ಖಿನ್ನತೆಯಿಂದ ಬಳಲುತ್ತಿದ್ದ ನಿರ್ದೇಶಕ ಗುರುಪ್ರಸಾದ್ ನಿದ್ರೆ ಮಾತ್ರೆ ಮೊರೆ ಹೋಗಿದ್ದರು; ಮೆಡಿಕಲ್ ಸ್ಟೋರ್ ಸಿಬ್ಬಂದಿ ಹೇಳಿದ್ದಿಷ್ಟು
Nov 04, 2024 09:01 AM IST
ಕನ್ನಡ ಸಿನಿಮಾ ನಿರ್ದಶಕ ಮಠ ಖ್ಯಾತಿಯ ಗುರುಪ್ರಸಾದ್
Director Guruprasad: ಮಠ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ತೆರೆ ಕಂಡಿದ್ದ ರಂಗನಾಯಕ ಸಿನಿಮಾ ಸೋಲು ಕಂಡಿತ್ತು. ಹಣಕಾಸು, ಸಿನಿಮಾ ವಿಚಾರಕ್ಕೆ ಡ್ರಿಪ್ರೆಷನ್‌ನಲ್ಲಿದ್ದ ಗುರುಪ್ರಸಾದ್ ಪ್ರತಿದಿನ ನಿದ್ರೆಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
Director Guruprasad: ಸ್ಯಾಂಡಲ್‌ವುಡ್ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಗುರುಪ್ರಸಾದ್ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದರೂ ಅವರು ಮಠ ಗುರುಪ್ರಸಾದ್ ಎಂದೇ ಹೆಸರಾಗಿದ್ದರು. ಗುರುಪ್ರಸಾದ್ ಸಾವಿಗೆ ಕನ್ನಡ ಚಿತ್ರರಂಗ ಆಘಾತ ವ್ಯಕ್ತಪಡಿಸಿದೆ. ಚಿತ್ರರಂಗಕ್ಕೆ ಒಳ್ಳೆ ಸಿನಿಮಾಗಳನ್ನು ನೀಡಿದ್ದ ಅವರು ಈ ರೀತಿ ದುರಂತ ಅಂತ್ಯ ಕಾಣಬಾರದಿತ್ತು ಎಂದು ಅನೇಕರು ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಮೈ ತುಂಬಾ ಸಾಲ ಮಾಡಿದ್ದ ಗುರುಪ್ರಸಾದ್
ಗುರುಪ್ರಸಾದ್ ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಇತ್ತೀಚೆಗೆ ಅವರು ನಿರ್ದೇಶನ ಮಾಡಿದ್ದ ರಂಗನಾಯಕ ಸಿನಿಮಾ ಅವರ ಕೈ ಹಿಡಿಯದೆ ಮೈ ತುಂಬಾ ಸಾಲ ಮಾಡಿಕೊಂಡಿದ್ದರು ಎಂಬ ಮಾತು ಕೇಳಿಬರುತ್ತಿದೆ. ನಮ್ಮಲ್ಲಿ ಅವರು ತೆಗೆದುಕೊಂಡು ಹೋಗಿದ್ದ ಪುಸ್ತಕ ಹಾಗೂ ಖಾಲಿ ಸಿಡಿಗಳಿಗೆ ದುಡ್ಡು ಕೊಟ್ಟಿಲ್ಲ ಎಂದು ಪುಸ್ತಕ ಮಳಿಗೆ ಮಾಲೀಕರೊಬ್ಬರು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಇದರ ಬಗ್ಗೆ ವಿಚಾರಣೆ ನಡೆಸುತ್ತಿದ್ದರು. ಪತ್ನಿ ತವರು ಮನೆಯಲ್ಲಿದ್ದ ಕಾರಣ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ಇದ್ದ ಗುರುಪ್ರಸಾದ್, ವಾರದ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ನಡುವೆ ಗುರುಪ್ರಸಾದ್ ಖಿನ್ನತೆಯಿಂದ ಬಳಲುತ್ತಿದ್ದು ನಿದ್ರೆ ಸರಿಯಾಗಿ ಬಾರದ ಕಾರಣ ಪ್ರತಿದಿನ ನಿದ್ರೆ ಮಾತ್ರೆ ಸೇವಿಸುತ್ತಿದ್ದರು ಎಂಬ ವಿಚಾರ ತಿಳಿದುಬಂದಿದೆ.
ಆಗ್ಗಾಗ್ಗೆ ಮೆಡಿಕಲ್ ಸ್ಟೋರ್‌ನಲ್ಲಿ ನಿದ್ರೆ ಮಾತ್ರ ಖರೀದಿಸುತ್ತಿದ್ದರು
ಗುರುಪ್ರಸಾದ್ ಅವರು ನಮ್ಮಲ್ಲಿ ಬಂದು ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು, ಏನೋ ನೋವಿದೆ ಎಂದು ಗೊತ್ತಾಗುತ್ತಿತ್ತು. ಡಿಪ್ರೆಶನ್‌ನಲ್ಲಿರುವಂತೆ ಕಂಡು ಬಂದರೂ ನಮ್ಮೊಂದಿಗೆ ತುಂಬಾ ಚೆನ್ನಾಗಿ ಮಾತನಾಡಿಸುತ್ತಿದ್ದರು. ಒಂದು ಬಾರಿಗೆ ಒಂದು ಶೀಟ್ ಮಾತ್ರೆ ಖರೀದಿಸುತ್ತಿದ್ದರು. ಡಾಕ್ಟರ್ ಕೊಟ್ಟಿದ್ದ ಪ್ರಿಸ್ಕ್ರಿಪ್ಷನ್ ತೋರಿಸಿ ಮಾತ್ರೆ ಖರೀದಿಸುತ್ತಿದ್ದರು. ಅವರ ಮನಸ್ಸಿನಲ್ಲಿ ಏನಿತ್ತೋ ಏನೋ. ಆದರೆ ಕಳೆದ ಕೆಲವು ದಿನಗಳಿಂದ ನಾನು ಅವರನ್ನು ನೋಡಿರಲಿಲ್ಲ. ಇಂದು ಅವರ ಸಾವಿನ ಸುದ್ದಿ ಕೇಳಿ ನನಗೆ ಬಹಳ ಶಾಕ್ ಆಯ್ತು. ಬಹಳ ನೋವಾಗುತ್ತಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಪೊಲೊ ಸ್ಟೋರ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಮಠ ಚಿತ್ರದ ಮೂಲಕ ನಿರ್ದೇಶನ ಆರಂಭ
ಗುರುಪ್ರಸಾದ್ ಪೂರ್ತಿ ಹೆಸರು ಗುರುಪ್ರಸಾದ್ ರಾಮಚಂದ್ರ ಶರ್ಮಾ, ಬೆಂಗಳೂರು ಕನಕಪುರ ಮೂಲದ ಗುರುಪ್ರಸಾದ್ 2006ರಲ್ಲಿ ತೆರೆ ಕಂಡ ಮಠ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿ ಸಕ್ಸಸ್ ಕಂಡರು. ಇದಾದ ನಂತರ ಮತ್ತೆ ಜಗ್ಗೇಶ್ ಜೊತೆ ಎದ್ದೇಳು ಮಂಜುನಾಥ ಸಿನಿಮಾ ಮಾಡಿದರು. ಈ ಸಿನಿಮಾ ಚಿತ್ರಕಥೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿತ್ತು. ನಂತರ ಡೈರೆಕ್ಟರ್ ಸ್ಪೆಷಲ್ ಸಿನಿಮಾದಲ್ಲಿ ಧನಂಜಯ್‌ಗೆ ಅವಕಾಶ ನೀಡಿ ಎರಡನೇ ಸಲ ಸಿನಿಮಾದಲ್ಲಿ ಮತ್ತೆ ಧನಂಜಯ್‌ಗೆ ಜೊತೆಯಾದರು. ಈ ಸಿನಿಮಾ ನಂತರ ಸುಮಾರು 6 ವರ್ಷಗಳ ಕಾಲ ಸಿನಿಮಾಗಳಿಂದ ದೂರ ಇದ್ದ ಗುರುಪ್ರಸಾದ್ 2024ರಲ್ಲಿ ರಂಗನಾಯಕ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದರು. ಈ ಸಿನಿಮಾ ಇದೇ ವರ್ಷ ಮಾರ್ಚ್‌ನಲ್ಲಿ ತೆರೆ ಕಂಡಿತ್ತು. ಆದರೆ ಈ ಸಿನಿಮಾ ಅವರಿಗೆ ಯಶಸ್ಸು ತಂದುಕೊಡಲಿಲ್ಲ.
ನಟನಾಗಿ, ರಿಯಾಲಿಟಿ ಶೋ ಜಡ್ಜ್ ಆಗಿಯೂ ಗುರುತಿಸಿಕೊಂಡಿದ್ದರು
ನಿರ್ದೇಶಕನಾಗಿ ಮಾತ್ರವಲ್ಲದೆ ಗುರುಪ್ರಸಾದ್ ನಟನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಮಠ, ಎದ್ದೇಳು ಮಂಜುನಾಥ, ಮೈಲಾರಿ, ಹುಡುಗರು, ಡೈರೆಕ್ಟರ್ ಸ್ಪೆಷಲ್, ಜಿಗರ್‌ಥಂಡಾ, ಖುಷ್ಕ, ಬಡವ ರಾಸ್ಕಲ್ ಸಿನಿಮಾಗಳಲ್ಲಿ ಗುರುಪ್ರಸಾದ್ ನಟಿಸಿದ್ದಾರೆ. ತಕ ಧಿಮಿತಾ, ಪುಟಾಣಿ ಪಂಟ್ರು 2, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಕಾಮಿಡಿ ರಿಯಾಲಿಟಿ ಶೋನಲ್ಲಿ ಅವರು ಜಡ್ಜ್ ಆಗಿ ಕೂಡಾ ಭಾಗವಹಿಸಿದ್ದಾರೆ.