಡಿ, ಡಾ. ರಾಜ್‌ಕುಮಾರ್ ಮೂರನೇ ತಲೆಮಾರು, ರಾಘವೇಂದ್ರ ರಾಜ್‌ಕುಮಾರ್ ಕಿರಿ ಮಗ ಯುವ ರಾಜ್‌ಕುಮಾರ್ ಯುವನಾಗಿ ಅಬ್ಬರಿಸಿದ್ದಾರೆ. ಮಾರ್ಚ್ 29ರಂದು ಬೆಳ್ಳಿತೆರೆ ಮೇಲೆ ಎಂಟ್ರಿಕೊಟ್ಟಿದ್ದ ಯುವ ರಾಜ್‌ಕುಮಾರ್, ಅಭಿಮಾನಿಗಳ ನಿರೀಕ್ಷೆ ಹುಸಿ ಮಾಡಲಿಲ್ಲ. ಪುನೀತ್ ರಾಜ್‌ಕುಮಾರ್ ಅವರ ಉತ್ತರರಾಧಿಕಾರಿ ಎಂದೂ ಕರೆಸಿಕೊಂಡಿದ್ದ ಯುವ, ಡಾನ್ಸ್ ಮತ್ತು ಆಕ್ಷನ್ ಸನ್ನಿವೇಶಗಳಿಂದಲೂ ಖದರ್ ತೋರಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಡೀಸೆಂಟ್ ಕಲೆಕ್ಷನ್ ಮಾಡಿ, ವಿಮರ್ಶೆ ದೃಷ್ಟಿಯಿಂದಲೂ ಯುವ ಚಿತ್ರ ಎಲ್ಲರ ಮನಗೆದ್ದಿತ್ತು. ಈಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ಯಾವಾಗ?
ಯುವ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್. ಕನ್ನಡದಲ್ಲಿ ಮತ್ತು ಪರಭಾಷೆಗಳಲ್ಲಿ ನಿರ್ಮಾಣ ಕೆಲಸದಲ್ಲಿ ಬಿಜಿಯಾಗಿರುವ ಈ ಸಂಸ್ಥೆ, ಬ್ಯಾಕ್ ಟು ಬ್ಯಾಕ್ ಹಿಟ್ ನೀಡುತ್ತ ಬಂದಿದೆ. ಅದರಂತೆ, ಯುವ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ಸಂತೋಷ್ ಆನಂದ್‌ರಾಮ್ ಮತ್ತೊಂದು ಕಮರ್ಷಿಯಲ್ ಕೋನದಲ್ಲಿ ಯುಥ್ ಕಥೆಯನ್ನು ನೋಡುಗರ ಎದೆಗಿಳಿಸಿದ್ದಾರೆ. ಚಿತ್ರಮಂದಿರದಲ್ಲಿ ಸದ್ದು ಮಾಡುತ್ತ, ಘಟಾನುಘಟಿ ಸಿನಿಮಾಗಳ ನಡುವೆ ಮೂರನೇ ವಾರದ ಓಟಕ್ಕಿಳಿದಿದೆ.
ಕಾಲೇಜು, ಜೀವನ, ಬದುಕು, ಬವಣೆ, ಸಂಬಂಧ, ಪ್ರೀತಿ, ದೋಸ್ತಿ ಹೀಗೆ ಹತ್ತು ಹಲವು ಅಂಶಗಳನ್ನು ಬೆರೆಸಿ ಯುವ ಸಿನಿಮಾ ಕಟ್ಟಿಕೊಟ್ಟಿರುವ ನಿರ್ದೇಶಕರು, ಮಾಸ್ ಸಿನಿಮಾಕ್ಕೆ ಸೀಮಿತ ಮಾಡದೇ ಕ್ಲಾಸ್ ಕಂಟೆಂಟ್ ಮೂಲಕವೇ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದರು. ಅದರಂತೆ ನೋಡುಗರಿಂದ ಮೆಚ್ಚುಗೆ ಪಡೆದ ಯುವ ಚಿತ್ರ, ಪರಭಾಷೆಯ ಸಿನಿಮಾ ಹಾವಳಿಯ ನಡುವೆಯೂ ರಾಜ್ಯಾದ್ಯಂತ ಯಶಸ್ವಿ ಮೂರನೇ ವಾರ ಮುನ್ನುಗ್ಗುತ್ತಿದೆ.
ಮೇ ತಿಂಗಳಲ್ಲಿ ಒಟಿಟಿ ಪ್ರವೇಶ
ಚಿತ್ರಮಂದಿರದಲ್ಲಿ ತೆರೆಕಂಡು ಒಂದು ತಿಂಗಳ ಬಳಿಕ ಒಟಿಟಿಯಲ್ಲಿ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸುವುದು ಸಹಜ. ಅದಕ್ಕೂ ಮುಂಚಿತವಾಗಿ ಸಾಕಷ್ಟು ಸಿನಿಮಾಗಳು ಒಟಿಟಿ ಮೆಟ್ಟಿಲೇರಿದ ಉದಾಹರಣೆಗಳೂ ಇವೆ. ಈಗ ಯುವ ಸಿನಿಮಾ ಒಟಿಟಿಗೆ ಯಾವಾಗ ಪ್ರವೇಶಿಸಲಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಮಾ. 29ರಂದು ಬಿಡುಗಡೆಯಾದ ಈ ಸಿನಿಮಾ ಮೇ ತಿಂಗಳಿನಲ್ಲಿ ಒಟಿಟಿ ವೇದಿಕೆ ಪ್ರವೇಶ ಪಡೆಯಲಿದೆ.
ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್
ಅಮೆಜಾನ್ ಪ್ರೈಂ ತೆಕ್ಕೆಗೆ ಯುವ ಚಿತ್ರದ ಒಟಿಟಿ ಹಕ್ಕುಗಳು ಸೋಲ್ಡ್ ಔಟ್ ಆಗಿವೆ. ಸಿನಿಮಾ ಬಿಡುಗಡೆ ಪೂರ್ವ ಒಪ್ಪಂದ ಇದಾಗಿದ್ದು, ಈಗ ಯಾವಾಗ ಸ್ಟ್ರೀಮಿಂಗ್ ಆಗಬಹುದು ಎಂಬ ಕುತೂಹಲಕ್ಕೂ ಹೀಗೊಂದು ಉತ್ತರ ಸಿಕ್ಕಿದೆ. ಮೇ ಎರಡನೇ ವಾರ ಅಂದರೆ ಮೇ 10 ಅಥವಾ ಮೇ 17ರಂದು ಯುವ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಿದೆ.
ಯಾವ ಚಾನೆಲ್‌ನಲ್ಲಿ ಸಿನಿಮಾ ಪ್ರಸಾರ
ಅಮೆಜಾನ್ ಪ್ರೈಂ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಪಡೆದರೆ, ಸ್ಟಾರ್ ಸುವರ್ಣ ವಾಹಿನಿ ಯುವ ಚಿತ್ರದ ಸ್ಯಾಟಲೈಟ್ ಪ್ರಸಾರದ ಹಕ್ಕಗಳನ್ನು ಬಹುಕೋಟಿ ಕೊಟ್ಟು ಖರೀದಿಸಿದೆ. ಒಟಿಟಿಯಲ್ಲಿ ಚಿತ್ರ ಸ್ಟೀಮ್ ಆದ ಬಳಿಕವೇ ಟಿವಿಯಲ್ಲಿ ಯುವನ ಹವಾ ಶುರುವಾಗಲಿದೆ. ಪುನೀತ್ ರಾಜ್‌ಕುಮಾರ್ ಜತೆಗೆ ರಾಜಕುಮಾರ ಸೇರಿ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವ ರಾಜ್‌ಕುಮಾರ್ ಚೊಚ್ಚಲ ಯುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ. ಯುವನಿಗೆ ಅಜನೀಶ್ ಲೋಕನಾಥ್ ಸಂಗೀತ , ಶ್ರೀಶಾ ಕುದುವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಕಾಂತಾರ ಲೀಲಾ ಸಪ್ತಮಿ ಗೌಡ ಯುವ ರಾಜ್‌ಕುಮಾರ್‌ಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.